ನೂರುಲ್ ಹುದಾ ಯುಎಇ ಸಮಿತಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಬಂಧ

ರೋಗಗಳ ಕಾಲದಲ್ಲಿ ಪವಿತ್ರ ಇಸ್ಲಾಂ, ಅದರ ಪ್ರಸಕ್ತಿ ಮತ್ತು ಪರಿಹಾರಗಳು

(www.vknews.com) : ಪವಿತ್ರ ಇಸ್ಲಾಂ ಎಂಬುವುದು ಯಜಮಾನ‌ನಾದ ಅಲ್ಲಾಹನು ತನ್ನ ದಾಸನಿಗೆ ನೀಡಿದ ನಿಯಮ ಸಂಹಿತೆಯಾಗಿದೆ. ಸುಮಾರು ಒಂದುಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳ ಮುಖಾಂತರ ಅದನ್ನು ತನ್ನ ದಾಸರಿಗೆ ತಲುಪಿಸಿದ್ದಾನೆ. ಸಕಲಾಂಡಗಳನ್ನು ಸೃಷ್ಟಿಸಿ ಪರಿಪಾಲಿಸುವ ಅಲ್ಲಾಹನು ಸಂವಿದಾನಿಸಿದ ಧರ್ಮವು ಎಲ್ಲಾ ವಿಷಯಗಳಲ್ಲೂ ಪರಿಪೂರ್ಣವಾಗಿದೆ. ಪರಸ್ಪರ ವೈರುದ್ಯಗಳು ಅದರಲ್ಲಿ ಕಾಣಲು ಸಧ್ಯವಿಲ್ಲ.

ಮಾನವ‌ ಜೀವನದ ಎಲ್ಲಾ ಮಜಲುಗಳನ್ನೂ ಅದು ಚರ್ಚಿಸುತ್ತದೆ. ದಿಕ್ಸೂಚಿಯನ್ನು ತೋರಿಸುತ್ತದೆ. ಹುಟ್ಟು ಸಾವುಗಳೆಡೆಯಲ್ಲಿ ಮತ್ತು ನಂತರದ ಜೀವನದ ಗುರಿಯನ್ನು ಪ್ರತಿಪಾದಿಸುತ್ತದೆ. ಆ ನಿಟ್ಟಿನಲ್ಲಿ ಮಾನವ ಜೀವನದ ಸಹಜ ಹಾಗು ಸ್ವಭಾವಿಕ ಗುಣವಾದ ರೋಗರುಜಿನಗಳ ಕುರಿತು ಬಹಳಷ್ಟು ಸುಂದರ ಶೈಲಿಯಲ್ಲಿ ಅದು ಪ್ರತಿಪಾದಿಸಿದೆ.

ಇಸ್ಲಾಮಿನ ತಳಹದಿಯ ಭದ್ರ ಬುನಾದಿಯಾದ ಪವಿತ್ರ ಖುರ್ಆನ್ ಹಾಗೂ ಪ್ರವಾದಿ ನುಡಿಯಾದ ಹದೀಸ್’ಗಳು‌ ಇದರ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಬೆಳಕು ಚಲ್ಲಿದೆ.
‌ಪವಿತ್ರ ಖುರ್ಆನಿನಲ್ಲಿ ಸುಮಾರು 27ರಷ್ಟು ಆಯತ್’ಗಳಲ್ಲಿ ರೋಗದ ಬಗ್ಗೆ ಚರ್ಚಿಸಲಾಗಿದೆ. ಶಾರೀರಿಕ ಹಾಗೂ ಆಂತರಿಕ ಆಥವಾ ಮಾನಸಿಕ‌ ರೋಗಗಳು ಅದರಲ್ಲಡಕವಾಗಿದೆ. ಇನ್ನು ಪ್ರವಾದಿ‌ ನುಡಿಗಳನ್ನು ಅವಲೋಕಿಸುವುದಾದರೆ ಸುಮಾರು ನಾಲ್ಕುನೂರಷ್ಟು ಹದೀಸ್’ಗಳು ರೋಗ ಮತ್ತು ಅದರ ಚಿಕಿತ್ಸೆಯ ಬಗ್ಗೆ ಉಲ್ಲೇಖಿಸಿರುವುದು ಕಾಣಬಹುದು.‌

‌‌‌‌ ಇಸ್ಲಾಮಿನ ಪ್ರಚಾರಕರೂ ಕೊನೆಯ ಪ್ರವಾದಿಯೂ ಆದ‌ ಮುಹಮ್ಮದ್ (ಸ.ಅ)ರ ಜೀವನ ರೀತಿಯು ರೋಗಗಳನ್ನು ತಡೆಯುವಂತದ್ದಾಗಿತ್ತು. ಆಂಗ್ಲರ ಭಾಷೆಯಲ್ಲಿ ಹೇಳುವುದಾದರೆ (Prevention is better than Cure) ಮುಂಜಾಗರೂಕತೆಯು ಚಿಕಿತ್ಸೆಗಿಂತ ಉತ್ತಮ. ಇದಾಗಿತ್ತು ಪ್ರವಾದಿ (ಸ.ಅ.)ರ ಜೀವನದ ರೀತಿ.

ಪವಿತ್ರ ಮಕ್ಕಾ ನಗರದಲ್ಲಿ ಇಸ್ಲಾಮಿನ ಪ್ರಚಾರ ಪ್ರಕ್ರಿಯೆಗಳಲ್ಲಿ ನಿರತರಾದ ಪ್ರವಾದಿ ಮುಹಮ್ಮದ್ (ಸ‌.ಅ.)ರ ಹಾಗೂ ಅವರ ಅನುಚರರ ಶುಶ್ರೂಷೆಗಾಗಿ ನೆರೆಯ ರಾಜರು ತಮ್ಮ ಊರುಗಳಿಂದ ಉಚಿತವಾಗಿ ಸೇವೆಗೈಯ್ಯಲು ಪರಿಣಿತ ವೈದರನ್ನು ಕಳುಹಿಸಿದ್ದರು. ಆದರೆ ವೈದ್ಯರಿಗೆ ಯಾವುದೇ ರೋಗಿಗಳನ್ನು ಮಕ್ಕಾದಲದಲ್ಲಿ ಕಾಣಲು ಸಾಧ್ಯವಾಗಲಿಲ್ಲ. ಅವರು ಇದರ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿದಾಗ ಪ್ರವಾದಿ (ಸ.ಅ)ರ ಜೀವನ ಶೈಲಿಯು ಅವರನ್ನು‌ ನಿಬ್ಬೆರಗಾಗಿಸಿತು.

ಮಾನವ ಜೀವನದ ಅವಿಭಾಜ್ಯ ಘಟಕವಾಗಿದೆ ಆಹಾರ ಸೇವನೆ. ಈ ವಿಷಯದಲ್ಲಿ ಪ್ರವಾದಿ (ಸ.ಅ)ರು ಬಹಳ ಗಮನಿಸುತ್ತಿದ್ದರು. “ಮಾನವ ತುಂಬಿಸುವ ಪಾತ್ರೆಗಳ ಪೈಕಿ ಅತೀ ಕೆಟ್ಟದ್ದು‌ ಆತನ ಉದರವಾಗಿದೆ.” ಎಂದು ತನ್ನ ಅನುಚರರಿಗೆ ಬೋಧಿಸುತ್ತಿದ್ದರು. ಅಂದರೆ ಪ್ರತಿಯೊಬ್ಬ ಮನುಷ್ಯನು ತನ್ನ ಹೊಟ್ಟೆ ತುಂಬಿಸುವುದಕ್ಕಾಗಿ ದುಡಿಯುತ್ತಾನೆ. ಆದರೆ ಹೊಟ್ಟೆಯನ್ನು ಪೂರ್ತಿಯಾಗಿ ತುಂಬಿಸುವುದು ಬಹಳ ಅಪಾಯಕಾರಿ ಸಂಗತಿಯಾಗಿದೆ.‌ ‘ಮಾನವನು‌ ತನ್ನ ಉದರವನ್ನು ಮೂರು ಭಾಗವಾಗಿ ವಿಂಗಡಿಸಿ ಒಂದು‌ ಭಾಗ ನೀರು, ಒಂದು ಭಾಗ
ಆಹಾರ ಹಾಗೂ ಇನ್ನೊಂದು ಭಾಗ ಖಾಲಿ ಬಿಡಬೇಕು’ ಎಂದು ನಿರ್ದೇಶಿಸಿದ್ದಾರೆ. ಈ ರೀತಿಯ ಆಹಾರ ಸೇವನೆಯು ಮಾನವನನ್ನು ರೋಗ ಮುಕ್ತನಾಗಿಸುತಗತ್ತದೆ. ಉಂಡ ಬಳಿಕ ಪುನಃ ಉಣ್ಣುವುದು ಇಸ್ಲಾಂ ನಿಷೇಧಿಸಿದೆ.

ಮದುವೆ ಸಮಾರಂಭಗಳ ಹೆಸರಲ್ಲಿ ದಿನಾಲೂ ಮೃಷ್ಟಾನ್ನ ಭೋಜನ, ಒಂದೇ ದಿನದಲ್ಲಿ ನಾಲ್ಕೈದು ಮದುವೆ ಕಾರ್ಯಕ್ರಮಗಳಿಗೆ ತೆರಳಿ ಯಾವುದೇ ಲಂಗುಲಗಾಮಿಲ್ಲದೆ ನಡೆಸುವ ಭೋಜನ ಕ್ರಮದಿಂದ ಇಂದು ರೋಗಗಳು ಲೆಕ್ಕಕಿಂತಲೂ ಹೆಚ್ಚಾಗಿದೆ. ಆಸ್ಪತ್ರೆಗಳು, ಕ್ಲೀನಿಕ್’ಗಳು, ಔಷಧಾಲಯಗಳು ತುಂಬಿ‌ ತುಳುಕುತ್ತಿದೆ. ಒಮ್ಮೆ ಬಂದ ರೋಗವು ಪೂರ್ಣವಾಗಿಯೂ ವಾಸಿಯಾಗುವುದೂ ಇಲ್ಲ. ಪ್ರತಿಯೊಬ್ಬರ ಹೊಟ್ಟಯು ಊದಿಕೊಂಡಿರುತ್ತದೆ. ಹೊಟ್ಟೆಯನ್ನು ಎತ್ತಿಕೋಂಡು ನಡೆಯಲಾಗದ ಸ್ಥಿತಿ.

ಮಾನವನಿಗೆ ಸಮಸ್ಯೆಯಾಗಿರುವ ಈ ರೋಗಗಳ ಪೈಕಿ ಸುಮಾರು ಎಪ್ಪತ್ತರಷ್ಟು ರೋಗಗಳು ಉಂಟಾಗಲು‌ ಕಾರಣ ಆತನ ಉದರವಾಗಿದೆ. ಉದರದಲ್ಲಿ ತಿಂದ ಆಹಾರವು ಜೀರ್ಣವಾಗದೆ, ಬೇದಿಯಾಗದೆ ಹೋದರೆ ಬಹಳ ಅಪಾಯವಾಗಿದೆ. ನಾಲ್ಕೈದು ದಿನಗಳ ಕಾಲ ಬೇದಿಯಾಗದೆ ಇದ್ದಲ್ಲಿ ಮಲವು ಹೊಟ್ಟೆಯಲ್ಲಿ ಹಳಿತು ಹುಳುವಾಗಿ ಕ್ಯಾನ್ಸರ್’ನಂತಹ ಮಾರಕ ಕಾಯಿಲೆಯುಂಟಾಗಳು ಸಾಧ್ಯತೆ ಇದೆ.

ಇಸ್ಲಾಮಿನ ಜೀವನ ಕ್ರಮವನ್ನು ನಾವು ಅನುಸರಿಸುವುದಾದರೆ ಆರೋಗ್ಯವಂತರಾಗಿ ನಾವು ಬಾಲಬಹುದು. ಪ್ರವಾದಿ (ಸ.ಅ.)ರು ಹೇಳುತ್ತಾರೆ. ‘ನೀವು ತೀಂಗಳಿಗೊಮ್ಮೆಯಾದರು ಸುಣಾಮಕ್ಕಿಯ ಎಲೆಯನ್ನು ಬಳಸಿಕೊಂಡು ಬೇದಿಮಾಡಬೇಕು.’ ಉದರ ಶುದ್ದೀಕರಣದಿಂದ ಎಲ್ಲಾ ರೋಗಗಳಿಗೂ ಪರಿಹಾರವಿದೆ ಎಂದು ಇಂದು ಆಧುನಿಕ ವೈದ್ಯಶಾಸ್ತ್ರ ಹೇಳುತ್ತದೆ. ಆಹಾರ ಸೇವನೆಯು ದಿನನಿತ್ಯ ಎರಡು ಬಾರಿಯಾಗಬೇಕೆಂದು ಇಸ್ಲಾಂ ಕಲಿಸುತ್ತದೆ.‌ ‘ಪ್ರಭಾತ ಅಂದರೆ ಬೆಳಗ್ಗಿನ ಉಪಹಾರ ಮತ್ತು ಮುಸ್ಸಂಜೆಯ ಸಮಯದ ಉಪಹಾರ’ . ಕಾರಣ ಒಮ್ಮೆ ಸೇವಿಸಿದ ಆಹಾರವು ಮಾನವ ದೇಹದ ಬಾಯಿ, ಅನ್ನನಾಳ, ಜಠರ ಹಾಗೂ ಕರಳುಗಳಲ್ಲಿ ಸಾಮಾನ್ಯವಾಗಿ ಎಂಟು ತಾಸುಗಳಷ್ಟು ಕಾಲ ಜೀರ್ಣಕ್ರಿಯಿಯಲ್ಲಿ ನಿರತವಾಗಿರುತ್ತದೆ.‌ ಆದ್ದರಿಂದ ಈ ಸಂದರ್ಭದಲ್ಲಿ ಪುನಃ ಆಹಾರ ಸೇವನೆಯಿಂದ ಜೀರ್ಣಾಂಗಗಳು ಅತೀ ಹೆಚ್ಚು ಆಯಾಸಕ್ಕೊಳಗಾಗಿ ‌ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಐದು ಹೊತ್ತು, ನಾಲ್ಕು ಹೊತ್ತು,‌ ಮೂರು ಹೊತ್ತು ಉಪಹಾರ ಕ್ರಮವು ಮನುಷ್ಯನನ್ನು ಶ್ರೀಷ್ರವಾಗಿ ರೋಗಕ್ಕೆ ತಳ್ಳಿಬಿಡುತ್ತದೆ. ಪವಿತ್ರ ಇಸ್ಲಾಮಿನ ಆಹಾರ ಸೇವನಾಕ್ರಮವು ಜೀರ್ಣಾಂಗಗಳಿಗೆ ಬಹಳ ವಿರಾಮವನ್ನು ನೀಡುತ್ತದೆ. ಇದರಿಂದ ಬಹಳ ಆರೋಗ್ಯವಂತನಾಗಿ ಬದುಕಬಹುದು.

“ಊಟ ಬಲ್ಲವನಿಗೆ ರೋಗವಿಲ್ಲ”ವೆಂಬುವುದು‌ ನಾಣ್ಣುಡಿ. ಆದರೆ ಪವಿತ್ರ ಖುರ್ಆನ್ ಹೇಳುತ್ತದೆ ” ನೀವು ತಿನ್ನಿರಿ, ಕುಡಿಯಿರಿ ಆದರೆ ದುಂದುವೆಚ್ಚ ಮಾಡದಿರಿ”. ಇಲ್ಲಿ ದುಂದುವೆಚ್ಚವೆಂದರೆ ಅನಗತ್ಯವಾಗಿ ತಿನ್ನಬೇಡಿ ಎಂದರ್ಥ. ಶರೀರಕ್ಕೆ ಅಪಾಯವನ್ನು ತಂದೊಡ್ಡುವ ಯಾವುದೇ ಪದಾರ್ಥಗಳ ಸೇವನೆ ದುಂದು ವೆಚ್ಚವಾಗಿದೆ. ಇದರಿಂದ ನಂತರ ದಿನಗಳಲ್ಲಿ ರೋಗಿಯಾಗಿ ಚಿಕಿತ್ಸೆಯ ಹೆಸರಲ್ಲಿ ತನ್ನ ಸಂಪತ್ತಿನ ದೊಡ್ಡ ಅಂಶವನ್ನು ವ್ಯಯಿಸಬೇಕಾಗುತ್ತದೆ.

“ನಿಮಗೆ ನೀಡಲ್ಪಟ್ಟ ಆಹಾರದಲ್ಲಿ ಅತ್ಯುತ್ತಮವಾದುದನ್ನೇ ಸೇವಿಸಿರಿ” ಎಂದು ಪವಿತ್ರ ಖುರ್ಆನ್ ಕಲ್ಪಿಸುತ್ತದೆ. ಅಂದರೆ ಜನರನ್ನು ಮೋಸಮಾಡಿ ನಿಷಿದ್ದವಾದ ಸಂಪತ್ತಿನಿಂದ ನಿಮ್ಮ ಆಹಾರವನ್ನು ತಯಾರು ಮಾಡಬೇಡಿ ಎಂದು ಇದರ‌ ವ್ಯಾಖ್ಯಾನ. ನ್ಯಾಯ ಸಮ್ಮತವಾದ ದುಡಿಮೆಯಿಂದ ಹಾಗೂ ವ್ಯಾಪಾರ ವಹಿವಾಟುಗಳಿಂದ ನೆಮ್ಮದಿಯ ಬದುಕನ್ನು ಅನುಭವಿಸಿರಿ ಎಂದರ್ಥ. ಕಾರಣ ಇತರರನ್ನು ನೋವಿಸಿ ಸಂಪಾದನೆ ಮಾಡಿದರೆ ಅವರ ನೋವು ಹಾಗೂ ಶಾಪಗಳಿಂದಾಗಿ ಈ‌ ಸಂಪಾದನೆಯು ಸೇವಿಸುವವನ ಶರೀರ ಹಾಗೂ ಮನಸ್ಸನ್ನು ರೋಗಗ್ರಸ್ತನಾಗಿಸುತ್ತದೆ. ಯಾರದೋ ಮಕ್ಕಳು ತಿನ್ನಬೇಕಾದ ಸಂಪತ್ತನ್ನು ಲೂಟಿ, ಕಳ್ಳತನ, ದರೋಡೆಗಳಿಂದ ಎಳೆದು ತಂದು ತಮ್ಮವರಿಗೆ ನೀಡಿದರೆ ಕ್ರಮೇಣ ಅದು ರೋಗವಾಗಿ ಭವಿಸಿ ಜೀವನವಿಡೀ ಅನುಭವಿಸಬೇಕಾಗುತ್ತದೆ.
‌‌‌‌
‌‌‌‌‌ “ನಿಷಿದ್ಧವಾದ ಒಂದು ಹಿಡಿ ಅನ್ನವನ್ನು ಒಬ್ಬ ಭುಜಿಸಿದರೆ ಸುಮಾರು ನಲ್ವತ್ತು ದಿನಗಳ ಕಾಲ‌ ಆತನ ಪ್ರಾರ್ಥನೆ ಸ್ವೀಕರಿಸುವುದಿಲ್ಲ.” ಎಂಬ ಪ್ರವಾದಿ ವಚನವು ಸೇವಿಸುವ ಆಹಾರವು ಅತ್ಯುತ್ತಮವಾಗಿರಬೇಕೆನ್ನುವುದರ ಆಂತರಿಕ ವ್ಯಾಖ್ಯಾನವನ್ನು ನೀಡುತ್ತದೆ.

ವಾರದಲ್ಲೊಮ್ಮೆ ಮಾಂಸಹಾರವನ್ನು ಅನುಮತಿಸಿದ ಇಸ್ಲಾಂ ಪ್ರತಿ ಸೇವನೆಯಲ್ಲೂ ಇಂತಿಷ್ಟೇ ಮಾಂಸವನ್ನು ತಿನ್ನಬೇಕೆಂದು ಶಾಸಿಸುತ್ತದೆ. ಬಟ್ಟಲು‌ ತುಂಬಾ ಮಾಂಸವನ್ನು ತಿನ್ನುವ ದುಶ್ಚಟವನ್ನು ನಿವಾರಿಸುವ ತನಕ ರೋಗರುಜಿನಗಳಿಂದ ಪಾರಾಗಲು ಸಾದ್ಯವಿಲ್ಲ. ಆಹಾರ ಸೇವನೆಯಲ್ಲಿ ಶೇಕಡ 20% ರಷ್ಟು ಎಣ್ಣೆಯನ್ನು ವಾರದ ಐದು ದಿನಗಳಲ್ಲೂ ಸೇವಿಸಬೇಕೆಂದು ಪ್ರವಾದಿ ವೈದ್ಯಶಾಸ್ತ್ರ ಹೆಳುತ್ತದೆ. ವಾರದಲ್ಲಿ ಎರಡುದಿನ ಎಣ್ಣೆಯ ಅಂಶರಹಿತವಾದ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮವೆನ್ನುತ್ತದೆ. ಮಾಂಸಹಾರಕ್ಕೆ ನಿಯಂತ್ರಣ ಕಲಿಸಿದ ಪವಿತ್ರ ಇಸ್ಲಾಂ ಹಾಲಿನ ಬಗ್ಗೆ ಹೆಚ್ಚು ಪ್ರೋತ್ಸಾಹವನ್ನು ನೀಡಿದೆ. ಹಾಲು ಪ್ರವಾದಿ (ಸ.ಅ.)ರಿಗೆ ಇಷ್ಟವಾಗಿತ್ತು ಎಂದು ಪವಿತ್ರ ಹದೀಸ್’ಗಳಲ್ಲಿ ಉಲ್ಲೇಖವಿದೆ. ಆಧುನಿಕ ವಿಜ್ಞಾನಗಳ ಶಾಖೆಯು ಮೊಳಕೆಯೊಡೆಯುವ ಸಾವಿರಾರು ವರ್ಷಗಳ ಮುಂಚೆ ಈ ರೀತಿ ಆಹಾರ ಸೇವನೆಯ ಬಗ್ಗೆ ಕಾಳಜಿವಹಿಸಿದ ಪವಿತ್ರ ಇಸ್ಲಾಂ, ಆಧುನಿಕ ವಿಜ್ಞಾನಕ್ಕೆ ದಿಕ್ಸೂಚಿ ಹಾಗೂ ಮಾರ್ಗ ದರ್ಶನವನ್ನು ನೀಡಿದೆ.‌
ತಲೆಗೆ ಎಣ್ಣೆ ಹಚ್ಚುವುದು ಸುನ್ನತ್ತಾಗಿದೆ ಎಂದು ಪವಿತ್ರ ಇಸ್ಲಾಮಿನ ಕರ್ಮ ಶಾಸ್ತ್ರ ಗ್ರಂಥಗಳು ಉಲ್ಲೇಖಿಸುತ್ತದೆ. “ಎರಡು ದಿನಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಹಚ್ಚಿರಿ” ಎಂಬ ಇಸ್ಲಾಮಿನ ಅದೇಶ ಮಾನವ ಆರೋಗ್ಯದ ಬಗ್ಗೆ ಬಹಳ ಜಾಗರೂಕತೆಯನ್ನು ತಿಳಿಹೇಳುತ್ತದೆ.

‌‌‌‌‌ ಪ್ರವಾದಿ (ಸ.ಅ.)ರ ಮುಖವು ಎಣ್ಣೆಮಯವಾಗಿಯೇ ಗೋಚರಿಸುತ್ತಿತ್ತು ಎಂದು ಪ್ರವಾದಿ (ಸ.ಅ.)ರ ಶರೀರದ ಬಗ್ಗೆ ವಿಶ್ಲೇಷಿಸುವ ಗ್ರಂಥಗಳು ಉಲ್ಲೇಖಿಸುತ್ತದೆ. ದಿನಾ ತಲೆಗೆ ಎಣ್ಣೆ ಹಚ್ಚುವುದರಿಂದ ಆಹಾರವು ಬೇಗನೆ ಜೀರ್ಣವಾಗುತ್ತದೆ ಎಂದು ವಿಜ್ಞಾನವು ಕಂಡು ಹಿಡಿದಿದೆ. ತಲೆಗೆ ಎಣ್ಣೆ ಉಪಯೋಗಿಸದವರು ಬೇಗನೆ ದೃಷ್ಟಿಹೀನತೆಗೆ ಬಲಿಯಾಗುತ್ತಾರೆಂದು ಸಂಶೋಧನೆಗಳಿಂದ ಸಾಬೀತಾಗಿದೆ.

ವಾರದಲ್ಲೊಮ್ಮೆ ಶರೀರ ಪೂರ್ತಿ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಸುನ್ನತ್ ಎಂದು ಇಸ್ಲಾಂ ಕಲಿಸುತ್ತದೆ. ಸಾಧಾರಣವಾಗಿ ಎಲ್ಲಾ ಯಂತ್ರಗಳು ಎಣ್ಣೆಯ ಅವಶ್ಯಕತೆಯಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಕೋಟ್ಯಾಂತರ ಕ್ರಿಯೆಗಳಿಂದ ನಿರತವಾಗಿರುವ ಮಾನವ ದೇಹವೆಂಬ ಯಂತ್ರವು ಎಣ್ಣೆಯನ್ನು ಬಯಸುತ್ತದೆ. ಝೈತೂನ್ ಎಂಬ ಎಣ್ಣೆ ಕೊಬ್ಬಿನ ಸಮಸ್ಯೆಗಳನ್ನು ನಿವಾರಿಸುತ್ತದೆ.‌ ಝೈತೂನ್ ಎಣ್ಣೆಯ ಬಗ್ಗೆ ಪವಿತ್ರ ಖರ್ಆನ್ ಗಮನೀಯ ರೀತಿಯಲ್ಲಿ ಪ್ರಸ್ತಾಪಿಸಿದೆ. ಅರಬ್ ರಾಜ್ಯಗಳಲ್ಲಿ ಯಧೇಚ್ಚವಾಗಿ ದೊರಕುವ ಈ ಎಣ್ಣೆಯನ್ನು ಉಪಯೋಗಿಸುವುದರಿಂದ, ಹೃದಯ ಸಂಬಂಧಿ ಕಾಯಿಲೆಯು ಸರಾಸರಿ ಲೆಕ್ಕದಲ್ಲಿ ಅರಬಿಗಳು ಬಹಳ ಕಡಿಮೆಯೆಂದು ವಿಶ್ವ ಆರೋಗ್ಯ ವಿಭಾಗವು ಪ್ರಸ್ತುತಪಡಿಸಿದೆ.

‌‌‌‌ “ಆಹಾರ ಸೇವನೆಯಲ್ಲಿ ತಿನ್ನುವುದನ್ನು ಮತ್ತು ಕುಡಿಯುವುದನ್ನು ಬಹಳ ಗಮನಿಯ ರೀತಿಯಲ್ಲಿ ಶರ್ತುಗಳನ್ನು ವಿಧಿಸಿದ ಪವಿತ್ರ ಇಸ್ಲಾಂ ರೋಗ ರುಜಿನಗಳ ಸಂಹಾರಕ್ಕೆ ಮತ್ತು ಅದರ ಹುಟ್ಟನ್ನೇ ಅಡಗಿಸುವುದಕ್ಕೆ ಕಾರಣವಾಗಿದೆ.‌ ರಾತ್ರಿಯ ಉಪಹಾರ ಸೇವನೆ ಇಶಾಅ್ ನಮಾಝಿನ ಮುನ್ನವಾಗಿರಲಿ ಎಂಬ ಹದೀಸನ್ನು ವಿವರಿಸುತ್ತಾ ಅಗ್ರಗಣ್ಯ ಹದೀಸ್ ವಿದ್ವಾಂಸರಾದ ಇಬ್ನ್ ಉಮರ್ (ರ.ಅ.) ಈ ರೀತಿ ಹೇಳುತ್ತಾರೆ.‌ ” ಇಶಾಅ್ ನಮಾಝಿನ ಇಖಾಮತ್ ಕೇಳಿದರೂ ನಾನು ಉಪಹಾರ ಪೂರ್ತಿಗೊಳಿಸದೆ ನಮಾಝಿಗೆ ಹಾಜರಾಗುತ್ತಿರಲಿಲ್ಲ.” ರಾತ್ರಿ ಆಹಾರದ ನಂತರ ಮಲಗುವಮುನ್ನ ಎರಡು ಗಂಟೆಗಳ ವಿರಾಮವಾದರೂ ಬೇಕು ಎಂದು ಆಧುನಿಕ ವಿಜ್ಞಾನ ಸಂಶೋಧನೆಗಳಿಂದ ಉಲ್ಲೇಖಿಸಿದೆ.

ಒಟ್ಟಿನಲ್ಲಿ ಪವಿತ್ರ ಇಸ್ಲಾಮಿನ ಜೀವನ ಕ್ರಮ ದೈನಂದಿನ ಜೀವನದಲ್ಲಿ ಬರುವ ರೋಗರುಜಿನಗಳಿಂದ ಮಾನವನನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.‌

‌‌‌‌ ಇನ್ನು ಸಾಂಕ್ರಾಮಿಕ ರೋಗಗಳು ಹಾಗೂ ಕೋವಿಡ್ ನಂತಹಾ ಮಹಾಮಾರಿಗಳ‌ ಕಾಲದಲ್ಲಿ ಇಸ್ಲಾಮಿನ ಪ್ರಸಕ್ತಿ ಮತ್ತು ಪರಿಹಾರವನ್ನು ವಿಶ್ಲೇಷಿಸುವುದಾದರೆ ಇಷ್ಟು ವಿನಾಶಕಾರಿ ಕಾಲದಲ್ಲಿ ಇಸ್ಲಾಂ ಮಾತ್ರವೇ ಪರಿಹಾರವೆಂದು ವಿಜ್ಞಾನ ಒಪ್ಪಿಕೊಂಡಿದೆ.

‌‌‌‌ ಪವಿತ್ರ ಇಸ್ಲಾಮಿನ ಬದುಕುವ ಶೈಲಿ ಯಾವ ರೀತಿ ಆರೋಗ್ಯವನ್ನು ರಕ್ಷಿಸುತ್ತದೆಯೋ ಅದಕ್ಕಿಂತ‌ ಮಿಗಿಲಾಗಿ ಇಸ್ಲಾಮಿನ ಆರಾಧನ ಕರ್ಮಗಳು ಕೂಡಾ ಮಹಾಮಾರಿಗಳಿಂದ ಮಾನವನನ್ನು ರಕ್ಷಿಸುವ ರಕ್ಷಾ ಕವಚವಾಗಿದೆ. ಕೋವಿಡ್-19 ಬಾಧಿಸಿದಾಗ ಆಧುನಿಕ ವಿಜ್ಞಾನಿಗಳು ಮತ್ತು ವೈದ್ಯರು ಬಹಳ ಪ್ರಾಮುಖ್ಯವಾಗಿ ಕಲಿಸಿದ ಮತ್ತು ಕಂಡುಹಿಡಿದ ಚಿಕಿತ್ಸೆ ಮತ್ತು ಮುಂಜಾಗರೂಕತೆ ಕ್ರಮ ಆಗಾಗ ಕೈಗಳನ್ನು ಮತ್ತು ಮುಖವನ್ನು ತೊಳೆಯಬೇಕು. ಮೂಗನ್ನು ಒಣಗಲು ಬಿಡಬಾರದು, ಗಂಟಲನ್ನು ಒಣಗಕೊಡಬಾರದು ಎಂಬುವುದಾಗಿದೆ. ಈ ಮುಂಜಾಗರೂಕತಾ ಕ್ರಮವನ್ನು ಸಾವಿರಾರು ವರ್ಷಗಳಿಗಿಂತ ಮುಂಚೆಯೇ ಪ್ರವಾದಿ (ಸ.ಅ‌)ರು ಸತ್ಯವಿಶ್ವಾಸಿಗಳ ದಿನಂಪ್ರತಿ ಐದು ಹೊತ್ತಿನ ನಮಾಜಿಗೆ ತಯಾರಾಗುವ ಅಂಗಸ್ನಾನದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಡಲು ಸೂಚಿಸಿದ್ದಾರೆ.

‌‌‌‌‌‌ ಪವಿತ್ರ ವುಝೂ ಎಂಬ ಅಂಗಸ್ನಾನವು ಮುಂಗೈಗಳನ್ನು ಮೂರು ಬಾರಿ ತಿಕ್ಕಿ-ತಿಕ್ಕಿ ತೊಳೆಯಬೇಕು, ಹಲ್ಲುಗಳನ್ನು ತೊಳೆಯಬೇಕು, ಮೂಗಿನ ಹಳ್ಳಗಳಿಗೆ ಕ್ರಮಬದ್ಧವಾಗಿ ನೀರನ್ನು ಎಳೆದುಕೊಂಡು ಎಡಕೈಯಲ್ಲಿ ಮೂಗನ್ನು ಸೀನಬೇಕು ಎಂದು ನಿರ್ದೇಶಿಸಿದೆ. ದೈನಂದಿನ ಕ್ರಮಬದ್ದವಾಗಿ ಇಸ್ಲಾಮಿನ ನಿರ್ದೇಶದಂತೆ ವುಝೂ ಮಾಡುವವನಿಗೆ ಇದು ಮಹಮಾರಿಯಿಂದ ಬಹುದೊಡ್ಡ ತಡೆಯಾಗಿದೆ.‌

‌ ರೋಗ ಎಂಬ ಗುಣವು ಸ್ವಯಂ ಹರಡುವುದಿಲ್ಲ. ಆದರೆ ನಾವು ಅದನ್ನು ಹರಡುವ ವಾಹಕರಾಗಿ ಕಾರ್ಯ ನಿರ್ವಹಿಸಬಾರದು. “ನೀವು ಬಾಯಿ ಆಕಳಿಸುವಾಗ ಬಾಯಿಗೆ ಕೈ ಅಥವಾ ಕರವಸ್ತ್ರವನ್ನು ಇಟ್ಟು ತಡೆಯಿರಿ ಎಂದು ಪ್ರವಾದಿ (ಸ‌.ಅ.) ನುಡಿದಿದ್ದಾರೆ.
‌ ಹಲ್ಲು ತೊಳೆಯದೆ, ಬಾಯಿ ವಾಸನೆಯಿರುವವರು ಅಥವಾ ಈರುಳ್ಳಿಯಂಥಹ ಆಹಾರ ಸೇವನೆಯಿಂದ ಬಾಯಿ ವಾಸನೆಯಿರುವ ಸಂದರ್ಭದಲ್ಲಿ ಮಸೀದಿಗೆ ಬರಬಾರದು ಎಂದು ಖಡಕ್ಕಾಗಿ ಎಚ್ಚರಿಸಿದ್ದಾರೆ. ಪ್ಲೇಗ್ ರೋಗದಂತಹಾ ಮಾರಿಗಳು ಬಂದೆರಗಿದರೆ ಆ ಊರಿನಲ್ಲಿರುವವರು ಬೇರೆ ಊರಿಗೆ ಹೋಗಬಾರದೆಂದು ಆದೇಶಿಸಿದ್ದಾರೆ. ಬೇರೆ ಊರಿನವರು ರೋಗಬಾದಿತ ಊರಿಗೆ ಸಂದರ್ಶಿಸಬಾರದು. ಆದರೆ ಚಿಕಿತ್ಸೆಯ ದೃಷ್ಟಿಯಿಂದ ಇತರ ಊರಿನ ವೈದ್ಯರು ಸಂದರ್ಶಿಸುವುದಕ್ಕೆ ಈ ಹದೀಸ್ ತಡೆಯಾಗಯವುದಿಲ್ಲ.

“ತನ್ನಿಂದಾಗಿ ಇತರರಿಗೆ ಉಪದ್ರವನ್ನು ತಡೆಯುವ ದೃಷ್ಟಿಯಿಂದ ಮನೆಯಲ್ಲೇ ಕುಳಿತುಕೊಳ್ಳುವವನಿಗೆ ಸ್ವರ್ಗ ಪ್ರತಿಫಲವಾಗಿದೆ” ಎಂದು ಸಾರಿಹೇಳಿದ ಪ್ರವಾದಿ (ಸ‌.ಅ.)ರು ಸಮಾಜದ ಸ್ವಸ್ಥ್ಯವನ್ನು ಕಾಪಾಡಲು ಧಾರ್ಮಿಕವಾಗಿ ಪಣತೊಟ್ಟರು.
ಸಾರ್ವಜನಿಕ ಸ್ಥಳಗಳಲ್ಲಿ ಸತ್ತುಬಿದ್ದ ಜೀವಿಗಳ ಅಥವಾ ಕೊಳಕು ವಸ್ತುಗಳನ್ನು ಭೂಮಿಯಲ್ಲಿ ಹೂತುಹಾಕುವುದು ಸಾಮೂಹಿಕ ಬಾದ್ಯತೆಯೆಂದು ಸಾರಿಹೇಳಿದರು. ಯಾವನೇ ಒಬ್ಬ ತೀರಿಕೊಂಡರೆ ಆತನ ಧರ್ಮ, ಜನಾಂಗ, ಕುಲಗೋತ್ರವನ್ನು ನೋಡದೆ ಆತನ ಅಂತ್ಯಕ್ರಿಯೆಯು ಮುಸಲ್ಮಾನನ ಬಾದ್ಯತೆ ಎಂದು ನಿರ್ದೇಶಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ , ಜನಸೇರುವ ಇತರ ಯಾವುದೇ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆಯನ್ನು ಕಡ್ಡಾಯವಾಗಿ ನಿಷೇಧಿಸಿದರು.

ಧರ್ಮಸಮ್ಮತವಾದ ರೀತಿತಲ್ಲಿ ವಿವಾಹ ನಡೆಸದ ಅಥವಾ ವಿವಾಹೇತರ ಲೈಂಗಿಕ ಸಂಬಂಧಗಳನ್ನು ಮಾರ್ಮಿಕವಾಗಿ‌ ನಿಷೇಧಿಸಿದ ಇಸ್ಲಾಂ. “ವ್ಯಬಿಚಾರದ ಬಳಿ ಸುಳಿಯಬೇಡ ಅದು ಬಹಳ‌ ಕೆಟ್ಟನಡವಳಿಕೆಯಾಗಿದೆ. ಹಾಗೂ ಕೆಟ್ಟ ಮಾರ್ಗವಾಗಿದೆ.” ಎಂದು ಸ್ಪಷ್ಟಪಡಿಸಿದೆ.‌ ಈ ಆದೇಶವನ್ನು ಪಾಲಿಸದ ಕಾರಣ ಪ್ರಪಂಚವು ಏಡ್ಸ್ ಎಂಬ ಹೆಚ್.ಐ.ವಿ. ವೈರಸ್’ನ ಮಹಾಮಾರಿಯನ್ನು ಎಳೆದುಕೊಂಡಿದೆ.
ಅಸಂಖ್ಯಾತ ಕಂದಮ್ಮಗಳು, ಯಾರದೋ ತಪ್ಪಿನಿಂದಾಗಿ ಕತ್ತಲಕೋಣೆಯಲ್ಲೇ ಕಳೆಯಬೇಕಾದ ದುಸ್ತರವು ಒದಗಿಬಂತು.

ನಮಾಝ್ ಎಂಬ ಆರಾಧನೆಯು ರಕ್ತದೊತ್ತಡ, ಶಾರೀರಿಕ, ಮಾನಸಿಕವಾದ ಎಲ್ಲಾ ಕಾಯಿಲೆಗಳಿಂದಲೂ ಮಾನವನನ್ನು ರಕ್ಷಿಸುತ್ತದೆ. ನಮಾಝ್‌ ಕ್ರಮಬದ್ದವಾಗಿ ನಿರ್ವಹಿಸುವವನಿಗೆ ಯಾವುದೇ ಯೋಗಾಸಗಳಂತಹ ಅವಶ್ಯಕತೆಯಿಲ್ಲ ಎಂದು ವಿದಗ್ದರು ಹೇಳುತ್ತಾರೆ.
ಇನ್ನು ಉಪವಾಸದ ಬಗ್ಗೆ, ಅದು ಕೇವಲ ಆರಾಧನೆ ಮಾತ್ರವಲ್ಲ ಬದಲಾಗಿ “ಉಪವಾಸವು ರಕ್ಷಾಕವವವಾಗಿದೆ” ಎಂದು ಪವಿತ್ರ ಹದೀಸ್’ಗಳಲ್ಲಿ ಉಲ್ಲೇಖವಿದೆ‌. ವೃತದಾರಿಯ ಶರೀರದಲ್ಲಿ ವೃತಾಚರಣೆ ಸಮಯದಲ್ಲಿ ಉದರ ಗ್ರಂಥಿಯಿಂದ ಸುರಿಸಲ್ಪಡುವ ರಸವು ಕ್ಯಾನ್ಸರ್‌ ನಂತಹ ಮಹಾಮಾರಿಯ ಪ್ರತಿರೋಧಕ ಶಕ್ತಿಯಾಗಿದೆ ಎಂದು ವೈದ್ಯ ಲೋಕವು ಸಂಶೋಧನೆಯನ್ನು ನಡೆಸಿದೆ. ‘The fasting Can Save life’ ಎಂಬ ಪುಸ್ತಕದಲ್ಲಿ ಪವಿತ್ರ ಇಸ್ಲಾಮಿನ ವೃತಾಚರಣೆಯಿಂದ ಲಭಿಸುವ ಹಲವಾರು ಪ್ರಯೋಜನಗಳನ್ನು ಬಹಳ‌ ಸವಿಸ್ತಾರವಾಗಿ ಪ್ರತಿಪಾದಿಸಿದೆ. ಕೇವಲ ರಂಝಾನ್ ತಿಂಗಳಲ್ಲಿ ಮಾತ್ರವಲ್ಲ ಪ್ರತೀ ವಾರದಲ್ಲಿ ಸೋಮವಾರ ಮತ್ತು ಗುರುವಾರಗಳಂದು ವೃತವು ಸುನ್ನತಿದೆ. ತಿಂಗಳ ಪ್ರತೀ ಹದಿಮೂರು, ಹದಿನಾಲ್ಕು ಮತ್ತು ಹದಿನೈದರ ಮೂರು ವೃತವು ಸುನ್ನತಿದೆ. ಕ್ರಮಬದ್ದವಾಗಿ ಈ ಉಪವಾಸವನ್ನು ಆಚರಿಸುವುದರಿಂದ ಹಲವಾರು ರೋಗಗಳಿಂದ ಪಾರಾಗಬಹುದು.

ಆಹಾರ, ಆರಾಧನಾ ಕರ್ಮಗಳಲ್ಲಿ ಮಾತ್ರವಲ್ಲ, ಇಸ್ಲಾಂ ನಿರ್ದೇಶಿಸುವ ವಸ್ತ್ರದಾರಣೆ ಕೂಡ ರೋಗ ಪ್ರತಿರೋದ ಮತ್ತು ಸಾಮಾಜಿಕ ಸಮತೋಲನವನ್ನು ಕಾಪಾಡುತ್ತದೆ. ಬಿಳಿಬಣ್ಣದ ಉಡುಪಿಗೆ ಪ್ರಾಧಾನ್ಯತೆಯನ್ನು ನೀಡುವ ಇಸ್ಲಾಂ ಸೂರ್ಯನ ಶಾಖಾ ಮತ್ತು ಪರಿಸರದಿಂದ ಉಂಟಾಗುವ ಹಲವಾರು ರೋಗಗಳನ್ನು ತಡೆಯುತ್ತದೆ.‌ ಅದೇ ರೀತಿ ಶರೀರ ಪೂರ್ಣವಾಗಿ ಮುಚ್ಚಿ ನಡೆಯುವ ಮುಸಲ್ಮಾನ ಮಹಿಳೆ ಸಾಮಾಜಿಕ ಸ್ವಸ್ತ್ಯವನ್ನು ಕಾಪಾಡಲು ಸಹಕರಿಸುತ್ತಾಳೆ.

ಸಾಮಾನ್ಯವಾಗಿ ಸಾರ್ವಜನಿಕವಾಗಿ ಬೇಟಿಯಾಗುವಾಗ ಪರಸ್ಪರ ಮುಗುಳ್ನಗೆ ಮತ್ತು ಸಲಾಂ ಎಂಬ ಪವಿತ್ರ ಪ್ರಾರ್ಥನೆಯ ಮೂಲಕ ಆರಂಭಿಸಬೇಕೆನ್ನುವ ಇಸ್ಲಾಮಿನ ತತ್ವವು ಸಮಾಜದಲ್ಲಿ ನೆಮ್ಮದಿಯ ಬದುಕನ್ನು ಕಲಿಸುತ್ತದೆ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಿಸಿಕೊಳ್ಳುವವನು‌ ವಿಶ್ವಾಸಿಯಲ್ಲ.” ಎಂಬ ಪ್ರವಾದಿ ವಚನವು ಲಾಕ್ ಡೌನ್ ಕಾಲದ ಭವಣೆಯನ್ನು ಯಾವ ರೀತಿ ನಿಬಾಯಿಸಬೇಕೆನ್ನುವ ಪಾಠವನ್ನು ನೀಡುತ್ತದೆ.‌

ಒಟ್ಟಿನಲ್ಲಿ ರೋಗಕಾಲದಲ್ಲಿ ಪವಿತ್ರ ಇಸ್ಲಾಂ, ಅದರ ಪ್ರಸಕ್ತಿ ಮತ್ತು ಪರಿಹಾರವೆಂಬ ವಿಷಯದಲದಲ್ಲಿ ಅಧ್ಯಯನ ಮಾಡುವಾಗ ಸಿಗುವ ಉತ್ತರವೆಂದರೆ ಪವಿತ್ರ ಇಸ್ಲಾಮಿನ ನೈಜ ಆಶಯಗಳನ್ನು ಜೀವನದಲ್ಲಿ ಅಳವಡಿಕೊಂಡರೆ ಯಾವ ಕಾಲದಲ್ಲೂ ಸುಗಮವಾದ ಜೀವನವನ್ನು ನಡೆಸಬಹುದು ಎಂದಾಗಿದೆ.

✍🏻 ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಅಲ್-ಅಝ್ಹರಿ
(ಮುದರ್ರಿಸ್, ಜೆ.ಎಂ. ಕಲ್ಲಡ್ಕ)

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...