ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ತನ್ನ ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ವ್ಯಕ್ತಿಗಳ ಜೀವನಕ್ಕೆ ಬೆಳಕನ್ನು ನೀಡಬಹುದು . ಆದ್ದರಿಂದ ಕಣ್ಣುಗಳ ರಕ್ಷಣೆ ಮತ್ತು ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ತಿಳಿಸಿದರು .
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 22 ನೇ ವಿಶ್ವ ದೃಷ್ಟಿ ದಿನ ಕಾರ್ಯಕ್ರಮದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು .
ಮಾನವನ ದೇಹದ ಪ್ರತಿಯೊಂದು ಅಂಗವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ . ಅದರಲ್ಲಿ ಕಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ . ಕಣ್ಣನ್ನು ರಕ್ಷಿಸಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸಬೇಕು . ಕಣ್ಣುಗಳನ್ನು ಪದೇ ಪದೇ ಮುಟ್ಟಬಾರದು . ಟಿ.ವಿ , ಮೊಬೈಲ್ , ಕಂಪ್ಯೂಟರ್ಗಳನ್ನು ಬಳುಸುವುದನ್ನು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದರು .
ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಾದ ಡಾ || ಎನ್.ಸಿ. ನಾರಾಯಣಸ್ವಾಮಿ ಅವರು ಮಾತನಾಡಿ ಕಣ್ಣು ಪಂಚೇಂದ್ರಿಯಗಳಲ್ಲಿ ಬಹಳ ಮುಖ್ಯವಾದ ಅಂಗ , ಪ್ರತಿಯೊಬ್ಬರು ಪ್ರಪಂಚ ಮತ್ತು ಪ್ರಕೃತಿಯ ಸೊಬಗನ್ನು ಸವಿಯಲು ದೃಷ್ಟಿ ಬಹಳಷ್ಟು ಮುಖ್ಯ ಕಣ್ಣಿನ ಸೋಂಕು , ವಿಟಮಿನ್ – ಎ ಕೊರತೆ , ಅಪೌಷ್ಠಿಕತೆ , ಕಣ್ಣಿಗೆ ಗಾಯಗಳಾದಾಗ , ಅನುವಂಶಿಕ ಕಾಯಿಲೆಗಳಿಂದ , ಪಟಾಕಿ ಸಿಡಿಸುವ ಸಂದರ್ಭದಲ್ಲಿ ಹಾಗೂ ಮೊಬೈಲ್ , ಟಿ.ವಿ , ಹಾಗೂ ಕಂಪ್ಯೂಟರ್ ಹೆಚ್ಚಾಗಿ ಬಳಸುವುದರಿಂದ ಕಣ್ಣಿನ ದೃಷ್ಟಿ ಹೀನವಾಗುತ್ತದೆ ಎಂದು ಅವರು ತಿಳಿಸಿದರು .
ಸಣ್ಣ ಮಕ್ಕಳಲ್ಲಿ ಶಾಲೆಗಳಲ್ಲಿ ಕಣ್ಣಿನ ತಪಾಸಣೆ ಮಾಡಿ ಸುಮಾರು 1500 ರಿಂದ 2000 ಮಕ್ಕಳಿಗೆ ಕಣ್ಣಿನ ಸಮಸ್ಯೆ ಕಂಡು ಬಂದಿದೆ . ಹಿರಿಯ ವಯಸ್ಸಿನವರಲ್ಲಿ ಸುಮಾರು 2000 ಜನರಲ್ಲಿ ಕಣ್ಣಿನ ಸಮಸ್ಯೆ ಕಂಡು ಬರುತ್ತಿದೆ . ದೃಷ್ಟಿ ಸಮಸ್ಯೆಗಳನ್ನು ತಡೆಯಲು ಪೌಷ್ಠಿಕ ಆಹಾರ ಸೇವಿಸಬೇಕು . ಧೂಮಪಾನ ಮಾಡಬಾರದು , ಕಣ್ಣುಗಳನ್ನು ಮುಟ್ಟುವ ಮುನ್ನ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು ಹಾಗೂ ಕಂಪ್ಯೂಟರ್ ಉಪಯೋಗಿಸುವವರು ಪ್ರತಿ 20ನಿಮಿಷಕ್ಕೊಮ್ಮೆ ಪರದೆಯಿಂದ ಕನಿಷ್ಠ 20 ಸೆಕೆಂಡ್ಗಳ ಕಾಲ ತಮ್ಮ ದೃಷ್ಟಿಯನ್ನು ಬೇರೆ ಕಡೆ ಹರಿಸಬೇಕು . 40 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಆಸ್ಪತ್ರೆಗೆ ಭೇಟಿ ಕೊಟ್ಟು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು .
ಈ ಕಾರ್ಯಕ್ರಮದಲ್ಲಿ ಕಣ್ಣಿನ ಮಹತ್ವದ ಬಗ್ಗೆ ಹಾಗೂ ಕಣ್ಣಿನ ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಹಾಗೂ ಹಳ್ಳಿಗಳಲ್ಲಿ ಪ್ರತಿ ಮನೆಗೂ ಆಶಾ ಕಾರ್ಯಕರ್ತೆಯರು , ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿ ಕಣ್ಣಿನ ದೃಷ್ಟಿ ತೊಂದರೆ ಇರುವವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುವುದು ಎಂದು ಅವರು ತಿಳಿಸಿದರು .
ಈ ಸಂದರ್ಭದಲ್ಲಿ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು . ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಉಕೇಶ್ ಕುಮಾರ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಚಂದನ್ , ಆರ್.ಸಿ.ಎಚ್ . ಅಧಿಕಾರಿಗಳಾದ ಡಾ || ವಿಜಯಕುಮಾರಿ , ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರೇಮ ಸೇರಿದಂತೆ ಮತ್ತಿತರರು ಹಾಜರಿದ್ದಾರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.