ಪೌರಕಾರ್ಮಿಕರ ಹಸಿವು ತಣಿಸಿದ ‘ಬಿ ಹ್ಯೂಮನ್’, ಅಲೋಶಿಯಸ್ ಹಳೆ ವಿದ್ಯಾರ್ಥಿಗಳು

(www.vknews.com) : ಕೋವಿಡ್ 19 ವಿರುದ್ಧದ ಹೋರಾಟದ ಸೇನಾನಿಗಳಂತೆ ಜೀವದ ಹಂಗು ತೊರೆದು, ಪ್ರತಿನಿತ್ಯ ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರ ಹಸಿವು ತಣಿಸುವ ಕಾಯಕಕ್ಕೆ ನಗರದ ‘ಟೀಂ ಬಿ ಹ್ಯೂಮನ್’ ಸಾಮಾಜಿಕ‌ ಸೇವಾ ಸಂಸ್ಥೆ ಮುಂದಾಗಿದೆ.

ಇಂದು (ಎ.18) ನಗರದ ಬಾವುಟಗುಡ್ಡೆ ಈದ್ಗಾ ಮೈದಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ, ಪ್ರತಿಪಕ್ಷ ನಾಯಕ ರವೂಫ್ ಬಜಾಲ್, ಮನ್ಸೂರ್ ಅಹ್ಮದ್ ಆಝಾದ್, ಐನ ಗ್ರೂಪ್ ಆಶ್ರಫ್, ಸಿಕೋ ಆಸಿಫ್, ನ್ಯಾಯವಾದಿ ಶುಕೂರ್, ಯು.ಬಿ. ಸಲೀಂ, ಸಾಹಿಲ್ ಝಾಹಿರ್, ರಾಶ್ ಬ್ಯಾರಿ, ಮುನ್ನ ಕಮ್ಮರಡಿ, ಮುತ್ತಲಿಬ್ ಮತ್ತಿತರರ ಉಪಸ್ಥಿತಿಯಲ್ಲಿ ಆಯ್ದ 180 ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಗಿದೆ.

ನಗರ ಸ್ವಚ್ಛತಾ ಗುತ್ತಿಗೆಯ ಆಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಪೌರಕಾರ್ಮಿಕರು ವೇತನ ವಿಳಂಬದಿಂದಾಗಿ ಸಂಕಷ್ಟದಲ್ಲಿರುವುದನ್ನು ಅರಿತ ಟೀಂ ಬಿ ಹ್ಯೂಮನ್ ಸಂಸ್ಥೆಯು‌, ಅಲೋಶಿಯಸ್ ಕಾಲೇಜ್ 1989ನೆ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ಬಳಗದ ಸಹಕಾರ ಕೋರಿದಾಗ ಶೀಘ್ರ ಸ್ಪಂದನ ದೊರೆತಿದೆ.

ನಗರದ ಸುತ್ತುಮುತ್ತ ಹಸಿವಿನಿಂದ ಕಂಗಾಲಾಗಿದ್ದ ಅಶಕ್ತರು, ಕಾರ್ಮಿಕರು, ನಿರಾಶ್ರಿತರು, ವಲಸೆ ಕಾರ್ಮಿಕರ ಹೊಟ್ಟೆ ತಣಿಸುವ ಕಾರ್ಯವನ್ನು ಮೊದಲಿಗೆ ಕೈಗೆತ್ತಿಕೊಂಡ ‘ಟೀಂ ಬಿ ಹ್ಯೂಮನ್’ ಜನಮನ್ನಣೆ ಗಳಿಸಿತ್ತು. ಜಿಲ್ಲೆಯ ಆಯ್ದ 1200 ದಿನಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಬಡವರ ಕುಟುಂಬದ ಮನೆಬಾಗಿಲಿಗೆ ತಂಡದ ಸದಸ್ಯರಾದ ಅಹನಾಫ್ ಡೀಲ್ಸ್, ಅಲ್ತಾಫ್, ಶಮೀಮ್, ಅಲ್ತಾಫ್, ಬಾಷಾ, ಪ್ರದೀಪ್‍, ವಿನ್ಸೆಂಟ್, ಶಿಯಾಜ್ ಡೀಲ್ಸ್, ನವಾಝ್ ಮತ್ತು ಹನೀಫ್ ರವರ ಸಹಕಾರದೊಂದಿಗೆ ಜಾತಿ, ಮತ ಬೇಧವಿಲ್ಲದೆ ಈಗಾಗಲೇ ದಿನಸಿ ಕಿಟ್ ತಲುಪಿಸಲಾಗಿದೆ.

ಮಂಗಳೂರಿನ ಉರ್ವ ಮತ್ತು ಸುರತ್ಕಲ್ ಪ್ರದೇಶದ ಪೌರಕಾರ್ಮಿಕರಿಗೆ ಮುಂದಿನ ಹಂತದಲ್ಲಿ ದಿನಸಿ ಕಿಟ್ ವಿತರಿಸುವ ಯೋಜನೆಯಿದ್ದು, ಹಸಿದವರ ಸಂಕಷ್ಟಗಳಿಗೆ ವಿದ್ಯಾರ್ಥಿಗಳು ಮತ್ತು ಯುವಜನರು ಮುಂದಾಗಬೇಕಾದ ತುರ್ತಿದೆ ಎಂದು ‘ಟೀಂ ಬಿ ಹ್ಯೂಮನ್’ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...