ತುಮಕೂರು (ವಿಶ್ವ ಕನ್ನಡಿಗ ನ್ಯೂಸ್) : ವಿಪ್ರ ಸಮುದಾಯ ಹಾಗೂ ವಿಪ್ರ ಸಂಘಟನೆಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ತಮ್ಮ ಸಮುದಾಯದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತಾಸೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವುದು ಅತ್ಯವಶ್ಯ ಎಂದು ಬೆಂಗಳೂರಿನ ನಿವೃತ್ತ ಐ.ಪಿ.ಎಸ್. ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್ ಆಶಿಸಿದರು.
ಅವರು ತುಮಕೂರಿನ ಶ್ರೀ ಶಂಕರಮಠದಲ್ಲಿ ಡಿ. 8 ರಂದು ಭಾನುವಾರ ಏರ್ಪಟ್ಟಿದ್ದ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪೆÇೀಷಕರು ತಮ್ಮ ಮಕ್ಕಳು ಕೇವಲ ಡಾಕ್ಟರ್ ಅಥವಾ ಇಂಜಿನಿಯರ್ ಆಗುವುದಕ್ಕಷ್ಟೇ ತೃಪ್ತಿಯಾಗಬಾರದು. ಅದನ್ನು ಹೊರತು ಪಡಿಸಿ ಇನ್ನೂ ಅನೇಕ ಕ್ಷೇತ್ರಗಳಿವೆ. ಐ.ಎ.ಎಸ್., ಐ.ಪಿ.ಎಸ್, ಚಾರ್ಟರ್ಡ್ ಅಕೌಂಟೆಂಟ್, ವಕೀಲ ವೃತ್ತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹುದ್ದೆಗಳು – ಹೀಗೆ ಅನೇಕ ಹುದ್ದೆಗಳಿವೆ. ಇವುಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡುವಂತೆ ಹಾಗೂ ಅದಕ್ಕೆ ಅನುಗುಣವಾಗಿ ಸೂಕ್ತ ಮಾರ್ಗದರ್ಶನ, ಸಲಹೆ, ತರಬೇತಿಯನ್ನು ನೀಡುವ ಗುರುತರ ಹೊಣೆಗಾರಿಕೆಯನ್ನು ಸಂಘಟನೆಗಳು ನಿರ್ವಹಿಸಬೇಕು. ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಪ್ರಸಿದ್ಧರಾಗಿರುವವರು ತಮ್ಮ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆಯೆರೆಯಬೇಕು. ವಿಪ್ರ ಸಮುದಾಯದಲ್ಲೇ ಇರುವ ಅಶಕ್ತ, ಅವಕಾಶ ವಂಚಿತರ ಬಗ್ಗೆ ಚಿಂತಿಸಿ, ಅವರಿಗೆ ಸೂಕ್ತ ವಿದ್ಯೆ, ತರಬೇತಿ, ಸಹಾಯ, ಕೌಶಲ್ಯ ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ ಅವರನ್ನು ಕೈಹಿಡಿದು ಮೇಲೆತ್ತಬೇಕು. ಈ ನಿಟ್ಟಿನಲ್ಲಿ ವಿಪ್ರ ಸಂಘಟನೆಗಳು ಮುಂದಾಗಬೇಕು ಎಂದು ಸಲಹೆಯಿತ್ತರು.
ವಿಪ್ರ ಸಮುದಾಯದ ಮಕ್ಕಳು ಯಾವುದೇ ಮೀಸಲಾತಿಯಿಲ್ಲದೆಯೂ ಸಹ ತನ್ನ ಪರಿಶ್ರಮ, ಅಧ್ಯಯನ, ಸ್ವಯಂ ಪ್ರತಿಭೆಯಿಂದ ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಂದು ತಮ್ಮದೇ ಆದ ಛಾಪು ಮೂಡಿಸಿ, ದೇಶ-ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ವಿಪ್ರ ಸಂಘಟನೆಗಳು ತಮ್ಮ ಸಮುದಾಯದ ಮಕ್ಕಳ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಕ್ರಿಯಾಶೀಲರಾಗಬೇಕೆಂದರು.
ದಶಮಾನೋತ್ಸವ ಸಂಚಿಕೆ ಬಿಡುಗಡೆಗೊಳಿಸಿದ ಮುಖ್ಯ ಅತಿಥಿ ಸಿನಿಮಾ ಹಾಗೂ ಕಿರುತೆರೆ ಕಲಾವಿದೆ ಸುಧಾ ಬೆಳವಾಡಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕು. ಬಡತನದಿಂದ ಜೀವನದಲ್ಲಿ ಮೇಲೆ ಬಂದು ಅತ್ಯುತ್ತಮವಾದುದನ್ನು ಸಾಧಿಸಿದ ಅನೇಕ ಮಹನೀಯರು ಇಂದು ನಮಗೆ ಆದರ್ಶವಾಗಬೇಕು ಎಂದರು.
ಮತ್ತೋರ್ವ ಅತಿಥಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಮುಖಂಡ ಎಚ್.ಎನ್. ಹಿರಿಯಣ್ಣಸ್ವಾಮಿ ಮಾತನಾಡಿ, ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಲುವಾಗಿ ರೂಪುಗೊಂಡಿದ್ದೇ ಬ್ರಾಹ್ಮಣ ಸಭಾ. ಸಂಘಟನೆಗಳು ದೂರದೃಷ್ಟಿ ಹಾಗೂ ಗುರಿಯೊಂದಿಗೆ ತಮ್ಮ ಮುಂದಿನ ಪೀಳಿಗೆಗೆ ವಿವಿಧ ಪರೀಕ್ಷೆಗಳಿಗೆ ಅನುಕುಲವಾಗುವಂತೆ ಸೂಕ್ತ ಪೆÇ್ರೀತ್ಸಾಹ ನೀಡಬೇಕಿದೆ ಎಂದರು.
ಬೆಂಗಳೂರು ಮಹಾನಗರಪಾಲಿಕೆಯ ಮಾಜಿ ಸದಸ್ಯ ರಾಮಮೂರ್ತಿ ಮಾತನಾಡಿ, ವಿಪ್ರ ಸಮುದಾಯವನ್ನು ತುಳಿಯುವ ಹಾಗೂ ಕಾಲೆಳೆಯುವ ಪ್ರವೃತ್ತಿ ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿವೆ. ಆದ್ದರಿಂದ ಎಲ್ಲರೂ ಒಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಬೇಕಿದೆಯೆಂದರು.
ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಎನ್.ವೆಂಕಟೇಶಮೂರ್ತಿ, ಬೆಂಗಳೂರು ಘಟಕದ ಅಧ್ಯಕ್ಷ ಎಚ್.ಬಿ. ಚಂದ್ರಶೇಖರಯ್ಯ, ತುಮಕೂರು ಮಹಾನಗರಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಹಿರಿಯ ಮುಖಂಡ ಹೊನ್ನಪ್ಪ, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ನಾಗರಾಜರಾವ್ ವಿಶೇಷ ಆಹ್ವಾನಿತರಾಗಿದ್ದರು. ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಎಸ್.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ಆರ್. ಅಶೋಕ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಹಿರಿಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎಸ್.ಚಂದ್ರಶೇಖರ್ ವಂದಿಸಿದರು. ಸಂಚಾಲಕ ಹರೀಶ್ ಹಿರಿಯಣ್ಣ ಕಾರ್ಯಕ್ರಮ ನಿರೂಪಿಸಿದರು.