ಎಲ್ಲರೂ ಹೋರಾಡುತ್ತಿದ್ದಾರೆ, ಕೆಲವು ಧರ್ಮಾಂದರು ಹಾಗೂ ಅವಿವೇಕಿಗಳನ್ನು ಬಿಟ್ಟು!! ಎರಡೂ ಕಾಲಿಲ್ಲ, ಕಿಡ್ನಿಯೂ ನಷ್ಟಹೊಂದಿ ಡಯಾಲಿಸಿಸ್‌ಗಾಗಿ ಹೋಗಬೇಕಿತ್ತು

ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಜಗತ್ತು ಬೆಚ್ಚಿಬಿದ್ದಿದೆ! ಪ್ರಪಂಚದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದೆ. ಹಿರಿಯಣ್ಣ ಅಮೇರಿಕಾ ಸಹಿತ ವಿಶ್ವದ ಪ್ರಬಲ ಬಲಾಢ್ಯ ರಾಷ್ಟ್ರಗಳು ಕಣ್ಣಿಗೂ ಕಾಣದ ವೈರಸ್‌ನ ಮುಂದೆ ಮಂಡಿಯೂರಿ ಬಿಟ್ಟಿದೆ. ಪ್ರಪಂಚದಾದ್ಯಂತ ವಿರುವ ಮನುಷ್ಯರು ತಂತಮ್ಮ ಮನೆಗಳಲ್ಲೇ ಕಾಲಕಳೆಯುತ್ತಿದ್ದಾರೆ.

ಆದರೆ ರೋಗಿಗಳಾಗಿ ಬರುವ ಕೊರೋನ ಪೀಡಿತರನ್ನು ಸಹಿತ ಜೀವ ಪಣಕ್ಕಿಟ್ಟು ಶುಶ್ರೂಷೆ ಮಾಡುತ್ತಿರುವ ವೈದ್ಯರು, ನರ್ಸ್‌ಗಳು, ಈ ವೈರಸ್ ನಾಡಿಡೀ ಹಬ್ಬದಂತೆ ರಾತ್ರಿ ಹಗಲೆನ್ನದೆ ನಿದ್ದೆ ಬಿಟ್ಟು ನಮ್ಮನ್ನು ಕಾಯುತ್ತಿರುವ ಅಸಂಖ್ಯಾತ ಪೊಲೀಸರು, ಲಾಕ್‌ಡೌನ್ ನಿಂದ ತತ್ತರಿಸಿರುವ ಬಡಬಗ್ಗರಿಗೆ, ರೋಗ ಪೀಡಿತರಿಗೆ, ಗರ್ಭಿಣಿಗಳಿಗೆ, ಅಲ್ಲಲ್ಲಿ ಬಾಕಿಯಾಗಿ ತುತ್ತು ಅನ್ನಕ್ಕೂ ಗತಿಯಿಲ್ಲದೆ ಪರದಾಡುತ್ತಿರುವ ಮನುಷ್ಯರಿಗೆ ದಿನವಿಡೀ ಸೇವೆಗೆ ನಿಂತಿರುವ ಧೀರ ಸ್ವಯಂ ಸೇವಕರಿಗೆ ನಾವು ಸೆಲ್ಯೂಟ್ ಹೊಡೆಯಲೇ ಬೇಕು!!

ಪರಿಸ್ಥಿತಿಯ ಲಾಭ ಪಡೆದು ಅತಿರೇಕದಿಂದ ವರ್ತಿಸುತ್ತಿರುವ ಬೆರಳೆಣಿಕೆಯಷ್ಟು ಪೊಲೀಸರು ಹಾಗೂ ಈ ಆತಂಕಕಾರಿ ಪರಿಸ್ಥಿತಿಯ ನಡುವೆಯೂ ಧರ್ಮಾಂದತೆಯ ಬರಹಗಳನ್ನು ಬರೆದು ಇದನ್ನು ಒಂದು ಸಮುದಾಯದ ಮೇಲೆ ಎತ್ತಿಕಟ್ಟುತ್ತಿರುವ ಒಂದೆರಡು ಅವಿವೇಕಿ ಪತ್ರಿಕೆಗಳು ಹಾಗೂ ಯಾವುದೇ ಮುನ್ನೆಚ್ಚರಿಕೆಗಳಿಗೆ ಬೆಲೆ ಕೊಡದೆ ಅನಗತ್ಯವಾಗಿ ಅಲೆದಾಡುವ ಕೆಲ ಯುವಕರನ್ನು ಬಿಟ್ಟರೆ ಬಾಕಿ ಇರುವ ಎಲ್ಲರೂ ಈ ಮಹಾಮಾರಿಯಿಂದ ದೇಶವನ್ನು ರಕ್ಷಣೆ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಬ್ರೇಕ್ ದಿ ಚೈನ್, ಸ್ಟೇ ಅಟ್ ಹೋಂ ಇತ್ಯಾದಿ ಆಂದೋಲನಗಳು ಬಹುತೇಕ ಯಶಸ್ವಿಯಾಗಿ ನಡೆಯುತ್ತಿವೆ. “ನಾನು ಮನೆಯಲ್ಲಿದ್ದೇನೆ, ನನಗಾಗಿ.. ನನ್ನ ರಾಷ್ಟ್ರಕ್ಕಾಗಿ..” ಎಂಬ ಎಸ್ಸೆಸ್ಸೆಫ್ ಕೊಡಗು ಜಿಲ್ಲೆಯ ಅಭಿಯಾನ ತುಂಬಾ ಹಿಡಿಸಿತು. ಹಲವು ಸಂಘಟನೆಗಳು, ಸಕ್ರೀಯ ತಂಡಗಳು ಈ ಸಂದರ್ಭ ಜನರಿಗೆ ಬೆಂಗಾವಲಾಗಿ ನಿಂತಿದೆ. ಅದರಲ್ಲೂ ಎಸ್ಸೆಸ್ಸೆಫ್, ಎಸ್ವೈಎಸ್, ಮುಸ್ಲಿಂ ಜಮಾಅತ್ ಕೇರಳ ಕರ್ನಾಟಕದಲ್ಲಿ ಅತ್ಯಂತ ಸಕ್ರೀಯವಾಗಿ ಕಾರ್ಯಾಚರಿಸುತ್ತಿದೆ. ಕೇರಳದಲ್ಲಿ ಬಾಯಾರ್ ಮುಜಮ್ಮಅ ಸಹಿತ ನಮ್ಮ ಹಲವಾರು ಸಂಸ್ಥೆಗಳನ್ನು COVID-19 ವಾರ್ಡ್‌ಗಳಾಗಿ ಪರಿವರ್ತಿಸಲು ತಾತ್ಕಾಲಿಕವಾಗಿ ಬಿಟ್ಟು ಕೊಡಲಾಗಿದೆ! ಕೇರಳದ ಕಲ್ಲಿಕೋಟೆಯ ಮೆಡಿಕಲ್ ಕಾಲೇಜ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ತಮ್ಮ ಸಂಸ್ಥೆಗಳ ಹಾಗೂ ಸಂಘಟನೆಗಳ ಕಡೆಯಿಂದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಅಲ್ ಹಂದುಲಿಲ್ಲಾಹ್.. ಇವತ್ತು ಸಂಜೆ ತೊಕ್ಕೊಟ್ಟು ಸೆಕ್ಟರ್ ಕಾರ್ಯಕರ್ತರೊಬ್ಬರು ಕಾಲ್ ಮಾಡಿದರು. ಎರಡು ಕಾಲನ್ನು ಕಳಕೊಂಡ ಕಿಡ್ನಿ ರೋಗಿಯೊಬ್ಬರ ಡಯಾಲಿಸಿಸ್ ಗಾಗಿ ವೆನ್ಲಾಕ್ ತಲುಪಿಸಬೇಕಿತ್ತು. “ಡಯಾಲಿಸಿಸ್ ಸಮಯ ಮುಗಿದು ಉಸಿರಾಡುವುದೇ ಕಷ್ಟವಾಗಿ ನಾನು ಮರಣ ಹೊಂದುತ್ತೇನೆ ಎಂದು ಗ್ಯಾರಂಟಿ ಮಾಡಿದ್ದೆ. ಆ ಸಂದರ್ಭ ನೀವು ಬಂದು ನಮ್ಮನ್ನು ಕಾಪಾಡಿದ್ದೀರಿ” ಎಂದು ಜೋರಾಗಿ ಕಣ್ಣೀರಿಳಿಸುತ್ತಾ ಎರಡು ಕಾಲಿಲ್ಲದ ಕಿಡ್ನಿ ರೋಗಿ ನಮ್ಮನ್ನು ತಬ್ಬಿ ಹಿಡಿದು ಅತ್ತರು ಉಸ್ತಾದ್ ಎಂದು ಭಾವೋದ್ವೇಗದಿಂದ ವಿವರಿಸಿದ!!

ಎಸ್ಸೆಸ್ಸೆಫ್‌ನ ಎಲ್ಲಾ ಘಟಕಗಳ ಕಾರ್ಯಕರ್ತರು ರಾಜ್ಯ ಸಮಿತಿಯ ಕರೆಗೆ ಓಗೊಟ್ಟು ತುರ್ತು ವಾಹನಗಳನ್ನು ರೆಡಿಮಾಡಿಟ್ಟಿತ್ತು. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ನೀಡಿದಾಗ ದಿನಕ್ಕೆ ನೂರಾರು ಮಂದಿ ಕರೆ ಮಾಡಿ ಸಹಾಯ ಪಡೆದು ಕೊಂಡಿದ್ದಾರೆ. ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾದವರು, ಆಸ್ಪತ್ರೆಗೆ ತಲುಪಬೇಕಾದ ಗರ್ಭಿಣಿಗಳು, ತುರ್ತು ಔಷಧಿಗಳು ಲಭಿಸಬೇಕಾದ ಕ್ಯಾನ್ಸರ್ ರೋಗಿಗಳು, ಅಲ್ಲಲ್ಲಿ ಬಾಕಿಯಾಗಿ ಕಂಗಾಲಾಗಿದ್ದವರು ಎಲ್ಲರಿಗೂ ಈ ಕಾರ್ಯಕರ್ತರು ಆಪತ್ಪಾಂಧವರಾಗಿ ನಿಂತರು, ಅದರಲ್ಲೂ ಅಲ್ತಾಫ್ ಶಾಂತಿಭಾಗ್ ಸಹಿತ ವಿರುವ ಕಾರ್ಯಕರ್ತರ ಟೀಂ ವರ್ಕ್ ಕಂಡು ಪೊಲೀಸ್ ಅಧಿಕಾರಿಗಳು ಕೂಡ ಶ್ಲಾಘಿಸಿದರು!

ಸುರತ್ಕಲ್ ಬೈಕಂಪಾಡಿ ಪರಿಸರಗಳಲ್ಲಿ ಕೂಡ ಒಂದೆರಡು ದಿನಗಳಿಂದ ಏನನ್ನೂ ತಿನ್ನದೆ ಕಂಗಾಲಾಗಿದ್ದ ಕೆಲವರಿಗೆ ಅಲ್ಲಿನ ಕಾರ್ಯಕರ್ತರು ಹೊಟ್ಟೆ ತುಂಬಾ ಅನ್ನ ನೀಡಿದಾಗ ಅವರು ನೀಡಿದ ಪ್ರತಿಕ್ರಿಯೆಗಳು ಕೇಳುವಾಗ ಮನತುಂಬಿ ಬಂತು. ನಮ್ಮ ಸೇವೆಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಅದು ಎಲ್ಲಾ ಧರ್ಮದವರನ್ನೂ ತಲುಪಿತ್ತು! ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ಕಾರ್ಯಕರ್ತರು ನೊಂದ ಜನರೊಂದಿಗೆ ನಿಂತಿದ್ದಾರೆ. ನೂರು ನೂರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬರಹ ಧೀರ್ಘವಾಗಬಹುದೆಂದು ಹೆದರಿ ನಾನು ಹೃಸ್ವಗೊಳಿಸುತ್ತಿದ್ದೇನೆ.

ಮಂಗಳೂರು ನಗರದಲ್ಲಿ ಅಶ್ರಫ್ ಕಿನಾರ ರವರ ನೇತೃತ್ವದಲ್ಲಿ ಹಸಿದವರಿಗೆ ಅನ್ನ, ಬಡವರಿಗೆ ಕಿಟ್ SYS ವತಿಯಿಂದ ಬಹಳಷ್ಟು ಕಡೆಗಳಲ್ಲಿ ವಿತರಣೆ ಮಾಡಲಾಗಿದೆ. ಮುಸ್ಲಿಂ ಜಮಾಅತ್ ನಾಯಕರು ಕೂಡ ಹಲವೆಡೆಗಳಲ್ಲಿ ಕಾರ್ಯಾಚರಣೆಯಲ್ಲಿದ್ದು ಕೊಪ್ಪಳ ಜಿಲ್ಲೆಯ ಗಂಗಾವತಿ ಸಹಿತ ಹಲವೆಡೆ ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಆದರೆ ಕೆಲವೆಡೆ ಮುನ್ನೆಚ್ಚರಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರಲ್ಲಿ ಹಿಂದೆ ಬೀಳುವುದು ಕಾಣುತ್ತಿದೆ. ಖಂಡಿತಾ ಹಾಗಾಗಬಾರದು, ನಾವು ನಮ್ಮ ನಾಯಕರೆಲ್ಲರೂ ಎಚ್ಚರಿಸಿದಂತೆ ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮಾತ್ರವೇ ಎಲ್ಲಾ ಸಂಘಟನೆಗಳ ಕಾರ್ಯಕರ್ತರು ಕೂಡ ಫೀಲ್ಡಿಗೆ ಇಳಿಯಬೇಕು. ಸದಾ ಸಮಯ ಮನೆಯಲ್ಲೇ ಇರಬೇಕು ತುರ್ತು ಕರೆಗಳು ಬಂದಾಗ ಮಾತ್ರ ಸಂಪೂರ್ಣ ಮುಂಜಾಗ್ರತೆಯೊಂದಿಗೆ ಕಾರ್ಯಾಚರಣೆಗೆ ಇಳಿಯಬೇಕು. ಮುಂದಿನ ದಿನಗಳು ಜನರೆಲ್ಲಾ ಇನ್ನಷ್ಟು ಕಂಗಾಲಾಗುವ ದಿನಗಳು ಎಂಬ ಹೇಳಿಕೆಗಳು ಹಲವು ಕಡೆಗಳಿಂದ ಬರುತ್ತಿದೆ.

ನಾವು ಮೈಮರೆತು ಹೋಗಬಾರದು ಒಟ್ಟಿಗೆ ನಮ್ಮ ಜನರನ್ನೂ ಕೈ ಬಿಡಬಾರದು.
ಅಲ್ಲಾಹು ನಮ್ಮೆಲ್ಲಾ ಕಾರ್ಯಕರ್ತರನ್ನು, ಮನುಷ್ಯ ಕುಲವನ್ನು ಇಂಥಹಾ ವಿಪತ್ತುಗಳಿಂದ ಕಾಪಾಡಲಿ – ಆಮೀನ್

✍️ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...