(www.vknews.com) : ಬೆಳಗಾವಿ ವಿಧಾನಸಭಾ ಅಧಿವೇಶನಕ್ಕೆ ಅವಕಾಶ ಕೊಡುವುದಿಲ್ಲ ಎನ್ನುತ್ತಾ ಬೆದರಿಕೆಯ ಪುಂಡಾಟಿಕೆ ತೋರಿದ ಎಂ ಇ ಎಸ್ ಬೆಳಗಾವಿ ಬಂದ್ಗೆ ಕರೆ ಕೊಡುವುದು, ಕನ್ನಡಿಗರ ಮನೆ ವಾಹನಗಳ ಮೇಲೆ ಕಲ್ಲು ತೂರುವುದು, ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನು ಅವಮಾನಿಸುವುದು ಮತ್ತು ಕನ್ನಡದ ಅಸ್ಮಿತೆ ಕನ್ನಡ ಬಾವುಟವನ್ನು ಸುಟ್ಟು ಹಾಕುವುದರ ಮೂಲಕ ತನ್ನ ಎಂದಿನ ಭಯೋತ್ಪಾದಕ ಕೃತ್ಯವನ್ನು ಮತ್ತೆ ಜಗಜ್ಜಾಹೀರುಗೊಳಿಸಿದೆ. ಆದರೇ ಕರ್ನಾಟಕ ಸರ್ಕಾರ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಾ ಕೇವಲ ಬೆರಳೆಣಿಕೆಯ ಪುಂಡರನ್ನು ಬಂಧಿಸುವ ನಾಟಕವಾಡಿ ಕೈತೊಳೆದುಕೊಂಡು ತನ್ನ ಎಂದಿನ ಅಸಹಾಯಕತೆ ಪ್ರದರ್ಶನ ಮಾಡುತ್ತಿದೆ.
ಎಂ ಇ ಎಸ್ ಮತ್ತು ಶಿವಸೇನೆ ಸಂಘಟನೆಗಳು ಕರ್ನಾಟಕದ ಪಾಲಿನ ಕಂಟಕಗಳಾಗಿವೆ. ರಾಜ್ಯ ಸರ್ಕಾರ ಕೂಡಲೇ ಈ ಭಯೋತ್ಪಾದಕ ಸಂಘಟನೆಗಳನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕು. ರಾಜ್ಯದಲ್ಲಿರುವ ಎಂ ಇ ಎಸ್ ಮತ್ತು ಶಿವಸೇನೆಯ ಮುಂಖಡರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು. ಕರ್ನಾಟಕ ಮತ್ತು ಕನ್ನಡಿಗರಿಗೆ ಸೂಕ್ತ ನ್ಯಾಯ ಮತ್ತು ಭದ್ರತೆ ಹಾಗು ಈಗ ಹಾನಿಗೀಡಾಗಿರುವ ಕನ್ನಡಿಗರಿಗೆ ಸೂಕ್ತ ಪರಿಹಾರ ನೀಡಬೇಕು. ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
ಕನ್ನಡಿಗರಿಗಾದ ಅವಮಾನಕ್ಕೆ ಪ್ರತಿಕಾರವೆಂಬಂತೆ ಇತ್ತ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆ ಮೇಲೆ ನಡೆದಿರುವ ದಾಳಿಯೂ ಸರಿ ಅಲ್ಲ. ಯಾರೂ ಕೆಲವು ಗೂಂಡಾಗಳ ಕಾರಣಕ್ಕೆ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯಿಂದ ಬದುಕುತ್ತಿರುವ ಕನ್ನಡಿಗರು ಮತ್ತು ಮರಾಠಿಗರೂ ಸೇರಿದಂತೆ ಯಾವುದೇ ಭಾಷಿಕರ ನಡುವೆ ಗೊಂದಲ ಮತ್ತು ಆತಂಕ ಸೃಷ್ಟಿಸುವುದು ಸರಿ ಅಲ್ಲ. ಅಂತಹವರನ್ನು ಪತ್ತೆ ಹಚ್ಚಿ ಬಂಧಿಸಬೇಕು.
ಕನ್ನಡದ ಬಾವುಟ ಸುಟ್ಟಾಗ, ಕನ್ನಡಿಗರ ಮನೆ ಹಾಗು ವಾಹನಗಳ ಜಖಂಗೊಳಿಸಿ ಕಲ್ಲು ತೂರಾಟ ಮಾಡಿದಾಗ, ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಅವಮಾನ ಮಾಡಿದಾಗ ಬಾಯಿ ಮುಚ್ಚಿಕೊಂಡಿದ್ದ ರಾಜ್ಯ BJP ನಾಯಕರು ಇತ್ತ ಶಿವಾಜಿ ಪ್ರತಿಮೆಗೆ ಅವಮಾನವಾದ ಕೂಡಲೇ ಪ್ರತಿಕ್ರಿಯೆ ನೀಡಿ ಘಟನೆಯನ್ನು ಖಂಡಿಸಿರುವುವದನ್ನು ನೋಡಿದಾಗ ಇಲ್ಲೇನೋ ಶಡ್ಯಂತ್ರ ಕಂಡು ಬರುತ್ತಿದೆ ಮತ್ತು ಇವರ ಬಗ್ಗೆಯೇ ನಮಗೆ ಅನುಮಾನ ಮೂಡುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಲಿ.
ಇದೇ ಸಮಯಕ್ಕೆ ಮಾನ್ಯ ಮುಖ್ಯಮಂತ್ರಿಗಳು ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೋಳ್ಳಿ ರಾಯಣ್ಣ ಇವರೆಲ್ಲಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಒಮ್ಮೆ ಸರಿಯಾದ ಇತಿಹಾಸ ತಿಳಿಯುವುದು ಒಳ್ಳೆಯದು. ಮತ್ತು ಶಿವಾಜಿ ಯಾವಾಗ ಇಂಗ್ಲಿಷರ ವಿರುದ್ದ ಯುದ್ದ ಮಾಡಿದ್ದರು ಎಂದು ತಿಳಿಸಬೇಕು. 1630ರಲ್ಲಿ ಹುಟ್ಟಿದ್ದ ಶಿವಾಜಿ 1680ರಲ್ಲೇ ಮರಣ ಹೊಂದಿರುತ್ತಾರೆ. ಇಂಗ್ಲಿಷರ ಮೊಟ್ಟ ಮೊದಲ ಯುದ್ದ ಭಾತರದಲ್ಲಿ ನಡೆದಿರುವುದೇ 1686ರಲ್ಲಿ. ಮತ್ತದನ್ನು ಪ್ರಥಮ ಆಂಗ್ಲೋ – ಮುಗಲ್ ಯುದ್ದ ಎಂದು ಕರೆಯಲಾಗುತ್ತದೆ. ಶಿವಾಜಿ ಮರಣ ಹೊಂದಿದ ಆರು ವರ್ಷಗಳ ನಂತರವಷ್ಟೇ ಈ ಪ್ರಥಮ ಯುದ್ದ ನಡೆದಿರುವುದು. ಮುಖ್ಯಮಂತ್ರಿಗಳು ಸರಿಯಾದ ಇತಿಹಾಸ ಓದಲಿ ಮತ್ತು ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರನ್ನು ಅವಮಾನಿಸದಿರಲಿ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.