ಸೌದಿಅರೇಬಿಯಾದಿಂದ ವಾಪಾಸಾತಿಗಾಗಿ ಕಾಯುತ್ತಿದ್ದ ಅನಾರೋಗ್ಯಪೀಡಿತ ಮಂಗಳೂರಿನ ಮಹಿಳೆ ಮೃತ್ಯು


ದಮ್ಮಾಮ್(ವಿಶ್ವ ಕನ್ನಡಿಗ ನ್ಯೂಸ್): ವಿಸಿಟ್ ವಿಸಾದಲ್ಲಿ  ಸೌದಿ ಅರೇಬಿಯಾದ ದಮ್ಮಾಮ್ ಗೆ ಆಗಮಿಸಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಮಾನ ಸ್ಥಗಿತಗೊಂಡು ತವರಿಗೆ ಮರಳಲಾಗದೆ ಇಲ್ಲಿ ಸಿಲುಕಿದ್ದ , ಅನಾರೋಗ್ಯ ಪೀಡಿತ 53 ರ ಹರೆಯದ ಮಂಗಳೂರು ಮೂಲದ  ಮಹಿಳೆಯೊಬ್ಬರು ಸಮರ್ಪಕ ಚಿಕಿತ್ಸೆ ದೊರೆಯದೆ ಇಲ್ಲಿ ಸಾವನ್ನಪೀರುವ ಘಟನೆ ನಡೆದಿದೆ. 

ಪುತ್ರ ಶಬ್ಬೀರ್ ಹಾಕಿದ ವಿಸಿಟ್ ವಿಸಾದ ಮೇಲೆ ಬೈಕಂಪಾಡಿಯ ಅಂಗರಗುಂಡಿ ನಿವಾಸಿಗಳಾದ ಕುದ್ರೋಳಿ ಅಬ್ದುಲ್ ಅಝೀಝ್ ಮತ್ತು  ಲತೀಫಾ ದಂಪತಿ ಸೌದಿ ಅರೇಬಿಯಾಕ್ಕೆ ಕೆಲವು ಸಮಯಗಳ ಹಿಂದೆ ಆಗಮಿಸಿದ್ದರು. ಸ್ವಲ್ಪ ಕಾಲದ ಹಿಂದೆ ಲತೀಫಾ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೇವಲ ಪೊಟ್ಯಾಸಿಯಮ್‌ ಕೊರತೆ ಅವರ ಅಸ್ವಸ್ಥತೆಗೆ ಕಾರಣವಾಗಿದ್ದು ಸರಿಯಾದ ಆಹಾರ ಕ್ರಮದ ಮೂಲಕ‌ ಅದನ್ನು ಸರಿಪಡಿಸಬಹುದೆಂದು ವೈದ್ಯರು ಸಲಹೆಯಿತ್ತಿದ್ದರು‌.

ಆದರೆ‌ ಸ್ವಲ್ಪ ಸಮಯದ ನಂತರ ಅವರ ಆರೋಗ್ಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು ಹೆಚ್ಚಿನ ಚಿಕಿತ್ಸೆ ಮತ್ತು ಉಪಚಾರಕ್ಕಾಗಿ ತವರಿಗೆ ಮರಳಿಸಲು ಪುತ್ರ ಶಬ್ಬೀರ್ ಪ್ರಯತ್ನಿಸಿದ್ದರು. ಆದರೆ ಅನಿವಾಸಿಗಳ ವಾಪಾಸಾತಿಗಾಗಿ ದಮ್ಮಾಮ್ – ಮಂಗಳೂರು ವಿಶೇಷ ವಿಮಾನ ಒದಗಿಸಲು ಕರ್ನಾಟಕ ಸರಕಾರ ವಿಫ಼ಲವಾದ ಕಾರಣ ಲತೀಫಾಅವರು ಸೌದಿ ಅರೇಬಿಯಾದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.

ಸೌದಿ ಅರೇಬಿಯಾದಲ್ಲಿ ಕೋವಿಡ್ 19 ಬಿಕ್ಕಟ್ಟು ತೀವ್ರವಾಗಿರುವ‌ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಲತೀಫಾ ಅವರಿಗೆ ಐಸಿಯು ಮತ್ತು ವೆಂಟಿಲೇಟರ್ ವ್ಯವಸ್ಥೆ ದೊರೆತಿರಲಿಲ್ಲ.ಅಲ್ಲದೆ ಅವರು ವಿಸಿಟ್ ವಿಸಾದ ಮೇಲೆ ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಹೊಂದಿರದ ಕಾರಣ ಆಸ್ಪತ್ರೆಗಳು ಚಿಕಿತ್ಸೆಗೆ ದೊಡ್ಡ ಮೊತ್ತದ ಹಣವನ್ನು‌ ಠೇವಣಿಯಾಗಿ‌ ಇಡುವಂತೆ ಕೇಳಿದ್ದವು.

ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ‌ ಲತೀಫಾರಂತೆ ಸುಮಾರು 30000 ಅನಿವಾಸಿ ಕನ್ನಡಿಗರು‌ ವಾಪಾಸಾತಿಗಾಗಿ ಕಾಯುತ್ತಿದ್ದಾರೆ. ಅವರಲ್ಲಿ ಸುಮಾರು 4000 ಮಂದಿ ಗಂಭೀರ ಕಾಯಿಲೆ ಪೀಡಿತರು, ಗರ್ಭಿಣಿ ಸ್ತ್ರೀಯರು, ಅಸ್ವಸ್ಥರು ಮತ್ತು ಹಿರಿಯರು ಇದ್ದಾರೆ. ಜಗತ್ತಿನ ಇತರ ಎಲ್ಲಾ ರಾಷ್ಟ್ರಗಳಂತೆಯೇ ಸೌದಿ ಅರೇಬಿಯಾದಲ್ಲಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರೋಗ್ಯ ವ್ಯವಸ್ಥೆಯು‌ ನಿಬಿಡಗೊಂಡಿದ್ದು, ಖಾಸಗಿ ಆಸ್ಪತ್ರೆಗಳು ಗಂಭೀರ ಕಾಯಿಲೆಗಳನ್ನು ಚಿಕಿತ್ಸಿಸುವುದು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಪಡೆಯಲು ರೋಗಿಗಳು 12 ರಿಂದ 15 ಗಂಟೆಗಳ ಕಾಲ‌ ಕಾಯಬೇಕಾಗುತ್ತದೆ. ಅಲ್ಲದೆ ವಿಸಿಟ್ ವಿಸಾಗಳಲ್ಲಿ ಬಂದದವರು ಆರೋಗ್ಯ ವಿಮೆ ಹೊಂದಿರದ ಕಾರಣ ಅವರಿಗೆ ಚಿಕಿತ್ಸೆ ಮತ್ತು ಔಷಧ ವೆಚ್ಚ ದುಬಾರಿಯಾಗಿದ್ದು ಅದನ್ನು ಭರಿಸುವುದು ಸಾಧ್ಯವಾಗುವುದಿಲ್ಲ. ಅನಿವಾಸಿ ಕನ್ನಡಿಗ ಸಂಘಟನೆಗಳು ಮತ್ತು ಉದ್ಯಮಿಗಳು ಸಂಕಷ್ಟದಲ್ಲಿರುವರ ವಾಪಾಸಾತಿಗಾಗಿ ರಾಜ್ಯ ಸರಕಾರ ಮತ್ತು ಸಂಸದರ ಮುಂದೆ ನಿರಂತರ ಬೇಡಿಕೆ ಇಡುತ್ತಿದ್ದರೂ ಸರಕಾರ ಈ ಕುರಿತು ಗಮನ ಹರಿಸುತ್ತಿಲ್ಲ. ಅಂತಿಮವಾಗಿ ತನ್ನ ಪ್ರಜೆಗಳ ರಕ್ಷಣೆ ಸರಕಾರದ ಹೊಣೆಯಾಗಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...