(www.vknews.com) : ಮುಂದುವರಿಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿರುವ ಏಷ್ಯಾದ ಒಂದು ರಾಷ್ಟ್ರವಾಗಿದೆ ಸೌದಿ ಅರೇಬಿಯಾ. ಗಲ್ಫ್ ರಾಷ್ಟ್ರಗಳ ಪೈಕಿ ಅತೀ ಶ್ರೀಮಂತ ರಾಷ್ಟ್ರ ಮಾತ್ರವಲ್ಲ ಮಕ್ಕಾ ಮದೀನಾದಂತಹ ಪುಣ್ಯ ಭೂಮಿಯನ್ನು ಹೊಂದಿರುವ ರಾಷ್ಟ್ರವಾಗಿದೆ. ವಿಶ್ವದ ಮೂಲೆಗಳಿಂದ ಈ ರಾಷ್ಟ್ರಕ್ಕೆ ಉದ್ಯೋಗಕ್ಕಾಗಿ ಬರುವ ಮುಸಲ್ಮಾನರು ಎರಡು ಮಹಾನ್ ಉದ್ದೇಶಗಳನ್ನಿಟ್ಟು ಇಲ್ಲಿಗೆ ಬರುತ್ತಾರೆ. ಮೊದಲನೆಯದು ಪವಿತ್ರ ಕಅಬಾಲಯದ ದರ್ಶನ ಹಾಗೂ ಪುಣ್ಯ ಮದೀನಾದ ಸಂದರ್ಶನವಾಗಿದ್ದರೆ, ಎರಡನೆಯದು ಇಲ್ಲಿನ ಹಲಾಲ್ ಆದ ಹಣದಿಂದ ತನ್ನು ಕುಟುಂಬವನ್ನು ಸಲಹುವ ಉದ್ದೇಶ.
ವಿಶ್ವದಲ್ಲೇ ಅತೀ ವೇಗವಾಗಿ ಸಂಪದ್ಭರಿತ ರಾಷ್ಟ್ರವಾಗಿ ಬದಲಾದ ದೇಶವಾದ ಸೌದಿ ಅರೇಬಿಯಾದ ಇತಿಹಾಸದ ಕುರಿತು ತಿಳಿದು ಕೊಳ್ಳೋಣ. 30 ವರ್ಷಗಳ ತನ್ನ ಸತತ ಪ್ರಯತ್ನದ ಫಲವಾಗಿ 1932ನೇ ಸೆಪ್ಟಂಬರ್ 23ರಂದು ನಾಲ್ಕು ಪ್ರಾಂತಗಳಾಗಿ ಹಂಚಿ ಹೋಗಿದ್ದ ನಜದ್, ಹೆಜಾಝ್, ಅಲ್ ಹಸ್ಸಾ ಒಳಗೊಂಡ ಪೂರ್ವ ಅರೇಬಿಯಾ ಹಾಗೂ ಜಿಝಾನ್ ಒಳಗೊಂಡ ದಕ್ಷಿಣ ಅರೇಬಿಯಾಗಳನ್ನು ಒಗ್ಗೂಡಿಸಿ ‘ಸಂಯುಕ್ತ ಸೌದಿ ಅರೇಬಿಯಾ ಸಂಸ್ಥಾನ’ ವನ್ನು ಸ್ಥಾಪಿಸಿದವರೇ ದೊರೆ ಅಬ್ದುಲ್ ಅಝೀಝ್ ಅಲ್ ಸೌದ್. ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಸಂಯುಕ್ತ ಸೌದಿ ಅರೇಬಿಯಾವು ಯಾವುದೇ ವರಮಾನಗಳಿಲ್ಲದೇ ಬಹಳ ಸಂಕಷ್ಟದಲ್ಲಿತ್ತು. 1938ನೇ ಮಾರ್ಚ್3 ರಂದು ಯಾವಾಗ ತೈಲ ನಿಕ್ಷೇಪಗಳು ಸೌದಿ ಅರೇಬಿಯಾದಲ್ಲಿ ಪತ್ತೆಯಾಯಿತೋ, ಅಂದಿನಿಂದ ಸೌದಿಯು ವಿಶ್ವದ ಸಂಪದ್ಭರಿತ ದೇಶಗಳಲ್ಲೊಂದಾಯಿತು. ತದನಂತರ ಹಿಂದಿರುಗಿ ನೋಡದ ಈ ಮರುಭೂಮಿಯ ನಾಡು ಫಹದ್ ಬಿನ್ ಅಬ್ದುಲ್ ಅಝೀಝ್ ಆಡಳಿತದಲ್ಲಿ ಬಹಳ ವೇಗವಾಗಿ ಮುಂದುವರಿಯ ತೊಡಗಿತು. ಒಟ್ಟು 32 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಸೌದಿ ಅರೇಬಿಯಾದಲ್ಲಿ ಸರಿಸುಮಾರು 11 ಮಿಲಿಯನ್ ವಿದೇಶಿ ಕಾರ್ಮಿಕರಿದ್ದಾರೆ. ತನ್ನ ಬಳಿ ಉದ್ಯೋಗವನ್ನು ಅರಸಿ ಬರುವ ವಿದೇಶಿಯರಿಗೆ ಆಶ್ರಯ ನೀಡುವುದು ಈ ಪುಣ್ಯಭೂಮಿಯ ವೈಶಿಷ್ಟ್ಯಗಳಲ್ಲೊಂದಾಗಿದೆ. ಮಕ್ಕಾ ಹಾಗೂ ಮದೀನಾದ ಎರಡು ಪವಿತ್ರ ಮಸೀದಿಗಳು ಒಳಗೊಂಡಿರುವ ಸೌದಿ ಅರೇಬಿಯಾದಲ್ಲಿ ಆಡಳಿತ ನಡೆಸುವ ರಾಜನನ್ನು ‘ಎರಡು ಮಸೀದಿಗಳ ಮೇಲ್ವಿಚಾರಕ’ ಎಂದು ಕರೆಯುವುದು ವಾಡಿಕೆಯಾಗಿದೆ. ಇಸ್ಲಾಮಿನ ಶರಿಯತ್ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸುವ ವಿಶ್ವದ ಒಂದು ರಾಷ್ಟ್ರವಾಗಿದೆ ಸೌದಿ ಅರೇಬಿಯಾ.
ಇಂದು ಈ ಗಲ್ಫ್ ರಾಷ್ಟ್ರಕ್ಕೆ 91 ನೇ ಹುಟ್ಟುಹಬ್ಬದ ಸಂಭ್ರಮ. ನಮ್ಮ ಜನ್ಮಭೂಮಿಯಾದ ಭಾರತವನ್ನು ನಾವುವ ಹೇಗೆ ಗೌರವಿಸುತ್ತೇವೆಯೋ ಅದೇರೀತಿ ನಮಗೆ ಅನ್ನ ನೀಡಿದ ಕರ್ಮಭೂಮಿಯಾದ ಸೌದಿ ಅರೇಬಿಯಾವನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ನನ್ನಂತಹ ಅದೆಷ್ಟೋ ಪ್ರವಾಸಿಗಳಿಗೆ ಜೀವನದ ಪಾಠವನ್ನು ಕಲಿಸಿಕೊಡುವುದರೊಂದಿಗೆ ಬದುಕಿನ ದಾರಿಯನ್ನು ಕರಣಿಸಿದ ಈ ಮರುಭೂಮಿಯ ನಾಡಿಗೆ 91ನೇ ರಾಷ್ಟ್ರೀಯ ದಿನದ ಶುಭಾಶಯಗಳು.
-ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.