ಮಂಗಳೂರು (www.vknews.com) : ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಪರಮತ ದ್ವೇಷದ ಪರಮಾವಧಿ ಎಂದು ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ.
ಬೆಳೆದು ಬರುತ್ತಿರುವ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಧರ್ಮದ ಬಾಲಪಾಠ ಹೇಳಿಕೊಟ್ಟು ಅವರನ್ನು ಧರ್ಮಾಧರಿತ ಮತ್ತು ಶಾಂತಿ,ಸೌಹಾರ್ದತೆಯ ಸಹಬಾಳ್ವೆ ನಡೆಸಲು ಕಲಿಸಿ ಅಪ್ರತಿಮ ದೇಶಪ್ರೇಮಿಗಳನ್ನಾಗಿ ಮಾರ್ಪಡಿಸುವ ದೇಶದ ಶಾಂತಿಧಾಮ ಗಳಾದ ಮದ್ರಸಗಳು ಮಾನವೀಯ ಮೌಲ್ಯಗಳ ತಳಹದಿಯಲ್ಲಿ ರೂಪುಗೊಂಡಿವೆ. ಎಲ್ಲೋ ಕೆಲವು ಕಡೆ ನಾಮಧಾರಿಗಳು ಮದರಸ ಹೆಸರಿನಲ್ಲಿ ಏನಾದರೂ ಧರ್ಮದ್ರೋಹಿ,ಸಮಾಜದ್ರೋಹಿ ಚಟುವಟಿಕೆಗಳನ್ನು ಮಾಡಿರಬಹುದು. ಅದನ್ನು ಜಗತ್ತಿನ ಯಾವ ಮುಸ್ಲಿಮರೂ ಒಪ್ಪುವುದಿಲ್ಲ. ನೆರೆಹೊರೆಯವರು ಯಾವ ಧರ್ಮ, ಜಾತಿಯವರಾದರೂ ಅವರಿಗೆ ಆಹಾರ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡುವುದು ಮನುಷ್ಯರ ಕರ್ತವ್ಯ. ಮಾನವ ಸಮುದಾಯಕ್ಕೆ ತೊಂದರೆ ನೀಡುವ ಯಾವುದೇ ವರ್ತನೆ ಮುಸ್ಲಿಮರಿಂದ ಉಂಟಾಗಬಾರದು. ಒಂದು ಪಕ್ಷ ಎಂದ ಮೇಲೆ ಯಾವುದೇ ಒಂದು ಸಮುದಾಯದ ವಿರುದ್ಧ ಇರಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಜನಪ್ರತಿನಿಧಿಯೂ ಆಗಿರುವ ಸಿ.ಟಿ.ರವಿ ಯವರಿಂದ ಇಂಥಾ ಮಾತುಗಳು ಬರಬಾರದು.
ಎಲ್ಲಾ ಪಕ್ಷಗಳು ಎಲ್ಲಾ ಸಮುದಾಯದ ಜನರ ಒಂದು ಒಕ್ಕೂಟದಂತಿರಬೇಕು. ತಮ್ಮ ಸ್ವಾರ್ಥಕ್ಕಾಗಿ ಯಾವುದೇ ಒಂದು ಸಮುದಾಯದ ವಿರುದ್ಧ ಯಾರು ಮಾತನಾಡಿದರೂ ಅದನ್ನು ಒಪ್ಪಿಕೊಳ್ಳಲಾಗದು. ಪ್ರಪಂಚದ ಎಲ್ಲಾ ಜೀವಜಾಲಗಳೊಂದಿಗೆ ಕರುಣೆ ತೋರಬೇಕು ಎಂಬ ಮಾನವೀಯ ತತ್ವಗಳನ್ನು ಬೋಧಿಸುವ ಇಸ್ಲಾಂ ಧರ್ಮದ ಪಾಠಶಾಲೆಗಳಾದ ಮದ್ರಸಗಳ ಕುರಿತು ಸಿ.ಟಿ.ರವಿ ಅವರಿಗೆ ಬಹಳಷ್ಟು ತಪ್ಪು ಕಲ್ಪನೆ ಗಳಿವೆ. ಈ ವಿಷಯವಾಗಿ ನಾನು ಸಿ.ಟಿ.ರವಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಮತ್ತು ಈ ಸಂದೇಶವನ್ನು ಸಿ.ಟಿ.ರವಿ ಅವರಿಗೆ ತಲುಪಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಮದ್ರಸ ಅಧ್ಯಾಪಕರೂ ಆಗಿರುವ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.