ಅಮ್ಮಿನಬಾವಿ ಶ್ರೀಗುರುಶಾಂತಲಿಂಗ ಶ್ರೀಗಳ 83ನೇ ಪುಣ್ಯಾರಾಧನೆ

ಧಾರವಾಡ (www.vknews.com) : ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ನಿಕಟಪೂರ್ವ ಲಿಂಗೈಕ್ಯ ಪಟ್ಟಾಧ್ಯಕ್ಷರಾದ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಲಿಂಗಾಂಗ ಸಾಮರಸ್ಯದ 83ನೆಯ ಪುಣ್ಯಾರಾಧನೆ ಮಂಗಳವಾರ (ಆಷಾಢ ಶುದ್ಧ ದ್ವಿತಿಯಾ) ಶ್ರೀಮಠದಲ್ಲಿ ಜರುಗಿತು.

ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಉಭಯ ಸಾನ್ನಿಧ್ಯದಲ್ಲಿ ಮಂಗಳವಾರ ಪ್ರಾತಃಕಾಲದಲ್ಲಿ ನಿಕಟಪೂರ್ವ ಲಿಂಗೈಕ್ಯ ಪಟ್ಟಾಧ್ಯಕ್ಷರಾದ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿದವು.

ಯೋಗ ಸಾಧನೆ : ತಮ್ಮ ಗುರುಗಳನ್ನು ಭಕ್ತಿಯಿಂದ ಸ್ಮರಿಸಿದ ಶ್ರೀಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಕಾಲಘಟ್ಟದ ಎಲ್ಲ ಸಂದರ್ಭಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಧರ್ಮೋತ್ಕರ್ಷಕ್ಕೆ ಶ್ರಮಿಸಿದವರು. ಯೋಗ ಸಾಧನೆಯ ಕ್ರಿಯಾಶೀಲ ಶರೀರ, ಲಿಂಗಪೂಜಾ ತಪೋನುಷ್ಠಾನದ ಪ್ರಖರ ತೇಜಸ್ಸು, ಭಕ್ತ ವತ್ಸಲ ಮನಸ್ಸು, ಕರುಣಾಪೂರ್ಣ ನೇತ್ರಗಳನ್ನು ಹೊಂದಿದ್ದ ಪೂಜ್ಯರು ಭಕ್ತರ ಮನೆ-ಮನಗಳಲ್ಲಿ ದೈವೀ ಸ್ವರೂಪರಾಗಿದ್ದವರು. ಉನ್ನತವಾದ ಆದರ್ಶದ ಧ್ಯೇಯಗಳನ್ನು ಹೊಂದಿದ್ದ ಪೂಜ್ಯರು, ಬದುಕಿನಲ್ಲಿ ಸರಳತೆ; ವಿಚಾರದಲ್ಲಿ ಶ್ರೇಷ್ಠತೆಯ ಅವರ ದಿವ್ಯ ಜೀವನ ಭಕ್ತ ಸಮೂಹಕ್ಕೆ ದಾರಿ ದೀಪವಾಗಿತ್ತು ಎಂದರು.

ಪುಣ್ಯಾರಾಧನೆ ನಿಮಿತ್ತ ಪ್ರತೀ ವರ್ಷದಂತೆ ಈ ವರುಷವೂ ಜಂಗಮಾರಾಧನೆ ನಡೆಯಿತು. ಮಠದ ಭಕ್ತರು ಆಗಮಿಸಿ ಪೂಜ್ಯರ ಗದ್ದುಗೆ ದರ್ಶನ ಪಡೆದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...