ರಾಯಚೋಟಿ ವೀರಭದ್ರಸ್ವಾಮಿ ದೇವಾಲಯ ದರ್ಶನಕ್ಕೆ ಮುಕ್ತ

ಹುಬ್ಬಳ್ಳಿ (www.vknews.com) : ಕೋವಿಡ್-19 ನಿಯಂತ್ರಣಕ್ಕೆ ಪೂರಕವಾಗಿ ದರ್ಶನ ಮತ್ತು ಪೂಜಾ ಕೈಂಕರ್ಯಗಳಿಗೆ ನಿರ್ಬಂಧಿಸಿ ಮುಚ್ಚಲಾಗಿದ್ದ ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿ ಶ್ರೀವೀರಭದ್ರಸ್ವಾಮಿ ದೇವಾಲಯವು ಈಗ ಭಕ್ತ ಸಮೂಹದ ದರ್ಶನಕ್ಕೆ ಮುಕ್ತವಾಗಿದೆ ಎಂದು ರಾಯಚೋಟಿ ಶ್ರೀವೀರಭದ್ರಸ್ವಾಮಿ ದೇವಾಲಯ ಟ್ರಸ್ಟ ತಿಳಿಸಿದೆ.

ಕಡಪಾ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿನಿತ್ಯ ಮುಂಜಾನೆ 11 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಭಕ್ತಗಣದ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರಾತಃಕಾಲದ ಶ್ರೀರುದ್ರಾಭಿಷೇಕ, ನಂದಿವಾಹನ ಪೂಜೆ, ಮಹಾಮಂಗಳಾರತಿ ಮತ್ತಿತರ ವಿವಿಧ ಧಾರ್ಮಿಕ ಪೂಜಾ ಸೇವೆಗಳನ್ನು ಭಕ್ತರ ಹೆಸರಿನಲ್ಲಿ ಸಂಕಲ್ಪ ಮಾಡಿ ಕೇವಲ ಅರ್ಚಕರಷ್ಟೇ ನಡೆಸುತ್ತಿದ್ದು, ಆ ಸಂದರ್ಭದಲ್ಲಿ ಭಕ್ತರಿಗೆ ಪಾಲ್ಗೊಳ್ಳಲು ಅಲ್ಲಿ ಅವಕಾಶವಿರುವದಿಲ್ಲ. ಪ್ರಸ್ತುತ ಉರುಳು ಸೇವೆ ಹಾಗೂ ದೀರ್ಘದಂಡ ನಮಸ್ಕಾರ ಸೇವೆಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಹೆಚ್ಚಿನ ಜನಸಂದಣಿ ಸೇರುವ ಆಚರಣೆಗಳನ್ನು ಹಾಗೂ ಎಲ್ಲ ವಿಧದ ಹರಕೆ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಸುವ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತುಕೊಂಡೇ ಒಬ್ಬೊಬ್ಬರಾಗಿ ಗರ್ಭಗೃಹ ಪ್ರವೇಶಿಸಿ ನೇರ ದರ್ಶನ ಪಡೆದುಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ದೇವಾಲಯಕ್ಕೆ ಆಗಮಿಸಿದ ತಕ್ಷಣ ಪ್ರತಿಯೊಬ್ಬ ಭಕ್ತರೂ ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಗುಟ್ಕಾ, ಮದ್ಯಪಾನ ಮುಂತಾದವುಗಳನ್ನು ನಿಷೇಧಿಸಲಾಗಿದ್ದು, ದೇವಾಲಯದಲ್ಲಿ ಏನನ್ನೂ ಮುಟ್ಟದೇ ನೇರವಾಗಿ ಸ್ವಾಮಿಯ ದರ್ಶನ ಪಡೆದುಕೊಂಡು ಹೊರಬರಬೇಕು. ದೇವಾಲಯದ ಸುತ್ತಮುತ್ತ ಉಗುಳದೇ ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

ವಿಶೇಷವಾಗಿ ಕರ್ನಾಟಕದಲ್ಲಿ ಅದರಲ್ಲೂ ಹುಬ್ಬಳ್ಳಿ, ಬೀದರ-ಕಲಬುರ್ಗಿ ಭಾಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಇರುವ ರಾಯಚೋಟಿ ಶ್ರೀವೀರಭದ್ರಸ್ವಾಮಿಯ ಭಕ್ತ ಸಮೂಹ ಶ್ರೀಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಲ್ಲಿ ಗಮನ ನೀಡಬೇಕೆಂದು ರಾಯಚೋಟಿ ಶ್ರೀವೀರಭದ್ರಸ್ವಾಮಿ ದೇವಾಲಯ ಟ್ರಸ್ಟ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...