ಮಂಡ್ಯ,(ವಿಶ್ವ ಕನ್ನಡಿಗ ನ್ಯೂಸ್):- ಮಂಡ್ಯ ಭಾಗದಲ್ಲಿ ಈ ವರ್ಷ ರೈತರು ಹೆಚ್ಚು ಕಬ್ಬು ಬೆಳೆದಿದ್ದು, ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲು ಸೂಕ್ತ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.
ಕಬ್ಬು ಅರೆಯುವಿಕೆ ಹಾಗೂ ರೈತರ ಸಮಸ್ಯೆಗಳ ಕುರಿತಂತೆ ಮಂಡ್ಯದ ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ಸಮಾಲೋಚನೆ ಸಭೆ ನಡೆಸಿ ಮಾತನಾಡಿದ ಅವರು ರೈತರ ಜೊತೆ ಸುಮಾರು ಒಂದೂವರೆ ಗಂಟೆಗಳ ಕಾಲ ಇದರ ಬಗ್ಗೆ ಚರ್ಚೆ ಮಾಡಲಾಗಿದ್ದು ಮುಖ್ಯವಾಗಿ ಹೆಚ್ಚುವರಿ ಕಬ್ಬು ಏನಿದೆ ಅದನ್ನು ಕಾರ್ಖಾನೆಗಳು ಅರೆಯಬೇಕು. ಹಾಗೂ ಸುಮಾರು 34.19 ಲಕ್ಷ ಟನ್ ಉತ್ಪಾದನೆಯಾಗಿರುವ ಕಬ್ಬಲ್ಲಿ 13.02 ಲಕ್ಷ ಕಬ್ಬು ಅರೆಯಲು ವ್ಯವಸ್ಥೆಯಾಗಿದ್ದು, ಉಳಿದಂತಹ ಕಬ್ಬನ್ನು ಅರೆಯಲು ಮುಂದಿನ ತಿಂಗಳು 15 ರಂದು ಪ್ರಾರಂಭವಾಗುತ್ತಿರುವ ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ 3 ಸಾವಿರ ಲಕ್ಷ ಟನ್ ಕಬ್ಬನ್ನು ಪರ್ ಡೇ ಕ್ರಷ್ ಮಾಡಿದರೆ, ಕಬ್ಬು ಅರೆಯುವಿಕೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಕಬ್ಬು ಅರೆಯುವಿಕೆಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಲಾಗಿದ್ದು, ಉಳಿದಂತಹ ಕಬ್ಬನ್ನು ಹೊರ ರಾಜ್ಯಕ್ಕೆ ಕಳುಹಿಸಿ ಕೊಟ್ಟರೆ, ರೈತರು ಬೆಳೆದಿರುವ ಕಬ್ಬು ನಾಶವಾಗದಂತೆ ನೋಡಿಕೊಳ್ಳಬಹುದು ಎನ್ನುವ ದೃಷ್ಟಿಯಿಂದ ಈ ಸಭೆಯನ್ನು ಕರೆಯಲಾಗಿದೆ. ರೈತರು ಹಾಗೂ ರೈತ ಮುಖಂಡರು ಸಲಹೆ ಕೊಟ್ಟಿರುವಂತೆ, ಸಾಗಣಿಕಾ ವೆಚ್ಚ ರೈತರ ಮೇಲೆ ಜಾಸ್ತಿ ಬೀಳುತ್ತಿದೆ. ಇದನ್ನು ಕಾರ್ಖಾನೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಉಳಿದಂತೆ ಸತ್ಯಮಂಗಲ ಭಾಗದಲ್ಲಿರುವ ಬನ್ನಾರಿ ಕಾರ್ಖಾನೆಯವರ ಜತೆ ಕೂಡ ಸಾಗಣಿಕಾ ವೆಚ್ಚ ಕುರಿತಂತೆ ಚರ್ಚೆ ನಡೆಸಲಾಗಿದೆ. ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದರಲ್ಲಿ ಸರ್ಕಾರ ಶೇಕಡ ಎಷ್ಟು ಭರಿಸಬೇಕು ಎಂಬುದನ್ನು ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಕೆಆರ್ಎಸ್ ಬಗ್ಗೆ ಮಾತನಾಡಿ ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇಂದಿನಿಂದ ಗಣಿಗಾರಿಕೆ ಸಂಪೂರ್ಣವಾಗಿ ಮಟ್ಟ ಹಾಕಲು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಸನೆ ನೀಡಿದರು. ಮುಂದಿನ ದಿನಗಳಲ್ಲಿ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಯಾದ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಕೆ.ಯಾಲಕ್ಕಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಆಹಾರ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಶರತ್ ಹಾಗೂ ರೈತರು ಉಪಸ್ಥಿತರಿದ್ದರು.