‘ಜೀವ ವೈವಿಧ್ಯತೆಯ ರಕ್ಷಣೆ ಎಲ್ಲರ ಹೊಣೆ’ : ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಮೇಜರ್ ಹಿರೇಮಠ ಹೇಳಿಕೆ

ಧಾರವಾಡ (www.vknews.com) : ಪ್ರಸಕ್ತ ವರ್ಷದ ವಿಶ್ವ ಪರಿಸರ ದಿನಾಚರಣೆಯ ಧ್ಯೇಯವಾಕ್ಯವು ‘ಜೀವ ವೈವಿಧ್ಯತೆ ಸಂಭ್ರಮಿಸಿ’ ಎಂಬ ವಿಷಯವನ್ನು ಕೇಂದ್ರೀಕರಿಸಿದ್ದು, ಜೀವ ವೈವಿಧ್ಯತೆಯ ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದ್ದಾರೆ.

ಅವರು ಶುಕ್ರವಾರ ತಮ್ಮ ಕಚೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಗಿಡಗಳನ್ನು ನೆಟ್ಟು ಈ ವರ್ಷದ ವಿಶ್ವ ಪರಿಸರ ದಿನದ ಮಹತ್ವ ಕುರಿತು ಮಾತನಾಡುತ್ತಿದ್ದರು. ಭೂಮಿಯ ಮೇಲೆ ಕನಿಷ್ಠ ಒಂದು ಮೂರಾಂಶದಷ್ಟು ಅರಣ್ಯ ಇರಲೇಬೇಕು. ಅಂದಾಗ ಮಾತ್ರ ಆರೋಗ್ಯಪೂರ್ಣ ಜೀವನಕ್ರಮ ನಡೆಸುವುದು ಸಾಧ್ಯವಾಗುತ್ತದೆ. ಬಹಳ ವೇಗವಾಗಿ ಮನುಷ್ಯನ ಆಸೆಗೋ, ದುರಾಸೆಗೋ ಅರಣ್ಯವು ಅಳಿವಿನಂಚನ್ನು ತಲುಪಿರುವುದು ಅತ್ಯಂತ ಕಳವಳಕಾರಿಯಾದದ್ದು. ಅಂದಾಜು ಸುಮಾರು ಒಂದು ಮಿಲಿಯನ್ದಷ್ಟು ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಅಳಿವಿನಂಚಿನಲ್ಲಿರುವುದು ತುಂಬಾ ಗಂಭೀರ ವಿಚಾರ. ಆದ್ದರಿಂದ ಜೀವ ವೈವಿಧ್ಯದ ರಕ್ಷಣೆಯ ಕಡೆಗೆ ಗಮನಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಜೀವವೈವಿಧ್ಯ ಪ್ರಜ್ಞೆ : ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಪ್ರಭಾವಿಸುವಂತೆ, ಪರಿಸರ ಸಂವರ್ಧನೆಯ ಮೌಲ್ಯಗಳನ್ನು ಹಾಗೂ ವ್ಯಾಪಕ ಪರಿಸರ ಪ್ರಜ್ಞೆಯನ್ನು ಹುಟ್ಟುಹಾಕಲು ನಿರಂತರ ಶ್ರಮಿಸಬೇಕು. ಮಕ್ಕಳಲ್ಲಿ ಜೀವವೈವಿಧ್ಯ ಪ್ರಜ್ಞೆ ಆಳವಾಗಿ ಉಂಟಾಗಲು, ಅವರೆಲ್ಲ ಪರಿಸರ ಸ್ನೇಹಿ ಜೀವನ ವಿಧಾನವನ್ನು ಅಳವಡಿಸಿಕೊಂಡು ರಾಷ್ಟç ವಿಕಾಸದ ಅಭಿಯಾನಕ್ಕೆ ಕೈಜೋಡಿಸಬೇಕಾಗಿದೆ ಎಂದೂ ಅವರು ಹೇಳಿದರು.

ಸುಸ್ಥಿರ ಅಭಿವೃದ್ಧಿಗೆ ನಮ್ಮಲ್ಲಿರುವ ಜೀವವೈವಿಧ್ಯ ತುಂಬಾ ಅಗತ್ಯವಾಗಿದೆ. ಜೀವವೈವಿಧ್ಯತೆ ಹಾಗೂ ಅದರ ವಿಶೇಷತೆ ಕುರಿತ ಅರಿವು ಪ್ರತಿಯೊಬ್ಬರಿಗೂ ಇರಬೇಕಿದೆ. ಜೇನು ನೊಣಗಳು, ಚಿಟ್ಟೆಗಳು ಹೀಗೆ ಅನೇಕ ಕೀಟಗಳಿಂದ ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಒಂದು ವೇಳೆ ಅತಿಯಾದ ಕ್ರಿಮಿನಾಶಕಗಳ ಬಳಕೆಯಿಂದ ಈ ಕೀಟಗಳ ಸಂಖ್ಯೆ ಕಡಿಮೆಯಾಗಿ ಅಥವಾ ನಾಶ ಹೊಂದಿ ಪರಾಗಸ್ಪರ್ಶ ಕ್ರಿಯೆ ನಡೆಯದೇ ಹೋದರೆ ಸಸ್ಯಗಳಿಂದ ಹಣ್ಣುಗಳನ್ನು ಅಥವಾ ಹೊಸ ಬೀಜಗಳನ್ನು ಪಡೆಯುವುದು ಅಸಾಧ್ಯ. ಅಂದರೆ ಪರಾಗಸ್ಪರ್ಶ ಸಣ್ಣ ಪ್ರಮಾಣದಲ್ಲಾಗಲೀ ಅಥವಾ ನಡೆಯದೇ ಹೋದರೆ ಹಣ್ಣುಗಳಿಲ್ಲದ ಸಸ್ಯಗಳು ಬೆಳೆಯುತ್ತವೆ. ಇದರರ್ಥ ನಮಗೆ ಆಹಾರದ ಕೊರತೆ ಉಂಟಾಗುತ್ತದೆ ಎಂದೂ ಮೇಜರ್ ಹಿರೇಮಠ ವಿಶ್ಲೇಷಿಸಿದರು.

ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಉಪನಿರ್ದೇಶಕ ಆರ್.ಎಸ್. ಮುಳ್ಳೂರ, ಹಿರಿಯ ಸಹಾಯಕ ನಿರ್ದೇಶಕ ಕೇಶವ ಪೆಟ್ಲೂರ, ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಿಗೇರ, ಇ-ಆಡಳಿತ ವಿಭಾಗದ ಶಾಂತಾ ಮೀಸಿ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ ಹಾಗೂ ಆಯುಕ್ತರ ಕಚೇರಿಯ ಎಲ್ಲ ವಿಭಾಗಗಳ ಸಿಬ್ಬಂದಿ ವರ್ಗ ಹಾಜರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...