ನಳಿನ ಡಿ ಇವರ ವಚನವಾಣಿ : ಭಾಗ 2

(www.vknews.com) 

1. ಆಕಾಶಕೆ ಏಣಿಯ ಹಾಕಿ,
ಗಾಳಿಯೊಂದಿಗೆ ಸರಸಕ್ಕಿಳಿದು,
ವಿಮಾನವ ಹಿಡಿಯಲು ಹೋಗಿ,
ಪಾತಾಳಕೆ ರಭಸದಿ ಅಪ್ಪಳಿಸಿದೆನಯ್ಯಾ,
ಎಂಥೆಂಥಾ ಭ್ರಮೆಗಳನ್ನಳಿಸಿ,
ನಿನ್ನೆಡೆಗೆ ಮನಸ್ಸು ತೆರೆದಾಗ,
ಸ್ಥಳದಲ್ಲೇ ಸದ್ಗುರುವಿದ್ದೆ ನನ್ನಪ್ಪ ಕಾಡುಮಲ್ಲಿಕಾರ್ಜುನ.

2. ಹೊರಗಿನ ಶಬ್ಧಕೆ, ಒಳಗಿನ ಕಣ್ಮುಚ್ಚಿ,
ತಮಸ್ಸು ಮೈತುಂಬಿಕೊಂಡು ಮನಸ್ಸು
ನಿನ್ನಿಂದ ದೂರಾಗಿ,
ಅಲೆದಲೆದು ವ್ಯಾದಿಗ್ರಸ್ಥವಾಗಿರಲು,
ತಪಸ್ಸಿನೊಳು ನೆಲೆನಿಲ್ಲಿಸಿದೆ
ಘನತಪಸ್ವಿ ಕಾಡುಮಲ್ಲಿಕಾರ್ಜುನ.

3. ಅರೆಹೊಟ್ಟೆಗೆ ಉಳಿಸಿ, ಅನ್ನವಿಕ್ಕಿದೆವೆಂದರು,
ಅಕ್ಕಿಬೇಳೆಯ ಅವಿತಿಟ್ಟ ಅತ್ತೆ ಸೂಸೆಯೂ ಉಂಡಿರಬಹುದೆಂದಳು,
ಮೋಹಿಸಿ ಮದುವೆಯಾದ ಪತಿ,
ಮೋಹಿನಿಯgಂಗದೊಂಡಿಗೆ ರತಿಕ್ರೀಡೆಯೊಳು ಈಜಲು,
ಸದ್ಗೃಹಿಣಿಗೆ ನಿಜಪತಿ ಇನ್ನಾರು
ನೀನಲ್ಲದೆ ಕಾಡುಮಲ್ಲಿಕಾರ್ಜುನ.

4. ಇದೇನು ಕೇಡುಗಾಲ ಕಾಣಿರೋ,
ಅಧರ್ಮವೇ ಧರ್ಮವೆಂದು ತಲೆ ಎತ್ತಿತೋ,
ಹರಯದ ಅಣ್ಣಗಳ ಮನಸು
ಗೃಹಿಣಿಯರ ಮೇಲಣ್ಣ.
ಲಕ್ಷ್ಮೀಪತಿಗಳಂತಿಪ್ಪ ಪತಿಗಳೋ
ಬಾಲೆಯರ ಕೊಂಡು ಕೂಡುವರೋ.
ದಾಂಪತ್ಯ ಧರ್ಮಕ್ಕೆ ಇಂಥ ಕೇಡುಗಾಲವಿರಲು,
ನಾನಿನ್ನ ಭಜಿಸಿ ಅಲೌಕಿಕ ದಾಂಪತ್ಯದಲಿ
ಸುಖಿಸಿದೆನಯ್ಯಾ ಕಾಡುಮಲ್ಲಿಕಾರ್ಜುನ.

5. ವಿಷವೃಕ್ಷದ ಬೀಜಗಳು ಚದುರಿ
ಎಲ್ಲರೆದೆಯಲ್ಲೂ ನಾಟಿದವೋ,
ಮಧ್ಯವಯಸ್ಕರು ಹಸುಗೂಸುಗಳ ಮೇಲೆರಗಿದರೋ,
ಯುವಕರ ದಾಹಕೆ ಊರುಗೋಲಿನ ಮುದುಕಿಯರ
ಮೈ ಹರಿಯಿತೋ,ವಿಷಕಂಠನೇ,
ಈ ವಿಷವರ್ತುಲದಲಿ ಉಸಿರುಗಟ್ಟುತ್ತಿದೆ,
ಕ್ಷಣದೊಳಗೆ ವಿಷವ ಹೀರಿದೆ ಹೋಗೆಯಾ
ನೀಲಕಂಠ ನನ್ನ ಕಾಡುಮಲ್ಲಿಕಾರ್ಜುನ.

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...