(www.vknews.com) : ಸುಳ್ಯದ ಅಝದ್ ವಾಚ್ಸ್ ನ ಬಾಬ ಹಾಜಿಯವರ ಪುತ್ರಿ ಮರಿಯಂ ರಫಾನರವರು ಈ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳಲ್ಲಿ ಶೇಕಡಾ 98% ಅಂಕ ಪಡೆದು ಸುಳ್ಯ ತಾಲೂಕಿಗೆ ಪ್ರಥಮಳಾದಾಗ ನನಗೆ ಆಶ್ಚರ್ಯ ಆಗಲಿಲ್ಲ. ಯಾಕೆಂದರೆ ಮಾರ್ಹೂಂ ಫ್ಯಾನ್ಸಿ ಮಹಮ್ಮದ್ ಹಾಜಿಯವರ ಕುಟುಂಬ ಈ ಹಿಂದೆ ಹಲವಾರು ಪ್ರತಿಭಾನ್ವಿತ ಶಿಕ್ಷಿತರನ್ನು ಸಮುದಾಯಕ್ಕೆ ಸಮರ್ಪಿಸಿದ ಕೀರ್ತಿಯನ್ನು ಹೊಂದಿದೆ. ರಕ್ತಗತವಾಗಿ ಬಂದ ಜ್ಞಾನದಾಹ ಮತ್ತು ಸ್ವಯಂ ಶಿಸ್ತು ಫ್ಯಾನ್ಸಿ ಮೊಹಮ್ಮದ್ ಹಾಜಿಯವರ ಮೊಮ್ಮಗಳು (ಮಗಳ ಮಗಳು) ರಫಾನಾಳ ಸಾಧನೆಯ ಅಡಿಪಾಯ ಎಂದು ನಾನು ಭಾವಿಸುತ್ತೇನೆ. ರಫಾನರ ಸಾಧನೆ ಆ ಕುಟುಂಬದ ಸುಜ್ಞಾನದ ಕೀರಿಟಕ್ಕೆ ಒಂದು ತೂಕದ ಗರಿಯೊಂದನ್ನು ಸೇರಿಸಿದೆ. ಆ ಸಾಧನೆ ಫ್ಯಾನ್ಸಿ ಕುಟುಂಬದ ಬಗ್ಗೆ ನನಗಿದ್ದ ಅಭಿಮಾನ ಮತ್ತು ಗೌರವ ಹೆಚ್ಚಿಸಿತು.
ಧರ್ಮ ನಿಷ್ಠೆ, ತರ್ಕಬದ್ಧ ಮಾತು, ನೇರ ನುಡಿ, ದೂರದೃಷ್ಟಿತ್ವದ ಚಿಂತನೆ, ಕಲಿಕೆಗೆ ಪ್ರೇರಣೆ, ಎಲ್ಲಾ ಹಂತದ ಜನರನ್ನು ಒಂದೇ ರೀತಿ ಕಾಣುವ ಸಮಾನತೆಯ ಹೃದಯ, ಒಪ್ಪಿಕೊಂಡ ಜವಾಬ್ದಾರಿಗೆ ನ್ಯಾಯ ಒದಗಿಸುವ ನಾಯಕತ್ವ ಫ್ಯಾನ್ಸಿ ಹಾಜಿಯವರ ಹಲವು ಗುಣಗಳಲ್ಲಿ ಕೆಲವು. ಸುಳ್ಯದಲ್ಲಿ ಫ್ಯಾನ್ಸಿ ಫೆಬ್ರಿಕ್ಸ್ ಎಂಬ ಪ್ರಥಮ ವಸ್ತ್ರ ಮಳಿಗೆಯನ್ನು ಸ್ಥಾಪಿಸಿದವರು. ಸುಳ್ಯ ಜಮಾಅತ್ ಅಧ್ಯಕ್ಷರಾಗಿ ಹಲವಾರು ವರ್ಷ ಸಾಮಾಜಿಕ ನೇತೃತ್ವ ನೀಡಿ ಸುಳ್ಯದ ಪಾಲಿಗೆ ಸಮುದಾಯದ ಅಂತರ್ಶಕ್ತಿಯನ್ನು ಹೆಚ್ಚಿಸಿದವರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಕೈಕ ಮುಸ್ಲಿಂ ದುರೀಣ. ರೋಟರಿಯಂತಹ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿ ನಾಯಕತ್ವ ನೀಡಿ ಸಮಾಜ ಸೇವೆಗೂ ಸೈ ಎನಿಸಿಕೊಂಡವರು.
ಹಾಜಿಯವರ ಎಲ್ಲಾ ಐದು ಪುತ್ರರೂ ಪಧವೀಧರರು. ಪ್ರಥಮ ಪುತ್ರ ಅಬ್ದುಲ್ ಖಾದರ್ ರವರು 1973 ರಲ್ಲಿ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ B Com ಪದವಿ ಮುಗಿಸಿದ್ದರು. ಇಂದು ಕೂಡ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣಕ್ಕೆ ಮಹತ್ವ ಮತ್ತು ಒತ್ತು ನೀಡದಿರುವಾಗ 50 ವರ್ಷಗಳ ಹಿಂದೆ ಸುಳ್ಯದಿಂದ ಪುತ್ತೂರಿಗೆ ಪ್ರಯಾಣ ಬೆಳೆಸಿ ಪದವಿ ಪಡೆಯುವುದು ಪವಾಡವೇ ಸರಿ. ಖಾದರ್ ರವರು ಸುಳ್ಯ ಜಮಾಅತಿನ ಪ್ರಥಮ ಮುಸ್ಲಿಂ B Com ಪಧವೀಧರ! ಆ ನಂತರ ಫ್ಯಾನ್ಸಿ ಕುಟುಂಬ ನಡೆಸಿದ ಶೈಕ್ಷಣಿಕ ದಿಗ್ವಿಜಯ ಇತಿಹಾಸ. ಎರಡನೇ ಪುತ್ರ ಮುಹಿಯುದ್ದೀನ್ ಫ್ಯಾನ್ಸಿಯವರು 1982 ರಲ್ಲಿ ಸುಳ್ಯದ NMC ಯಲ್ಲಿ ಪದವಿಧರರಾದರು. ಸರ್ಕಾರಿ ಶಿಕ್ಷಕ ವೃತ್ತಿಯನ್ನು ಬಿಟ್ಟು ಸಮಾಜ ಸೇವಾಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸುಳ್ಯ ಮತ್ತು ಆಸುಪಾಸಿನ ವಿದ್ಯಾರ್ಥಿಗಳಿಗೆ ದಶಕಗಳಿಂದ ಮಾರ್ಗದರ್ಶನ ನೀಡಿ ಅವರಿಗೆ ಬೇಕಾಗ ಸಹಾಯವನ್ನು ಸರ್ಕಾರ, ಸರ್ಕಾರೇತರ ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳಿಂದ ಕೊಡಿಸುತ್ತಾ ಬಂದಿದ್ದಾರೆ. ಇನ್ನೋರ್ವ ಪುತ್ರ ಅಬ್ದುಲ್ ಲತೀಫ್ ರವರು 1987 ರಲ್ಲಿ ಯಲ್ಲಿ B A ಪದವಿ ಮುಗಿಸಿ ನಂತರ UPSC ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭಾರತದ ಸೇನೆಗೆ ಆಯ್ಕೆ ಆಗಿದ್ದರು. ವ್ಯಯಕ್ತಿಕ ಕಾರಣದಿಂದ ಸೇವೆಗೆ ಸೇರಲಿಲ್ಲ. ನಾಲ್ಕನೇ ಪುತ್ರ ಅಶ್ರಫ್ ರವರು ಸದ್ಯ ಉಳ್ಳಾಲದಲ್ಲಿ ನೆಲೆಸಿದ್ದು ಮಂಗಳೂರಿನ ಸಂತ ಅಲೋಶಿಯುಸ್ ಕಾಲೇಜಿನಲ್ಲಿ BA ಪದವಿ ಮುಗಿಸಿ PGDPM ಕೋರ್ಸ್ ಮಾಡಿ ಗಲ್ಫ್ ರಾಷ್ಟ್ರದಲ್ಲಿ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಹಾಜಿಯವರ ಕೊನೆಯ ಪುತ್ರ ಸಿರಾಜುದ್ದೀನ್ ರವರು MSW ಪದವೀಧರರು, ವಿದೇಶದಲ್ಲಿ HR ಅಧಿಕಾರಿಯಾಗಿ ಕೆಲಸಮಾಡಿ ಈಗ ಊರಿನಲ್ಲಿ ಇದ್ದಾರೆ. ಫ್ಯಾನ್ಸಿ ಹಾಜಿಯವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹಿಸಿದ್ದರು ಎನ್ನುವುದಕ್ಕೆ ಅವರ ಪುತ್ರಿ ಆಫ್ಸರವರು SSLC ಪೂರೈಸಿದ ಸುಳ್ಯ ಜಮಾಅತಿನ ಪ್ರಥಮ ಮುಸ್ಲಿಂ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಸಾಕ್ಷಿ.
ಹೀಗೆ ಹಲವು ಪ್ರಥಮಗಳನ್ನು ಸಾಧಿಸಿದ ಹಾಜಿಯವರ ನಾವೂರಿನ ಮನೆ ತನ್ನ ಮೂರನೇ ತಲೆಮಾರನ್ನು ಕೂಡ ಅದೇ ದಿಕ್ಕಿನತ್ತ ಕೊಂಡೊಯ್ಯಿತು. ಫ್ಯಾನ್ಸಿ ಹಾಜಿಯವರ ಪ್ರಥಮ ಪುತ್ರಿ ಬೀಫಾತಿಮ್ಮ ರವರ ಮಕ್ಕಳಲ್ಲಿ ಹಲೀಮ ಇಸ್ಮಾಯಿಲ್ ರವರು ಮಂಗಳೂರಿನ ರೋಶನಿ ನಿಲಯದಲ್ಲಿ MSW ಮಾಡಿ ಸುಳ್ಯ ಒಳಗೊಂಡಂತೆ ಹಲವಾರು ಕಡೆ CDPO ಆಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ಸರ್ಕಾರದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೊದಲ ಪುತ್ರ ಖಾದರ್ ರವರು ಸಿವಿಲ್ ಇಂಜಿನಿಯರ್, ಇನ್ನೊಬ್ಬಳು ಮಗಳು ಖೈರುನ್ನೀಸ ಎಂಜಿನಿಯರಿಂಗ್ ಮಾಡಿ ಕೇಂದ್ರ ಸ್ವಾಮ್ಯದ CDOT ನಲ್ಲಿ ಸೀನಿಯರ್ ರಿಸರ್ಚ್ ಇಂಜಿನಿಯರ್ ಆಗಿದ್ದಾರೆ. ಎರಡನೇಯ ಪುತ್ರ ಡಾ. ನಝೀರ್ MBBS, MD ಪುತ್ತೂರಿನಲ್ಲಿ ವೈದ್ಯರಾಗಿದ್ದಾರೆ. ಫ್ಯಾನ್ಸಿ ಖಾದರ್ ರವರ ಮಕ್ಕಳಲ್ಲಿ ಹಿರಿಯವನು ರಫೀಕ್ ನನ್ನ 8 ವರ್ಷಗಳ ಸಹಪಾಠಿ, NMC ಯಲ್ಲಿ ಪದವಿ ವ್ಯಾಸಂಗ ಮಾಡಿದ್ದಾನೆ. ಅಬ್ದುಲ್ ರವೂಫ್ ಇಂಜಿನಿಯರ್ ಮುಗಿಸಿ ಸೌದಿ ಅರೇಬಿಯಾದಲ್ಲಿ ಕಮ್ಯುನಿಕೇಷನ್ ಇಂಜಿನಿಯರ್ ಆಗಿದ್ದಾನೆ, ರಹೀಮ್ ಸುಳ್ಯದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾನೆ.
ಫ್ಯಾನ್ಸಿ ಹಾಜಿಯವರ ಎರಡನೇ ಪುತ್ರಿ ನಫೀಸಾರವರು ಬೈಕಂಪಾಡಿಯಲ್ಲಿದ್ದು ಅವರ ಮಗ ಖಾದರ್ ಶಾ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ರಾಜ್ಯ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಾಗು ದ.ಕ ಹಾಗೂ ಉಡುಪಿ ಜಿಲ್ಲೆಗಳ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೋರ್ವ ಪುತ್ರ ಸಿದ್ದೀಕ್ ರವರು ಎಂಬಿಎ ಪದವೀಧನಾಗಿದ್ದು, ಸೌದಿ ಅರೇಬಿಯಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿದ್ದಾರೆ
ಫ್ಯಾನ್ಸಿಯವರ ಇನ್ನೋರ್ವ ಪುತ್ರಿ ಆಫ್ಸಾರವರ ಪುತ್ರರಿಬ್ಬರು ಇಂಜಿನಿಯರ್ ಗಳು. ಅಫ್ಫಾನ್ ಸಿಪ್ಲಾ ಎಂಬ ಕಂಪನಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿದ್ದಾರೆ. ಸಾಫ್ವಾನ್ ಸಿವಿಲ್ ಇಂಜಿನಿಯರ್. ಮೂರನೇ ಪುತ್ರ ಸಿಫಾ B Com ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ಫ್ಯಾನ್ಸಿ ಲತೀಫ್ ರವರ ಪುತ್ರ ಮೊಹಮ್ಮದ್ ಅಶಿಖ್ MBA ಮುಗಿಸಿ ಈಗ ದುಬೈಯಲ್ಲಿ ಉದ್ಯೋಗದಲ್ಲಿ ಇದ್ದಾನೆ. ಪುತ್ರಿ ಆಯಿಷತ್ ಅಷ್ಫಿಯ KVGEC ಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ.
ನಮ್ಮ ಕಥೆಯ ಕಥಾ ನಾಯಕಿ ಮರಿಯಂ ರಫಾನಾ ಫ್ಯಾನ್ಸಿ ಹಾಜಿಯವರ ಮೂರನೇ ಮಗಳು ಝೋಹರ ರವರ ಪುತ್ರಿ . ಇವರ ಮೊದಲ ಮಗ ಮೊಹಮ್ಮದ್ ರಬಿಯು ಕೂಡ ಸಿವಿಲ್ ಇಂಜಿನಿಯರ್. ಝೋಹರ ಅವರ ಪತಿಯಾಗಿರುವ ಅಬ್ದುಲ್ ರಹಿಮಾನ್ ಹಾಜಿ (ಬಾಬಚ್ಛ) ಸುಳ್ಯದಲ್ಲಿ ಉದ್ಯಮಿ ಮತ್ತು ಝೋಹರ ಆಕೆಯ ಯಶಸ್ವಿನ ಪ್ರೇರಣಾ ಶಕ್ತಿಗಳು. ಮುಂದೆ ವೈದ್ಯೆಯಾಗುವ ಯೋಜನೆಯಲ್ಲಿರುವ ರಫಾನ ತನ್ನ ಯಶಸ್ವಿಗೆ ಕಾರಣರಾದ ಪೋಷಕರು, ಕುಟುಂಬ, ಗುರುಗಳ ಸಹಕಾರವನ್ನು ಸ್ಮರಿಸುತ್ತಾಳೆ. ಶಿಸ್ತುಬದ್ಧ ಜೀವನ ಕ್ರಮ, ನಿರ್ದಿಷ್ಟ ಗುರಿ ಮತ್ತು ಕಲಿಕೆಯ ಮೇಲಿನ ಆಸಕ್ತಿ ಆಕೆಯನ್ನು ಗುರುತಿಸುವಂತೆ ಮಾಡಿದೆ.
ವಿನಯ ವಿದ್ಯೆಗೆ ಭೂಷಣ ಎಂಬಂತೆ ಉತ್ತಮ ಸಂಸ್ಕಾರ, ಮಿತ ಭಾಷೆ, ಸೌಮ್ಯ ಸ್ವಭಾವ, ಸರಳತೆ, ಸಹಕಾರಿ ಮನೋಭಾವ ಈ ಕುಟುಂಬ ಮೈಗೂಡಿಸಿಕೊಂಡಿದೆ. ಈ ಎಲ್ಲಾ ಸಾಧನೆಗಳ ನಡುವೆಯೂ ಫ್ಯಾನ್ಸಿ ಕುಟುಂಬ ಎಲ್ಲಿಯೂ ಕಳಂಕವನ್ನು ತಂದೊಡ್ಡಿಕೊಳ್ಳದಿರುವುದು ವಿಶೇಷತೆ. ಮಾರ್ಹೂಂ ಫ್ಯಾನ್ಸಿ ಮೊಹಮ್ಮದ್ ಹಾಜಿಯವರು ಬಿತ್ತಿ, ಬೆಳಸಿ, ಬಿಟ್ಟು ಹೋದ ಆದರ್ಶತೆಯ ಹೆಮ್ಮರದ ಕೆಳಗೆ ಆ ಕುಟುಂಬ ತಾವೂ ಬೆಳೆದು ಸಮಾಜಕ್ಕೆ ನೆರಳನ್ನು ನೀಡುತ್ತಿದೆ. ಅಲ್ಲಾಹು ಅವರ ಎಲ್ಲಾ ಸತ್ಕಾರ್ಯಗಳನ್ನು ಸ್ವೀಕರಿಸಲಿ, ಇನ್ನೂ ಕುಟುಂಬ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಅನುಗ್ರಹಿಸಲಿ. ಆಮೀನ್
ಇಂತಹ ಒಳಿತಿನ ಬರಹವನ್ನು ನಿರಂತರವಾಗಿ ಬರೆಯಲು ನನಗೆ ಅವಕಾಶಗಳನ್ನು ಸೃಷ್ಟಿಸುತ್ತಾ ಇರುತ್ತಾರೆ ಎಂಬ ಆಶಾಭಾವ ಮತ್ತು ಅಭಿನಂದನೆಗಳೊಂದಿಗೆ ತಾತ್ಕಾಲಿಕ ವಿರಾಮ!
✍️ ಬಶೀರ್ ಅರಂಬೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.