(www.vknews.com) : ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕನಿಷ್ಟ ಮಟ್ಟದಲ್ಲಿ ಇದ್ದಾಗಲೂ ಅವೈಜ್ಞಾನಿಕವಾಗಿ ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ದರಗಳನ್ನು ಏರಿಕೆ ಮಾಡುತ್ತಿರುವುದು ದೇಶದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಡೀಸೆಲ್ ಬೆಲೆಯು 100 ರೂಪಾಯಿಗಳ ಗಡಿ ದಾಟಿದೆ. ಕಚ್ಚಾ ತೈಲದ ಬೆಲೆಯು ಅತ್ಯಂತ ಕಡಿಮೆ ಇದ್ದಾಗಲೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು 100 ರೂಪಾಯಿಗಳ ಗಡಿ ದಾಟಿಸಿರುವ ಪ್ರಧಾನಿ ಮೋದಿಯವರ ಆಳ್ವಿಕೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಮಾಡಿದಾಗ್ಯೂ, ಜನ ಸಾಮಾನ್ಯರ ಬದುಕಿಗೆ ನೆರವಾಗುವಂತಹ ಒಂದೂ ಯೋಜನೆ ರೂಪಿಸದೇ ಅಕ್ಷರಶಃ ಲೂಟಿಗೆ ಇಳಿದಿರುವ ಕ್ರಮಕ್ಕೆ ನಮ್ಮ ಧಿಕ್ಕಾರವಿದೆ.
ಬರುವ ದಿನಗಳಲ್ಲಿ ಕೇಂದ್ರ ಸರಕಾರವು ಪೆಟ್ರೋಲ್ ಡೀಸೆಲ್ ಬೆಲೆಯನ್ನು 200 ರೂಪಾಯಿಗೆ ಏರಿಸಿದರೂ ಅಚ್ಚರಿಯಿಲ್ಲ. ಅತಿಯಾದ ಆತ್ಮವಿಶ್ವಾಸ ಆರೋಗ್ಯಕ್ಕೆ ಹಾನಿಕರ ಎನ್ನುವ ಮಾತಿನಂತೆ, ಖುದ್ದು ಬಿಜೆಪಿ ಪಾಳಯದಲ್ಲಿ ಯೇ ತೈಲ ಬೆಲೆ ಏರಿಕೆಯಾದ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಿದೆ. ಆದರೆ, ಯಾರಿಗೂ ಬಹಿರಂಗವಾಗಿ ಹೇಳಿಕೊಳ್ಳುವ ಧೈರ್ಯ ಇಲ್ಲದಂತಾಗಿದೆ.
ರಾಜ್ಯವನ್ನು ಪ್ರತಿನಿಧಿಸುವ ನಮ್ಮ ಸಂಸದರುಗಳು ಒಬ್ಬರೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತುಟಿ ಪಿಟಕ್ ಎನ್ನುತ್ತಿಲ್ಲ. ಮತ ನೀಡಿದ ಜನರ ಸಮಸ್ಯೆಗಳ ಬಗ್ಗೆ ಚಕಾರ ಎತ್ತದ ಸಂಸದರು ರಾಜ್ಯದ ಪಾಲಿಗೆ ಬೆದರು ಬೊಂಬೆಗಳಾಗಿದ್ದಾರೆ. ಮತೀಯ ವಿಷ ಬೀಜ ಬಿತ್ತುವ ಕಾಯಕದಲ್ಲಿ ನಿರತರಾಗಿರುವ ಕ್ರಮಕ್ಕೆ ನಮ್ಮ ಧಿಕ್ಕಾರವಿದೆ.
ರಾಜ್ಯದಲ್ಲಿ ತೈಲದ ಮೇಲಿನ ಸುಂಕವನ್ನು ಇಳಿಕೆ ಮಾಡಿ, ಜನರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸುವ ಎದೆಗಾರಿಕೆಯನ್ನು ರಾಜ್ಯ ಸರಕಾರ ಪ್ರದರ್ಶನ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಬೆಲೆ ಏರಿಕೆ ಪರಿಣಾಮ ರಾಜ್ಯ ಮತ್ತು ದೇಶದಲ್ಲಿ ಅರಾಜಕತೆ ಉಂಟಾಗಿದೆ. ಹಸಿವಿನ ಸೂಚ್ಯಂಕದಲ್ಲಿಯೂ ಭಾರತ 101 ನೆ ಸ್ಥಾನದಲ್ಲಿ ಇದೆ ಎಂದು ಜಾಗತಿಕ ಮಟ್ಟದ ಅಧ್ಯಯನದಿಂದ ಸಾಬೀತಾಗಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ದೇಶದ ಜನರ ಸಮಸ್ಯೆಗಳತ್ತ ಗಮನ ಹರಿಸದೇ ಬಂಡವಾಳ ಶಾಹಿಗಳಿಗೆ ಮಣೆ ಹಾಕುವ ಕ್ರಮಕ್ಕೆ ನಮ್ಮ ಧಿಕ್ಕಾರ ಇದೆ.
ತಾಹಿರ್ ಹುಸೇನ್ರಾಜ್ಯಾಧ್ಯಕ್ಷರು,ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.