(www.vknews.com) : ಭಾರತಕ್ಕೆ ಡಿಜಿಟಲ್ ಸಮಾಜ ನಿರ್ಮಿಸುವ ಗುರಿಯತ್ತ ತನ್ನ ಇಕೋಸಿಸ್ಟಂ ಬೆಳೆಸಲು ಜಿಯೋಗೆ ನೆರವಾಗಲಿದೆ ಮುಂಚೂಣಿ ಜಾಗತಿಕ ಬೆಳವಣಿಗೆ ಹೂಡಿಕೆದಾರ ಸಂಸ್ಥೆಯ ಹಣಹೂಡಿಕೆ
ಮುಂಬಯಿ, ಮೇ 17, 2020: ಮುಂಚೂಣಿ ಜಾಗತಿಕ ಬೆಳವಣಿಗೆ ಈಕ್ವಿಟಿ ಸಂಸ್ಥೆ ಜನರಲ್ ಅಟ್ಲಾಂಟಿಕ್ನಿಂದ ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ 6,598.38 ಕೋಟಿ ರೂ.ಗಳ ಹೂಡಿಕೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (“ರಿಲಯನ್ಸ್ ಇಂಡಸ್ಟ್ರೀಸ್”) ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ (“ಜಿಯೋ ಪ್ಲಾಟ್ಫಾರ್ಮ್ಸ್”) ಇಂದು ಘೋಷಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್ಫಾರ್ಮ್ಸ್ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಜನರಲ್ ಅಟ್ಲಾಂಟಿಕ್ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್ನಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್ನ 1.34% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಹೂಡಿಕೆಯೊಂದಿಗೆ, ನಾಲ್ಕು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್ನರ್ಸ್ ಹಾಗೂ ಜನರಲ್ ಅಟ್ಲಾಂಟಿಕ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ಜಿಯೋ ಪ್ಲಾಟ್ಫಾರ್ಮ್ಸ್ 67,194.75 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್ಚೈನ್ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.
ಜನರಲ್ ಅಟ್ಲಾಂಟಿಕ್ ಪ್ರಮುಖ ಜಾಗತಿಕ ಬೆಳವಣಿಗೆ ಈಕ್ವಿಟಿ ಸಂಸ್ಥೆಯಾಗಿದ್ದು, ತಂತ್ರಜ್ಞಾನ, ಗ್ರಾಹಕ, ಹಣಕಾಸು ಸೇವೆಗಳು ಮತ್ತು ಆರೋಗ್ಯರಕ್ಷಣೆಯ ಕ್ಷೇತ್ರಗಳ ಹೂಡಿಕೆಯಲ್ಲಿ ಅದಕ್ಕೆ 40 ವರ್ಷಗಳ ಅನುಭವವಿದೆ. ಜಾಗತಿಕ ಹೂಡಿಕೆ ವೇದಿಕೆಯಡಿ 14 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಗ್ರ ತಂಡವಾಗಿ, ಹೊಸತನ ಮತ್ತು ಉದ್ಯಮಶೀಲತೆಯಿಂದ ಪ್ರೇರಿತವಾದ, ದೀರ್ಘಕಾಲೀನ ಸೆಕ್ಯುಲರ್ ಬೆಳವಣಿಗೆಯಿಂದ ಬೆಂಬಲಿತವಾದ ವಿಷಯಗಳಲ್ಲಿ ಜನರಲ್ ಅಟ್ಲಾಂಟಿಕ್ ಹೂಡಿಕೆ ಮಾಡುತ್ತದೆ. ಏರ್ಬಿಎನ್ಬಿ, ಅಲಿಬಾಬಾ, ಆಂಟ್ ಫೈನಾನ್ಶಿಯಲ್, ಬಾಕ್ಸ್, ಬೈಟ್ಡ್ಯಾನ್ಸ್, ಫೇಸ್ಬುಕ್, ಸ್ಲ್ಯಾಕ್, ಸ್ನ್ಯಾಪ್ಚಾಟ್, ಉಬರ್ ಮತ್ತು ಇತರ ಜಾಗತಿಕ ತಂತ್ರಜ್ಞಾನ ನಾಯಕರು ಸೇರಿದಂತೆ ವಿಶ್ವದಾದ್ಯಂತ ಮಹತ್ವದ ಬದಲಾವಣೆ ತರುತ್ತಿರುವ ಉದ್ಯಮಿಗಳು ಮತ್ತು ಸಂಸ್ಥೆಗಳನ್ನು ಬೆಂಬಲಿಸುವ ದೀರ್ಘಕಾಲದ ಸಂಪ್ರದಾಯ ಜನರಲ್ ಅಟ್ಲಾಂಟಿಕ್ನದ್ದಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, “ವಿಶ್ವದ ಮುಂಚೂಣಿ ಹೂಡಿಕೆದಾರ ಸಂಸ್ಥೆ ಜನರಲ್ ಅಟ್ಲಾಂಟಿಕ್ ಅನ್ನು ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ರೋಮಾಂಚನವಾಗುತ್ತಿದೆ. ನಾನು ಜನರಲ್ ಅಟ್ಲಾಂಟಿಕ್ ಅನ್ನು ಹಲವು ದಶಕಗಳಿಂದ ಬಲ್ಲೆ, ಹಾಗೂ ಭಾರತದ ಬೆಳವಣಿಗೆಯ ಬೃಹತ್ ಸಾಮರ್ಥ್ಯದ ಮೇಲೆ ಅವರು ಇಟ್ಟಿರುವ ನಂಬಿಕೆಗಾಗಿ ಅವರನ್ನು ಬಹಳವಾಗಿ ಮೆಚ್ಚುತ್ತೇನೆ. ಭಾರತಕ್ಕಾಗಿ ಡಿಜಿಟಲ್ ಸಮಾಜದ ನಮ್ಮ ದೂರದೃಷ್ಟಿಯನ್ನು ಜನರಲ್ ಅಟ್ಲಾಂಟಿಕ್ ಹಂಚಿಕೊಳ್ಳುತ್ತದೆ ಮತ್ತು 1.3 ಶತಕೋಟಿ ಭಾರತೀಯರ ಜೀವನವನ್ನು ಸಮೃದ್ಧಗೊಳಿಸುವಲ್ಲಿ ಡಿಜಿಟಲೀಕರಣದ ಪರಿವರ್ತಕ ಶಕ್ತಿಯನ್ನು ಬಲವಾಗಿ ನಂಬುತ್ತದೆ. ಜನರಲ್ ಅಟ್ಲಾಂಟಿಕ್ನ ಪ್ರಮಾಣೀಕೃತ ಜಾಗತಿಕ ಪರಿಣತಿ ಮತ್ತು 40 ವರ್ಷಗಳ ತಂತ್ರಜ್ಞಾನ ಹೂಡಿಕೆಯ ಕಾರ್ಯತಂತ್ರದ ಒಳನೋಟಗಳ ಪ್ರಯೋಜನವನ್ನು ಜಿಯೋಗಾಗಿ ಪಡೆಯಲು ನಾವು ಉತ್ಸುಕರಾಗಿದ್ದೇವೆ.” ಎಂದು ಹೇಳಿದ್ದಾರೆ.
ಜನರಲ್ ಅಟ್ಲಾಂಟಿಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿಲ್ ಫೋರ್ಡ್, “ಜಾಗತಿಕ ತಂತ್ರಜ್ಞಾನ ನಾಯಕರು ಮತ್ತು ದೂರದೃಷ್ಟಿಯುಳ್ಳ ಉದ್ಯಮಿಗಳ ದೀರ್ಘಕಾಲೀನ ಬೆಂಬಲಿಗರಾಗಿ, ನಾವು ಜಿಯೋದಲ್ಲಿ ಹೂಡಿಕೆ ಮಾಡುವ ಬಗ್ಗೆ ಅತ್ಯಂತ ಹೆಚ್ಚು ಉತ್ಸುಕರಾಗಿದ್ದೇವೆ. ಭಾರತೀಯ ಆರ್ಥಿಕತೆಯ ವೇಗವನ್ನು ಗಮನಾರ್ಹವಾಗಿ ವರ್ಧಿಸುವ ಮತ್ತು ದೇಶಾದ್ಯಂತ ಬೆಳವಣಿಗೆಯನ್ನು ಹೆಚ್ಚಿಸುವ ಸಾಮರ್ಥ್ಯ ಡಿಜಿಟಲ್ ಸಂಪರ್ಕಕ್ಕಿದೆ ಎಂಬ ಮುಖೇಶ್ ಅವರ ಗಾಢನಂಬಿಕೆಯನ್ನು ನಾವು ಹಂಚಿಕೊಳ್ಳುತ್ತೇವೆ. ಭಾರತದ ಡಿಜಿಟಲ್ ಕ್ರಾಂತಿಯ ಮುಂಚೂಣಿಯಲ್ಲಿ ಜಿಯೋ ಮಾಡುತ್ತಿರುವಂತೆ ಮಹತ್ವದ ಬದಲಾವಣೆ ತರುವ ವ್ಯವಹಾರಗಳನ್ನು ಇನ್ನಷ್ಟು ಬೆಳೆಸಲು ಸಂಸ್ಥಾಪಕರೊಂದಿಗೆ ಕೆಲಸಮಾಡುವ ಸುದೀರ್ಘ ಅನುಭವ ಜನರಲ್ ಅಟ್ಲಾಂಟಿಕ್ಗಿದೆ.” ಎಂದು ಹೇಳಿದ್ದಾರೆ.
ರಿಲಯನ್ಸ್ ಜಿಯೋ ನಿರ್ದೇಶಕರಾದ ಆಕಾಶ್ ಅಂಬಾನಿ ಮಾತನಾಡಿ, “ಭಾರತ ಮತ್ತು ಭಾರತೀಯರ ಡಿಜಿಟಲ್ ಸಬಲೀಕರಣದೆಡೆಗೆ ನಮ್ಮ ಪ್ರಯಾಣದಲ್ಲಿ ಜನರಲ್ ಅಟ್ಲಾಂಟಿಕ್ನಂತಹ ಪ್ರಸಿದ್ಧ ಜಾಗತಿಕ ಹೂಡಿಕೆದಾರ ಸಂಸ್ಥೆ ನಮ್ಮೊಂದಿಗೆ ಕೈಜೋಡಿಸಿರುವುದು ನಮಗೆ ಸಂತೋಷ ತಂದಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೆ – ಅದರಲ್ಲೂ ಮುಖ್ಯವಾಗಿ ನಮ್ಮ ಅತ್ಯಂತ ಪ್ರತಿಭಾವಂತ ಯುವಜನತೆಗೆ – ಅಪಾರ ಅವಕಾಶಗಳನ್ನು ಒದಗಿಸುವ, ಎಲ್ಲರನ್ನೂ ಒಳಗೊಂಡ ಡಿಜಿಟಲ್ ಭಾರತವನ್ನು ರೂಪಿಸಲು ಜಿಯೋ ಬದ್ಧವಾಗಿದೆ. ನಮ್ಮ ಮುಂದಿನ ಹಾದಿಯಲ್ಲಿ ಇನ್ನಷ್ಟು ಮಹತ್ವಾಕಾಂಕ್ಷಿ ಗುರಿಗಳನ್ನು ರೂಪಿಸಿಕೊಳ್ಳಲು ಹಾಗೂ ಸಾಧಿಸಲು ಜಿಯೋದ ಯುವ ತಂಡವನ್ನು ಜನರಲ್ ಅಟ್ಲಾಂಟಿಕ್ನ ಅನುಮೋದನೆ ಮತ್ತು ಸಹಭಾಗಿತ್ವವು ಪ್ರೇರೇಪಿಸುತ್ತದೆ.” ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಜನರಲ್ ಅಟ್ಲಾಂಟಿಕ್ನಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಸ್ಥ ಸಂದೀಪ್ ನಾಯಕ್, “ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಸಶಕ್ತಗೊಳಿಸುವಿಕೆ, ಒಳಗೊಳ್ಳುವಿಕೆ ಹಾಗೂ ಪ್ರಗತಿಯ ತತ್ವಗಳನ್ನು ಆಧರಿಸಿದ ಸ್ಥಾಪಕ-ನೇತೃತ್ವದ ವ್ಯವಹಾರಗಳಲ್ಲಿ, ಹೂಡಿಕೆ ಮಾಡುವಲ್ಲಿ ಜನರಲ್ ಅಟ್ಲಾಂಟಿಕ್ಗೆ ಸುಮಾರು ಎರಡು ದಶಕಗಳ ಅನುಭವವಿದೆ. ಡೇಟಾ ಮತ್ತು ಡಿಜಿಟಲ್ ಸೇವೆಗಳ ಪ್ರಜಾಪ್ರಭುತ್ವೀಕರಣದಲ್ಲಿ ಜಿಯೋ ಕೇವಲ ಮೂರೂವರೆ ವರ್ಷಗಳಲ್ಲಿ ಪರಿವರ್ತನೆಯ ಪರಿಣಾಮವನ್ನು ಬೀರಿದೆ, ಹಾಗೂ ಆ ಮೂಲಕ ಭಾರತವನ್ನು ಪ್ರಮುಖ ಜಾಗತಿಕ ಡಿಜಿಟಲ್ ಆರ್ಥಿಕತೆಯ ಸ್ಥಾನಕ್ಕೆ ಕೊಂಡೊಯ್ದಿದೆ.” ಎಂದು ಹೇಳಿದ್ದಾರೆ.
ಈ ವಹಿವಾಟು, ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್ಬಿ ಆಂಡ್ ಪಾರ್ಟ್ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ. ಪಾಲ್, ವೀಸ್, ರಿಫ್ಕೈಂಡ್, ವಾರ್ಟನ್ ಆಂಡ್ ಗ್ಯಾರಿಸನ್ ಹಾಗೂ ಶಾರ್ದೂಲ್ ಅಮರ್ಚಂದ್ ಮಂಗಲ್ದಾಸ್ ಆಂಡ್ ಕೋ. ಜನರಲ್ ಅಟ್ಲಾಂಟಿಕ್ನ ವಕೀಲರಾಗಿ ಸೇವೆಸಲ್ಲಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.