ಅಮೇರಿಕಾದ ಡೈರಿಯ ಪುಟಗಳು: ದೈತ್ಯ ರಾಜ್ಯ ಟೆಕ್ಸಾಸ್ ಮತ್ತು ಅಲ್ಲಿನವರ ತೀರದ ರಾಜ್ಯವ್ಯಾಮೋಹವೂ.!

ಗಿರಿ ಗುಂಜಗೋಡು ಅವರ ಅಮೇರಿಕಾದ ಪ್ರವಾಸ ಬರಹಗಳು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟವಾಗಲಿದೆ.ಅಮೇರಿಕಾಕ್ಕೆ ಹೋಗುವ ಅವಕಾಶ ಸಿಗದವರಿಗೂ ಮನಮುಟ್ಟುವಂತೆ ಬರೆಯುವ ಅಮೇರಿಕಾದ ಡೈರಿಯ ಪುಟಗಳು ವಾರಕ್ಕೆರಡು ಬಾರಿ ಓದುಗರಿಗೆ ಸವಿ ನೀಡಲಿದೆ.

ಹೆಚ್ಚಿನ ಅಮೆರಿಕನ್ನರು ತಮ್ಮ ತಮ್ಮ ರಾಜ್ಯಗಳ ಬಗ್ಗೆ ಹೆಮ್ಮೆಪಡುವುದು ದಿಟವಾದರೂ ಈ ಹೆಮ್ಮೆ ಅತೀ ಹೆಚ್ಚಾಗಿರುವುದು ಟೆಕ್ಸಸ್ ರಾಜ್ಯದವರಲ್ಲಿ ಅಂದರೆ ಟೆಕ್ಸನ್ನರಲ್ಲಿ. ದಶಕಗಳಷ್ಟು ಕಾಲ ಸ್ವತಂತ್ರ ದೇಶವಾಗಿದ್ದ ಕಾರಣಕ್ಕೋ ಏನೋ ತಮ್ಮ ರಾಜ್ಯದ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಇವರಿಗೆ. ನೀವು ಯಾವುದೇ ಪಟ್ಟಣದಲ್ಲಿ ಹತ್ತು ಹೆಜ್ಜೆ ನಡೆದರೆ ಕನಿಷ್ಟ ಐದು ಕಡೆ ಅಮೆರಿಕಾದ ರಾಷ್ಟ್ರಧ್ವಜ ಮತ್ತೆ ಅವರ ರಾಜ್ಯಬಾವುಟ ಕಾಣುವಿರಿ. ಎಲ್ಲೆಲ್ಲಿ ರಾಷ್ಟ್ರಧ್ವಜ ಹಾರಿಸ್ತಾರೋ ಅಲ್ಲೆಲ್ಲಾ ರಾಜ್ಯದಬಾವುಟ ಹಾರಿಸಲೇಬೇಕು ಇವರಿಗೆ. ಹೆಚ್ಚುಕಮ್ಮಿ ನಮ್ಮ ದಕ್ಷಿಣಭಾರತದಷ್ಟು ದೊಡ್ಡದಿರುವ ಈ ದೈತ್ಯ ರಾಜ್ಯಕ್ಕೆ ಒಂಟಿಚುಕ್ಕಿ ರಾಜ್ಯ ಇಲ್ಲ ಲೋನ್ ಸ್ಟಾರ್ ಸ್ಟೇಟ್ ಅಂತಾರೆ. ಇವರ ಬಾವುಟದಲ್ಲಿ ಒಂದು ಚುಕ್ಕಿಯಿರುವುದರಿಂದ ಹೀಗೆನ್ನುವುದು ಅಂದೆನಿಸಿದರೂ ಅನೇಕ ರೀತಿಯಿಂದ ಇವರು ಅಮೆರಿಕಾದೊಳಗೆ ವಿಭಿನ್ನರಾಗಿ ನಿಲ್ಲುವುದೇ ಕಾರಣವಿದ್ದಿರಬಹುದು.

ಆಗಲೇ ಹೇಳಿದಹಾಗೇ ಮಹಾದೈತ್ಯ ರಾಜ್ಯವಾಗಿರುವುದರಿಂದ ಎಲ್ಲದೂ ದೊಡ್ಡದಿರಬೇಕೆನ್ನುವುದು ಇವರ ಖಯಾಲಿ. ಅಂತೆಯೇ ಅಲ್ಲಿ ಬಂದೊಡನೆಯೇ ಅವರ ದೊಡ್ಡದರ ಪ್ರೀತಿ ನಿಮ್ಮ ಗಮನಕ್ಕೆ ಬರುತ್ತದೆ. ಅಗಲ ರಸ್ತೆಗಳು, ವಿಸ್ತಾರವಾದ ಉದ್ಯಾನಗಳು, ವಿಶಾಲ ಮನೆಗಳು ಎಲ್ಲೆಡೆ ಕಾಣುತ್ತವೆ. ಅಷ್ಟು ಮಾತ್ರವಲ್ಲದೆ ಇಲ್ಲಿನ ವಿಶೇಷ ಆಕಳ ತಳಿ ಲಾಂಗ್ ಹಾರ್ನ್, ಇಲ್ಲಿನ ಉಪಾಹಾರಗೃಹಗಳಲ್ಲಿ ಕೊಡುವ ಊಟದ ಪ್ರಮಾಣ, ಇಲ್ಲಿನ ಜನರ ಹೃದಯ ಎಲ್ಲವೂ ದೊಡ್ಡದೇ (ಟೆಕ್ಸಸ್ ಅನ್ನುವ ಶಬ್ದದ ಹುಟ್ಟಾದುದೇ ಗೆಳೆಯ ಎಂಬ ಶಬ್ದದಿಂದ). ಯಾರಾದರರೂ ಸ್ಥಳೀಯ ಹಿರಿಯರ ಹಿಡಿದು ಸ್ವಲ್ಪವೇ ತಲೆತಿಂದರೆ ಅವರ ದೊಡ್ಡದರ ಪ್ರೀತಿಯ ಬಗ್ಗೆ ಸಾಕಷ್ಟು ರಸವತ್ತಾದ ಕತೆಗಳ ಹೇಳ್ತಾರೆ. ಅದಕ್ಕೇ ಅಲ್ಲಿನ ಮೀಮರ್‌ಗಳು ಅವರ ದೊಡ್ಡದರ ಹುಚ್ಚಿನ ಬಗ್ಗೆ ನೂರಾರು ಮೀಮ್‌ಗಳನ್ನ ಸೃಷ್ಟಿಸಿ ಇಟ್ಟಿದ್ದಾರೆ.
ಡಾಲಸ್, ಹ್ಯೂಸ್ಟನ್‌ಗಳಂತ ಮಹಾನಗರಗಳನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳದೇ ಆಸ್ಟಿನ್ ಎಂಬ ಸುರಸುಂದರಿ ನಗರಿಯನ್ನ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲೆಡೆ ಹಸುರಿನಿಂದ ಕಂಗೊಳಿಸುವ, ಚಿಕ್ಕಪುಟ್ಟ ಗುಡ್ಡಗಳು, ಚಂದದ ನದಿ, ಸರೋವರಗಳಿಂದ ಕೂಡಿದ ಈ ಊರಿಗೆ ಹೋದರೆ ಅಷ್ಟು ಸುಲಭಕ್ಕೆ ವಾಪಾಸಾಗಲು ಮನಸ್ಸಾಗುವುದಿಲ್ಲ. ಇಲ್ಲಿನ ರಾಜ್ಯಸೌಧ ವೈಟ್‌ಹೌಸಿಗಿಂತಲೂ ದೊಡ್ಡದು ಅಂತ ಕೊಚ್ಚಿಕೊಳ್ತಾರೆ.

ಮೆಕ್ಸಿಕೋ ಕೊಲ್ಲಿಯಲ್ಲಿ ಅಗಾಧವಾದ ತೈಲ ನಿಕ್ಷೇಪಗಳಿರುವುದರಿಂದ, ದುಬಾರಿ ಕ್ಯಾಲಿಫೋರ್ನಿಯಾದಿಂದ ಕಂಪನಿಗಳನ್ನ ತನ್ನತ್ತ ಎಳೆಯುತ್ತಿರುವುದರಿಂದ ಇವರಿಗೆ ದುಡ್ಡಿಗೇನೂ ಕೊರತೆಯಿಲ್ಲ. ಹಾಗೆ ಸಂಪಾದಿಸಿದ ದುಡ್ಡಲ್ಲಿ ಅರ್ಧ ಭಾಗವನ್ನು ಫ್ಲೈಓವರ್ ಕಟ್ಟೋಕೆ, ರಸ್ತೆ ಮಾಡೋಕೆ ಬಳಸ್ತಾರೆ ಅನ್ನೋದು ನನ್ನ ಧೃಡವಾದ ಅಭಿಪ್ರಾಯ. ಬಹಳ ಉತ್ತಮ ರಸ್ತೆಗಳ ಕಾರಣ ಮತ್ತು ಬಯಲು ಪ್ರದೇಶವಾದ ಕಾರಣ ಉಳಿದೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ವೇಗಮಿತಿ ತುಂಬಾ ಜಾಸ್ತಿ. ಚಚ್ಚಿಕೊಂಡು ಓಡಿಸ್ತಾ ಇರ್ತಾರೆ.

ನೈಸರ್ಗಿಕ ಸೌಂದರ್ಯದ ವಿಷಯದಲ್ಲಿ ಇದು ಸುಮಾರಾಗಿದೆಯಷ್ಟೇ. ಅರೆ ಮರುಭೂಮಿ,ಹುಲ್ಲುಗಾವಲು ಇವುಗಳಿಂದಲೇ ತುಂಬಿದೆ. ಅಲ್ಲಿರೋ ಯಾವ್ದೋ ಒಂದು ದನ‌ ಮೇಯಿಸೋ ಮಾಳ ರೋಡ್ ಐಲೆಂಡ್ ರಾಜ್ಯಕ್ಕಿಂತ ದೊಡ್ಡಕಿದೆ ಅಂತ ಕೊಚ್ಕೋತಾರೆ. ಇಲ್ಲಿ ಸುಂದರ ಸ್ಥಳಗಳು‌ ಖಂಡಿತವಾಗಿಯೂ‌‌ ಇವೆ ಆದರೆ‌ ಕಮ್ಮಿ.ಬರೀ ಸಬ್‌ವೇ, ಕೆಎಫ್‌ಸಿ, ಮೆಕ್ಡಿಗಳೇ ಅಮೆರಿಕಾದ ಆಹಾರ ಸಂಸ್ಕೃತಿಯ ರಾಭಾರಿಗಳೆಂದು ತಿಳಿದವರಿಗೆ ಟೆಕ್ಸ್‌ಮೆಕ್ಸ್ ಅನ್ನೋ ರುಚಿಕರ ಕ್ಯುಸೈನ್ ಇರೋದು ಸ್ವಲ್ಪ ನೆಮ್ಮದಿ ಕೊಡತ್ತೆ.

ಭಾರತೀಯರು ನಿಧಾನಕ್ಕೆ ಇಲ್ಲಿ ಬಂದು ತುಂಬಿಕೊಳ್ತಾ ಇದಾರೆ. ಹೇಗೆ ಪಂಜಾಬಿನ ಪ್ರತಿಮನೆಯಲ್ಲೂ ಒಬ್ಬರು ಕೆನಡಾದಲ್ಲಿರುವರೋ, ಹಾಗೆ ಆಂಧ್ರದ ಪ್ರತಿಮನೆಯವರೂ ಅಮೇರಿಕಾದಲ್ಲಿ ಅದರಲ್ಲೂ ಅಲ್ಲಿಯದೇ ವಾತಾವರಣವಿರುವ ಟೆಕ್ಸಸ್ಸಿನಲ್ಲಿ ಇರಬೇಕೆನ್ನುವುದು ಅಘೋಷಿತ ನಿಯಮ. ಇನ್ನು 15-20 ವರ್ಷಗಳಲ್ಲಿ ತೆಲುಗು ದೇಶಂ ಅಥವಾ ವೈಎಸ್‌ಆರ್ ಕಾಂಗ್ರೆಸ್ ಅಲ್ಲಿ ಅಧಿಕಾರ ಹಿಡಿಯುವ ಎಲ್ಲಾ ಲಕ್ಷಣಗಳಿವೆ.
ಇದೆಲ್ಲಾ ವಿಕಿಪೀಡಿಯಾದಲ್ಲೋ ಇಂಟರ್‌ನೆಟ್ಟಲ್ಲೋ ಸಿಗತ್ತೆ. ಇದು ಬರಿ ಒಂದು ಚಿಕ್ಕ ಓವರ್‌ವ್ಯೂ ಅಷ್ಟೇ. ಇದನ್ನ ಯಾಕೆ ಕೊಡಬೇಕಾಯಿತೆಂದರೆ ಮೇಲೆ ಹೇಳಿದಂತೆ ಈಗ ಅಲ್ಲಿ ಭಾರತೀಯರು ಬಂದು ತುಂಬುತ್ತಿರುವ ಪ್ರಮಾಣ ನೋಡಿದರೆ ನನ್ನ ಫೇಸ್‌ಬುಕ್ ಬಳಗದಲ್ಲಿನ ಮೂರನೇ ಒಂದು ಭಾಗದಷ್ಟು ಜನ ಇನ್ನು 15-20 ವರ್ಷದಲ್ಲಿ ಒಮ್ಮೆಯಾದರೂ ಉದ್ಯೋಗಕ್ಕಾಗಿಯೋ, ಮಗನ‌ ಮನೆಗೋ, ಬಾಳಂತನಕ್ಕೋ, ವಿದ್ಯಾಭ್ಯಾಸಕ್ಕೋ ಇನ್ಯಾವುದೋ ಕಾರಣಕ್ಕಾದರೂ ಭೇಟಿ‌ ಕೊಟ್ಟೇ ಕೊಡ್ತಾರೆ ಅನ್ನೋದು‌ ನನ್ನ ಧೃಡವಾದ ನಂಬಿಕೆ.
* ಈ ಪಟ ತೆಗೆದಿದ್ದು ಟೆಕ್ಸಸ್ ಓಕ್ಲಹೋಮಾ ಗಡಿಯಲ್ಲಿ

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...