ಎಲೆಮರೆಯಲ್ಲೇ ಉಳಿದ ಯಕ್ಷಗಾನ ಪರಂಪರೆಯ ಜೋಡಾಟದ ಹುಲಿ ಶ್ರೀಯುತ ಬೇಳೆಂಜೆ ಮಹಾಬಲ ನಾಯ್ಕ

(www.vknews.com) : “ರಾಜ ರಾಜದೀಶ ಈ ತೆರದ ಮಗನು ವಾಜಿ ಕಟ್ಟಿದರೇನು ಪರಿಹರಿಸುವೆನು ನಾನು” ಎಂದು ಮಂತ್ರಿ ಸುಬುದ್ಧಿ ಹೇಳುವ ಮಾತನ್ನುಸಣ್ಣ ಕೇಳುವ ಮುಗ್ದ ಬಾಲಕ ಬಬ್ರುವಾಹನ ಆ ಮುಗ್ದತೆ ಪಾತ್ರವನ್ನು ಮಾಡಲು ಎಷ್ಟು ಸರಿ ರಂಗದಲ್ಲಿ ಮಾಡಿದ ಕೀರ್ತಿ ಬೇಳೆಂಜೆ ಮಹಾಬಲ ನಾಯ್ಕರು. ಹೀಗೆ ಕರಾವಳಿಯ ಪ್ರತಿ ಮನೆ ಮನಗಳಲ್ಲಿ ಚಂಡೆಯ ಸದ್ದು, ಮದ್ದಲೆಯ ಸಡಗರ, ಗೆಜ್ಜೆ ನಾದದ ಸಪ್ಪಳ ಇದ್ದೆ ಇರುತ್ತದೆ. ಕಲಾದೇವಿ ಸರಸ್ವತಿ ಎಲ್ಲರ ಮನೆ ಮನೆಯಲ್ಲಿ ನೆಲೆಸಿರುತ್ತಾಳೆ. ಎಂದು ಹೇಳಿದರು ತಪ್ಪಾಗಲಾರದು. ಇಂತಹ ಕಲಾವಿದರ ಮನೆಯಾದ ಬೇಳೆಂಜೆಯ ಮಹಾಬಲ ನಾಯ್ಕರು ಒಬ್ಬರು.

ಕಲೆಯ ನೆಲೆ ಬೀಡಾದ ಕರಾವಳಿ ಜಿಲ್ಲೆ ಉಡುಪಿಯ ಸಮೀಪದ ಆಗುಂಬೆಯ ತಗ್ಗು ಪ್ರದೇಶ ಹೆಬ್ರಿ ತಾಲೂಕಿನ ಬೇಳೆಂಜೆ ಎಂಬ ಪುಟ್ಟ ಊರಿನ ಹೆಸರು ಕೇಳಿದರೆ ನೆನೆಪಾಗುದೆ ಪ್ರಸಿದ್ಧ ಮದ್ದಳೆಗಾರ ತಿಮ್ಮಪ್ಪ ನಾಯ್ಕರು. ಶ್ರೀಯುತ ಬೇಳೆಂಜೆ ತಿಮ್ಮಪ್ಪ ನಾಯ್ಕ ಮತ್ತು ವೇದಾವತಿ ದಂಪತಿಯರ ಮೂರೂ ಜನ ಮಕ್ಕಳಲ್ಲಿ ಮಧ್ಯಮನಾಗಿ 28-05-1958ರಲ್ಲಿ ಜನಿಸಿದ ಮಹಾಬಲ ನಾಯ್ಕರು. ಎಳವೆಯಲ್ಲೇ ಅಪ್ಪನ ಹತ್ತಿರ ಮದ್ದಲೆ ಕಲಿತರು. ತಮ್ಮ ಜಯಂತ ನಾಯ್ಕರು ಪ್ರಮುಖ ಸ್ತ್ರೀವೇಷಧಾರಿಯಾಗಿ ಹೊರ ಹೊಮ್ಮಿದರು. ನಂತರದ ಅಣ್ಣ ಶ್ರೀನಿವಾಸ ನಾಯ್ಕರು ಭಾಗವತರಾಗಿ ಪ್ರಸಿದ್ಧಿ ಪಡೆದರು. ಯಕ್ಷಗಾನ ಕ್ಷೇತ್ರದಲ್ಲಿ ಸಾರ್ಥಕ ಬದುಕು ಸಾಗಿಸಿದ ಬೇಳೆಂಜೆ ತಿಮ್ಮಪ್ಪ ನಾಯ್ಕರು ಮತ್ತು ಶ್ರೀಯುತ ನಾರಾಯಣ ಉಪ್ಪೂರರ ಭಾಗವತಿಕೆಗೆ ಸಾಥ್ ಮದ್ದಲೆಗಾರರಾಗಿ ಜೊತೆಗಾರರಾಗಿ ರಂಗಸ್ಥಳದಲ್ಲಿ ಸಾರ್ಥಕ ಬದುಕನ್ನು ಕಂಡರು. ಮನೆಯಲ್ಲೇ ಯಕ್ಷಗಾನದ ವಾತಾವರಣ ಇದ್ದ ಕಾರಣ ಏಳನೆಯ ತರಗತಿಗೆ ವಿಧಾಯ ಹೇಳಿ, ಯಕ್ಷಗಾನದತ್ತ ಮುಖ ಮಾಡಿದರು. ತಂದೆಯೇ ಮೊದಲು ಗುರುವಾಗಿ ನಂತರ ಉಡುಪಿಯ ಕಲಾಕೇಂದ್ರದಲ್ಲಿ ಗುರು ವೀರಭದ್ರ ನಾಯ್ಕರ ಶಿಷ್ಯನಾಗಿ ನಾಟ್ಯ ಅಭ್ಯಾಸ ಕಲಿತರು.

ಶ್ರೀಯುತರು ಉಡುಪಿಯ ಕೇಂದ್ರದಲ್ಲಿ ಹೆಜ್ಜೆ ಕಲಿತು ನಂತರ ಬಾಲಗೋಪಾಲನಾಗಿ ಪೇರ್ಡೂರು ಮೇಳಕ್ಕೆ ಸೇರಿದರು. ಮೇಳದಲ್ಲಿ ಸರಿಯಾಗಿ ಪೀಠಿಕೆ ವೇಷ ಒಡ್ಡೋಲಗ, ಮುಂಡಾಸುವೇಶ, ಕಶೆ ವೇಷ ಹೀಗೆ ಹಂತ ಹಂತವಾಗಿ ಮೇಲೇರಿದರು. ಮೇಳದಲ್ಲಿ ಹಿರಿಯ ಕಲಾವಿದರಾದ ಬ್ರಹ್ಮಾವರ ಶ್ರೀನಿವಾಸ ನಾಯ್ಕ ಮತ್ತು ಪೇರ್ಡೂರು ರಾಮರ ಅನುಭವದ ಗರಡಿಯಲ್ಲಿ ಪಳಗಿದರು. ನಂತರ ಎಂ. ಎಂ. ಹೆಗಡೆಯವರ ಸಾರಥ್ಯದಲ್ಲಿ ಬಡಗಿನ ಮೇಳವಾದ ಮಾರನಕಟ್ಟೆಯಲ್ಲಿ ಮೂರನೇ ವೇಷಧಾರಿಯಾಗಿ ಸೇರ್ಪಡೆಗೊಂಡರು. ಅಲ್ಲಿ ಸುಮಾರು 8 ವರುಷಗಳ ಕಾಲ ತಿರುಗಾಟ ಮಾಡಿದರು. ಅಲ್ಲದೇ ಹಲವಾರು ಪುಂಡುವೇಷಗಳನ್ನು ಮಾಡಿ ಪ್ರಸಿದ್ಧಿ ಹೊಂದಿದರು. ನಂತರ ಶ್ರೀಯುತ ಶ್ರೀಧರ ಹಂದೆಯವರ ಸಾರಥ್ಯದ ಅಮೃತೇಶ್ವರೀ ಡೇರೆ ಮೇಳದಲ್ಲಿ ಕೆಲವು ವರುಷ ತಿರುಗಾಟ ಮಾಡಿದರು. ಆಗ ಯಕ್ಷಗಾನ ರಂಗತಂತ್ರದ ಅನುಭವಿ ಸುಜ್ಞಾನಿಗಳ ಒಡನಾಟದಿಂದ ಬೇಗ ಪ್ರಸಿದ್ಧಿ ಹೊಂದಿದರು. ದಿ. ನಾರಾಯಣ ಉಪ್ಪೂರು, ಕರಾವಳಿ ಗಾನ ಕೋಗಿಲೆ ಸುಬ್ರಮಣ್ಯ ದಾರೇಶ್ವರರು, ಪದ್ಮಶ್ರೀ ಚಿಟ್ಟಾಣಿ, ವಾಸುದೇವ ಸಾಮಗರು, ಕೋಟ ವೈಕುಂಠ, ನಗರ ಜಗನ್ನಾಥರು, ಶಿರಿಯಾರ ಮಂಜು ನಾಯ್ಕರು, ಹಡಿಬಾಳ ಶ್ರೀಪಾದ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ ಮುಂತಾದ ಹಿರಿಯರ ಒಡನಾಟ ಸಿಕ್ಕಿ ರಂಗದ ನಡೆಯ ಅನುಭವ ಹೊಂದಿದ್ದರು.

ಮಳೆಗಾಲದಲ್ಲಿ ಯಕ್ಷಗಾನದ ದಂತಕಥೆಯಾದ ಕೀರ್ತಿಶೇಷ ಶ್ರೀಯುತ ಗುಂಡ್ಮಿ ಕಾಳಿಂಗ ನಾವುಡರ ಜೊತೆಗೆ ಬೆಂಗಳೂರು, ಮುಂಬಯಿ, ತಿರುಗಾಟಕ್ಕೆ ಹೋಗುತ್ತಿದ್ದರು. ಅಲ್ಲದೆ ಹಿರಿಯ ಸಾಮಗರಾದ ಶಂಕರನಾರಾಯಣ, ವಾಸುದೇವ, ರಾಮದಾಸ, ಲಕ್ಷ್ಮೀನಾರಾಯಣ, ಬಾ ಸಾಮಗರು, ಹೀಗೆ ಪಂಚ ಸಾಮಗರೊಂದಿಗೆ ಮುಂಬಯಿ, ಬೆಂಗಳೂರು ಆಟದಲ್ಲಿ ವೇಷ ಮಾಡಿದ ಕೀರ್ತಿ ಶ್ರೀಯುತ ಮಹಾಬಲ ನಾಯ್ಕರಿಗೆ ಸಲ್ಲುತ್ತದೆ. ಅಲ್ಲದೆ ಬಾ ಸಾಮಗರು “ಬಸ್ರುರೂ ಬಾಗ್ಯ” ಉಡುಪಿದ ಉಡುಪಿ ಉಡುಪ, ಪಂಜುರ್ಲಿ ಪ್ರತಾಪ ಮುಂತಾದ ಪ್ರಸಂಗದಲ್ಲಿ ಮುಂಬಯಿ ಬೆಂಗಳೂರಿನ ತಿರುಗಾಟದಲ್ಲಿ ಜಯಭೇರಿ ಭಾರಿಸಿದ ಪ್ರಸಂಗಗಳಾಗಿದ್ದವು. ಹಾಗೆ ಮಡಾಮಕ್ಕಿ ಮೇಳ, ಹಾಲಾಡಿ ಮೇಳ, ಸೌಕೂರು ಮೇಳದಲ್ಲಿ ತಿರುಗಾಟ ಮಾಡಿದರು. ಶ್ರೀಯುತರು ಪ್ರಸ್ತುತ ಶ್ರೀ ಮಂದರ್ತಿ ಮೇಳದಲ್ಲಿ ಎರಡನೇಯ ವೇಷಧಾರಿಯಾಗಿ ೩೩ನೇ ವರುಷದ ತಿರುಗಾಟ ಮಾಡುತ್ತಿದ್ದರು. ಅಲ್ಲದೇ ಮಂದರ್ತಿ ಮೇಳದಲ್ಲಿ “ಏನಯ್ಯ ಶಲ್ಯ ಭೂಪ ನಿನ್ನಂಗ ಇದೇನಯ್ಯ ಮದನರೂಪ ” ಎನ್ನುವ ಶಲ್ಯ ಕರ್ಣನ ರಥ ಸಾರಥಿಯಾಗಿ ನಾರಾಡಿ ಭೋಜ ಶೆಟ್ಟಿಯವರ ಅಥವಾ ಅಜ್ರಿ ಗೋಪಾಲರ ಕರ್ಣ ಪಾತ್ರದಲ್ಲಿ ಇವರ ಶಲ್ಯನ ಪಾತ್ರವು ಜನ ಮೆಚ್ಚುಗೆ ಪಡೆದಿತ್ತು. ಸುಮಾರು ಸಲ ರಂಗದಲ್ಲಿ ಶಲ್ಯನ ಪಾತ್ರ ಶ್ರೀಯುತರು ಮಾಡಿದ್ದರು.

ಶ್ರೀಯುತರ “ಉತ್ತಮ ಮಣಿಪುರದ ಅರಸ ಚಾವಡಿ ಹತ್ತು ಸಾವಿರ ಕಂಬದಿ” ಎನ್ನುವ ಮಣಿಪುರದ ಅರಸ ಬಬ್ರುವಾಹನನಾಗಿ ವೀರ ಬಬ್ರುವಾಹನ ಪ್ರಸಂಗದಲ್ಲಿ ಕುಣಿದರೆ, “ಸುರಿವ ಕಂಬನಿಯನ್ನು ಕಂಬನಿಯ ಸೆರಗಿನಿಂದೊರಸಿ ಜನನಿಯ ಪಾದದ ರುಜವನನು ಶಿರದೋಳಾಂತು ಪಾರ್ಥನಂದನ” ಎಂಬ ದ್ವಂದಕ್ಕೆ ಸಿಕ್ಕಿ ಸುಭದ್ರೆಯನ್ನು ಸಮಾಧಾನ ಪಡಿಸಿದ ಅಭಿಮನ್ಯುವಿನ ಪಾತ್ರದಲ್ಲಿ, ಮುಂದೆ ವೀರ ಅಭಿಮನ್ಯುವಿನ ಹಿಂದೆ ಬಂದು ಧನಸ್ಸನ್ನು ಕತ್ತರಿಸಿದ ಕರ್ಣನ ಕಡೆಗೆ ನೋಡಿ ” ದೀರನಹುದಹುದೋ ಕರ್ಣನೇ ರಣ ಶೂರನಹುದಹುದೋ” ಎಂದು ಪಚಾರಿಸಿ ಮಾತಾಡಿ ರಥದ ಕಾಲುಗಳನ್ನು ಒದ್ದು ಪುಡಿಮಾಡಿ ಗಾಲಿಗಳನ್ನು ಕಿತ್ತು ವೀರ ವೇಷದಿಂದ “ಕುಟ್ಟಿದಂ ಷಡುರಥರನಡ ಹಾಯ್ದು ಸಮರದೊಳ್ ಗಜರಿ ವೀರಾವೇಷದಿ” ಎಂದು ವೀರ ಅಭಿಮನ್ಯು ಪಾತ್ರದಲ್ಲಿ ದಣಿವಿರದೆ ಕುಣಿದಿದ್ದಾರೆ. ನಂತರ ರತಿ ಕಲ್ಯಾಣದ ಕೌಂಡ್ಲಿಕ, ಮಂದಾರ್ತಿ ಕ್ಷೇತ್ರ ಮಹಾತ್ಮೆಯ ರತ್ನಾಕ್ಯ, ಚಕ್ರ ಚಂಡಿಕಾ ಪ್ರಸಂಗದಲ್ಲಿ ವಿಷ್ಣುವಾದರೆ, “ಪರಮ ಸುಂದರಿ ಕೇಳೆ ನೀ ಯಾರೇ ನಿನ್ನನು ಪೆತ್ತ ದೊರೆಯಾರು ಪೇಳು” ಎಂಬ ಭೀಷ್ಮ ವಿಜಯ ಪ್ರಸಂಗದ ಸಾಲ್ವನಾದರೆ, ಕೀಚಕ ವದೆ ಪ್ರಸಂಗದಲ್ಲಿ “ಸುಲಲಿತಾಂಗಿ ಎನ್ನೋಳಿನಿತು ಕರುಣೆ ಇಲ್ಲವೆನಿತು ನಿನಗೆ” ಎಂಬ ಕೀಚಕನಾಗಿ ರಂಗದಲ್ಲಿ ವಿಜೃಂಭಿಸಿದರು.

ಲವ- ಕುಶ ಎರಡು ಪಾತ್ರ ಬೇರೆ ಬೇರೆ ಸರಿ ಮಾಡಿದರೆ, ಸುಧನ್ವ, ಕೆ. ಪಿ. ಹೆಗಡೆಯರವರು ಭಾಗವತಿಗೆಯ ಮಂದಾರ್ತಿ ಮೇಳದಲ್ಲಿ ಜಾಂಬವಂತ, ಮುಂತಾದ ಪಾತ್ರಗಳು ಪ್ರಸಿದ್ಧಿ ಪಡೆದವು. ಹೀಗೆ ಅಜ್ರಿ ಗೋಪಾಲ, ಮತ್ತು ನಗರ ಜಗನ್ನಾಥ ಶೆಟ್ಟಿಯವರೊಂದಿಗೆ ಇವರ ಶಲ್ಯ ಹಾಗು ಕರ್ಣನ ಪಾತ್ರ ರಂಗದಲ್ಲಿ ಜನ ಮನ ಗೆದ್ದಿತ್ತು. ಎಂ. ಎ . ನಾಯ್ಕ, ಅರಾಟೆ ಮಂಜುನಾಥ, ಮುಂತಾದವರು ಮಂದಾರ್ತಿ ಮೇಳದಲ್ಲಿ ಒಡನಾಡಿಗಳಾಗಿದ್ದರು. ಅಲ್ಲದೆ ಪೇತ್ರಿ ಮಾಧವ ನಾಯ್ಕರು ಇವರ ಸಂಬಂಧಿಕರು ಆಗಿದ್ದರು ರಂಗದಲ್ಲಿ ವೇಷ ಮಾಡಿದರು. ಶ್ರೀಯುತರು ಮಂದಾರ್ತಿ ಮೇಳದಲ್ಲಿ ಸುಮಾರು ೩೩ ವರುಷ ತಿರುಗಾಟದ ಅನುಭವದಲ್ಲಿ ಬಾಗವತರಾದ ದಿವಂಗತ ನಗರ ಸುಬ್ರಮಣ್ಯ ಆಚಾರ್, ಕಿಗ್ಗ ಹಿರಣ್ಯಾಚಾರ್, ಮರಿಯಪ್ಪಾಚಾರ್ ನಲ್ಲೂರ್ ಮುಂತಾದ ಹಿರಿಯ ಭಾಗವತರ ಹಾಡಿಗೆ ಹೆಜ್ಜೆ ಹಾಕಿದ ಕೀರ್ತಿ ಮಹಾಬಲ ನಾಯ್ಕರದ್ದಾಗಿದೆ. ಹೀಗೆ ಬಯಲಾಟದಲ್ಲಿ ಜೋಡಾಟವಾದರೆ ಇವರು ರಂಗದಲ್ಲಿ ಎಲ್ಲಿಲ್ಲದ ಉತ್ಸಾಹಿ ಕಲಾವಿದರಾಗಿ ಮಿಂಚುತ್ತಿದ್ದರು. ತೀರ್ಪುಗಾರರೇ ಬೆರಗಾಗುವಂತೆ ಮಾಡುವ ಜೋಡಾಟದ ಹುಲಿಯೆಂದೇ ಪ್ರಸಿದ್ಧಿಯಾದರು ಶ್ರೀಯುತ ಮಹಾಬಲ ನಾಯ್ಕರು.

ಇಂತಹ ಹಿರಿಯ ಕಿರಿಯ ಕಲಾವಿದರ ಒಡನಾಟ ಹಾಗು ಹಿಂದುಳಿದ ಪರಿಶಿಷ್ಟ ಮರಾಠಿ ಜನಾಂಗದವರಾದ ಮಹಾಬಲ ನಾಯ್ಕರ ಪ್ರತಿಭೆಯನ್ನು ಗುರುತಿಸಿ, ರಾಜ್ಯ ಸರಕಾರದ ರಾಜ್ಯೋತ್ಸವದ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯವರು ಕೊಡುವ ಪ್ರಶಸ್ತಿಗೂ ಇವರ ಹೆಸರು ಗುರುತಿಸಲಿ ಎಂದು ಲೇಖನದ ಮೂಲಕ ಆಶಿಸುತ್ತೇವೆ. ಅಲ್ಲದೆ ತನ್ನ ಶಿಷ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಹಾಗೆ ಬಡ ಕುಟುಂಬದರಾಗಿಯೇ ಇಂದು ಉಳಿದ್ದಿದ್ದಾರೆ. ಪ್ರಸ್ತುತ 62 ವರುಷದ ಈ ಜೀವನವನ್ನು ಶ್ರೀ ಕ್ಷೇತ್ರ ಮಂದಾರ್ತಿ ಮೇಳದಲ್ಲಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ಅಲ್ಲಲ್ಲಿ ಸಂಘಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಸುಮಾರು ಸಾವಿರಕ್ಕೂ ಅಧಿಕ ಸನ್ಮಾನ ಗೌರವವು ಶ್ರೀಯುತರಿಗೆ ಅರಸಿ ಬಂದಿದೆ.

ಶ್ರೀಯುತರು ಬೇಳೆಂಜೆಯ ಪುಟ್ಟ ಮನೆಯಲ್ಲಿ ಮಡದಿ ದೇವಿಯ ಕರ ಪಿಡಿದು ಇರ್ವ ಪುತ್ರಿಯರಾದ ದೀಪ, ಹಾಗು ದಿವ್ಯಾರ ಪಡೆದು, ಕೀರ್ತಿಗೊಬ್ಬ ಮಗನಾದ ದಿವಾಕರ ಇವರೊಂದಿಗೆ ಅಷ್ಟು ಸಿರಿವಂತರಲ್ಲದೆ ಮಾಧ್ಯಮವರ್ಗದ ಪರಿಶಿಷ್ಟ ವರ್ಗದ ಕಲಾವಿದರಾಗಿ ಮನೆಯಲ್ಲಿ ಯಜಮಾನನಾಗಿ ಜೀವಿಸುತ್ತಿದ್ದಾರೆ. ಇಂತಹ ಪ್ರತಿಭೆಯನ್ನು ಸರಕಾರ ಹಾಗು ಅಕಾಡೆಮಿಯವರು ಗುರುತಿಸಿ ಪ್ರಶಸ್ತಿಯನ್ನು ಮುಂದೆ ನೀಡಲಿ ಎಂದು ಅಭಿಮಾನಿಗಳ ಆಶಯ. ಹೀಗೆ ಶ್ರೀಯುತರಿಗೆ ನನ್ನ ಆರಾಧ್ಯ ದೇವರಾದ ಜಗನ್ಮಾತೆ ಚಾರ ಮಹಿಷಮರ್ದಿನಿ ಅಮ್ಮನವರು ಹಾಗು ಕಾಲ ಮಾತೆ ಸರಸ್ವತಿಯು ಮುಂದಿನ ಜೀವನ ಸುಖ ಸಂತೋಷದಿಂದ ಇರಲಿ ಎಂದು ಹಾರೈಸೋಣ.

ಲೇಖನ: ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...