ಅಮೇರಿಕಾದ ಡೈರಿಯ ಪುಟಗಳು-2: ಸ್ವಾಯತ್ತತೆಯನ್ನು ಬಳಸಿಕೊಂಡು ದೈತ್ಯವಾಗಿ ಬೆಳೆದ ಟೆಕ್ಸಾಸ್


ನಿಜ ಹೇಳಬೇಕೆಂದರೆ 50 ವರ್ಷಗಳ ಹಿಂದೆ ಪ್ರವಾಸ ಕಥನ ಬರೆಯೋದಕ್ಕೂ ಇಂದು ಬರೆಯೋದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಅದು ನೋಡಿದೆ ಇದು ನೋಡಿದೆ, ಅಲ್ಲಿ ಇದಿದೆ ಅಲ್ಲಿ ಅದಿದೆ ಅಂತ ಬರೆಯುವುದು ಒಂದು ವ್ಯರ್ಥ ಪ್ರಯತ್ನವೇ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.ಯಾಕೆಂದರೆ ಪ್ರತಿ ವಿವರಗಳೂ ಬೆರಳ ತುದಿಯಲ್ಲಿ ಸಿಗುತ್ತವೆ.ಆದರೆ ನಿಜವಾಗಿಯೂ ಬರೆಯಬೇಕಾದ್ದು ಅಲ್ಲದ ಅನುಭವಗಳ ಬಗ್ಗೆ, ಅಲ್ಲಿನ ಜನ ಜೀವನದ ಬಗ್ಗೆ. ಆದರೆ ಪ್ರಮುಖ ಸಮಸ್ಯೆಯೇನೆಂದರೆ ಅಮೆರಿಕಾದಂತ ಶುದ್ಧ ವಲಸಿಗರ ದೇಶದಲ್ಲಿ ಅಲ್ಲಿಯದ್ದೇ ಅಂತ ಬರೆಯೋಕೇ ತುಂಬಾ ಏನೂ ಇರುವುದಿಲ್ಲ. ತೀರಾ ಆಳವಾಗಿ ಅಧ್ಯಯನ ಮಾಡಿದ, ಅತೀವ ಸೂಕ್ಷ್ಮ ಪ್ರಜ್ಞೆಯುಳ್ಳ ಜನ ಮಾತ್ರ ಅದರ ಬಗ್ಗೆ ಸಮರ್ಥವಾಗಿ ಬರೆಯಬಲ್ಲರೇ ವಿನಃ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪೂರ್ವಸಿದ್ಧತೆಯಿಲ್ಲದೇ ಗೀಚುವ ನನ್ನಂಥವರಿಗೆ ಇದು ಸವಾಲಿನ ಕೆಲಸವೇ ಸರಿ.

ಒಂದೇ ಉದಾಹರಣೆ ಕೊಡುತ್ತೇನೆ ನೋಡಿ – ಮೈಸೂರಿನಿಂದ ಚೆನ್ನೈಗೆ ಇರುವ ದೂರ ಸರಿಸುಮಾರು 450 ಕಿಲೋಮೀಟರುಗಳು. ಇಷ್ಟು ದೂರದಲ್ಲಾಗುವ ಭಾಷಾ, ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳನ್ನು ಗಮನಿಸಿ. ಅದೇ ಮೈಸೂರಿನಿಂದ ಲಡಾಖಿಗೆ ಅಜಗಜಾಂತರವಾದ ಭಿನ್ನತೆಗಳಿವೆ. ಅಲ್ಲಿನ ಕತೆ ತೆಗೆದುಕೊಂಡರೆ ಅಮೆರಿಕಾದ ಪಶ್ಚಿಮ ತುದಿಯಾದ ಲಾಸ್ ಎಂಜಿಲಿಸ್ನಿಂದ ಪೂರ್ವದ ಬಾಸ್ಟನ್ನಿಗೆ ಹೆಚ್ಚು ಕಮ್ಮಿ ಶ್ರೀನಗರದಿಂದ ಕನ್ಯಾಕುಮಾರಿಗೆ ಬಂದು ತಿರುಗಾ ಬೆಂಗಳೂರಿಗೆ ಬರುವಷ್ಟು ಅಂತರ. ಆದರೆ ಭಾಷಾ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬದಲಾವಣೆಗಳಲ್ಲಿ ವ್ಯತ್ಯಾಸಗಳಿದ್ದರೂ ನಮ್ಮದಕ್ಕೆ ಹೋಲಿಸಿದರೆ ನಗಣ್ಯ. ಅಲ್ಲಿ ನಮಗೆ ಬೇರೆ ಬೇರೆ ಕಡೆಯಿಂದ ಅಲ್ಲಿಗೆ ಬದುಕ ಕಟ್ಟಿಕೊಳ್ಳ ಬಂದ ಜನರ ಬಗ್ಗೆ ದಂಡಿಯಾಗಿ ಕತೆಗಳು ಸಿಗುತ್ತವೆ‌.ಒಟ್ಟಾರೆ ನನಗೆ ನಾನು ತಿರುಗಾಡಿದ ಅಮೆರಿಕಾದ 14 ರಾಜ್ಯಗಳ ಬಗ್ಗೆ ಅಂತರ್ಜಾಲ ಪ್ರಪಂಚದಲ್ಲಿಲ್ಲದ ವಿಷಯಗಳ ಬಗ್ಗೆ ಹೇಳಲು ಇರುವ ನನ್ನ ಅಸಾಮರ್ಥ್ಯದ ಬಗ್ಗೆ‌ ನಿಮಗೆ ತಿಳಿಸಲು ಇಷ್ಟೆಲ್ಲಾ ಸುತ್ತಿ ಬಳಸಿ ಬರಬೇಕಾಯಿತು.

ಕಳೆದ ಬಾರಿ ಟೆಕ್ಸಸ್ ಬಗ್ಗೆ ಹೇಳ್ತಾ ಇದ್ದೆ. ಅದನ್ನ ಮುಂದುವರೆಸುತ್ತಾ -ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಇದ್ದರೆ ಹೇಗೆ ತಾನು ಅಭಿವೃದ್ಧಿ ಹೊಂದುತ್ತಾ ದೇಶದ ಅಭಿವೃದ್ಧಿಗೂ ಕೊಡುಗೆ ನೀಡಬಹುದು ಎಂಬುದಕ್ಕೆ ಟೆಕ್ಸಸ್ ಕ್ಯಾಲಿಫೋರ್ನಿಯಾ ಮುಂತಾದ ರಾಜ್ಯಗಳು ಉದಾಹರಣೆಯಾಗಿ ನಿಲ್ಲುತ್ತವೆ. ಈ ರಾಜ್ಯ ತನ್ನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಉದ್ದಿಮೆಗಳಿಂದ ಅಗಾಧ ಪ್ರಮಾಣದ ಮೌಲ್ಯವನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ. ನಾನಾಗಲೇ ಹೇಳಿದಂತೆ ಪೆಟ್ರೋಲಿಯಂ ಜೊತೆಗೆ ಇಲ್ಲಿರುವ ಅಮೂಲ್ಯ ಸಂಪತ್ತು ಅಗಾಧವಾದ ಜಾಗ, ಮುಗಿದರೂ ಮುಗಿಯದಷ್ಟಿರುವ ಜಾಗ. ಅದರಲ್ಲೂ ನಗರ ನಿರ್ಮಾಣಕ್ಕೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲಕರವಾದ ಬಯಲು ಭೂಮಿ, ಸಹಸ್ರಾರು ಸಂಖ್ಯೆಯಲ್ಲಿ ಮಾಂಸದ ತಳಿಯ, ಹಾಲಿನ ತಳಿಯ ದನಗಳನ್ನ ಸಾಕಲು ಅನುಕೂಲಕರವಾದ ಹುಲ್ಲುಗಾವಲುಗಳು. ಹೀಗೆ ತನ್ನೆಲ್ಲಾ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳನ್ನ ಬಳಸಿಕೊಂಡು ಕ್ಯಾಲಿಫೋರ್ನಿಯಾ ನಂತರ ಅಮೆರಿಕಾದ ಶಕ್ತಿಶಾಲಿ ರಾಜ್ಯವಾಗಿ ನಿಂತಿದೆ.

ಇಷ್ಟೆಲ್ಲಾ ಅನುಕೂಲತೆಗಳಿರುವ ಈ ರಾಜ್ಯಕ್ಕೆ ಕೆಲ ದೊಡ್ಡ ಮಿತಿಗಳಿವೆ. ಅದೇನೆಂದರೆ ನೈಸರ್ಗಿಕ ವಿಕೋಪಗಳ ಪ್ರಮಾಣ ಬಹಳ ಜಾಸ್ತಿ. ಅದರಲ್ಲೂ ಹ್ಯೂಸ್ಟನ್ನ ಪ್ರದೇಶ ಹರಿಕೀನ್‌ನಿಂದ ಬಹಳ ತೊಂದರೆಗೊಳಗಾಗುತ್ತದೆ. ಪ್ರತಿವರ್ಷ ಅಲ್ಲಾಗುವ ಅನಾಹುತಗಳ ವರದಿಗಳನ್ನು ನೀವು ಓದಿಯೇ ಇರುತ್ತೀರಿ. ಡಾಲಸ್ ಭಾಗವು ಸುಂಟರಗಾಳಿ ಅಥವಾ ಟೋರ್ನಡೋ ಹೊಡೆತಕ್ಕೆ ಸಿಲುಕುವುದು ಜಾಸ್ತಿ. ನೀವು ತೇಜಸ್ವಿಯವರ ಮಿಲೆನಿಯಂ ಸರಣಿ ಲೇಖನಗಳ ಓದಿದ್ದರೆ ಸುಂಟರಗಾಳಿಯ ಅನಾಹುತದ ಕುರಿತು ಹೆಚ್ಚಿನ ಮಾಹಿತಿಗಳು ಸಿಗುತ್ತವೆ. ನಾನು ಡಾಲಸ್‌ನಲ್ಲಿದ್ದಾಗ ಒಮ್ಮೆ ಬಂದಿತ್ತಾದರೂ ಹೆಚ್ಚಿನ ಅನಾಹುತ ಮಾಡದೇ ಹೋಗಿದ್ದು ನಮ್ಮ ಅದೃಷ್ಟ.

ಒಂದು ರಾಜ್ಯವಾಗಿ ಟೆಕ್ಸಸ್ ಬಗ್ಗೆ ಹೇಳಲು ಬಹಳವಿದ್ದರೂ ಸಧ್ಯಕ್ಕೆ ಇಷ್ಟು ಸಾಕು ಅಂತ ಅನ್ನಿಸ್ತಿದೆ.

* ಇದು ಆಸ್ಟಿನ್‌ ನಗರದಲ್ಲಿನ ಟೆಕ್ಸಸ್ ರಾಜ್ಯ ಸೌಧದ ಚಿತ್ರ. ಇದು ಶ್ವೇತಭವನಕ್ಕಿಂತ ದೊಡ್ಡದು ಎಂದು ಟೆಕ್ಸನ್ನರು ಹೆಮ್ಮೆ ಪಟ್ಟುಕೊಳ್ತಾರೆ

ಭಾಗ-1 ರ ಕೊಂಡಿ ಇಲ್ಲಿದೆ:

ಅಮೇರಿಕಾದ ಡೈರಿಯ ಪುಟಗಳು: ದೈತ್ಯ ರಾಜ್ಯ ಟೆಕ್ಸಾಸ್ ಮತ್ತು ಅಲ್ಲಿನವರ ತೀರದ ರಾಜ್ಯವ್ಯಾಮೋಹವೂ.!

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...