ಸಿಎಂ ಪರಿಹಾರ ನಿಧಿ, ಮಾಹಿತಿ ಬಹಿರಂಗ ವಾದ ನಂತರ ಎಚ್ಚೆತ್ತ ಸರಕಾರ : ವೆಲ್ಫೇರ್ ಪಾರ್ಟಿ ಟೀಕೆ

ಬೆಂಗಳೂರು (www.vknews.com) : ಕೋವಿಡ್-19ಗೆ ಸಂಬಂಧಿಸಿದ “ಮುಖ್ಯಮಂತ್ರಿ ಪರಿಹಾರ ನಿಧಿ”ಯಡಿ ಸಂಗ್ರಹವಾಗಿರುವ ಹಣ ಮತ್ತು ಅದರ ಬಿಡುಗಡೆ ವಿಚಾರದಲ್ಲಿ ಸರ್ಕಾರದ ದ್ವಂದ್ವ ನಿಲುವು ಬಗ್ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್, ಕೊನೆಗೂ ಹಣ ಬಿಡುಗಡೆ ಮಾಡಿರುವುದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪಕ್ಷ ಸ್ವಾಗತಿಸುತ್ತದೆ. ಆದರೆ, ಸಿಎಂ ಪರಿಹಾರ ನಿಧಿಯ ಕೋವಿಡ್-19 ಖಾತೆಗೆ ಜೂ.18ರವರೆಗೆ 290 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, ಈ ಹಣವನ್ನು ಆಪತ್ ನಿಧಿ ಎಂದು ಕಾಯ್ದಿರಿಸಲಾಗಿದೆ ಎಂದು ಜೂ.24ರಂದು ಮುಖ್ಯಮಂತ್ರಿಯವರ ಕಚೇರಿ ಮಾಹಿತಿ ನೀಡಿತ್ತು. ವೆಲ್ಫೇರ್ ಪಾರ್ಟಿಯ ವತಿ ಇಂದ ಈ ಮಾಹಿತಿ ಬಹಿರಂಗ ಗೊಳಿಸಿದ ನಂತರ ಇದೀಗ ಸಂಗ್ರಹವಾದ ದೇಣಿಗೆ ಹಣದಲ್ಲಿ 140 ಕೋಟಿ ರೂ.ಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ ಎಂದು ಅದೇ ಮುಖ್ಯಮಂತ್ರಿಯವರ ಕಚೇರಿ ಪ್ರಕಟಣೆ ಹೊರಡಿಸಿದೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯವರ ಕಚೇರಿಯ ಈ ನಡೆ ಅನುಮಾನಕ್ಕೆ ಎಡೆ ಮಾಡಿಕೊಡುವಂತಿದೆ ಎಂದು ಟೀಕಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಸಿಎಂ ಪರಿಹಾರ ನಿಧಿಯಿಂದ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗೆ ನಯಾ ಪೈಸೆ ಖರ್ಚು ಮಾಡದ ಸರ್ಕಾರ,ಪಕ್ಷದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಹಿರಂಗಪಡಿಸಿದ ಬಳಿಕ ರಾಜ್ಯಾದ್ಯಾಂತ ವ್ಯಾಪಕ ಚರ್ಚೆ ನಡೆದ ಮೇಲೆ ಈಗ ಇದ್ದಕ್ಕಿದ್ದಂತೆ 140 ಕೋಟಿ ರೂ. ಆರೋಗ್ಯ ಇಲಾಖೆ ಗೆ ನೀಡಿದೆ. ಆದರೆ, ಈ ಹಣ ಆರೋಗ್ಯ ಇಲಾಖೆಯ ಸಂಬಂಧಪಟ್ಟ ಖಾತೆಗಳಿಗೆ ಜಮೆ ಆಗಿದೆಯೇ ಇಲ್ಲ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಇದು ಸಿಎಂ ಪರಿಹಾರ ನಿಧಿಯ ಖರ್ಚಿನ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟ ಕಲ್ಪನೆ ಮತ್ತು ದೂರದೃಷ್ಟಿ ಇಲ್ಲದಿರುವುದು ಸಾಬೀತುಪಡಿಸುತ್ತದೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಸಾರ್ವಜನಿಕರು, ಸಂಘ-ಸಂಸ್ಥೆಗಳು ವಿಶ್ವಾಸವಿಟ್ಟು ನೀಡಿರುವ ಹಣವನ್ನು ಸರ್ಕಾರ ಅಷ್ಟೇ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯಿಂದ ಖರ್ಚು ಮಾಡಬೇಕು. ಒಂದೊಂದು ಪೈಸೆಯೂ ನಿಗದಿತ ಉದ್ದೇಶಕ್ಕೆ ಬಳಕೆಯಾಗಬೇಕು. ಈಗ ಆರೋಗ್ಯ ಇಲಾಖೆಗೆ ನೀಡಲಾಗಿರುವ 140 ಕೋಟಿ ರೂ. ಹಣ ಕೇವಲ ದಾಖಲೆ ಅಥವಾ ಕಡತಕ್ಕೆ ಮಾತ್ರ ಸೀಮಿತವಾಗಬಾರದು. ಈ ವಿಚಾರದಲ್ಲಿ ಸರ್ಕಾರ ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಡೆದುಕೊಳ್ಳಬೇಕು. ಇಲ್ಲದಿದ್ದರೆ ನಾಡಿನ ಜನತೆಗೆ ವಿಶ್ವಾಸದ್ರೋಹ ಮಾಡಿದಂತಾಗುತ್ತದೆ ಎಂದು ತಾಹೇರ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...