ಶಿಡ್ಲಘಟ್ಟ ಸಂತೋಷ ನಗರದ ನಾಗರಿಕರ ಸಂತೋಷ ಮಾಯ,ಕುಡಿಯುವ ನೀರಿಗಾಗಿ ಹಾಹಾಕಾರ


ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ನಗರದ 20ನೇ ವಾರ್ಡ್‍ನ ಸಂತೋಷ ನಗರದಲ್ಲಿ ಕಳೆದ ಏಳೆಂಟು ತಿಂಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೀದಿ ದೀಪಗಳಿಲ್ಲದೆ ಅಲ್ಲಿ ಸಂಜೆ ನಂತರ ಮನೆಯಿಂದ ಹೊರಬರಲು ಹೆದರುವಂತಾಗಿದೆ ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಕೇಳಿದರೂ ಏನೂ ಪ್ರಯೋಜನವಾಗಿಲ್ಲ ಇನ್ನು ನಗರಸಭೆ ಸದಸ್ಯೆ ಗೆದ್ದಾಗಿನಿಂದಲೂ ಕಣ್ಣಿಗೆ ಕಾಣಿಸಿಲ್ಲ ನಮ್ಮ ಗೋಳು ಕೇಳವರ್ಯಾರು ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿರುವ 20ನೇ ವಾರ್ಡಿನ ಸಂತೋಷ ನಗರದಲ್ಲಿ ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪದಂತ ಮೂಲ ಸೌಕರ್ಯಗಳಿಲ್ಲದೆ ಸಂತೋಷ ನಗರದ ವಾಸಿಗಳಿಗೆ ಸಂತೋಷವೇ ಮಾಯವಾಗಿದೆ ಈ ವಾರ್ಡಿಗೆ ಕುಡಿಯುವ ನೀರು ಪೂರೈಸಲೆಂದು ಒಂದು ಕೊಳವೆ ಬಾವಿಯಿದೆ ಕೊಳವೆ ಬಾವಿಯಿಂದಲೆ ನೇರವಾಗಿ ನಲ್ಲಿಗಳಿಗೆ ಸಂಪರ್ಕ ನೀಡಲಾಗಿದೆ ಕೊಳವೆ ಬಾವಿಯ ಅಕ್ಕ ಪಕ್ಕದ ವಾಸಿಗಳು ಮನೆಯ ಸಂಪುಗಳಿಗೆ ನಲ್ಲಿಗಳ ಸಂಪರ್ಕ ಕೊಟ್ಟುಕೊಂಡಿದ್ದು ದೂರದ ಮನೆಗಳಿಗೆ ನೀರು ಹರಿಯುತ್ತಿಲ್ಲ ಎಂದು ದೂರಿದರು.


ವಾರ್ಡಿನಲ್ಲಿ ಭುಗಲೆದ್ದಿರುವ ಕುಡಿಯುವ ನೀರಿನ ಮತ್ತು ನೈರ್ಮಲ್ಯದ ಸಮಸ್ಯೆಗಳ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳನ್ನು, ವಾಟರ್ ಮೆನ್‍ನ್ನು ಕೇಳಿದರೂ ಪ್ರಯೋಜನವಾಗಿಲ್ಲ ನಾವು ನೀರು ಬಿಟ್ಟಿದ್ದೇವೆ ನೀರು ಬರದಿದ್ದಕ್ಕೆ ನಾನೇನು ಮಾಡೋದು ಎಂದು ಹಾರೈಕೆ ಉತ್ತರ ನೀಡುತ್ತಾರೆ ಇನ್ನೂ ನೂತನ ನಗರಸಭಾ ಸದಸ್ಯರಿಗೆ ಕೇಳಿದರೇ ನಾವು ಇನ್ನೂ ಅಧಿಕಾರವಹಿಸಿಕೊಂಡಿಲ್ಲ ನಾವು ಏನು ಮಾಡಲು ಸಾಧ್ಯವೆಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ದಿಕ್ಕುತೋಚದಂತಾಗಿದೆ ಎಂದರು.

ಸರ್ಪಗಳ ಕಾಟ: ಸಂತೋಷನಗರಕ್ಕೆ ಹೊಂದುಕೊಂಡಂತೆ ಹೊಲ ಗದ್ದೆ ನೀಲಗಿರಿ ತೋಪುಗಳಿದ್ದು ಹಾವುಗಳ ಕಾಟ ಹೆಚ್ಚು ಬೀದಿ ದೀಪಗಳು ಹಾಳಾಗಿ ಏಳೆಂಟು ತಿಂಗಳಾಗಿದ್ದು ಸಂಜೆ ನಂತರ ಮಬ್ಬು ಗತ್ತಲಲ್ಲಿ ಮನೆಯಿಂದ ಹೊರ ಬರಲು ಎದರುವಂತಾಗಿದೆ ಚರಂಡಿಯಲ್ಲಿನ ಕಸ ಆಗೊಮ್ಮೆ ಈಗೊಮ್ಮೆ ತೆಗೆದು ಕೈತೊಳೆದುಕೊಳ್ಳುತ್ತಾರೆ ಇದರಿಂದ ಚರಂಡಿಗಳು ಸೊಳ್ಳೆಗಳಿಗೆ ಆಶ್ರಯತಾಣವಾಗಿ ಪರಿವರ್ತನೆಗೊಂಡಿದ್ದು ಸಾಂಕ್ರಾಮಿಕ ರೋಗ ಹರಡುವ ಆತಂಕ ಮನೆ ಮಾಡಿದೆ ಎಂದು ನಾಗರಿಕರು ತಮ್ಮ ಅಳಲು ತೋಡಿಕೊಂಡರು.


ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳನ್ನು ನಡೆಸುವ ಕುಟುಂಬಗಳು ಹಾಗೂ ನೂಲು ಬಿಚ್ಚಾಣಿಕೆ ಕೂಲಿ ಕಾರ್ಮಿಕರೆ ಹೆಚ್ಚಿರುವ ಇಲ್ಲಿ ಹೆಚ್ಚಿನ ನೀರಿನ ಅಗತ್ಯವಿದೆ. ಹಾಗಾಗಿ ಎಲ್ಲ ಕುಟುಂಬಗಳು ಸಹ ತಮಗೆ ಅಗತ್ಯವಿರುವಷ್ಟು ನೀರನ್ನು ಹಣ ಕೊಟ್ಟು ಖರೀಧಿಸುವಂತಾಗಿದೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇನ್ನು ನಗರಸಭೆ ಸದಸ್ಯೆ ಪಿರ್‍ದೋಸ್ ಪರ್ವಿನ್‍ಳ ಮನೆಗೆ ಹೋಗಿ ಕೇಳಿದರೆ ನಾವಿನ್ನೂ ಸೀಟಿನ ಮೇಲೆ ಕೂತೆ ಇಲ್ಲ ನಮ್ಮದೇನು ನಡೆಯೊಲ್ಲ ಎಂದು ಜಾರಿಕೊಳ್ಳುತ್ತಾರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ನಗರಸಭೆಯ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆಯ ವಾರ್ಡ್ ಸಂಖ್ಯೆ 20 ರಲ್ಲಿ ಕುಡಿಯುವ ನೀರಿನ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ನೈರ್ಮಲ್ಯ ಕಾಪಾಡಲು ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುವುದು ಎಂದು ಪೌರಾಯುಕ್ತ ಹೆಚ್.ವಿ.ಹರೀಶ್ ತಿಳಿಸಿದ್ದಾರೆ.

ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ

ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...