ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿಜಯ ದಶಮಿಯ ದಿನದಂದು ಸಂಘಪರಿವಾರವು ರಾಜ್ಯದ ವಿವಿಧ ಕಡೆಗಳಲ್ಲಿ ಸಾರ್ವಜನಿಕವಾಗಿ ತಲವಾರು ಪ್ರದರ್ಶನ ನಡೆಸಿದ್ದು, ಜನರಲ್ಲಿ ಭೀತಿ ಹುಟ್ಟಿಸುವ ಈ ಕೃತ್ಯಗಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸುತ್ತದೆ.
ವಿಜಯ ದಶಮಿ ಮತ್ತು ಆಯುಧ ಪೂಜೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಸಹಿತ ಸಂಘಪರಿವಾರದ ಸಂಘಟನೆಗಳು ತ್ರಿಶೂಲ ದೀಕ್ಷೆ ಕಾರ್ಯಕ್ರಮ, ದುರ್ಗಾ ದೌಡ್, ಹಿಂದು ಶಕ್ತಿ ಸಂಚಲನ ಹೆಸರಿನಲ್ಲಿ ಶೋಭಯಾತ್ರೆ, ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಈ ಸಂದರ್ಭದಲ್ಲಿ ಉಡುಪಿಯ ರಾಜಬೀದಿಯಲ್ಲಿ, ಬೆಳಗಾವಿಯ ಬ್ರಹ್ಮ ನಗರದ ಹನುಮಾನ್ ಮಂದಿರ, ಬಿಜಾಪುರ, ದಾವಣಗೆರೆ, ಗದಗದ ನರಗುಂದ ಮೊದಲಾದೆಡೆ ಸಾರ್ವಜನಿಕ ಸ್ಥಳಗಳಲ್ಲಿ ತಲವಾರು, ಬಂದೂಕು, ಕೋವಿಯಂತಹ ಮಾರಕಾಸ್ತ್ರಗಳನ್ನು ಪ್ರದರ್ಶಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲವನ್ನೂ ವಿತರಿಸಲಾಗಿದೆ. ಚೂರಿ ಇರಿತ ಪ್ರಕರಣದಲ್ಲಿ ಭಾಗಿಯಾಗಿ ಹತ್ಯಾ ಪ್ರಕರಣ ದಾಖಲಾಗಿರುವ ಆರೋಪಿಗೂ ಈ ವೇಳೆ ತ್ರಿಶೂಲ ವಿತರಿಸಿರುವುದು ಆತಂಕಕಾರಿಯಾಗಿದೆ. ಮಾತ್ರವಲ್ಲ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಮತ್ತು ಅವರ ಧಾರ್ಮಿಕ ಕಟ್ಟಡಗಳನ್ನು ಕೆಡಹುವ ಬಹಿರಂಗ ಬೆದರಿಕೆಯನ್ನು ಒಡ್ಡಲಾಗಿದೆ. ಇದರ ಹಿಂದೆ ಧರ್ಮ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂಚು ಅಡಗಿರುವುದು ಬಹಿರಂಗ ವಾಸ್ತವವಾಗಿದೆ. ಈ ಮಧ್ಯೆ, ಬೆಳಗಾವಿಯಲ್ಲಿ ಸಾರ್ವಜನಿಕ ರಾಲಿ ನಡೆಸಿ ಮಾರಕಾಸ್ತ್ರ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಜನಾಕ್ರೋಶವನ್ನು ತಣಿಸುವ ನಿಟ್ಟಿನಲ್ಲಿ ಪೊಲೀಸರು ದುರ್ಬಲ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ. ಮಾತ್ರವಲ್ಲದೇ, ವಿಡಿಯೋ ಸಾಕ್ಷಿ ಇದ್ದರೂ ಪ್ರಾಥಮಿಕ ವರದಿಯಲ್ಲಿ ವ್ಯತಿರಿಕ್ತ ಮಾಹಿತಿಯನ್ನು ದಾಖಲಿಸಿದ್ದಾರೆ. ಇಲ್ಲಿ ಸಂಘಪರಿವಾರದ ಕುರಿತಂತೆ ಪೊಲೀಸರು ಮೃಧು ಧೋರಣೆ ತಾಳಿರುವುದು ಮತ್ತಷ್ಟು ಆತಂಕಗಳಿಗೆ ಕಾರಣವಾಗಿದೆ. ಸಂಘಪರಿವಾರದ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿದ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುವ ಮೂಲಕ ಆರೋಪಿಗಳ ರಕ್ಷಣೆಗೆ ಇಳಿದಿರುವುದು ಸ್ಪಷ್ಟವಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯನ್ನು ಗುರಿಪಡಿಸಿಕೊಂಡು ನಡೆಯುತ್ತಿರುವ ದುಷ್ಕೃತ್ಯಗಳು ಆಘಾತಕಾರಿಯಾಗಿದೆ. ಬೆಳಗಾವಿಯಲ್ಲಿ ಅರ್ಬಾಝ್ ಎಂಬ ಯುವಕನ ಬರ್ಬರ ಹತ್ಯೆ, ಬಾಗಲಕೋಟೆಯ ಇಳ್ಕಲ್ ನಲ್ಲಿ ನಡೆದ ಮುಸ್ಲಿಮ್ ವಿದ್ಯಾರ್ಥಿಯ ಮೇಲಿನ ಮಾರಣಾಂತಿಕ ಹಲ್ಲೆ, ಗದಗದಲ್ಲಿ ಐತಿಹಾಸಿಕ ಮಸ್ಜಿದ್ ಕೆಡಹುವ ಬೆದರಿಕೆಗಳು, ಸಂಘಪರಿವಾರದ ನಾಯಕರು ವಿವಿಧೆಡೆ ಮಾಡುತ್ತಿರುವ ದ್ವೇಷಪೂರಿತ ಪ್ರಚೋದನಾಕಾರಿ ಭಾಷಣಗಳು, ದಕ್ಷಿಣ ಕನ್ನಡದಲ್ಲಿ ಮಿತಿಮೀರಿರುವ ಅನೈತಿಕ ಪೊಲೀಸ್ ಗಿರಿ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಶಾಸಕರುಗಳ ನಡೆಗಳು, ಪ್ರವಾದಿ ವಿರುದ್ಧ ಅವಹೇಳನ… ಈ ರೀತಿಯ ಮೊದಲಾದ ಘಟನೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಇದೀಗ ರಾಜ್ಯದ ವಿವಿಧೆಡೆ ಸಂಘಪರಿವಾರವು ಶೋಭಯಾತ್ರೆ ನಡೆಸಿ ಮಾರಕಾಸ್ತ್ರ ಝಳಪಿಸಿ ಭೀತಿ ಸೃಷ್ಟಿಸಿರುವುದು ಅದರ ಮುಂದುವರಿದ ಭಾಗವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸಿರುವುದು ಕಾನೂನು ಬಾಹಿರವಾಗಿದೆ. ಅಲ್ಪಸಂಖ್ಯಾತರಲ್ಲಿ ನಿರ್ದಿಷ್ಟವಾಗಿ ಮುಸ್ಲಿಮ್ ಸಮುದಾಯದಲ್ಲಿ ಭೀತಿ ಸೃಷ್ಟಿಸುವ ಇಂತಹ ದುರುದ್ದೇಶಪೂರಿತ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ದುರ್ಬಲ ಸೆಕ್ಷನ್ ಗಳನ್ನು ದಾಖಲಿಸಿ ಘಟನೆಗಳನ್ನು ಮುಚ್ಚಿಹಾಕಬಾರದು. ಈ ಕಾರ್ಯಕ್ರಮದ ಸಂಘಟಕರು ಮತ್ತು ಖಡ್ಗ ಝಳಪಿಸಿದ ಕಾರ್ಯಕರ್ತರ ವಿರುದ್ಧ ನಿಷ್ಪಕ್ಷಪಾತವಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ರಾಜ್ಯದ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.