ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ಪಟ್ಟಣ್ಣದ ಸರ್ಕಾರಿ ಮಾದರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸಾಹಿತ್ಯ ಬಳಗದ ಪ್ರಮುಖರಾಗಿ, ಓದುಗರ ಉತ್ತಮ ಒಡನಾಡಿಗಳಾಗಿ, ಸದಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಚಿರಪರಿಚಿತರಾಗಿದ್ದ ಕುಂತೂರು ಚಂದ್ರಪ್ಪನವರ ಮೊದಲ ವರ್ಷದ ಪುಣ್ಯಸ್ಮರಣೆ ನೆನಪಿನಲ್ಲಿ “ಕುಂತೂರು ಚಂದ್ರಪ್ಪ ಒಂದು ನೆನಪು” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಹಿತಿಗಳು ಎಂದೆಂದಿಗೂ ಚಿರಂಜೀವಿಗಳು. ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಉತ್ತಮವಾದಂತಹ ಕೊಡುಗೆಯನ್ನು ನೀಡುವಂತಹ, ಯಾವುದೇ ಸಾಹಿತಿಗೆ ಅಥವಾ ಕಲಾ ಪ್ರತಿಭೆಯನ್ನು ಹೊಂದಿರುವ ಕಲಾವಿದನಿಗೆ ಸಾವಿಲ್ಲ. ಅವರು ತಮ್ಮ ಪ್ರತಿಭೆ ಸಾಧನೆಯ ಮೂಲಕ ಸಮಾಜದಲ್ಲಿ ಚಿರಂತನವಾಗಿ ಇರುತ್ತಾರೆ. ಅಂತಹವರಲ್ಲಿ ಕುಂತೂರು ಚಂದ್ರಪ್ಪ ರವರೂ ಒಬ್ಬರು” ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ವಿ. ಹನುಮಂತಯ್ಯ ಅವರು ತಿಳಿಸಿದರು.
ಅವರು ಮಾಲೂರಿನ ಸಾಹಿತ್ಯ ಬಳಗದಿಂದ ಸ್ಥಳೀಯ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಕುಂತೂರು ಚಂದ್ರಪ್ಪ ಒಂದು ನೆನಪು” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
” ಕುಂತೂರು ಚಂದ್ರಪ್ಪ ರವರು ಸರಳ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದವರು. ಕನ್ನಡ ಸಾಹಿತ್ಯ, ಕಾವ್ಯ, ಪತ್ರಿಕೆ, ಕಲಾಮಾಧ್ಯಮ, ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಪರಿಚಾರಿಕೆಯಿಂದ ನಿತ್ಯ ನಿರಂತರ ಸೇವೆ ಮಾಡಿದವರು. ಅವರ ಅಗಲಿಕೆ ಮಾಲೂರಿನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ” ಎಂದು ವಕೀಲರಾದ ಕೆ ಮುನಿಕೃಷ್ಣಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಜಯಮಂಗಲ ಚಂದ್ರಶೇಖರ್, ಮಾಸ್ತಿ ಕೃಷ್ಣಪ್ಪ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ದಾ.ಮು. ವೆಂಕಟೇಶ್, ಮಾ.ಚಿ. ನಾಗರಾಜ್, ಎನ್.ಸಿ.ಚಂದ್ರಪ್ಪ, ಗುಲ್ಜಾರ್, ಲಕ್ಷ್ಮಿಕಾಂತ್ ಮುಂತಾದವರು ಭಾಗವಹಿಸಿದ್ದರ್. ದಿವಂಗತ ಕುಂತೂರು ಚಂದ್ರಪ್ಪ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.