
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಪೆ ಗ್ರಾಮದ ಅಂಚೆ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡ ಬುಧವಾರ ಬೆಳಿಗ್ಗೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪುಟಾಣಿಗಳು ಅಪಾಯದಿಂದ ಪಾರಾಗಿದ್ದಾರೆ.
ಸುಮಾರು 28 ವರ್ಷಗಳ ಕಾಲ ಹಳೆಯದಾದ ಹಂಚಿನ ಛಾವಣಿಯ ಅಂಗನವಾಡಿ ಕೇಂದ್ರ ತೀವ್ರ ಶಿಥಿಲಾವಸ್ಥೆಗೆ ತಲುಪಿದ ಪರಿಣಾಮ ಕುಸಿದು ಬಿದ್ದಿದೆ ಎನ್ನಲಾಗಿದೆ. ಘಟನೆ ವೇಳೆ ಅಂಗನವಾಡಿ ಕೇಂದ್ರದಲ್ಲಿ ಸುಮಾರು 25 ರಷ್ಟು ಮಂದಿ ಪುಟಾಣಿ ಮಕ್ಕಳಿದ್ದರು ಎಂದು ತಿಳಿದು ಬಂದಿದೆ.
ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಶಬ್ದ ಕೇಳಿ ಮಕ್ಕಳು ಹೆದರಿ ಕೇಂದ್ರದ ಹೊರಗೆ ಓಡಿ ಬಂದಿದ್ದು, ಕೆಲ ಮಕ್ಕಳನ್ನು ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದು, ಎಲ್ಲ ಪುಟಾಣಿಗಳು ಯಾವುದೇ ಜೀವಾಪಾಯವಿಲ್ಲದೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಿ ಪಂ ಸದಸ್ಯ ತುಂಗಪ್ಪ ಭೇಟಿ ನೀಡಿದ್ದು, ಕೇಂದ್ರದ ಕಟ್ಟಡಕ್ಕೆ ಕಾಯಕಲ್ಪ ಆಗುವವರೆಗೆ ಬದಲಿ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಾಚರಣೆಗೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ತಾ ಪಂ ಸದಸ್ಯ ಪ್ರಭಾಕರ ಪ್ರಭು, ಗ್ರಾ ಪಂ ಸದಸ್ಯ ದೇವಪ್ಪ ಕರ್ಕೇರ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.