ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ):ಉಡುಪಿ ಮಿಷನ್ ಕಾಂಪೌ೦ಡ್ ಬಳಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ 56 ಮನೆಗಳನ್ನು ಒಳಗೊಂಡ ನೂತನ ಪೊಲೀಸ್ ವಸತಿ ಸಮುಚ್ಛಯವನ್ನು ರಾಹ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಉದ್ಘಾಟಿಸಿದರು. ರಾಜ್ಯದಲ್ಲಿ ಗೃಹ ಇಲಾಖೆ ವತಿಯಿಂದ 2025 ರೊಳಗೆ 10000 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 200 ಕೋಟಿ ರೂ ವೆಚ್ಚದಲ್ಲಿ 100 ನೂತನ ಪೊಲೀಸ್ ಠಾಣೆಗಳ ನಿರ್ಮಾಣ ಹಾಗೂ 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಬಲವರ್ಧನೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕ್ರೈಮ್ ಸೀನ್ ಅಧಿಕಾರಿಗಳ ನೇಮಕಾತಿ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಇಲಾಖೆಯಲ್ಲಿ ಅಳವಡಿಸಿದ್ದು, ಸೈಬರ್ ಅಪರಾಧಗಳನ್ನು ಪತ್ತೆ ಮಾಡಲು ಬ್ಯಾಂಕ್ ಗಳೊಂದಿಗೆ ಒಪ್ಪಂದ ಆಗಿದ್ದು,ಹಣ ಕಳೆದುಕೊಂಡು ವ್ಯಕ್ತಿ 1-2 ಗಂಟೆಯೊಳಗೆ ದೂರು ನೀಡಬೇಕು , ತಕ್ಷಣದಲ್ಲಿ ಲಿಖಿತ ದೂರು ನೀಡಲು ಸಾಧ್ಯವಾಗದಿದ್ದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ದೂರು ಸಲ್ಲಿಸಬಹುದು,ಸಾರ್ವಜನಿಕರು ಪೊಲೀಸ್ ಇಲಾಖೆಯ ನೆರವು ಅಗತ್ಯವಿದ್ದಲ್ಲಿ 112 ಗೆ ಕರೆ ಮಾಡುವಂತೆ ಸಚಿವರು ಹೇಳಿದರು.ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸುವಾಗ ಅಗ್ನಿಶಾಮಕ ಇಲಾಖೆಯ ನಿರಪೇಕ್ಷಣಾ ಅನುಮತಿ ಪತ್ರ ಮತ್ತು ಕಟ್ಟಡ ಮುಕ್ತಾಯಗೊಂಡಾಗ ಕ್ಲಿಯರೆನ್ಸ್ ಪತ್ರ ಪಡೆಯುವುದು ಕಡ್ಡಾಯ ಎಂದ ಸಚಿವರು,ಮಾದಕ ವಸ್ತುಗಳ ನಿಯಂತ್ರಣ ಇಲಾಖೆಗೆ ದೊಡ್ಡ ಸವಾಲಾಗಿದ್ದು,ಸಾರ್ವಜನಿಕರು ಈ ಬಗ್ಗೆ ಮಾಹಿತಿಗಳನ್ನು ಇಲಾಖೆಗೆ ನೀಡಬೇಕು,ರಾಜ್ಯದಲ್ಲಿ ಎಫ್.ಎಸ್.ಎಲ್ ಲ್ಯಾಬ್ ನ್ನು ಅತ್ಯಾಧುನಿಕವಾಗಿ ಸಿದ್ದಪಡಿಸಿದ್ದು, ಸೈಬರ್ ಕ್ರೈಮ್ ತನಿಖೆ ಕುರಿತಂತೆ ಗುಜರಾತ್ ಸರ್ಕಾರದೊಂದಿಗೆ ಎಂಓಯು ಮಾಡಿಕೊಂಡಿದ್ದು,ರಾಜ್ಯದ ಸಿಬ್ಬಂದಿಗಳನ್ನು ಅಲ್ಲಿಗೆ ತರಬೇತಿಗಾಗಿ ಕಳುಹಿಸಲಾಗುವುದು ಎಂದರು.ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿದ್ದು, ಮಧ್ಯವರ್ತಿಗಳನ್ನು ನಂಬಿ ಯಾರೂ ಮೋಸ ಹೋಗಬೇಡಿ, ಇಂತಹ ಮಧ್ಯವತಿಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಹೇಳಿದರು.ಉಡುಪಿಯ ಮಣಿಪಾಲದಲ್ಲಿ ನೂತನ ಅಗ್ನಿಶಾಮಕ ಠಾಣೆಗೆ ಮಂಜೂರಾತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ನಗರದಲ್ಲಿ ಪೊಲೀಸರಿಗೆ ವಸತಿಗೃಹಗಳ ಕೊರತೆ ಇಲ್ಲ ,ದೊಡ್ಡಣಗುಡ್ಡೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿಗೃಹಗಳನ್ನು ನೆಲಸಮ ಮಾಡಿ,ಸಮುಚ್ಛಯ ಮಾದರಿಯಲ್ಲಿ ನೂತನ ಗೃಹಗಳ ನಿರ್ಮಾಣ, ಶ್ರೀಕೃಷ್ಣಮಠದಲ್ಲಿ ಪೊಲೀಸ್ ಔಟ್ಪೋಸ್ಟ್ ನಿರ್ಮಾಣ ಮತ್ತು ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆಗೆ ಮಂಜೂರು ನೀಡುವಂತೆ ಕೋರಿದರು.ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ,ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್,ಎ.ಎನ್.ಎಫ್ ಹಾಗೂ ಕರಾವಳಿ ಕಾವಲು ಪಡೆ ಎಸ್ಪಿ ನಿಖಿಲ್ ಉಪಸ್ಥಿತರಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ವಾಗತಿಸಿದರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ವಂದಿಸಿದರು. ಮನಮೋಹನ್ ರಾವ್ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.