ಜಿಲ್ಲಾಡಳಿತವು ಬಟ್ಟೆ, ಫ್ಯಾನ್ಸಿ ಹಾಗೂ ಪಾದರಕ್ಷೆಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವುದು ಅತ್ಯಂತ ವಿಪರ್ಯಾಸ: ಹಾಶೀರ್‌ ಪೇರಿಮಾರ್

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ದಿನವೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತವು ಬಟ್ಟೆ, ಫ್ಯಾನ್ಸಿ ಹಾಗೂ ಪಾದರಕ್ಷೆಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ ಮತ್ತು ಈ ತೀರ್ಮಾನವನ್ನು ಖಂಡಿಸುತ್ತಿದ್ದೇನೆ ಎಂದು ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುದು ಗ್ರಾ.ಪಂ. ಸದಸ್ಯ ಹಾಶೀರ್‌ ಪೇರಿಮಾರ್ ತಿಳಿಸಿದ್ದಾರೆ.

ಈದುಲ್ ಫಿತ್ ಹಬ್ಬ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟರೆ ಜನಸಂದಣಿಯನ್ನು ನಿಯಂತ್ರಿಸುವುದು ತುಂಬಾ ಕಷ್ಟ, ಈ ಜನಸಂದಣಿಯ ಕಾರಣ ಕೊರೋನ ಸೋಂಕು ಹರಡುವ ಭೀತಿ ಇದೆ. ಆದುದರಿಂದ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಖಾಝಿಗಳೂ ಸೇರಿದಂತೆ ಸಮುದಾಯದ ಉಲಮಾ-ಉಮರಾ ನಾಯಕರುಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಸಂಪೂರ್ಣವಾಗಿ ಕಡೆಗಣಿಸಿ ಅನುಮತಿ ನೀಡಿರುವುದು ಇಡೀ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನ ಸೋಂಕು ನಿಯಂತ್ರಣದಲ್ಲಿ ಸರಕಾರದೊಂದಿಗೆ ಪ್ರಪ್ರಥಮವಾಗಿ ಕೈಜೋಡಿಸಿದ್ದೇ ಮುಸ್ಲಿಂ ಧರ್ಮ ಗುರುಗಳು. ಪ್ರತಿ ಮೊಹಲ್ಲಾದ ಖಾಯಿಗಳು ಸಾಂಕ್ರಾಮಿಕ ರೋಗವಾಗಿರುವ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದೊಂದಿಗೆ ಕೈಜೋಡಿಸುವ ಮಹತ್ತರ ತೀರ್ಮಾನ ಕೈಗೊಂಡು ಮೊದಲಾಗಿ ಮಸೀದಿಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗಳಿಗೆ ಕಡಿವಾಣ ಹಾಕಿ, ಜನಜಂಗುಳಿ ಸೇರದಂತೆ ಸಮುದಾಯಕ್ಕೆ ಕರೆ ನೀಡಿ, ತಮ್ಮ ತಮ್ಮ ಮನೆಗಳಲ್ಲೇ ಎಲ್ಲಾ ನಮಾಮ್ ಇನ್ನಿತರ ಆರಾಧನಾ ಕರ್ಮಗಳನ್ನು ನೆರವೇರಿಸುವಂತೆ ಕರೆ ನೀಡಿದ್ದರು. ಮುಸ್ಲಿಂ ಧರ್ಮಗುರುಗಳ ಆದೇಶವನ್ನು ಇಂದಿನವರೆಗೂ ಯಥಾವತ್ತಾಗಿ ಪಾಲಿಸುತ್ತಾ ಬಂದಿರುವ ಸಮುದಾಯದ ಪ್ರತಿಯೋಬರೂ ಕೂಡಾ ಸರಕಾರದೊಂದಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಇದೀಗ ಪವಿತ್ರ ರಂಝಾನ್ ತಿಂಗಳು ಪ್ರಾರಂಭಗೊಂಡರೂ ಕೂಡಾ ಅತ್ಯಂತ ಪುಣ್ಯ ಕಾರ್ಯವಾದ ಮಸೀದಿಗಳಲ್ಲಿ ನಡೆಯುವ ಸಾಮೂಹಿಕ ವಿಶೇಷ ಪ್ರಾರ್ಥನೆಗಳನ್ನೂ ಕೂಡಾ ಕಡಿವಾಣ ಹಾಕಿ ಮನೆಗಳಲ್ಲಿ ನಿರ್ವಹಿಸುವ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರಾಮುಖ್ಯತೆಯನ್ನು ನೀಡಿದ್ದಾರೆ ಎಂದಿರುವ ಹಾಶೀರ್‌ ಪೇರಿಮಾರ್ ಆದರೆ ಇದೀಗ ಜಿಲ್ಲಾಡಳಿತ ಹಾಗೂ ಆಡಳಿತ ಪಕ್ಷದ ಜನಪ್ರತಿನಿಧಿಗಳು ಸಂಧಿಗ್ಧ ಪರಿಸ್ಥಿತಿಯಲ್ಲಿ ಕೈಗೊಂಡ ತೀರ್ಮಾನ ಪ್ರತಿಯೊಬ್ಬರೂ ಈ ನಾಡಿನ ಹಿತದೃಷ್ಟಿಯಿಂದ ಇದುವರೆಗೆ ಮಾಡಿದ ಜಾಗರೂಕತೆಯನ್ನು ಸಂಪೂರ್ಣ ವ್ಯರ್ಥವಾಗಿಸುವ ಭೀತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಖಾಝಿಗಳ ಮತ್ತು ಉಲಮಾಗಳ ಫತ್ವಾ ಧಿಕ್ಕರಿಸಿ ಈದ್ ಹಬ್ಬದ ಹೆಸರಿನಲ್ಲಿ ಶಾಪಿಂಗ್ ಮಾಡಲು ಯಾವುದೇ ಮುಸಲ್ಮಾನರು ಪೇಟೆ ಸುತ್ತು ಸಾಹಸ ಮಾಡದೆ ಅತ್ಯಂತ ಜಾಗರೂಕತೆ ಹಾಗೂ ಜವಾಬ್ದಾರಿ ಅರಿತುಕೊಂಡು ನಿರ್ಧಾರ ಕೈಗೊಳ್ಳುವಂತೆ ಹಾಶೀರ್‌ ಪೇರಿಮಾರ್ ಸಮುದಾಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...