(www.vknews.com) : ಪ್ರತಿಯೊಬ್ಬ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಮತೋಲಿತ ಆಹಾರ ಅತೀ ಅಗತ್ಯ. ನಮ್ಮ ದೇಹದಲ್ಲಿ ವಯಸ್ಸಿಗನುಗುಣವಾಗಿ ರಸದೂತಗಳ ಸ್ರವಿಕೆಯ ವ್ಯತ್ಯಾಸದ ಪರಿಣಾಮದಿಂದಾಗಿ ದೇಹದ ಆಹಾರದ ಅವಶ್ಯಕತೆಯೂ ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ವಯಸ್ಸಿಗನುಗುಣವಾಗಿ ಆಹಾರವನ್ನು ಬದಲಾವಣೆ ಮಾಡಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತೀ ಅವಶ್ಯಕ. ನಮ್ಮ ಹಿರಿಯರು ಅದಕ್ಕಾಗಿಯೇ “ನಾವು ಏನು ತಿನ್ನುತ್ತೇವೆಯೋ ಅದೇ ರೀತಿ ನಮ್ಮ ಚಿಂತನೆ ಮತ್ತು ವರ್ತನೆ ಇರುತ್ತದೆ” ಎಂದು ಸಾರಿ ಸಾರಿ ಹೇಳಿದ್ದಾರೆ. ನಾವು ಏನು ತಿನ್ನುತ್ತೇವೆ ಎಂಬುದರ ಮೇಲೆ ನಮ್ಮ ದೇಹದ ಪ್ರಕೃತಿ ಮತ್ತು ರಚನೆ ಅವಲಂಬಿತವಾಗಿರುತ್ತದೆ. ವಯಸ್ಸಾದಂತೆ ದೇಹದಲ್ಲಿ ರಸದೂತಗಳ ಸ್ರವಿಸುವಿಕೆಯಲ್ಲಿ ಉಂಟಾಗುವ ವ್ಯತ್ಯಯದಿಂದಾಗಿ ದೇಹಕ್ಕೆ ಬೇಕಾದ ವಿಟಮಿನ್, ಕೊಬ್ಬು, ಪ್ರೋಟಿನ್, ಶರ್ಕರಪಿಷ್ಠ, ಲವಣ ಮತ್ತು ಕ್ಯಾಲ್ಸಿಯಂಗಳಲ್ಲಿ ಗಮನಾರ್ಹ ಬದಲಾವಣೆ ಆಗುತ್ತಲೆ ಇರುತ್ತದೆ. ಇದು ಪುರುಷ ಮತ್ತು ಮಹಿಳೆಯರಲ್ಲೂ ಬಹಳಷ್ಟು ಭಿನ್ನವಾಗಿರುತ್ತದೆ. ಯಾಕೆಂದರೆ ಪುರುಷರ ಮತ್ತು ಮಹಿಳೆಯರಲ್ಲಿ ಭಿನ್ನವಾಗಿರುವ ರಸದೂತಗಳ ಸ್ರವಿಸುವಿಕೆಯಲ್ಲಿ ಉಂಟಾಗುವ ವ್ಯತ್ಯಾಸವೇ ಇದಕ್ಕೆ ಪ್ರಮುಖ ಕಾರಣ.
ಸಾಮಾನ್ಯವಾಗಿ ಯೌವನಾವಸ್ಥೆಯನ್ನು ಆಹಾರದ ಅವಶ್ಯಕತೆಗಳಿಗನುಗುಣವಾಗಿ ಆರಂಭಿಕ ಯೌವನಾವಸ್ಥೆ ಮತ್ತು ಮಧ್ಯಮ ಯೌವನಾವಸ್ಥೆ ಹಾಗೂ ವಯಸ್ಕರು ಎಂಬುದಾಗಿ ಮೂರು ಭಾಗವಾಗಿ ವಿಂಗಡಿಸಲಾಗುತ್ತದೆ. ಬಾಲ್ಯದಲ್ಲಿ ಮತ್ತು ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಪ್ರೋಟಿನ್, ವಿಟಮಿನ್, ಶರ್ಕರಪಿಷ್ಠಗಳಿಂದ ಕೂಡಿದ ಎಲ್ಲ ರೀತಿಯ ಆಹಾರವನ್ನು ನೀಡತಕ್ಕದ್ದು. ಬೆಳೆಯುವ ಹಂತದಲ್ಲಿ ಏನನ್ನೂ ಕೊಟ್ಟರೂ ತಿಂದು ಜೀರ್ಣಿಸುವ ತಾಕತ್ತು ಮಕ್ಕಳಿಗೆ ಇರುತ್ತದೆ ಮತ್ತು ಎಲುಬು, ಮಾಂಸಖಂಡಗಳು ಹಾಗೂ ಮಾನಸಿಕ ಬೆಳವಣಿಗೆಗೆ ಸಮತೋಲಿತ ಆಹಾರ ಅತೀ ಅಗತ್ಯ. ಹೆಚ್ಚಿನ ಕ್ಯಾಲ್ಸಿಯಂ, ಪ್ರೋಟಿನ್, ಲವಣ, ಕ್ಯಾಲರಿ ಇರುವಂತಹ ಆಹಾರ ಸಿಕ್ಕಿವಲ್ಲಿ ದೈಹಿಕ ಬೆಳವಣಿಗೆಗೆ ಪೂರಕವಾಗಬಹುದು. ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ಹದಿಹರಯದಲ್ಲಿ ಹೆಚ್ಚಿನ ಆಟ ಮತ್ತು ದೈಹಿಕ ಪರಿಶ್ರಮ ಇರುವುದರಿಂದ ಅಗತ್ಯಕ್ಕಿಂತ ಜಾಸ್ತಿ ಕ್ಯಾಲರಿ ಇರುವ ಆಹಾರ ಸೇವಿಸಿದಲ್ಲಿ ಹೆಚ್ಚಿನ ದುಷ್ಟರಿಣಾಮ ಆಗುವ ಸಾಧ್ಯತೆ ಕಡಮೆ ಇರುತ್ತದೆ. ಆದರೆ ಬರೀ ಕ್ಯಾಲರಿ, ಲವಣ ಮತ್ತು ಕೊಬ್ಬು ತುಂಬಿರುವ ಜಂಕ್ ಪುಡ್ಗಳನ್ನು ಕೊಡಲೇಬಾರದು. ರಾಸಾಯನಿಕಯುಕ್ತ ಸಿದ್ಧಆಹಾರ ಮತ್ತು ಕರಿದ ತಿಂಡಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿದೆ.
ಆರಂಭಿಕ ಯೌವನಾವಸ್ಥೆ (31ರಿಂದ – 40ರ ವರೆಗೆ)
ಸಾಮಾನ್ಯವಾಗಿ ಮಹಿಳೆಯರಲ್ಲಿ ಈ ವಯಸ್ಸಿನಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳ ಅವಶ್ಯಕತೆ ಜಾಸ್ತಿ ಇರುತ್ತದೆ. ಮಹಿಳೆಯರು ಗರ್ಭ ಧರಿಸಿದ ಸಮಯದಲ್ಲಿ ಮತ್ತು ಮೊಲೆಯೂಡಿಸುವ ಸಂದರ್ಭದಲ್ಲಿ ಇದರ ಅವಶ್ಯಕತೆ ಅತಿಯಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣ ಕೊರತೆಯಾದಲ್ಲಿ ಸ್ನಾಯ ಸೆಳೆತ, ಉಸಿರು ಕಟ್ಟುವುದು, ರಕ್ತಹೀನತೆ ಉಂಟಾಗಬಹುದು. ಅದೇ ರೀತಿ ಪುರುಷರಲ್ಲಿ 30ರಿಂದ 40ರ ವಯಸ್ಸಿನಲ್ಲಿ ಟೆಸ್ಟೊಸ್ಟಿರಾನ್ ಎಂಬ ರಸದೂತಗಳ ಸ್ರವಿಸುವಿಕೆ ಜಾಸ್ತಿಯಿರುತ್ತದೆ. ಈ ಕಾರಣದಿಂದ ಜೀವಕೋಶಗಳ ಜೈವಿಕ ಕ್ರಿಯೆ ಅತಿಯಾಗುತ್ತದೆ ಮತ್ತು ಸ್ನಾಯಗಳ ಬೆಳವಣಿಗೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಪ್ರೋಟಿನ್, ವಿಟಮಿನ್ ಬಿ ಕಾಂಪ್ಲೆಂಕ್ಸ್ ಮತ್ತು ಝಿಂಕ್ ಲವಣಗಳ ಅವಶ್ಯಕತೆ ಜಾಸ್ತಿ ಇರುತ್ತದೆ.
ಆದರೆ ಕ್ಯಾಲರಿಗಳ ಅವಶ್ಯಕತೆ ಕಡಮೆಯಾಗುತ್ತಲೇ ಹೋಗುತ್ತದೆ. ದೇಹದ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಉತ್ತಮ ರೋಗ ನಿರೋಧಕ ಶಕ್ತಿ ಪಡೆಯಲು ಹಾಗೂ ದೈಹಿಕ ಶಕ್ತಿಗೆ ಪೂರಕವಾದ ಆಹಾರವನ್ನು ಬದಲು ಮಾಡಬೇಕು. ಎಲುಬು ಕರಗದಂತೆ, ಸ್ನಾಯಗಳು ಕುಂದದಂತೆ ಮತ್ತು ಜೀವಕೋಶಗಳು ‘ಫ್ರೀ ರಾಡಿಕಲ್’ಗಳಿಂದ ನಾಶಹೊಂದದಂತೆ ತಡೆಯಲು ಆಹಾರದ ಮಾರ್ಪಾಡು ಮಾಡುವುದು ಅತೀ ಅಗತ್ಯ. 30 ವಯಸ್ಸು ದಾಟಿದ ನಂತರ ವಯಸ್ಸಿಗನುಗುಣವಾಗಿ ಸ್ನಾಯಗಳ ಬದಲಾವಣೆಯಿಂದ ನಮ್ಮ ಕೊಬ್ಬು ಕರಗಿಸುವ ಪ್ರಕ್ರಿಯೆ ನಿಧಾನವಾಗುತ್ತದೆ. ಈ ಕಾರಣದಿಂದಲೇ ನಮ್ಮ ದೇಹದ ಕ್ಯಾಲರಿಗಳ ಅವಶ್ಯಕತೆ ಕಡಮೆಯಾಗುತ್ತಲೇ ಹೋಗುತ್ತದೆ. 30 ವರ್ಷದ ನಂತರ ಪ್ರತಿ ವರ್ಷಕ್ಕೆ ನಮ್ಮ ದೇಹದ ಕ್ಯಾಲರಿಗಳ ಅವಶ್ಯಕತೆ ದಿನವೊಂದಕ್ಕೆ ಹತ್ತು ಕ್ಯಾಲರಿಗಳಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
ನಾವು 20 ವರ್ಷದಲ್ಲಿ ತಿನ್ನುವ ಆಹಾರಕ್ಕಿಂತ 30ನೇ ವರ್ಷದಲ್ಲಿ ತಿನ್ನುವ ಆಹಾರದಲ್ಲಿ ಕ್ಯಾಲರಿಗಳು ಕಡಮೆ ಇರತಕ್ಕದ್ದು. ಇಲ್ಲವಾದಲ್ಲಿ ನಾವು ತಿನ್ನುವ ಸಕ್ಕರೆ, ಐಸ್ಕ್ರೀಮ್ ಮತ್ತು ಆಲ್ಕೊಹಾಲ್, ಶರ್ಕರಪಿಷ್ಠಗಳಿಂದ ಅನಗತ್ಯವಾಗಿ ಕ್ಯಾಲರಿಗಳು ಶೇಖರಣೆಗೊಂಡು ಕೊಬ್ಬಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ತಡೆಯಲು ಹೆಚ್ಚು ಕ್ಯಾಲ್ಸಿಯಂ, ವಿಟಮಿನ್, ಮಿನರಲ್ಗಳಾದ ಮೆಗ್ನಿಸಿಯಂ, ಫೋಲೇಟ್, ಕಬ್ಬಿಣ ಮುಂತಾದವುಗಳು ಜಾಸ್ತಿ ಇರುವ ಆಹಾರ ತಿನ್ನತಕ್ಕದ್ದು. ಹಾಗಾದಲ್ಲಿ ಮಾತ್ರ ಮಾಂಸಖಂಡಗಳ ಮೇಲಾಗುವ ದುಷ್ಟರಿಣಾಮವನ್ನು ತಡೆಗಟ್ಟುಬಹುದು. ಇಲ್ಲವಾದಲ್ಲಿ ಅನಗತ್ಯ ಕೊಬ್ಬು ದೇಹದೆಲ್ಲೆಡೆ ಶೇಖರಣೆಗೊಂಡು ಹೃದಯ ಸಂಬಂಧಿ ರೋಗಕ್ಕೆ ಮುನ್ನುಡಿ ಬರೆಯಬಹುದು.
ನಡು ವಯಸ್ಸು (41 ರಿಂದ 50):
ವಯಸ್ಸು 40 ದಾಟಿದ ಬಳಿಕ ಕ್ಯಾಲರಿಯ ಅವಶ್ಯಕತೆ ಮತ್ತಷ್ಟು ಕಡಿಮೆಯಾಗುತ್ತದೆ. ಪುರುಷರು ದಿನವೊಂದಕ್ಕೆ 100 ಕ್ಯಾಲರಿ ಮತ್ತು ಮಹಿಳೆಯರು 70 ಕ್ಯಾಲರಿಯಷ್ಟು ಕಡಿಮೆ ಸೇವಿಸತಕ್ಕದ್ದು. ಓಮೆಗಾ-3, ಓಮೆಗಾ-6 ಎಂಬ ಪ್ಯಾಟೀ ಆಸಿಡ್ಗಳ ಸೇವನೆ ಹೆಚ್ಚು ಹೆಚ್ಚÀು ಮಾಡತಕ್ಕದ್ದು. ಶಾಖಾಹಾರಿಗಳಾಗಿದ್ದಲ್ಲಿ ಒಣಗಿದ ಹಣ್ಣುಗಳನ್ನು ಹೆಚ್ಚು ಸೇವಿಸತಕ್ಕದ್ದು, ಮಾಂಸಹಾರಿಗಳಾಗಿದ್ದಲ್ಲಿ ಮೀನಿನ ಉತ್ಪನ್ನಗಳನ್ನು ಸೇವಿಸಬಹುದು. ವಿಟಮಿನ್ ಡಿ ಕೊರತೆ, ಕ್ಯಾಲ್ಸಿಯಂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಎಲುಬಿನ ಸವೆತ, ಮೂಳೆಗಳ ಸವಕಳಿ, ಗಂಟುಗಳ ಊರಿಯೂತ, ಅಸ್ಥಿರಂಧ್ರತೆ ಮುಂತಾದವುಗಳ ಸಾಧ್ಯತೆ ಜಾಸ್ತಿ ಇರುವುದರಿಂದ ಸಾಕಷ್ಟು ಕ್ಯಾಲ್ಸಿಯಂ ಮಿನರಲ್ ಮತ್ತು ವಿಟಮಿನ್ ಡಿ ಇರುವ ಆಹಾರ ಅತೀ ಅಗತ್ಯ.
ಈ ವಯಸ್ಸಿನಲ್ಲಿ ಪೋಷಕಾಂಶಯುಕ್ತ ಸಮತೋಲಿತ ಆಹಾರ ಅತೀ ಅಗತ್ಯ. ಆಂಟಿ ಆಕ್ಸಿಡೆಂಟ್ಯುಕ್ತ ಆಹಾರವಾದ ವಿಟಮಿನ್ ಸಿ ಮತ್ತು ಈ ಹೆಚ್ಚು ಇರುವ ಆಹಾರಕ್ಕೆ ಹೆಚ್ಚಿನ ಆಧ್ಯತೆ ನೀಡತಕ್ಕದ್ದು. ಹಸಿ ತರಕಾರಿ, ಸೊಪ್ಪು ಕಾಯಿಪಲ್ಲೆಗಳು, ತಾಜಾ ಹಣ್ಣುಗಳ ಸೇವನೆ ಅತೀ ಅಗತ್ಯ. ಮಹಿಳೆಯರಲ್ಲಿ ರಜೋನಿವೃತ್ತಿಯ ಕಾಲದಲ್ಲಿ ಉಂಟಾಗುವ ರಸದೂತಗಳ ವೈಪರೀತ್ಯ, ಮೂಡ್ ಬದಲಾವಣೆ ಮತ್ತು ಮಾನಸಿಕ ಒತ್ತಡದಿಂದಾಗಿ ಹೆಚ್ಚಿನ ಹಸಿ ತರಕಾರಿ, ಹಣ್ಣು ಹಂಪಲುಗಳು, ದವಸಧಾನ್ಯಗಳು, ಪ್ರೋಟಿನ್ ಮತ್ತು ಕ್ಯಾಲ್ಸಿಯಂಯುಕ್ತ ಆಹಾರಕ್ಕೆ ಹೆಚ್ಚಿನ ಆಧ್ಯತೆ ನೀಡತಕ್ಕದ್ದು. ಎಲುಬಿನ ಸವಕಳಿ, ಸ್ನಾಯಗಳು ಸೆಳೆತ ಮುಂತಾದವುಗಳನ್ನು ತಡೆಯಲು ಮಿನರಲ್ಯುಕ್ತ ಆಹಾರ ಅತೀ ಅಗತ್ಯ. ಸಾಕಷ್ಟು ನೀರು ಮತ್ತು ದ್ರವಾಹಾರ ಸೇವಿಸತಕ್ಕದ್ದು ದಿನಕ್ಕೆ ಕನಿಷ್ಠ ಪಕ್ಷ 2 ರಿಂದ 3 ಲೀಟರ್ ನೀರು ಸೇವಿಸತಕ್ಕದ್ದು. ದೇಹದಲ್ಲಿನ ಕಲ್ಮಷಗಳು ಹೊರಸಾಗಲು ಮತ್ತು ತ್ವಚೆಯ ಕಾಂತಿಗಾಗಿ ನೀರಿನ ಸೇವನೆ ಅತೀ ಅಗತ್ಯ.
ವಯಸ್ಕರು (51 ರಿಂದ 65):
ವಯಸ್ಸು 50 ದಾಟಿದ ಬಳಿಕ, ದೈನಂದಿನ ಕ್ಯಾಲರಿ ಅವಶ್ಯಕತೆ ಮತ್ತಷ್ಟು ಕಡಮೆಯಾಗುತ್ತದೆ. ಈ ವಯಸ್ಸಿನಲ್ಲಿ ಅತ್ಯಂತ ಕಡಮೆ ಕ್ಯಾಲರಿಯ ಅಗತ್ಯವಿರುತ್ತದೆ. ಆದರೆ ಮಹಿಳೆಯರಲ್ಲಿ ಅತಿ ಹೆಚ್ಚು ಎಂದರೆ 1200mgನಷ್ಟು ಕ್ಯಾಲ್ಸಿಯಂನ ಅವಶ್ಯಕತೆ ದಿನಕ್ಕೆ ಇರುತ್ತದೆ. ಇಲ್ಲವಾದಲ್ಲಿ ಎಲುಬು ಮುರಿತ, ಸವೆತ ಉಂಟಾಗುವ ಸಂಭವ ಇರುತ್ತದೆ. ಆದರೆ ಪರುಷರಲ್ಲಿ ವಯಸ್ಸು 70ರ ವರೆಗೆ ಕ್ಯಾಲ್ಸಿಯಂನ ಹೆಚ್ಚು ಅವಶ್ಯಕತೆ ಇರುವುದಿಲ್ಲ. 70 ದಾಟಿದ ಬಳಿಕ ಎಲುಬು ಮುರಿತದ ಸಾಧ್ಯತೆ ಹೆಚ್ಚಾಗುವುದರಿಂದ ಕ್ಯಾಲ್ಸಿಯಂ ಅವಶ್ಯಕತೆ ಹೆಚ್ಚಾಗುತ್ತದೆ. 50 ದಾಟಿದ ಬಳಿಕ ಪುರುಷ ಮತ್ತು ಮಹಿಳೆಯರಲ್ಲಿ ವಿಟಮಿನ್ ಡಿಯ ಅವಶ್ಯಕತೆ ದಿನವೊಂದಕ್ಕೆ 1000 ದಿಂದ 2000IU ವರೆಗೆ ಇರುತ್ತದೆ ಇಲ್ಲವಾದಲ್ಲಿ ಮೂಳೆ ಸವೆತ ಉಂಟಾಗಿ, ಮುರಿತಕ್ಕೆ ಮುನ್ನುಡಿ ಬರೆಯಬಹುದು.
ಅದೇ ರೀತಿ ವಿಟಮಿನ್ ಬಿ12 ಅವಶ್ಯಕತೆ ಇಮ್ಮಡಿಯಾಗುತ್ತದೆ. ಕೆಂಪು ರಕ್ತ ಕಣ, ನರಗಳು ಮತ್ತು DNAಯ ಆರೋಗ್ಯಕ್ಕೆ ಬಿ12 ಅತೀ ಅವಶ್ಯಕ. ಶಾಖಹಾರಿಗಳಲ್ಲಿ ಸಾಮಾನ್ಯವಾಗಿ ಇದರ ಕೊರತೆ ಇರುವುದರಿಂದ, ಬಿ12 ಚುಚ್ಚು ಮದ್ದು ಅಗತ್ಯವಿರುತ್ತದೆ. ಮಾಂಸಾಹಾರಿಗಳಲ್ಲಿ ಬಿ12 ಕೊರತೆ ಹೆಚ್ಚಾಗಿ ಕಾಡುವುದಿಲ್ಲ. ಇದರ ಜೊತೆಗೆ ನಾರುಯುಕ್ತ ಆಹಾರ ದವಸಧಾನ್ಯಗಳು, ಹಣ್ಣುಗಳು, ಹಸಿ ತರಕಾರಿ, ಪ್ರೋಟಿನ್ ಮತ್ತು ಹಾಲು ಅತಿಯಾಗಿ ಸೇವಿಸತಕ್ಕದ್ದು. ಅತಿಯಾದ ಸಕ್ಕರೆ, ಸೋಡಿಯಂ ಮತ್ತು ಸಾಚುರೇಟೆಡ್ ಪ್ಯಾಟನ್ನೂ ವಿಸರ್ಜಿಸತಕ್ಕದ್ದು. ಕಡಿಮೆ ಪ್ರಮಾಣದ ಆಹಾರವನ್ನು, ನಿಯಮಿತವಾಗಿ ಕಾಲ ಕಾಲಕ್ಕೆ ಸೇವಿಸಬೇಕು. ಏನಿಲ್ಲವೆಂದರೂ 10ರಿಂದ 15 ಗ್ಲಾಸು ನೀರು ಸೇವಿಸತಕ್ಕದ್ದು. ದೈಹಿಕ ಚಟುವಟಿಕೆ, ಬಿರುಸು ನಡಿಗೆ ದೇಹದ ಆರೋಗ್ಯಕ್ಕೆ ಅತೀ ಅವಶ್ಯಕ.
ಕೊನೆ ಮಾತು:-
ಸಾಮಾನ್ಯವಾಗಿ ಒಬ್ಬ ಚಟುವಟಿಕೆಯುಳ್ಳ ವಯಸ್ಕ ಪುರುಷನಿಗೆ ದಿನವೊಂದಕ್ಕೆ 2200ರಿಂದ 2800 ಕ್ಯಾಲರಿಯ ಅವಶ್ಯಕತೆ ಇರುತ್ತದೆ. ಚಟುವಟಿಕೆ ಇಲ್ಲದ ವ್ಯಕ್ತಿ 2000 ದಿಂದ 2600 ಕ್ಯಾಲರಿ ಅವಶ್ಯಕತೆ ಇರುತ್ತದೆ. 19 ರಿಂದ 30ರ ವರೆಗೆ 2400ರಿಂದ 2600, 31 ರಿಂದ 50ರ ವರೆಗೆ 2200ರಿಂದ 2400, 50ರ ಬಳಿಕ 2000 ದಿಂದ 2200 ಕ್ಯಾಲರಿ ಬೇಕಾಗುತ್ತದೆ. ಒಟ್ಟಿನಲ್ಲಿ ವಯಸ್ಸಾದಂತೆ ಕ್ಯಾಲರಿಗಳ ಅವಶ್ಯಕತೆ ಕಡಿಮೆಯಾಗುವುದು ನಿಜ. ಚಟುವಟಿಕೆಯುಳ್ಳ ಮಹಿಳೆಯರಲ್ಲಿ ದಿನವೊಂದಕ್ಕೆ 1800ರಿಂದ 2000 ಕ್ಯಾಲರಿಗಳು ಅವಶ್ಯಕತೆ ಬರುತ್ತದೆ. ಆದರೆ ನಾವು ಮಾಡುವ ಬಹುದೊಡ್ಡ ತಪ್ಪು ಎಂದರೆ ವಯಸ್ಸಾದಂತೆ ನಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸದೆ ಎರ್ರಾಬಿರ್ರಿ ತಿನ್ನುವುದು.
ನಾವು ನಮ್ಮ ದೇಹವನ್ನು ಗಣನೆಗೆ ತೆಗೆದುಕೊಳ್ಳದೇ, ದೇಹದ ಮೇಲೆ ದೌರ್ಜನ್ಯ ಮಾಡುವುದು ಬಹುದೊಡ್ಡ ಅಪರಾಧ. ನಾವು ನಮ್ಮ ದೈನಂದಿನ ಆಹಾರ, ದೈಹಿಕ ಕಸರತ್ತನ್ನು ನಮ್ಮ ವಯಸ್ಸಿಗೆ ಅನುಗುಣವಾಗಿ ಬದಲಾಯಿಸತಕ್ಕದ್ದು. ಇಲ್ಲವಾದಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಮುಂತಾದ ರೋಗಗಳು ಹೆಚ್ಚಾಗುತ್ತದೆ. ದೇಹಕ್ಕೆ ಆಗುವ ವಯಸ್ಸನ್ನು ತಡೆಗಟ್ಟಲು ಸಾಧ್ಯವಿಲ್ಲದಿದ್ದರೂ, ನಿಯಮಿತ ದೈಹಿಕ ಕಸರತ್ತು, ನಿಯಂತ್ರಿತ ಆಹಾರ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ನಮ್ಮ ದೇಹಕ್ಕೆ ಬರುವ ಹತ್ತು ಹಲವು ರೋಗಗಳನ್ನು ತಡೆಯಲು ಖಂಡಿತವಾಗಿಯೂ ಸಾಧ್ಯವಿದೆ. ಬಹಳಷ್ಟು ರೋಗಗಳನ್ನು ನಮ್ಮ ಆಹಾರದ ಬದಲಾವಣೆಯಿಂದ ಮತ್ತು ವಯಸ್ಸಿಗನುಗುಣವಾಗಿ ಆಹಾರವನ್ನೂ ಮಾರ್ಪಾಡು ಮಾಡಿಕೊಂಡು ತಡೆಗಟ್ಟಬಹುದು ಮತ್ತು ನೂರು ಕಾಲ ಸುಖವಾಗಿ ರೋಗರುಜಿನಗಳಿಲ್ಲದೆ ಬದುಕಬಹುದು. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಹಿತಾಸಕ್ತಿ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು ಸುರಕ್ಷಾದಂತ ಚಿಕಿತ್ಸಾಲಯ, ಹೊಸಂಗಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.