ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಬಿ ಮೂಡ ಗ್ರಾಮದ ತಾಳಿಪಡ್ಪು ಹಿದಾಯತುಲ್ ಇಸ್ಲಾಂ ಮಸೀದಿಗೆ ನುಗ್ಗಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದ ಆರೋಪಿ ಮೂಲತಃ ಕುಕ್ಕಾಜೆ ನಿವಾಸಿ ಪ್ರಸ್ತುತ ತಾಳಿಪಡ್ಪುವಿನಲ್ಲಿ ಲೀಸ್ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ಆಸಿಫ್ (30) ಎಂಬಾತನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆಯ ಮಧ್ಯದ ಸಮಯದಲ್ಲಿ ಮಸೀದಿ ಆವರಣಕ್ಕೆ ನುಗ್ಗಿದ್ದ ಈತ ಮಸೀದಿಯ ಹಳೆಯ ತಾಮ್ರದ ಹಂಡೆ ಹಾಗೂ 5 ಬಂಡಲ್ ಕೇಬಲ್ಗಳನ್ನು ಕಳವುಗೈದಿದ್ದ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಸೈಯ್ಯದ್ ಫಲೂಲ್ ಎಂಬವರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮರುದಿನ ರಾತ್ರಿ ಮಸೀದಿಯ ಆವರಣದಲ್ಲಿ ಆಡಳಿತ ಸಮಿತಿಯವರು ಕಳವು ಕೃತ್ಯದ ಬಗ್ಗೆ ದೇವರ ಮೇಲೆ ಅರ್ಪಿಸಿ ಸಂವಾದ ನಡೆಸುತ್ತಿದ್ದ ಸಂದರ್ಭ ಅಲ್ಲಿಗೆ ಅನುಮಾನಾಸ್ಪದವಾಗಿ ಬಂದ ಆಸೀಫ್ನನ್ನು ಹಿಡಿದು ವಿಚಾರಿಸಿದಾಗ ಆತ ಕಳವು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡ ಹಿನ್ನಲೆಯಲ್ಲಿ ತಕ್ಷಣ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ವಿಚಾರಣೆಯ ಸಂದರ್ಭ ಕೂಡಾ ಆತ ಕಳವು ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ ಸೊತ್ತುಗಳನ್ನು ಮಾರಾಟ ಮಾಡಿದ ಅಂಗಡಿಯ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಆತ ನೀಡಿದ ಮಾಹಿತಿಯಂತೆ ಪೊಲೀಸರು ಬುಧವಾರ ಬೆಳಿಗ್ಗೆ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮಧ್ಯೆ ಆಸಿಫ್ ಕೂಡಾ ಪ್ರತಿ ದೂರು ನೀಡಿದ್ದು, ಬಿ ಮೂಡ ಗ್ರಾಮದ ತಾಳಿಪಡ್ಪು ಎಂಬಲ್ಲಿ ಲೀಸ್ ಆಧಾರದಲ್ಲಿ 2 ವರ್ಷಗಳಿಂದ ವಾಸಿಸುತ್ತಿರುವ ನನ್ನ ಮನೆಗೆ ಸಂಬಂಧಿಸಿದ ವಾರಸುದಾರರು ಬಂದು ಸೇರಿಕೊಂಡಿದ್ದು. ವಾರಸುದಾರರಿಂದ ಹಣ ಬರಲು ಬಾಕಿಯಿರುವುದರಿಂದ ಸದ್ರಿ ಮನೆಯನ್ನು ಬಿಟ್ಟು ಹೋಗದೇ ಇದ್ದ ಕಾರಣಕ್ಕೆ ಬಂಟ್ವಾಳ ಪುರಸಭಾ ಸದಸ್ಯ ಹಸೈನಾರ್ ಹಾಗೂ ಇತರರು ಸೇರಿ ಮಸೀದಿಯಿಂದ ಹಂಡೆ ಕದ್ದಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿರುವುದಾಗಿ ದೂರಿಕೊಂಡಿದ್ದಾನೆ.
ಆದರೆ ಕಳವು ಆರೋಪಿಯ ದೂರು ಸಂಪೂರ್ಣ ಸುಳ್ಳಾಗಿದ್ದು, ಪೊಲೀಸರು ಸಮರ್ಪಕವಾದ ತನಿಖೆ ನಡೆಸದೆ ಆರೋಪಿಯ ದೂರು ಸ್ವೀಕರಿಸಿರುವುದು ಸರಿಯಲ್ಲ ಎಂದು ಮಸೀದಿ ಆಡಳಿತ ಸಮಿತಿಗೆ ಸಂಬಂಧಪಟ್ಟವರು ತಿಳಿಸಿದ್ದಾರೆ. ಆರೋಪಿ ಆಸೀಫ್ ಮೇಲೆ ಹಲವು ಕಳ್ಳತನ ಪ್ರಕರಣಗಳು ಜಿಲ್ಲೆಯ ವಿವಿಧೆಡೆ ದಾಖಲಾಗಿದ್ದು, ಕಳ್ಳತನ ಕೃತ್ಯಕ್ಕೆ ಸಂಬಂಧಿಸಿದಂತೆ ಜೈಲುವಾಸವನ್ನೂ ಅನುಭವಿಸಿದ ಆಸಾಮಿಯಾಗಿದ್ದಾನೆ. ಅಲ್ಲದೆ ತಾಳಿಪಡ್ಪು ಮಸೀದಿಯಲ್ಲಿ ನಡೆದ ಕಳವು ಕೃತ್ಯವನ್ನೂ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಲ್ಲದೆ ಸೊತ್ತುಗಳನ್ನು ಮಾರಾಟ ಮಾಡಿದ ಅಂಗಡಿಯ ವಿವರವನ್ನೂ ನೀಡಿದ್ದಾನೆ. ಸೊತ್ತುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ದೂರು ನೀಡುವುದಕ್ಕೂ ಮುಂಚೆ ಮಸೀದಿ ಆಡಳಿತ ಮಂಡಳಿಯೊಂದಿಗೆ ರಾಜಿ ಪಂಚಾಯಿತಿಕೆ ನಡೆಸುವಂತೆ ಕೋರಿಕೊಂಡಿದ್ದು, ಮಸೀದಿಗೆ 40 ಸಾವಿರ ರೂಪಾಯಿ ಹಣವನ್ನೂ ನೀಡುವುದಾಗಿ ಒಪ್ಪಿಕೊಂಡಿದ್ದ. ಈ ಎಲ್ಲ ಹಿನ್ನಲೆಯ ಮಧ್ಯೆಯೂ ಪೊಲೀಸರು ಆರೋಪಿತ ನೀಡಿದ ಸುಳ್ಳು ದೂರು ಸ್ವೀಕರಿಸುವ ಕ್ರಮ ಸರಿಯಲ್ಲ ಎಂದಿದ್ದಾರೆ. ಬಂಟ್ವಾಳ ವ್ಯಾಪ್ತಿಯಲ್ಲಿ ನಿರಂತರ ಕಳ್ಳತನ ಕೃತ್ಯಗಳು ನಡೆಯುತ್ತಿದ್ದು, ಈ ಮಧ್ಯೆ ಆರೋಪಿತರ ಬಗ್ಗೆ ಪೊಲೀಸರು ಇಂತಹ ಮೃಧು ಧೋರಣೆ ತಾಳುತ್ತಿರುವುದು ಆರೋಪಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಲ್ಲದೆ ಮತ್ತಿನ್ನೇನು ಎಂದು ಜನ ಪ್ರಶ್ನಿಸಿದ್ದಾರೆ.
ಪ್ರಕರಣದ ಬಗ್ಗೆ ಬಂಟ್ವಾಳ ನಗರ ಠಾಣೆಯ ನೂತನ ಪೊಲೀಸ್ ಇನ್ಸ್ಪೆಕ್ಟರ್ ಚೆಲುವರಾಜು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಕಳವು ಆರೋಪಿ ಆಸಿಫ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ತಾ.ಪಂ. ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಹಾಗೂ ಬೀಡಿ ಉದ್ಯಮಿಯಾಗಿದ್ದ ಚಂದ್ರಹಾಸ ಶೆಟ್ಟಿ ಬೋಳಂತೂರು ಅವರು ದೀರ್ಘ ಕಾಲದ ಅನಾರೋಗ್ಯದ ಬಳಿಕ ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಇವರು ವೀರಕಂಭ ಗ್ರಾ.ಪಂ. ಅಧ್ಯಕ್ಷರಾಗಿ, ತಾ ಪಂ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯವಾಗಿ ಸಕ್ರಿಯರಾಗಿದ್ದರಲ್ಲದೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮನ್ನು ತಾವು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಪ್ರೀತಿ ಬೀಡಿ ಹಾಗೂ ಫಾಮ್ರ್ಸ್ ನಡೆಸಿಕೊಂಡು ಬರುವ ಮೂಲಕ ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮೊದಲಾದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಮಾತೃ ಭಾಷೆ ಅಥವಾ ಮನೆ ಭಾಷೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ತುಳುನಾಡಿನಲ್ಲಿ ತುಳು ಭಾಷೆಯನ್ನು ಕಡೆಗಣಿಸಿದರೆ ತಾಯಿಯನ್ನು ಕಡೆಗಣಿಸಿದಂತೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು.
ಬಂಟ್ವಾಳ ಕಾಮಾಜೆ ಸರಕಾರಿ ಕಾಲೇಜಿನಲ್ಲಿ ನಡೆದ ತುಳು ಜನಪದ ನೃತ್ಯ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು ಅತ್ಯಂತ ಪ್ರಾಚೀನವಾದ, ಪ್ರತ್ಯೇಕ ಕಾಲಗಣನೆ ವ್ಯವಸ್ಥೆಯನ್ನು ಹೊಂದಿದ ಹಾಗೂ ತುಳುನಾಡಿನಲ್ಲಿ ಸಂಸ್ಕøತ ಭಾಷೆಗೂ ಲಿಪಿಯನ್ನು ಒದಗಿಸಿದ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕು ಹಾಗೂ ರಾಜ್ಯ ಭಾಷೆಯಾಗಿ ಮನ್ನಣೆ ಪಡೆಯಬೇಕು ಎಂದವರು ಆಶಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ ಮಾತನಾಡಿ, ಸ್ಥಳೀಯ ಬಾಷೆಗಳನ್ನು ಉಳಿಸಿ ಬೆಳೆಸಿದರೆ ಸಂಸ್ಕತಿ ಶ್ರೀಮಂತವಾಗುತ್ತದೆ ಹಾಗೂ ತುಳು ಜನಪದ ನೃತ್ಯದಂತಹ ಕಲಾ ಪ್ರಕಾರಗಳೂ ಉಳಿದು ಬೆಳೆಯುತ್ತವೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ಮಾತನಾಡಿ, ಪ್ರಾಚೀನ ಗ್ರಂಥಗಳಲ್ಲಿ ಹಾಗೂ ಪ್ರವಾಸ ಕಥನಗಳಲ್ಲಿ ತುಳುನಾಡು ಎಂಬ ಉಲ್ಲೇಖ ಕಾಣಸಿಗುತ್ತದೆ ಎಂದರು.
ನೃತ್ಯ ತರಬೇತುದಾರರಾದ ಮುಕುಂದರಾಜ್ ಹಾಗೂ ಮಿಥುನ್ ಉಪಸ್ಥಿತರಿದ್ದರು. ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ. ನಂದಕಿಶೋರ್ ಎಸ್ ಸ್ವಾಗತಿಸಿ, ಸಾಂಸ್ಕøತಿಕ ಸಂಘದ ಸಂಚಾಲಕಿ ಪ್ರೊ. ಶಶಿಕಲಾ ಕೆ ವಂದಿಸಿದರು. ಮಮಿತಾ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ನಗರ ಠಾಣೆಗೆ ಪೊಲಿಿಿಸ್ ಇನ್ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡು ಆಗಮಿಸಿರುವ ಚೆಲುವರಾಜ್ ಅವರನ್ನು ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಭೇಟಿಯಾಗಿ ಶುಭ ಹಾರೈಸಿದರು.
ಈ ಸಂದರ್ಭ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ನಗರ ಠಾಣಾ ಎಸ್ಸೈ ಅವಿನಾಶ್ ಗೌಡ, ಅಪರಾಧ ವಿಭಾಗದ ಪಿಎಸ್ಸೈ ಕಲೈಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಆನ್ ಲೈನ್ ಮೂಲಕ ಕಂಪೆನಿ ಉತ್ಪನ್ನಗಳನ್ನು ಖರೀದಿಸುವಾಗ ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಗ್ರಾಹಕರು ಮೋಸ ಹೋಗುವ ಸಂದರ್ಭ ಎದುರಾಗಬಹುದು ಎಂದು ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಎಚ್ಚರಿಸಿದರು.
ಕರ್ನಾಟಕ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಘಟಕ, ಕಾವಳಪಡೂರು-ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಇವುಗಳ ಜಂಟಿ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಫೇ 20 ರಂದು ಶನಿವಾರ ನಡೆದ ಸೈಬರ್ ಕ್ರೈಮ್ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳ ಪ್ರಕರಣಗಳನ್ನು ತಕ್ಷಣ ಸಂಬಂಧಿತ ಕಾನೂನು ಪ್ರಾಧಿಕಾರಗಳ ಗಮನಕ್ಕೆ ತನ್ನಿ. ಅವುಗಳನ್ನು ಮುಚ್ಚಿಹಾಕಲು ಹೋಗದಿರಿ ಎಂದವರು ಸಲಹೆ ನೀಡಿದರು.
ಇದೇ ವೇಳೆ ಸೈಬರ್ ಕ್ರೈಂ ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪ್ರಕರಣ ದಾಖಲಿಸುವ ವಿಧಾನಗಳನ್ನು ಪಿಎಸ್ಸೈ ಪ್ರಸನ್ನ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪತ್ರಕರ್ತರ ಸಂಘ (ಕೆಜೆಯು) ದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಸಂಕಲ್ಪಕ್ಕೆ ಶಿಕ್ಷಕ- ಪೆÇೀಷಕ ವರ್ಗದ ಜತೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದರು. ಕೆಜೆಯು ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಫಾರೂಕ್ ಗೂಡಿನಬಳಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರೌಢ ಶಾಲಾ ವಿಭಾಗದ ಕಾರ್ಯಾಧ್ಯಕ್ಷ ಪಿ. ಜಿನರಾಜ ಆರಿಗ, ಸಾಮಾಜಿಕ ಮುಖಂಡ ಇಬ್ರಾಹಿಂ ಕೈಲಾರ್, ಕೆಜೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಭಾಗವಹಿಸಿದ್ದರು.
ಪೌಢಶಾಲಾ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್ ಸ್ವಾಗತಿಸಿ, ಲೈಲಾ ಪರ್ವಿಸ್ ವಂದಿಸಿದರು. ಶಿಕ್ಷಕ ಫೆಡ್ರಿಕ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪೆÇೀಷಕರು ಪೊಲೀಸ್ ಅಧಿಕಾರಿ ಜೊತೆ ಸಂವಾದದಲ್ಲಿ ಪಾಲ್ಗೊಂಡರು.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಸರ್ವಜ್ಞ ತನ್ನ ಹಿತನುಡಿಗಳಿಂದ ಸಮಾಜವನ್ನು ಒಳ್ಳೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಇವರ ತ್ರಿಪದಿಗಳಲ್ಲಿರುವ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಕಛೇರಿ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಹೇಳಿದರು.
ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶನಿವಾರ ನಡೆದ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಮಾತನಾಡಿದ ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಸೇಸಪ್ಪ ಅವರು ಆಡು ಮಾತಿನಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದವರು ಸರ್ವಜ್ಞ. ಅವಿದ್ಯಾವಂತರಾದರೂ ಎಲ್ಲ ಜನರನ್ನೂ ಒಂದೇ ದೃಷ್ಟಿಯಿಂದ ನೋಡಿ ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದವರು ಎಂದರು.
ಈ ಸಂದರ್ಭ ಪುರಸಭಾ ಸದಸ್ಯರಾದ ಹರಿಪ್ರಸಾದ್, ಶೋಭಾ ಹರಿಶ್ಚಂದ್ರ, ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಂದರ್ ಬಿ., ಸಮಾಜ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಪದ್ಮನಾಭ ವಿಟ್ಲ, ಪ್ರಮುಖರಾದ ಸುಕುಮಾರ್ ಬಂಟ್ವಾಳ, ಪುನೀತ್ ಎಸ್ ಮೈರಾನ್ಪಾದೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಶು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು. ಜನಾರ್ದನ ಬಂಟ್ವಾಳ್ ಸ್ವಾಗತಿಸಿ, ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ವಂದಿಸಿದರು.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಮ್ಮ ಪರಂಪರೆಯನ್ನು ಉಳಿಸಿಕೊಂಡು ಸಮಾಜ ಸೇವೆಯ ಮನೋಭಾವದೊಂದಿಗೆ ದುಡಿಯುತ್ತಿರುವ ಸವಿತಾ ಸಮಾಜ ಶ್ಲಾಘನೆಗೆ ಅರ್ಹ ಅಲ್ಲದೇ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ದೇಶಭಕ್ತಿ ನಮಗೆಲ್ಲರಿಗೂ ಆದರ್ಶ ಎಂದು ಬಂಟ್ವಾಳ ತಾಲೂಕು ಕಛೇರಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಅಣ್ಣು ನಾಯ್ಕ್ ಅಭಿಪ್ರಾಯಪಟ್ಟರು. ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಸವಿತಾ ಮಹರ್ಷಿ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುರೇಶ್ ನಂದೊಟ್ಟು ಮಾತನಾಡಿ, ದೇವಾನುದೇವತೆಗಳ ಆಯುಷ್ಕರ್ಮವನ್ನು ನೆರವೇರಿಸುತ್ತಿದ್ದ ಸವಿತಾ ಮಹರ್ಷಿಗಳ ಜನ್ಮ ದಿನವನ್ನು ನಾವು ಸವಿತಾ ಜಯಂತಿಯಾಗಿ ಆಚರಿಸುತ್ತಿದ್ದೇವೆ. ಆಯುಷ್ಕರ್ಮ ಮಾತ್ರವಲ್ಲ ಆಯುರ್ವೇದವನ್ನು ಒಳಗೊಂಡು ಸಮಾಜದ ಒಳಿತಿಗಾಗಿ ಈ ಸಮಾಜ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭ ಉದ್ಯಮಿ, ಬಿ.ಸಿ.ರೋಡು ಸವಿತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು. ಜನಾರ್ದನ ಬಂಟ್ವಾಳ್ ಸ್ವಾಗತಿಸಿ, ವಂದಿಸಿದರು.
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 5 ವಿದ್ಯುತ್ ನಿಗಮಗಳಾದ ಮೆಸ್ಕಾಂ, ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಹಾಗೂ ಜೆಸ್ಕಾಂ ಇವುಗಳ ಬಿಲ್ ಪಾವತಿಗೆ ಸಂಬಂಧಪಟ್ಟಂತೆ ರಾಜ್ಯದಲ್ಲೇ ಮೊದಲ ಬಾರಿಗೆ ಪೆÇೀಸ್ಟ್ ಮಾಸ್ಟರ್ ಜನರಲ್, ದಕ್ಷಿಣ ಕರ್ನಾಟಕ ವಲಯ ಮತ್ತು ಮೆಸ್ಕಾಂನೊಂದಿಗಿನ ಒಡಂಬಡಿಕೆಯಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಂಚೆ ಕಛೇರಿಯ ಮೂಲಕ ಆನ್ ಲೈನ್ ತಂತ್ರಜ್ಞಾನದಡಿಯಲ್ಲಿ ವಿದ್ಯುತ್ ಬಿಲ್ ಪಾವತಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಇದುವರೆಗೆ ಮೆಸ್ಕಾಂ ಬಿಲ್ಲುಗಳನ್ನು ಮಂಗಳೂರು, ಪುತ್ತೂರು, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಅಂಚೆ ಕಛೇರಿಗಳಲ್ಲಿ ಆಫ್ ಲೈನ್ ಮುಖಾಂತರ ಆರ್ ಆರ್ ಸಂಖ್ಯೆ ಹಾಗೂ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಆಧಾರದಲ್ಲಿ ಸ್ವೀಕರಿಸಲಾಗುತ್ತಿತ್ತು. ಈ ಕಾರ್ಯ ವಿಧಾನದಲ್ಲಿ ಎಲ್ಲಾ ಅಂಚೆ ಕಛೇರಿಗಳಲ್ಲಿ ಬುಕ್ ಮಾಡಲಾದ ಮೆಸ್ಕಾಂ ಬಿಲ್ಗಳ ವಿವರಗಳನ್ನು ಅಂಚೆ ಇಲಾಖೆಯು ಮರುದಿನ ಮೆಸ್ಕಾಂ ಇಲಾಖೆಗೆ ನೀಡುತ್ತಿತ್ತು. ಇದರಿಂದಾಗಿ ಮೆಸ್ಕಾಂ ಬಿಲ್ಲುಗಳ ಮೊತ್ತವನ್ನು ಗ್ರಾಹಕರ ಮೀಟರ್ ಸಂಖ್ಯೆಗೆ ಹೊಂದಿಸಲು ಒಂದು ದಿನ ವಿಳಂಬವಾಗುತ್ತಿತ್ತು. ಹಾಗೂ ಬಿಲ್ಲಿನಲ್ಲಿ ನಮೂದಾಗಿರುವ ಆರ್ ಆರ್ ಸಂಖ್ಯೆ ಅಥವಾ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಮಾಸಿ ಹೋಗಿದ್ದಲ್ಲಿ ತಪ್ಪಾದ ಆರ್ ಆರ್ ಸಂಖ್ಯೆಗೆ ಅಥವಾ ತಪ್ಪಾದ ಮೆಸ್ಕಾಂ ಸಬ್ ಡಿವಿಜನ್ಗೆ ಪಾವತಿಯಾಗುವ ಸಾಧ್ಯತೆಯಿತ್ತು. ಈ ಪ್ರಕ್ರಿಯೆಯಲ್ಲಿ ಇರುವ ನ್ಯೂನ್ಯತೆಗಳನ್ನು ಹೊಗಲಾಡಿಸಲು ಮಂಗಳೂರು ಅಂಚೆ ವಿಭಾಗವು ಮುಂದಾಗಿದ್ದು, ಇನ್ನು ಮುಂದೆ ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಸ್ವೀಕರಿಸಲಾಗುವ ವಿದ್ಯುತ್ ಬಿಲ್ಗಳನ್ನು/ ಎ.ಎಸ್.ಡಿ. (ಸೆಕ್ಯುರಿಟಿ ಡೆಪಾಸಿಟ್) ಬಿಲ್ಗಳನ್ನು ಎಪಿಐ ತಂತ್ರಜ್ಞಾನವನ್ನು ಅಳವಡಿಸಿ ಆನ್ ಲೈನ್ ಮುಖಾಂತರ ಸ್ವೀಕರಿಸಲಾಗುವುದು. ಈ ತಂತ್ರಜ್ಞಾನದ ಮೂಲಕ ಇಲಾಖಾ ಅಂಚೆ ಕಛೇರಿಗಳಲ್ಲಿ ಸ್ವೀಕರಿಸಲಾದ ಮೆಸ್ಕಾಂ/ ಎ.ಎಸ್.ಡಿ. ಬಿಲ್ ಮಾಹಿತಿಯು ತಕ್ಷಣದಲ್ಲಿ ಮೆಸ್ಕಾಂ ಸರ್ವರ್ಗೆ ತಲುಪಿ ಆಯಾಂiÀi ಆರ್ ಆರ್ ಸಂಖ್ಯೆಗೆ ಕೂಡಲೇ ಅಪ್ಡೇಟ್ಗೊಳ್ಳುವುದು.
ಮುಂದಿನ ದಿನಗಳಲ್ಲಿ ಗ್ರಾಹಕರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ವಿದ್ಯುತ್ ಬಿಲ್/ ಎ.ಎಸ್.ಡಿ. ಬಿಲ್ಗಳನ್ನು ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಪಾವತಿಸಬಹುದು. ಈ ಮೊದಲು ಉಡುಪಿ ಮೆಸ್ಕಾಂ ವಿಭಾಗಕ್ಕೆ ಸಂಬಂಧ ಪಟ್ಟ ಬಿಲ್ಗಳನ್ನು ಉಡುಪಿ ಅಂಚೆ ವಿಭಾಗದ ಅಂಚೆ ಕಛೇರಿಗಳಲ್ಲಿ ಮಾತ್ರ ಪಾವತಿಸಬಹುದಾಗಿದ್ದು, ಬೇರೆ ಅಂಚೆ ಕಛೇರಿಗಳಲ್ಲಿ ಪಾವತಿಸಲಾಗುತ್ತಿರಲಿಲ್ಲ. ಹಾಗೆಯೇ ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯ ಮೆಸ್ಕಾಂ ಬಿಲ್ಗಳನ್ನು ಮಂಗಳೂರಿನ ಅಂಚೆ ಕಛೇರಿಗಳಲ್ಲಿ ಪಾವತಿಸಲು ಸಾಧ್ಯವಿರಲಿಲ್ಲ. ಇದೀಗ ಯಾವುದೇ ಮೆಸ್ಕಾಂ ವಿಭಾಗಕ್ಕೆ ಸಂಬಂಧಪಟ್ಟ ಬಿಲ್ಗಳನ್ನು ಕರ್ನಾಟಕದ ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಾವತಿಸಬಹುದು. ಇದರಿಂದ ಕೆಲಸಕ್ಕಾಗಿ ಪುತ್ತೂರು, ಮಂಗಳೂರು ಉಡುಪಿ ಮಧ್ಯೆ ಓಡಾಡುವ ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್ಲನ್ನು ತಮ್ಮ ಕೆಲಸದ ಕಛೇರಿಯ ಸಮೀಪದ ಅಂಚೆ ಕಛೇರಿಗಳಲ್ಲಿ ಪಾವತಿಸಲು ಅವಕಾಶವಾಗಲಿದೆ.
ಈ ಹೊಸ ತಂತ್ರಜ್ಞಾನದಿಂದ ಬಿಲ್ ಪಾವತಿಸಲು ಅಂಚೆ ವಿಭಾಗದ ಗಡಿ ಇನ್ನು ಮುಂದೆ ಅನ್ವಯವಾಗುವುದಿಲ್ಲ. ಮೆಸ್ಕಾಂ ಬಿಲ್ ಪ್ರತಿ ತಾರದೆ ಕೇವಲ ಬಿಲ್ನಲ್ಲಿ ನಮೂದಾಗಿರುವ ಅಕೌಂಟ್ ನಂಬರ್ ಅಥವಾ ಆರ್ ಆರ್ ನಂಬರ್+ಲೊಕೇಶನ್ ಕೋಡ್ ಹೇಳಿ ಬಿಲ್ ಕಟ್ಟಬಹುದು., ಉಡುಪಿ/ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದುವರೆಗೆ ಅಂಚೆ ಕಛೇರಿಗಳಲ್ಲಿ ಮೆಸ್ಕಾಂನ ಸೆಕ್ಯುರಿಟಿ ಡೆಪಾಸಿಟ್ (ಎ.ಎಸ್.ಡಿ.) ಸ್ವೀಕರಿಸುವ ಸೌಲಭ್ಯ ಇರಲಿಲ್ಲ. ಇನ್ನು ಮುಂದೆ ಈ ಸೌಲಭ್ಯ ಅಂಚೆ ಕಛೇರಿಗಳಲ್ಲಿ ಇರಲಿದೆ. ದ.ಕ. ಜಿಲ್ಲೆಯಲ್ಲಿ ಇದು ಈಗಾಗಲೇ ಲಭ್ಯವಿದೆ.
ಎಲ್ಲಾ ಮೆಸ್ಕಾಂ ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ಸೇವೆಯು ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಲಭ್ಯವಿದ್ದು, ಶಾಖಾ ಅಂಚೆ ಕಛೇರಿಗಳಲ್ಲಿ ಈ ಮೊದಲಿನ ಆಫ್ ಲೈನ್ ತಂತ್ರಜ್ಞಾನದಡಿಯಲ್ಲೇ ಮೆಸ್ಕಾಂ/ ಎ.ಎಸ್.ಡಿ. ಬಿಲ್ ಗಳನ್ನು ಸ್ವೀಕರಿಸಲಾಗುವುದು. ಈ ಆನ್ಲೈನ್ ಸೇವೆಯನ್ನು ಶೀಘ್ರದಲ್ಲೇ ಎಲ್ಲಾ ಶಾಖಾ ಅಂಚೆ ಕಛೇರಿಗಳಲ್ಲೂ ಪ್ರಾರಂಭಿಸಲಾಗುವುದು ಎಂದು ಮಂಗಳೂರು ಹಿರಿಯ ಅಂಚೆ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಸರಕಾರದ ಆದೇಶದಂತೆ ಬಂಟ್ವಾಳ ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಫೆ 20 ರಂದು ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿರಲಿದ್ದು, ಗ್ರಾಮಸ್ಥರಿಗೆ ಕಂದಾಯ ಹಾಗೂ ಇತರ ಇಲಾಖಾ ಸವಲತ್ತುಗಳ ವಿತರಣೆ ನಡೆಯಲಿದ್ದು, ಸಮಸ್ಯೆಗಳ ಬಗ್ಗೆಯೂ ಗ್ರಾಮಸ್ಥರು ಇಲಾಖಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಬಹುದು. ಈ ಬಗ್ಗೆ ಗ್ರಾಮಸ್ಥರು ತಮ್ಮ ದೂರುಗಳನ್ನು ಫೆ 18ರೊಳಗೆ ಪಂಚಾಯತ್ ದೂರು ಪೆಟ್ಟಿಗೆ ಅಥವಾ ಗ್ರಾಮಕರಣಿಕರಲ್ಲಿ ಖುದ್ದಾಗಿ ಸಲ್ಲಿಸಬಹುದು ಎಂದು ಬಂಟ್ವಾಳ ತಹಶೀಲ್ದಾರರ ಕಛೇರಿ ಪ್ರಕಟಣೆ ತಿಳಿಸಿದೆ.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಾಲಕನಾಗಿದ್ದಾಗಲೇ ತನ್ನ ಪವಾಡಗಳ ಮೂಲಕ ಜನರನ್ನು ಪರಿವರ್ತಿಸಲು ಪ್ರಯತ್ನ ಪಟ್ಟವರು ಸಂತ ಶ್ರೀ ಸೇವಾಲಾಲರು. ಅಲೆಮಾರಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯವನ್ನು ಮೇಲೆತ್ತಿ ಅವರಿಗೆ ಸಮಾಜದಲ್ಲಿ ವಿಶೇಷ ಸ್ಥಾನ ಕಲ್ಪಿಸಿಕೊಟ್ಟ ಸಂತರಾಗಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಹೇಳಿದರು.
ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ) ಮಂಗಳೂರು ಇದರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೆ ಎಚ್, ನಿಕಟ ಪೂರ್ವ ಜಂಟಿ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ್, ಸಲಹಾ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ನಾಯಕ್, ಕಲ್ಲುದೇನು ಲಮಾಣಿ, ಲೋಕಾ ನಾಯ್ಕ್, ದಿಲೀಪ್ ಕುಮಾರ್ ರಜಪೂತ್, ಸಂಘದ ಸದಸ್ಯರಾದ ತಾರೇಶ್ ನಾಯ್ಕ್, ವಿಜಯಲಕ್ಷ್ಮಿ ಬಾಯಿ, ಹೀರ್ಯ ನಾಯ್ಕ್, ಜ್ಯೋತಿ ಬಾಯಿ, ರಾಜು ಲಮಾಣಿ, ವಿಶ್ವನಾಥ ರಾಥೋಡ್, ಕಿರಣ್ ಕುಮಾರ್ ಡಿ ರಜಪೂತ್, ಗೌತಮಿ ನಾಯಕ್, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು.
ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.