ಜೆದ್ದಾ(www.vknews.in): ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಅಂತರಾಷ್ಟ್ರೀಯ ವಿಮಾನ ರದ್ದತಿ ಕಾರಣ ಹಿಂದಿರುಗಲಾರದೇ ತಾಯ್ನಾಡಿನಲ್ಲಿ ಸಿಲುಕಿ ಕೊಂಡಿರುವ ವಿದೇಶಿಯರ ಹಾಗೂ ಸೌದಿಯಲ್ಲಿದ್ದು ಲಾಕ್ ಡೌನ್ ಕಾರಣ ಇಖಾಮ ನವೀಕರಿಸಲು ಸಾದ್ಯವಾಗದ ವಿದೇಶಿಯರ ಇಖಾಮವನ್ನು ಮೂರು ತಿಂಗಳ ಕಾಲ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ನವೀಕರಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೌದಿ ದೊರೆ ಸಲ್ಮಾನ್ ಆದೇಶಿಸಿದ್ದಾರೆ. ಅದರೊಂದಿಗೆ ರಜೆ ಅವಧಿ ಮೀರಿದ ಹಾಗೂ ರಜೆ ನಿಮಿತ್ತ ತೆರಳಲು ಸಾಧ್ಯವಾಗದೇ ಸೌದಿಯಲ್ಲೇ ಸಿಲುಕಿ ಕೊಂಡಿರುವ ವಿದೇಶಿಯರ ರಜಾ ಅವಧಿಯನ್ನು ಕೂಡ ಮೂರು ತಿಂಗಳ ಕಾಲ ಉಚಿತವಾಗಿ ವಿಸ್ತರಿಸಿ ಕೊಡಲು ಆದೇಶಿಸಲಾಗಿದೆ. ದೊರೆ ಸಲ್ಮಾನ್ ಅವರು ಹೊರಡಿಸಿದ ಆದೇಶಗಳು ಈ ಕೆಳಗಿನಂತಿವೆ:
1. ಸೌದಿ ಅರೇಬಿಯಾದಿಂದ ತಾಯ್ನಾಡಿಗೆ ತೆರಳಿರುವ ವಿದೇಶಿಯರ ಎಕ್ಸಿಟ್ ರಿಎಂಟ್ರಿ ವೀಸಾವನ್ನು ಉಚಿತವಾಗಿ ಮೂರು ತಿಂಗಳಿಗೆ ವಿಸ್ತರಿಸಲಾಗುವುದು ಹಾಗೂ ತಾಯ್ನಾಡಿಗೆ ತೆರಳಿದವರ ಇಖಾಮ ಕಾಲಾವಧಿ ಅವಧಿ ಮೀರಿದ್ದರೆ ಅಂತವರ ಇಖಾಮವನ್ನು ಮೂರು ತಿಂಗಳಿಗೆ ವಿಸ್ತರಿಸುವುದು.
2. ಸೌದಿ ಅರೇಬಿಯಾದಿಂದ ರಜೆ ನಿಮಿತ್ತ ಅಥವಾ ಪೈನಲ್ ಎಕ್ಸಿಟ್ ಮೂಲಕ ತಾಯ್ನಾಡಿಗೆ ತೆರಳಲು ಹೊರಟಿರುವವರ ವೀಸಾ ಕಾಲಾವಧಿ ಮೀರಿದ್ದರೆ ಅಂತವರ ರಿಎಂಟ್ರಿ ಅಥವಾ ಪೈನಲ್ ಎಕ್ಸಿಟ್ ವೀಸಾ ಕಾಲಾವಧಿಯನ್ನು ಮೂರು ತಿಂಗಳಿಗೆ ಉಚಿತವಾಗಿ ವಿಸ್ತರಿಸುವುದು.
3. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದಾಗಿ ಇಖಾಮ ಕಾಲಾವಧಿ ಮೀರಿ ಹೋಗಿದ್ದರೆ ಅಂತವರ ಇಖಾಮವನ್ನು ಪುನಃ ಮೂರು ತಿಂಗಳಿಗೆ ಯಾವುದೇ ಶುಲ್ಕವಿಲ್ಲದೇ ವಿಸ್ತರಿಸುವುದು.
4. ಸೌದಿ ಅರೇಬಿಯಾಕ್ಕೆ ವಿಸಿಟ್ ವೀಸಾದಲ್ಲಿ ಬಂದು ಲಾಕ್ ಡೌನ್ ಕಾರಣದಿಂದಾಗಿ ವೀಸಾ ಅವಧಿ ಮೀರಿದವರ ವೀಸಾ ಕಾಲಾವಧಿಯನ್ನು ಮುಂದಿನ ಮೂರು ತಿಂಗಳಿಗೆ ಉಚಿತವಾಗಿ ವಿಸ್ತರಿಸುವುದು.