ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕದಲ್ಲಿ ಹರಡುತ್ತಿರುವ ಕೋವಿಡ್ -19 ಸೋಂಕಿನಿಂದ ಪೀಡಿತರಾಗಿರುವ ರೋಗಿಗಳಿಗೆ ಆಕ್ಸಿಜನಿನ ಕೊರತೆ ಇರುವುದನ್ನು ಗಮನಿಸಿ, ಆಕ್ಸಿಜನ್ ನಮ್ಮ ಸೂಕ್ತ ಸಮಯದಲ್ಲಿ ಅವಶ್ಯವಿರುವವರಿಗೆ ಒದಗಿಸಲು ಕ್ರಮಕೈಗೊಂಡಿದ್ದು, ಅದರಂತೆ ಬಹ್ರೈನ್ ನಿಂದ 2 ಕಂಟೈನರ್ಗಳಲ್ಲಿ ತಲಾ 30 ಟನ್ಗಳ ದೃವೀಕೃತ ಮೆಡಿಕಲ್ ಆಕ್ಸಿಜನ್ ಅನ್ನು ಹೊತ್ತು ಬಹ್ರೈನ್ ನ ಮನಾಮಾ ಬಂದರಿನಿಂದ ಹೊರಟಿರುವ ನೌಕಾ ಪಡೆಯ ಐ.ಎನ್.ಎಸ್. ತಲ್ವಾರ್ ಹಡಗು ಈ ದಿನ ಅಪರಾಹ್ನ 2 ಗಂಟೆಗೆ ನವ ಮಂಗಳೂರು ಬಂದರನ್ನು ತಲುಪಿದೆ.
ಸದರಿ ಆಕ್ಸಿಜನ್ ಕಂಟೇನರ್ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ವೈ ಶೆಟ್ಟಿ, ಮಂಗಳೂರು ಮಹಾನಗರಪಾಲಿಕೆ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಕುಮಾರ್ ಇವರುಗಳ ಉಪಸ್ಥಿತಿಯಲ್ಲಿ ಇಂಡಿಯಾನ್ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ ಪ್ರಭಾಕರ್ ಶರ್ಮ ಇವರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತಾರೆ.
ಈ 2 ಆಕ್ಸಿಜನ್ ಕಂಟೇನರ್ಗಳನ್ನು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ದೆಹಲಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ರವರ ಸಹಯೋಗದೊಂದಿಗೆ ಒಪರೇಷನ್ ಸಮುದ್ರ ಸೇತು-2ರಡಿ ಸಂಯೋಜಿಸಿ ನವ ಮಂಗಳೂರು ಬಂದರಿಗೆ ತರಲಾಗಿದೆ.
ಆದುದರಿಂದ ಆಮ್ಲಜನಕದ ಕೊರತೆಯ ಕುರಿತಂತೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಭಯಪಡದೆ ಕೋವಿಡ್-19 ಬಗ್ಗೆ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸುರಕ್ಷಿತವಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.