ಎಸ್ಸೆಸ್ಸೆಲ್ಸಿ ಪರೀಕ್ಷೆ : ಶಿಕ್ಷಣ ಆಯುಕ್ತ ಮೇಜರ್ ಹಿರೇಮಠ ಭೇಟಿ

ಧಾರವಾಡ (www.vknews.com) : ಕೊರೋನಾ ಹಿನ್ನೆಲೆಯಲ್ಲಿ ಗುರುವಾರ ಆರಂಭಗೊಂಡ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಭೇಟಿ ನೀಡಿ ಮೊದಲ ದಿನದ ಮಾಹಿತಿ ಪಡೆದುಕೊಂಡರು.

ನಗರದ ಸಪ್ತಾಪೂರದಲ್ಲಿರುವ ಶಾರದಾ ಪ್ರೌಢ ಶಾಲೆ, ಆರ್.ಎಲ್.ಎಸ್. ಸಂಯುಕ್ತ ಪದವಿ-ಪೂರ್ವ ಕಾಲೇಜು, ಕೆ.ಪಿ.ಇ.ಎಸ್. ಪ್ರೌಢ ಶಾಲೆ, ಬಾಸೆಲ್ ಮಿಷನ್ ಬಾಲಕರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿದ್ಯಾಗಿರಿಯ ಜೆ.ಎಸ್.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ನವಲೂರಿನ ಶ್ರೀ ಜಿ.ಜಿ. ದೊಡವಾಡ ಸರಕಾರಿ ಪ್ರೌಢ ಶಾಲೆ, ನವನಗರದ ರೋಟರಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರೌಢ ಶಾಲೆ, ನವನಗರದ ಸರಕಾರಿ ಪ್ರೌಢ ಶಾಲೆ, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆ, ಘಂಟಿಕೇರಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಆಂಗ್ಲೋ-ಉರ್ದು ಪ್ರೌಢ ಶಾಲೆ, ಕೇಶ್ವಾಪೂರದ ಫಾತಿಮಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿಶ್ವೇಶ್ವರನಗರದ ಸರಕಾರಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕೊಠಡಿಗಳನ್ನು ಸಂದರ್ಶಿಸಿ ಪರೀಕ್ಷಾ ವ್ಯವಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿದ್ದನ್ನು ಖಾತ್ರಿ ಪಡಿಸಿಕೊಂಡರು.

ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜೇಷನ್, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ ಧರಿಸುವುದು ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿ ಕೈಕೊಂಡ ಸುರಕ್ಷತಾ ಕ್ರಮಗಳ ಕುರಿತು ಅಗತ್ಯ ಮಾಹಿತಿ ಪಡೆದುಕೊಂಡು ಸುವ್ಯವಸ್ಥಿತವಾಗಿ ಪರೀಕ್ಷಾ ಕಾರ್ಯ ನಡೆದಿದ್ದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಹಾಯಕರು ಹಾಗೂ ಇತರೇ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿ ಪರೀಕ್ಷೆ ಮುಗಿಯುವವರೆಗೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಶ್ರಮಿಸುವಂತೆ ಕೋರಿದರು.

“ಪ್ರತಿ ದಿನವೂ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಒಳಪಡಿಸಿ ಟೆಂಪರೇಚರ್ ಗಮನಿಸಿ, ಸ್ಯಾನಿಟೈಜರ್ ಹಾಕಿ ಮಾಸ್ಕ ಧರಿಸಿಯೇ ಪರೀಕ್ಷಾ ಕೊಠಡಿ ಪ್ರವೇಶಿಸುವಂತೆ ಅಗತ್ಯ ಕ್ರಮಗಳನ್ನು ಕೈಕೊಳ್ಳಬೇಕು. ಯಾವುದೇ ಕಾರಣಕ್ಕೂ ಎಲ್ಲೂ ಕೊರೋನಾ ವೈರಸ್ ಸೋಂಕು ನುಸುಳಲು ಅವಕಾಶ ನೀಡಬಾರದು” ಎಂದು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸಲಹೆ ನೀಡಿದ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪರೀಕ್ಷಾ ಪ್ರಕ್ರಿಯೆಗಳು ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ನಡೆಯುವಂತೆ ಕಾಳಜಿ ವಹಿಸಬೇಕೆಂದು ಅಗತ್ಯ ಸಲಹೆಗಳನ್ನು ನೀಡಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...