ಬೆಂಗಳೂರ(ವಿಶ್ವಕನ್ನಡಿಗ ನ್ಯೂಸ್): ಟಾಮ್ ಅಂಡ್ ಜೆರ್ರಿ ಬಗ್ಗೆ ಸದ್ಯಕ್ಕೆ ಹೆಚ್ಚೇನು ಹೇಳ್ಬೇಕಿಲ್ಲ. ಯಾಕಂದ್ರೆ ಹಾಯಾಗಿದೆ ಎದೆಯೊಳಗೆ ಅಂತ ಹಾಡಿದಾಗಿನಿಂದ ಟಾಮ್ ಅಂಡ್ ಜೆರ್ರಿ ಕಣ್ಮುಂದೆಯೇ ಸುಳಿದಾಡ್ತಾ ಇದೆ. ಸದ್ಯದ ಅಪ್ಡೇಟ್ ಏನು ಅಂದ್ರೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಗೆ ಪ್ರೇಕ್ಷಕ ಪ್ರಭು ಮನಸೂರೆಗೊಂಡಿದ್ದಾರೆ, ತಮ್ಮವರಿಗೆ ಕೌಂಟರ್ ಕೊಡೋದಕ್ಕೆ ರೆಡಿಯಾಗಿದ್ದಾರೆ.
ಹಾಯಾಗಿದೆ ಹಾಡಿನಷ್ಟೇ ಟ್ರೇಲರ್ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೇಲರ್ ಜನರ ಮನಸ್ಸಿಗೆ ತೀರಾ ಅಂದ್ರೆ ತೀರಾ ಇಷ್ಟ ಆಗಿದೆ ಅನ್ನೋದಕ್ಕೆ ಕಮೆಂಟ್ ಬಾಕ್ಸ್ ನಲ್ಲಿ ಬಿದ್ದ ಕಮೆಂಟ್ ಗಳು, ಲೈಕ್ ಬಟನ್ ಮೇಲೆ ಸಿಕ್ಕ ಲೈಕ್ ಗಳು, ವಿವ್ ಪಾಯಿಂಟ್ ಮೇಲೆ ಕಾಣ್ತಿರೋ ಸಂಖ್ಯೆಯೇ ಉದಾಹರಣೆ. ಅಷ್ಟಕ್ಕೂ ಇಷ್ಟು ಒಪ್ಪಿ ಅಪ್ಪಿಕೊಳ್ಳೋದಕ್ಕೆ ಕಾರಣ, ಎಲ್ಲರ ಮನಸ್ಸಲ್ಲೂ ಇರೋ ಆ ಆಸೆಗಳು.
ಟ್ರೇಲರ್ ನಲ್ಲಿ ಡೈಲಾಗಳದ್ದೇ ಹೈಲೈಟ್. ಅವು ಯುವ ಮನಸ್ಸುಗಳಲ್ಲಿ ಸುಳಿದಾಡುತ್ತಿರುವ ಆಸೆಗಳಿಗೆ ಹತ್ತಿರವಾಗಿರೋ ಡೈಲಾಗ್. ಬದುಕು ಹೆಂಗ್ ಬೇಕೋ ಹಂಗೆ ಬದುಕೋಕೆ ಇರೋದಲ್ಲ. ಹಿಂಗೆ ಬದುಕಬೇಕು ಎಂಬ ಡೈಲಾಗ್ ಗಳು. ಹೆಂಗ್ ಬೇಕಾದ್ರೂ ಬದುಕ ಬಹುದು ಅನ್ನೋ ಹುಡುಗಿಗೆ ಹಿಂಗೆ ಬದುಕಬೇಕು ಅನ್ನೋ ಹುಡುಗ ಗಂಟು ಬಿದ್ರೆ ಹೆಂಗ್ ಇರುತ್ತೆ. ಟಾಮ್ ಅಂಡ್ ಜೆರ್ರಿ ಟೈಟಲ್ ಗೆ ತಕ್ಕದಾಗಿ ಟ್ರೇಲರ್ ಇದೆ.
ಈಗಾಗ್ಲೇ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುವಂತ ಹೈಲೈಟ್ ಗಳು ಹೊರಬಿದ್ದಿವೆ. ಯೂಥ್ ಫುಲ್ ಸಿನಿಮಾವಾಗಿದ್ದು, ಗುದ್ದಾಟ, ರಂಪಾಟ, ತುಂಟಾಟ ಜೊತೆಗೆ ಮುದ್ದಾಟವೂ ಇದೆ. ನವೆಂಬರ್ 12ಕ್ಕೆ ಮನರಂಜಿಸಲು ಸಿನಿಮಾ ಸಿದ್ಧವಾಗಿದೆ.ಸಿನಿಮಾಗೆ ಕೆಜಿಎಫ್ ಡೈಲಾಗ್ ರೈಟರ್ ರಾಘವ್ ವಿನಯ್ ಶಿವಗಂಗೆ ಆ್ಯಕ್ಷನ್ ಕಟ್ ಹೇಳಿದ್ದು, ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಚಿತ್ರ ನಿರ್ಮಾಣ ಮಾಡಿದ್ದು, ವಿನಯ್ ಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ಗಂಟು ಮೂಟೆ ಸಿನಿಮಾದಲ್ಲಿ ನಟನೆಯಿಂದಲೇ ಎಲ್ಲರನ್ನು ಸೆಳೆದಿದ್ದ ನಿಶ್ಚಿತ್ ಕೊರೋಡಿ ನಾಯಕನಾಗಿ ನಟಿಸಿದ್ದಾರೆ. ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ನಿಶ್ಚಿತ್ ಗೆ ಜೋಡಿಯಾಗಿದ್ದಾರೆ. ಸೂರ್ಯ ಶೇಖರ್ ವಿಲನ್ ಆಗಿ ಅಬ್ಬರಿಸಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಸೇರಿ ಹಲವರು ಚಿತ್ರದಲ್ಲಿದ್ದಾರೆ.
ಸಂಕೇತ್ ಎಂವೈಎಸ್ ಕ್ಯಾಮೆರಾದಲ್ಲಿ ಇಡೀ ಸಿನಿಮಾ ಸೆರೆಯಾಗಿದ್ದು, ಸೂರಜ್ ಅಂಕೊಲೇಕರ್ ಸಂಕಲನವಿದೆ. ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅದ್ಭುತವೆನಿಸುವ ಆರು ಹಾಡುಗಳಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.