ಮುದ್ದೇಬಿಹಾಳ (www.vknews.com) : ಪಟ್ಟಣ ಸೇರಿದಂತೆ ತಾಲೂಕಿನ ಕೆಲವೆಡೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗತೊಡಗಿದೆ. ಇವರು ಅಕ್ರಮ ಮರಳು ಸಾಗಣೆ ದಂಧೆಕೋರರಿಂದ ಹಣ ವಸೂಲಿ ಮಾಡಿ ಇತರೆ ಪತ್ರಕರ್ತರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಿ ತಪ್ಪಿತಸ್ತರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾರ್ಯನಿರತ ಪತ್ರಕರ್ತರು ಇಲ್ಲಿನ ಸಿಪಿಐ ರವಿಕುಮಾರ ಕಪ್ಪತ್ತನ್ನವರ ಮತ್ತು ಪಿಎಸೈ ಮಲ್ಲಪ್ಪ ಮಡ್ಡಿ ಅವರಿಗೆ ರವಿವಾರ ಮನವಿ ಸಲ್ಲಿಸಿದ್ದಾರೆ.
ಯಾವುದೇ ಒಂದು ಪತ್ರಿಕೆಯ, ಇಲ್ಲಿ ಪ್ರಸಾರ ಇಲ್ಲದೆ ಇರುವ ಪತ್ರಿಕೆಯ ಗುರ್ತಿನ ಕಾರ್ಡ, ನಕಲಿ, ಭೋಗಸ್ ಪತ್ರಿಕಾ ಸಂಘಟನೆಗಳ ಗುರುತಿನ ಕಾರ್ಡ ಇಟ್ಟುಕೊಂಡು ಪತ್ರಕರ್ತರೆಂದು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡುವ, ಬ್ಲ್ಯಾಕಮೇಲ್ ಮಾಡುವ ದಂಧೆಯಲ್ಲಿ ಇಂಥವರು ತೊಡಗಿಸಿಕೊಂಡಿದ್ದಾರೆ. ಇವರ ವಸೂಲಿ ದಂಧೆಗೆ, ಭಿಕ್ಷೆ ಬೇಡುವ ಪ್ರವೃತ್ತಿಗೆ ನಿಜವಾದ ಕಾರ್ಯನಿರತ ಪತ್ರಕರ್ತರೂ ಬಲಿಯಾಗುತ್ತಿದ್ದು ಇವರ ಹೆಸರೂ ಸಾಮೂಹಿಕವಾಗಿ ವಸೂಲಿ ದಂಧೆಕೋರರೊಂದಿಗೆ ಥಳಕು ಹಾಕಿಕೊಳ್ಳುತ್ತಿದೆ. ಇದರಿಂದಾಗಿ ಜನರು ಪತ್ರಕರ್ತ ಸಮೂಹವನ್ನೇ ಸಾಮೂಹಿಕವಾಗಿ ಸಂಶಯದಿಂದ ನೋಡುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶನಿವಾರ ಮಧ್ಯರಾತ್ರಿ 11 ಗಂಟೆ ಸುಮಾರಿಗೆ ಪತ್ರಿಕೋದ್ಯಮದ ಗಾಳಿ ಗಂಧ ಗೊತ್ತಿಲ್ಲದ ನಕಲಿ ಪತ್ರಕರ್ತನೊಬ್ಬ ಕೆಲವು ವಸೂಲಿ ದಂಧೆಕೋರರ ಚಿತಾವಣೆಯಿಂದ ತನ್ನ ಕಾರಿನ ಮೇಲೆ ಪ್ರೆಸ್ ಎಂದು ಬರೆದುಕೊಂಡು ಮರಳು ಸಾಗಿಸುತ್ತಿದ್ದವರೊಂದಿಗೆ ಡೀಲ್ ಕುದುರಿಸಿ ಪತ್ರಕರ್ತ ಸಮೂಹಕ್ಕೆ ಕೆಟ್ಟ ಹೆಸರು ತಂದಿಟ್ಟ ಘಟನೆ ಕವಡಿಮಟ್ಟಿ ಬಳಿ ನಡೆದಿದೆ. ಇಂಥ ಘಟನೆಗಳಿಗೆ ಕಡಿವಾಣ ಹಾಕುವುದು ಅತೀ ಅವಶ್ಯ ಇದೆ. ಆ ಪತ್ರಕರ್ತ ಯಾರು ಅನ್ನೋದನ್ನು ತನಿಖೆ ನಡೆಸಿ ತಿಳಿದುಕೊಂಡು ಆತನನ್ನು ಬಂಧಿಸಿ ಕಾನೂನು ಕ್ರಮ ಕೈಕೊಂಡು ಇತರೆ ನಕಲಿ, ವಸೂಲಿ ಪತ್ರಕರ್ತರಿಗೆ ಬಿಸಿ ಮುಟ್ಟಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದರ ಜೊತೆಗೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯಲ್ಲಿ ಕೆಲವು ವಸೂಲಿ ಪತ್ರಕರ್ತರ ಪಾತ್ರ ಇದೆ. ಇವರಿಗೆ ಪ್ರತಿ ತಿಂಗಳು ಮಾಮೂಲಿ ಹೋಗುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಡತೊಡಗಿದೆ. ಈ ಬಗ್ಗೆಯೂ ತನಿಖೆ ನಡೆಸಿ ಯಾರು ತಪ್ಪಿತಸ್ತರು ಅನ್ನೋದನ್ನು ಪತ್ತೆ ಹಚ್ಚಿ ಸಮಾಜಕ್ಕೆ ಸತ್ಯ ತಿಳಿಸಿಕೊಡಬೇಕು ಮತ್ತು ಅಕ್ರಮ ಮರಳು ದಂಧೆ ಮಟ್ಟ ಹಾಕಲು ತಮ್ಮ ಇಲಾಖೆಯಿಂದ ನಿಷ್ಪಕ್ಷಪಾತ, ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ತನಿಖೆ ನಡೆಸಿ ತಪ್ಪಿತಸ್ತರ ಮೇಲೆ ಕ್ರಮ ಜರುಗಿಸಲು ನಿರ್ಲಕ್ಷ್ಯ ತೋರಿದಲ್ಲಿ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಾರ್ಯನಿರತ ಪತ್ರಕರ್ತರು ಸಮರವನ್ನೇ ಸಾರಿ ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ. ಯಾರ್ಯಾರಿಗೆ ಮಾಮೂಲಿ ಹೋಗುತ್ತದೆ ಎನ್ನುವುದನ್ನು ಬಹಿರಂಗಪಡಿಸಿ ಸಮಾಜದ ಎದುರು ಅವರನ್ನು ಬೆತ್ತಲೆ ಮಾಡುವ ಪ್ರಸಂಗ ಬರುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಬಿ.ವಡವಡಗಿ, ಪ್ರಧಾನ ಕಾರ್ಯದರ್ಶಿ ಸಿದ್ದು ಚಲವಾದಿ, ಜಿಲ್ಲಾ ಸಂಘದ ಉಪಾಧ್ಯಕ್ಷ ಡಿ.ಬಿ.ವಡವಡಗಿ, ಸಂಘದ ಸದಸ್ಯರಾದ ಪರಶುರಾಮ ಕೊಣ್ಣೂರ, ಶಿವಕುಮಾರ ಶಾರದಳ್ಳಿ, ಚೇತನ್ ಕೆಂಧೂಳಿ, ಲಾಡ್ಲೇಮಶ್ಯಾಕ ನದಾಫ, ಸಾಗರ ಉಕ್ಕಲಿ, ಬಂದೇನವಾಜ ಕುಮಸಿ, ಮುತ್ತು ವಡವಡಗಿ ಮತ್ತಿತರರು ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.