ರೋಟರಿ ಕ್ಲಬ್ ಪುತ್ತೂರು ಹಾಗು ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ನಿಂದ ವಿಶ್ವ ಮಧುಮೇಹ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ
ಪ್ರಾಜೆಕ್ಟ್ ಸ್ವೀಟ್ ಚೈಲ್’ ಮತ್ತು ‘ಡಯಾ ಟಾಕ್’ ಯೂಟ್ಯೂಬ್ ವಿಡಿಯೋ ಸರಣಿಗಳ ಉದ್ಘಾಟನೆ
ಪುತ್ತೂರು (www.vknews.com) : ಡಯಾಬಿಟಿಸ್ ಬಗ್ಗೆ ಜನರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸುವುದು ಈ ದಿನಾಚರಣೆಯ ಉದ್ದೇಶ, ಡಯಾಬಿಟಿಸ್ ಒಂದು ಜೀವನ ಶೈಲಿ ಆಧಾರಿತ ರೋಗವಾಗಿದ್ದು, ರೋಗದ ಬಗ್ಗೆ ಸಂಪೂರ್ಣವಾಗಿ ವೈಜ್ಞಾನಿಕವಾದ ಮಾಹಿತಿಯನ್ನು ಅರಿತಿರುವುದರಿಂದ ಮಾತ್ರ ಮಧುಮೇಹ ರೋಗವನ್ನು ನಿಯಂತ್ರಿಸಲು ಅಥವಾ ಬಾರದಂತೆ ತಡೆಗಟ್ಟಲು ಸಾಧ್ಯ ಎಂದು ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್ನ ವೈದ್ಯ ಡಾ.ನಝೀರ್ ಅಹಮ್ಮದ್ರವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು, ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್ ಹಾಗೂ ಇಡಿಆರ್ಟಿ ಬೆಂಗಳೂರು ಇದರ ಆಶ್ರಯದಲ್ಲಿ ನ.೧೪ ರಂದು ರೋಟರಿ ಟ್ರಸ್ಟ್ ಹಾಲ್ನಲ್ಲಿ ಜರಗಿದ ವಿಶ್ವ ಮಧುಮೇಹ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಡಯಾಬಿಟಿಕ್ ಚಿಲ್ಟನ್ಸ್ ಕೇರ್ ಸೆಂಟರ್ನ `ಪ್ರಾಜೆಕ್ಟ್ ಸ್ವೀಟ್ ಚೈಲ್’ ಮತ್ತು ‘ಡಯಾ ಟಾಕ್’ ಯೂಟ್ಯೂಬ್ ವಿಡಿಯೋ ಸರಣಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಧುಮೇಹದ ಕುರಿತಾಗಿ ಮಾತನಾಡಿದರು.
ಸಕ್ಕರೆ ಕಾಯಿಲೆ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವಯೋಮಾನದವರನ್ನು ಕಾಡುತ್ತಿದೆ. ಅದರಲ್ಲೂ ಸುಮಾರು ೫%-೧0% ಟೈಪ್ ೧ ಡಯಾಬಿಟಿಸ್ ಆಗಿರುತ್ತದೆ. ಸಾಧಾರಣವಾಗಿ ಗುಣಪಡಿಸಲು ಅಸಾಧ್ಯವಾದ ಇದು ನವಜಾತ ಶಿಶುವಿನಿಂದ ಹಿಡಿದು ಸುಮಾರು ೨೦ ವರ್ಷ ಪ್ರಾಯದವರಲ್ಲಿ ಕಂಡುಬರುತ್ತದೆ ಎಂದ ಅವರು ಈ ಮಧುಮೇಹಕ್ಕೆ ತುತ್ತಾದ ಮಕ್ಕಳು ತಮ್ಮ ಜೀವನಪರ್ಯಂತ ಇನ್ಸುಲಿನ್ ಇಂಜೆಕ್ಷನ್ ದಿನಕ್ಕೆ ೪ ರಿಂದ ೫ ಬಾರಿ ತೆಗೆದುಕೊಳ್ಳುವುದು ಮಾತ್ರವಲ್ಲದೆ ಪ್ರತಿದಿನ ೨ ರಿಂದ ೩ ಸಲ ತಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಗ್ಲುಕೋಮೀಟರ್ನಿಂದ ಸ್ವತ: ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ತಿಂಗಳಿಗೆ ಸುಮಾರು ೫ರಿಂದ ೧0 ಸಾವಿರದವರೆಗೆ ವೆಚ್ಚವಾಗುವುದಲ್ಲದೆ, ಆಗಿಂದಾಗೆ ಸಕ್ಕರೆಯ ಏರಿಳಿತದಿಂದಾಗಿ ಉಂಟಾಗುವ ಇತರ ಸಮಸ್ಯೆಗಳು ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು. ಇದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಮೂಡಿಸುತ್ತದೆ. ಅಲ್ಲದೆ ದೇಹದಲ್ಲಿನ ಅನಿಯಂತ್ರಿತ ಸಕ್ಕರೆಯ ಅಂಶ ಭವಿಷ್ಯದಲ್ಲಿ ವಿವಿಧ ಅಂಗಾಂಗ ವೈಫಲ್ಯಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ, ೧೯೯೧ರಿಂದ ಪ್ರತಿ ವರ್ಷ ನವೆಂಬರ್ ೧೪ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಲಾಗುತ್ತಿದೆ. ದಿನ `ಇನ್ಸುಲಿನ್’ ಸಂಶೋಧನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನವೂ ಹೌದು. ರೋಟರಿ ಸಂಸ್ಥೆಯು ಪಲ್ಸ್ ಪೋಲೀಯೋ ನಿರ್ಮೂಲನೆಯಂತಹ ಮಹತ್ತರ ಕಾರ್ಯಗಳಿಗೆ ಈಗಾಗಲೇ ನಾಂದಿ ಹಾಡಿರುತ್ತಾರೆ ಅಲ್ಲದೆ ಪುತ್ತೂರಿನಲ್ಲಿ ಜನರಿಗೆ ಉಪಯುಕ್ತವಾದಂತಹ ಬ್ಲಡ್ಬ್ಯಾಂಕ್ನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡಿರುವುದು ಕೂಡ ರೋಟರಿಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಪ್ರೊ| ಝೇವಿಯರ್ ಡಿ’ಸೋಜರವರು ಸ್ವಾಗತಿಸಿ, ಮಾತನಾಡಿ, ಕೆಲವು ದಿನಗಳ ಹಿಂದೆ ವೈದ್ಯರಾದ ಡಾ.ನಝೀರ್ ಅಹಮ್ಮದ್ರವರು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಿದರೇನು ಎಂದು ಹೇಳಿದ್ದಕ್ಕೆ ನಾವುಗಳು ಕೂಡಲೇ ಸ್ಪಂದಿಸಿ ಇಂದು ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಚರಿಸಿರುವುದು ಹೆಮ್ಮೆ ತಂದಿದೆ. ಸಣ್ಣ ಪ್ರಾಯದಿಂದಲೇ ಮಧುಮೇಹದಿಂದ ಬಳಲುತ್ತಿರುವ ಅನೇಕ ಮಕ್ಕಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಭಾವಾನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೇಸರದ ಸಂಗತಿಯಾಗಿದೆ.ಅದಕ್ಕಾಗಿ ಡಯಾಬಿಟಿಕ್ ಚಿಲ್ಟನ್ಸ್ ಕೇರ್ ಸೆಂಟರ್ನ `ಪ್ರಾಜೆಕ್ಟ್ ಸ್ವೀಟ್ ಚೈಲ್’ ಎಂಬ ಯೋಜನೆಯನ್ನು ಶಾಶ್ವತ ಪ್ರಾಜೆಕ್ಟ್ ಆಗಿ ಸಮಾಜಕ್ಕೆ ಅರ್ಪಿಸಲಿದ್ದೇವೆ. ಮಕ್ಕಳನ್ನು, ಪಾಲಕರನ್ನು ಮತ್ತು ಸಮಾಜವನ್ನು ಜಾಗೃತಿಗೊಳಿಸುವುದು ಈ ಪ್ರಾಜೆಕ್ಟ್ ನ ಉದ್ದೇಶವಾಗಿದೆ ಎಂದರು.
ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿರುವ ವಿಷ್ಣು ಕೀರ್ತಿರವರು ಡಯಾ ಟಾಕ್ ವಿಡಿಯೋ ಸರಣಿಗಳನ್ನು ಎಡಿಟಿಂಗ್ ಮಾಡಿದ್ದು, ಈ ಸಂದರ್ಭದಲ್ಲಿ ಅವರು ತನ್ನ ಅನುಭವವನ್ನು ಸಭೆಯ ಮುಂದಿಟ್ಟರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಭುಜಂಗ ಆಚಾರ್ಯ ಉಪಸ್ಥಿತರಿದ್ದರು. ಕ್ಲಬ್ ಸದಸ್ಯ ದಾಮೋದರ್ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ವಾಮನ್ ಪೈ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಪ್ರೊ| ದತ್ತಾತ್ರೇಯ ರಾವ್ ವಂದಿಸಿದರು.
`ಪ್ರಾಜೆಕ್ಟ್ ಸ್ವೀಟ್ ಚೈಲ್’…’ಡಯಾ ಟಾಕ್’ ವಿಡಿಯೋ ಸರಣಿ ಬಿಡುಗಡೆ…
ಮಧುಮೇಹಿ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಲನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ|ನಝೀರ್ ಡಯಾಬಿಟಿಕ್ ಸೆಂಟರ್ ಮತ್ತು ಇಡಿಆರ್ಟಿ ಬೆಂಗಳೂರು ಇವರ ಸಹಯೋಗದೊಂದಿಗೆ ರೂಪುಗೊಳಿಸಲಾಗಿದ್ದು, ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ. ಟೈಪ್ ೧ ಡಯಾಬಿಟೀಸ್ ರೋಗ ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳು ಮತ್ತು ಪೋಷಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ‘ಡಾ. ನಝೀರ್ಸ್ ಡಯಾಬಿಟೀಸ್ ಸೆಂಟರ್ ಯೂಟ್ಯೂಬ್ ಚಾನಲ್ನಲ್ಲಿ ಮೂಡಿಬರಲಿರುವ `ಡಯಾ ಟಾಕ್’ ವಿಡಿಯೋ ಸರಣಿಯ ಬಿಡುಗಡೆಯನ್ನು ಮಧುಮೇಹ ಹೊಂದಿದ ಸಣ್ಣ ಪ್ರಾಯದ ಸಮದ್ರವರು ನೆರವೇರಿಸಿರುವುದು ವಿಶೇಷವಾಗಿದೆ.
ಡಯಾ ಟಾಕ್ ವಿಡಿಯೋ ಕಾರ್ಯಕ್ರಮವನ್ನು drnazeer diabetes centre https://www.youtube.com/channel/UCSIOA1_Ehd7v18 ಯೂಟ್ಯೂಬ್ನಲ್ಲಿ ವೀಕ್ಷಿಸಬಹುದಾಗಿದೆ.
ಕಾರ್ಯಕ್ರಮದ ವಿಶೇಷತೆಗಳು…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.