(www.vknews.com) : ಟ್ವೆಂಟಿ ಟ್ವೆಂಟಿ ನಮಗೆ ಅಹಿತಕರವಾಗಿಯೇ ಇತ್ತು. ಅದು ತಂದು ಕೊಟ್ಟ ಕೋವಿಡ್ 19ನ ಅದ್ವಾನವು ಸಣ್ಣದಲ್ಲ. ಜೊತೆಗೆ ಪಾಠವನ್ನೂ ಬೋಧಿಸಿತ್ತು. ಈ ಜೀವನವು ನಮ್ಮ ನಿಯಂತ್ರಣ ಮೀರಿದ್ದು. ತುಂಬಾನೇ ಅತಂತ್ರ. ಯಾವಾಗ ಏನಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲ. ನಾವು ಅಹಂ, ಸೇಡು, ಜಾತಿ, ಧರ್ಮ ಇತ್ಯಾದಿ ಕಾರಣದಿಂದ ಹೊಡೆದಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವ ಭಾವನೆ ಅ ಸಮಯದಲ್ಲಿ ಎಲ್ಲರದ್ದಾಗಿತ್ತು. ಆ ಮನಸ್ಥಿತಿಯೇ ನಾವು ವಾಟ್ಸಪ್, ಫೇಸ್ಬುಕಲ್ಲಿ ಷೇರ್ ಮಾಡುವ ಧಾರ್ಮಿಕ ಪೋಸ್ಟುಗಳು ಬಯಸುವ ಅದ್ಯಾತ್ಮದ ತಿರುಳಾಗಿದೆ ಎಂಬುದೂ ಸತ್ಯ. ಆ ಭಾವ ನಮ್ಮಲ್ಲಿ ಶಾಸ್ವತ ಇರಬೇಕಾದ್ದೇ ಆಗಿದೆ. ಆದರೆ ನಾವು ಹಾಗೆಲ್ಲಾ ಪಾಠ ಕಲಿಯಲಾರೆವು. ಷೇರಿಂಗ್ಗಷ್ಟೇ ನಾವು ಅದ್ಯಾತ್ಮವಾದಿಗಳು.
ನಮಗೆ ಯಾವ ಪಾಠಗಳೂ ಶಾಸ್ವತವಲ್ಲ.ಹೇಳಿಕೇಳಿ ನಮಗೆ ಆದರ್ಶ ಅದ್ಯಾತ್ಮ ಸ್ವಲ್ಪ ದೂರನೇ. ಅದರ ಹೆಸರಿನ ಆತ್ಮವಂಚನೆ ನಮಗಿಷ್ಟದ್ದು. ಅದರ ಹೆಸರಿನ ಮೆಸೇಜ್ ಹಂಚೋದು ನಮಗಿಷ್ಡದ್ದು. ಅದರ ಹೆಸರಲ್ಲಿ ಬೇರೆಯವರ ಮೇಲೆ ಎರಗಿಹೋಗೋದು, ಸರ್ಟಿಫಿಕೇಟು ಕೊಡೋದು ನಮಗಿಷ್ಡದ್ದು. ವಾಸ್ತವದದಲ್ಲಿ ಧಾರ್ಮಿಕ ಮನೋಭಾವ ಎಂಬುದು ನಮಗೆ ಮನದ ಹೊರಗಿನ ಆಚರಣೆ ಮಾತ್ರ. ನಮ್ಮ ಯಾವ ಸಂಕುಚಿತ ದೋರಣೆಗಳನ್ನು ಮೀರಲು ನಮ್ಮಿಂದ ಸಾಧ್ಯವೇ ಇಲ್ಲ. ಈ ದೌರ್ಬಲ್ಯ, ಅಸಾಮಾರ್ಥ್ಯಗಳೇ ನಮ್ಮತನವಾಗಿದೆ. ಈ ನಮ್ಮ ‘ನಮ್ಮತನ’ವನ್ನು ಮೀರಿದ ಬದುಕು ನಮಗೆ ಗೊತ್ತೇ ಇಲ್ಲ. ನಾವು ನಮ್ಮ ಕ್ರೋಧ, ಮದ, ಮತ್ಸರಗಳನ್ನು ಯಾವತ್ತೂ ತೊರೆಯಲಾರೆವು. ಯಾವ ಪಾಠವೂ ನಮ್ಮ ಮನದಾಳ ತಲುಪಲಾರದು.
ಆದರೆ ಹೀಗೇ ಎಷ್ಟು ದಿನ? ನಾವ್ಯಾಕೆ ಮನೆಯ ಕ್ಯಾಲೆಂಡರ್ ಬದಲಾಯಿಸುವಾಗ ಒಂದಷ್ಟು ಬದಲಾಗಬಾರದು? 2020 ಕೊಟ್ಟ ಸಂಕಷ್ಟ, ಅಸಹಾಯಕತೆ ನಮ್ಮ ಆತ್ಮವಿಮರ್ಶೆಗೆ ಕಾರಣವಾಗಲಿ. ಇಪ್ಪತ್ತು ಇಪ್ಪತ್ತೊಂದು ನಮಗೆ ಶುಭ ತರಲಿ. ಬದುಕು ಮುಗಿಸಿ ಹೋಗುವಷ್ಟೂ ದಿನ ಮನುಷ್ಯರಾಗಿರೋಣ. ಹೃದಯ ತೆರೆದಿಡೋಣ.
ಇದಲ್ಲ ಹೊಸ ವರ್ಷ ಅನ್ನೋರಿದ್ದಾರೆಂದು ನಂಗೆ ಗೊತ್ತು. ಆದರೆ ಆಲೋಚಿಸಿ ನೋಡಿ. ಜನವರಿ 1ಕ್ಕೆ ಹೊಸ ವರ್ಷ ಎನ್ನೋದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ಹೊಸವರ್ಷ ನಿಜನೇ. ಆದರೆ ನಾವು ಈ ಕ್ಯಾಲಂಡರ್ ಪ್ರಕಾರವೇ ತಿಂಗಳ ಸಂಬಳ ಈಸ್ಕೊತೀವಿ. ಈ ಕ್ಯಾಲಂಡರ್ ಪ್ರಕಾರವೇ EMI ಕೂಡ ಕಟ್ತೀವಿ. ಅನೇಕ ಅಥವಾ ಬಹತೇಕ ಎಲ್ಲ ಕಾರ್ಯಕ್ರಮಗಳನ್ನೂ ಈ ಗ್ರೆಗೋರಿಯನ್ ಕ್ಯಾಲೆಂಡರಲ್ಲೇ ಲೆಕ್ಕ ಹಾಕ್ಕೋತೀವಿ. ಅಷ್ಟೇ ಏಕೆ, ನಮ್ಮ, ನಮ್ಮ ಪ್ರೀತಿಬಾಂಧವರ ಹುಟ್ಟುಹಬ್ಬವನ್ನೂ ಕೂಡ ಈ ಕ್ಯಾಲಂಡರ್ ಪ್ರಕಾರವೇ ಆಚರಿಸ್ಕೋತೀವಿ. ಆದರೂ “ನಮ್ಗೆ ಹೊಸವರ್ಷ ಜನವರಿ ಅಲ್ಲ, ನಮ್ಮ ಹೊಸವರ್ಷ ಮೊಹರ್ರಂ,ನಮ್ಮದು ಯುಗಾದಿ ಎಂದೆಲ್ಲ ಮೊಂಡಾಟ ಮಾಡೋದ್ಯಾಕೆ? Offcource, ಧಾರ್ಮಿಕವಾಗಿ ಇದು ಹೊಸ ವರ್ಷವಲ್ಲ. ಆದರೆ ಇದು ವ್ಯಾವಹಾರಿಕ ಪ್ರಪಂಚದ ಹೊಸ ವರ್ಷನೇ. ಆದ್ದರಿಂದ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
-ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.