(www.vknews. in). ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರು ಸ್ವರ ಮಾಧುರ್ಯಕ್ಕೆ ವಿರಾಮದ ಚುಕ್ಕಿ ನೀಡಿದ್ದಾರೆ. ಅವರು ಇಂದು ಬೆಳಿಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಸ್ಪತ್ರೆಯ ಮೂಲಗಳು ತಿಳಿಸಿವೆ.
ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿಯವರು ಮಂಗಳೂರು ಎ.ಜೆ.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಅವರು ನಿಧನರಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಪತ್ನಿ ಮತ್ತು ಪುತ್ರ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಂಗಳೂರು ಪದವಿನಂಗಡಿ ಮನೆಯಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ. ವೆಂಕಪ್ಪ ಡೋಗ್ರ, ಅವರ ಬಳಿಕ ಈ ವಿಧಾನವನ್ನು ಹೊಸ ಎತ್ತರಕ್ಕೇರಿಸಿದವರು ಕದ್ರಿ ಗೋಪಾಲನಾಥ್.
ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು, ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಪ್ರಮುಖರು ಕದ್ರಿ ಗೋಪಾಲನಾಥ್. ಹುಟ್ಟಿದ್ದು ಮಂಗಳೂರಿನಲ್ಲಿ 1948ರ ಡಿಸೆಂಬರ್ 11ರಂದು. ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಬೆಳಿಸಿಕೊಂಡ ಅವರಿಗೆ ತಂದೆಯೇ ಗುರುವಾದರು. ಚಿಕ್ಕಂದಿನಲ್ಲಿಯೇ ನಾಗಸ್ವರ ಅಭ್ಯಾಸ ನಡೆಸಿದರು.
ಗೋಪಾಲನಾಥ್ರವರು ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ಗಂಗಮ್ಮನವರು.
ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ಮತ್ತೊಂದು ತಿರುವು ಕೊಟ್ಟಿದ್ದು ಮೈಸೂರು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸೋಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತರು. ಸ್ಯಾಕ್ಸೋಫೋನ್ನಲ್ಲಿಯೇ ಪ್ರಾವೀಣ್ಯತೆ ಸಾಧಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು ಇಪ್ಪತ್ತು ವರ್ಷಗಳದ್ದು.
ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸ್ಯಾಕ್ಸೋಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು. ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು.
ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ.ವಿ.ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.
ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಛೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಠಿತ ಉತ್ಸವ-ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್ನ ಪ್ರೊಮೆನಾಡೊ, ಪ್ಯಾರಿಸ್ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಯೂರೋಪ್, ಸ್ವಿಡ್ಜರ್ಲೆಂಡ್, ಯು.ಕೆ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಾಪುರ, ಬಹರೇನ್, ಕತಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಸಂಗೀತ ಕಛೇರಿಗಳನ್ನು ನಿರಂತರವಾಗಿ ನಡೆಸಿದ್ದಾರೆ.
ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ.
ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೋಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಭಾರತದಲ್ಲಿ ಮತ್ತು ಹೊರಗೆ ಅನೇಕ ‘ಸಂಗೀತ-ಕಛೇರಿ’ಗಳನ್ನು ನಡೆಸಿರುವ ‘ಕದ್ರಿ ಗೋಪಾಲನಾಥ್’ ಸ್ಯಾಕ್ಸೋಫೋನ್ ಚಕ್ರವರ್ತಿ ಎಂದೇ ಹೆಸರಾದವರು.
ಚೆನ್ನೈನ ನಾರದ ಗಾನಸಭಾದಲ್ಲಿ 400 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದ್ದರು.
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.