ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ದೈವಕೃಪೆಯಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು , ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅಗತ್ಯವಾದ ಸಾಲ ಸೌಲಭ್ಯ ಒದಗಿಸುವ ಮೂಲಕ ಅನ್ನದಾತನ ನೆರವಿಗೆ ನಿಲ್ಲಲು ಡಿಸಿಸಿ ಬ್ಯಾಂಕ್ ಸಂಕಲ್ಪ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು .
ನಗರದ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ವಿಜಯದಶಮಿ ಅಂಗವಾಗಿ ನಡೆದ ಆಯುಧಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು . ಬ್ಯಾಂಕ್ ಅಭಿವೃದ್ಧಿಯ ಮೂಲಕ ೧೫ ವರ್ಷಗಳ ಹಿಂದೆ ಸಹಕಾರಿ ತತ್ವಗಳಲ್ಲಿ ಜಿಲ್ಲೆಯ ಜನತ ಕಳೆದುಕೊಂಡಿದ್ದ ನಂಬಿಕೆ ಮತ್ತೆ ಪುನರ್ಸ್ಥಾಪಿಸಿದ ಹೆಮ್ಮೆ ಇದೆ , ಅವಿಭಜಿತ ಜಿಲ್ಲೆಯ ಪ್ರತಿ ರೈತಕುಟುಂಬಕಕ್ಕೂ ನೆರವಾಗುವ ಆಶಯವಿದೆ , ಬ್ಯಾಂಕಿಗೆ ಬೆನ್ನೆಲುಬಾಗಿ ನಿಂತಿರುವ ಮಹಿಳೆಯರನ್ನು ಮೀಟರ್ ಬಡ್ಡಿ ಶೋಷಣೆಯಿಂದ ಪೂರ್ಣವಾಗಿ ಮುಕ್ತಗೊಳಿಸುವ ಇಚ್ಚಾಶಕ್ತಿಬದ್ಧತೆಯಿಂದ ಕೆಲಸ ಮಾಡುತ್ತಿರುವುದಾಗಿ ನುಡಿದರು .
ದುರ್ಗಾಮಾತೆಯೂ ಆಗಿರುವ ತಾಯಿ ಕೋಲಾರಮ್ಮನ ಕೃಪೆಯಿಂದ ಬ್ಯಾಂಕ್ ಇಂದು ದೇಶದಲ್ಲೇ ನಂ .೧ ಎಂಬ ಖ್ಯಾತಿ ಪಡೆದಿದೆ , ಬ್ಯಾಂಕ್ ಆಶ್ರಯದಲ್ಲಿನ ಎಲ್ಲಾ ಪ್ಯಾಕ್ಸ್ಗಳ ಗಣಕೀಕರಣದ ಮೂಲಕ ಸಹಕಾರ ಕ್ಷೇತ್ರದಲ್ಲಿ ಪೂರ್ಣ ಪಾರದರ್ಶಕತೆ ತರಲು ನಾವು ಮುಂದಾಗಿದ್ದು , ಇದು ಸಹಕಾರ ರಂಗದ ಇತಿಹಾಸದಲ್ಲೇ ಮೈಲಿಗಲ್ಲಾಗಿದೆ ಎಂದರು.
ಪ್ಯಾಕ್ಸ್ಗಳನ್ನು ಕೇವಲ ಪಡಿತರ ವಿತರಣೆ , ಸಾಲ ನೀಡಿಕೆ , ವಸೂಲಿಗೆ ಸೀಮಿತಗೊಳಿಸದೇ ಒ ೦ ದು ಬ್ಯಾಂಕ್ ಹೊಂದಿರುವ ಎಲ್ಲಾ ಸೌಲಭ್ಯಗಳು ಸಿಗುವಂತೆ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಗಣಕೀಕರಣ ಮಾಡಿದ್ದೇವೆ ಎಂದರು. ಇದರ ಜತೆಗೆ ಪ್ಯಾಕ್ಸ್ಗಳನ್ನು ವಿವಿಧೋದ್ಧೇಶ ಸೇವಾ ಸಹಕಾರ ಸಂಘಗಳಾಗಿಸಿ , ರೈತರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ಪ್ರಯತ್ನವೂ ಸಾಗಿದೆ ಎಂದು ತಿಳಿಸಿದರು .
ಇದರ ಜತೆಗೆ ಇ – ಶಕ್ತಿ ಅನುಷ್ಠಾನದ ಮೂಲಕ ಮಹಿಳೆಯರ ಬ್ಯಾಂಕಿಂಗ್ ವಹಿವಾಟು ಗಣಕೀಕರಣದ ವ್ಯಾಪ್ತಿಗೆ ಬರಲಿದ್ದು , ಬ್ಯಾಂಕಿಗೆ ಹಣ ಸಂದಾಯ , ಸಾಲ ಮರುಪಾವತಿ ಎಲ್ಲಾ ಮಾಹಿತಿಯೂ ಮಹಿಳೆಯರ ಮೊಬೈಲ್ನಲ್ಲೇ ಲಭ್ಯವಾಗುವುದರಿಂದ ಬ್ಯಾಂಕ್ ಮತ್ತು ಸೊಸೈಟಿಗಳ ಕುರಿತು ಗ್ರಾಹಕರಲ್ಲಿ ನಂಬಿಕೆ ಮತ್ತಷ್ಟು ಸದೃಢಗೊಳ್ಳಲಿದೆ ಎಂದರು . ಆಡಳಿತಮಂಡಳಿ ಶ್ರಮ , ಸಿಬ್ಬಂದಿಯ ಕರ್ತವ್ಯನಿಷ್ಟೆ , ಎರಡೂ ಜಿಲ್ಲೆಗಳ ಶಾಸಕರು , ವಿಧಾನಪರಿಷತ್ ಸದಸ್ಯರೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಪ್ರೀತಿ , ವಿಶ್ವಾಸ , ನಬಾರ್ಡ್ , ಅಫೆಕ್ಸ್ ಬ್ಯಾಂಕ್ ಸಹಕಾರದಿಂದಾಗಿ ದ್ವೇಷರಾಜಕಾರಣವನ್ನು ಮೆಟ್ಟಿನಿಂತು ಬ್ಯಾಂಕ್ ಬಡವರ , ಮಹಿಳೆಯರ ಬ್ಯಾಂಕಾಗಿ ಬೆಳೆಸುವುದೇ ತಮ್ಮ ಗುರಿಯಾಗಿದೆ ಎಂದರು .
ಡಿಸಿಸಿ ಬ್ಯಾಂಕ್ ಮೇಲೆ ಇದ್ದ ಅಪನಂಬಿಕೆಯ ಪೊರೆ ಕಳಚಿ , ಸಹಕಾರಿ ತತ್ವಗಳಡಿ ಜಿಲ್ಲೆಯ ಜನತೆ ಕಳೆದುಕೊಂಡಿದ್ದ ನಂಬಿಕೆಯನ್ನು ಮತ್ತೆ ಪುನರ್ಸ್ಥಾಪಿಸುವ ಮೂಲಕ ಬಡವರ ಬ್ಯಾಂಕಾಗಿ ಸದೃಢಗೊಳಿಸಿದ್ದೇವೆ ಎಂದರು . ಇದೇ ಸಂದರ್ಭದಲ್ಲಿ ಬ್ಯಾಂಕ್ ಅಭಿವೃದ್ಧಿಗಾಗಿ ಇಲ್ಲಿ ಉಳಿತಾಯ ಖಾತೆ ತೆರೆದು ಠೇವಣಿ ಇಟ್ಟಿರುವ ಮಹಿಳೆಯರು , ಬಡವರು , ಮಧ್ಯಮ ವರ್ಗದ ಜನತೆಗೆ ಬ್ಯಾಂಕ್ ಋಣಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ , ಕೆ.ವಿ.ದಯಾನಂದ್ , ವೆಂಕಟರೆಡ್ಡಿ , ಗೋವಿಂದರಾಜು , ಬ್ಯಾಂಕ್ ಎಜಿಎಂಗಳಾದ ಬೈರೇಗೌಡ , ಶಿವಕುಮಾರ್ , ಖಲೀಮುಲ್ಲಾ , ಹುಸೇನ್ ದೊಡ್ಡಮನಿ , ಅರುಣ್ ಕುಮಾರ್ , ಪದ್ಮಮ್ಮ , ತಿಮ್ಮಯ್ಯ , ಬಾಲಾಜಿ , ವಿನಯ್ ಪ್ರಸಾದ್ , ಶುಭಾ , ಬೇಬಿ ಶಾಮಿಲಿ , ಅಮರೇಶ್ , ಅಮೀನಾ , ಮುಖಂಡರಾದ ತುರಾಂಡಹಳ್ಳಿ ಸರ್ವೇಶ್ , ಶ್ರೀನಿವಾಸ್ , ಆಟೋ ನಾರಾಯಣಸ್ವಾಮಿ ಸೇರಿದಂತೆ ಬ್ಯಾಂಕಿನ ಎಲ್ಲಾ ಸಿಬ್ಬಂದಿ ಹಾಜರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.