ಕೋಲಾರ (ವಿಶ್ವ ಕನ್ನಡಿಗ ನ್ಯೂಸ್ ) : ಇಲಾಖೆಗಳಿಂದ ಅನುಷ್ಠಾನಕ್ಕೆ ತಂದಿರುವ ಯೋಜನೆಗಳನ್ನು ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕಗತಗೊಳಿಸಿಲ್ಲ . ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಸ್ನೇಹಾ ಅವರು ತಾಕೀತು ಮಾಡಿದರು.
ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ . ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ , ಕೂಡಲೇ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು ಎಂದರು . ವಿವಿಧ ಇಲಾಖೆಗಳಿಂದ ತಯಾರಿಸಲಾಗಿರುವ ಕ್ರಿಯಾ ಯೋಜನೆಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು .
ಸಮಾಜ ಕಲ್ಯಾಣ ಇಲಾಖಾಧಿಕಾರಿ ಮಾತನಾಡಿ , ವಿದ್ಯಾರ್ಥಿ ನಿಲಯಗಳು ಸೆಪ್ಟೆಬಂರ್ ತಿಂಗಳಿಂದ ಪ್ರಾರಂಭವಾಗಿದ್ದು , ವಿದ್ಯಾರ್ಥಿಗಳ ಪ್ರವೇಶ ಪ್ರಾರಂಭವಾಗಿದೆ . ಕಳೆದ ವರ್ಷ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಲು ಆನ್ಲೈನ್ ತಾಂತ್ರಿಕ ದೋಷದಿಂದ ತಡವಾಗಿದೆ .
ವಕೀಲರ ಅಭ್ಯಾಸಕ್ಕೆ ಸಹಾಯಧನ ಬಿಡುಗಡೆ ಬಾಕಿ ಇದೆ ಎಂದು ತಿಳಿಸಿದರು . ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ಗೌಡ ಮಾತನಾಡಿ , 2020-21ನೇ ಸಾಲಿನಲ್ಲಿ ಹುಳ ಸಾಕಾಣೆ , ಹನಿ ನೀರಾವರಿ ಪದ್ಧತಿ ಹಾಗೂ ಉಪಕರಣ ಖರೀದಿಗೆ ಸಹಾಯಧನ ಬಿಡುಗಡೆಯಾಗಿದ್ದು , ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು . ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ , ಇಲಾಖೆಗೆ ಈ ಸಾಲಿನಲ್ಲಿ ಶೇ .63 ರಷ್ಟು ಗುರಿ ಸಾಧನೆ ಮಾಡಲಾಗಿದೆ .
ಜಲಾಯಾನ ಯೋಜನೆಯಡಿ ಬಿಡುಗಡೆಯಾಗಬೇಕಾಗಿರುವ ಅನುದಾನ ಇದುವರೆಗೂ ಮಂಜೂರಾಗಿಲ್ಲ . ಈ ಭಾರಿ ವಾಡಿಕೆ ಮಳೆಗಿಂತ ಶೇ .40 ರಷ್ಟು ಹೆಚ್ಚಾಗಿದ್ದು ತಗ್ಗು ಪ್ರದೇಶದಲ್ಲಿ 55 ಎಕರೆಯಷ್ಟು ಮುಂಗಾರು ಬೆಳೆಗಳು ನಾಶವಾಗಿವೆ . ಕಂದಾಯ ಮತ್ತು ಕೃಷಿ ಇಲಾಖಾಧಿಕಾರಿಗಳ ಜಂಟಿ ಸರ್ವೇ ಕಾರ್ಯ ನಡೆಸಿದ್ದು , ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು .
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು ಗುರಿ ಸಾಧನೆ ಸಮಾಧಾನಕರವಾಗಿಲ್ಲ . ಗುರಿ ಸಾಧನೆಯಲ್ಲಿ ಹಿಂದೆ ಉಳಿದಿರುವುದಕ್ಕೆ ಕೋವಿಡ್ ನೆಪ ಹೇಳಿದರೆ ಸಹಿಸುವುದಿಲ್ಲ . ಕಚೇರಿಯಿಂದ ಹೊರಗೆ ಬಂದು ಕೆಲಸ ಮಾಡಿದ್ದರೆ ಗುರಿ ಸಾಧನೆಯಾಗುತ್ತಿರಲಿಲ್ಲವೇ ? ಕ್ರಿಯಾ ಯೋಜನೆ ತಯಾರಿಸುವುದು ಬಾಕಿ ಇರುವ ಇಲಾಖೆಗಳವರು ಕೂಡಲೇ ತಯಾರಿಸಿ ಸಲ್ಲಿಸಬೇಕು . ವಿಳಂಬ ಮಾಡಿದರೆ ಅನುದಾನ ಮಂಜೂರಾಗುವುದು ವಿಳಂಬವಾಗುತ್ತದೆ ಎಂದು ಎಚ್ಚರಿಸಿದರು .
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಾಬು ಮಾತನಾಡಿ , ತಾಲ್ಲೂಕು ಪಂಚಾಯಿತಿಯಿಂದ ಹಮ್ಮಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಆಯಾ ಪಂಚಾಯಿತಿಯ ಗಮನಕ್ಕೆ ತರಲಾಗುವುದು . ಸದ್ಯಕ್ಕೆ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ . ಕೆಲ ಗ್ರಾಮಗಳಲ್ಲಿ ಪೈಪ್ ಲೈನ್ ಆಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು .
ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.