ಮಂಗಳೂರು (www.vknews.com) : ನಗರದ ರಥಬೀದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನಿಡುವ ಲಸಿಕಾಕರಣಕ್ಕೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಜ.3ರ ಸೋಮವಾರ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಲಸಿಕೆ ಪಡೆಯಬೇಕು, ಮನೆಗಳಲ್ಲಿ ಲಸಿಕೆ ಪಡೆಯದಿದ್ದರೆ ಅವರು ಪಡೆಯುವಂತೆ ಜಾಗೃತಿ ಮೂಡಿಸಬೇಕು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಲಸಿಕಾಕರಣದ ಸದುಪಯೋಗ ಪಡೆಯುವಂತೆ ಅವರು ಕರೆ ನೀಡಿದರು.
ಇಂದು ಜಿಲ್ಲೆಯಲ್ಲಿ 25 ಸಾವಿರ ಮಕ್ಕಳಿಗೆ ಸಲಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ, ಮುಂದೆ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿ ಮುಟ್ಟಲಾಗುವುದು, ಕೋವಿಡ್ ಸೋಂಕಿನ ಮೂರನೇ ಅಲೆ ಎದುರಿಸುವಲ್ಲಿ ದೇಶ ಸನ್ನದ್ಧವಾಗಿದೆ, ಜನತೆ ಯಾವುದೇ ಭೀತಿಗೊಳಗಾಗಗುವ ಅಗತ್ಯವಿಲ್ಲ, ಅದಕ್ಕಾಗಿ ಮುಂಜಾಗ್ರತೆ ಹಾಗೂ ಎಚ್ಚರಿಕೆಯ ಕ್ರಮಗಳನ್ನು ವಹಿಸಬೇಕು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದ ಅವರು, 140 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ 100 ಕೋಟಿ ಜನರಿಗೆ 2 ಲಸಿಕೆ 40 ಕೋಟಿ ಜನರಿಗೆ 1 ಲಸಿಕೆ ಕೊಡುವುದರ ಮುಖಾಂತರ ಜಗತ್ತಿನಲ್ಲೇ ಅತೀ ಹೆಚ್ಚು ಲಸಿಕಾ ಕರುಣಾ ಮಾಡಿರುವಂತಹ ದೇಶ ಎಂದು ಭಾಜನವಾಗಿದೆ, ಅದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
2019ಕ್ಕೆ ಕೋವಿಡ್ನ ಪ್ರಥಮ ಅಲೆ ಬಂತು, 2020ರ ಜನವರಿ ಅಥವಾ ಫೆಬ್ರವರಿಯಲ್ಲಿ ದೇಶಕ್ಕೆ ಪ್ರವೇಶವಾಯಿತು, ದೇಶದಲ್ಲಿ ಲಾಕ್ಡೌನ್ ಘೋಷಿಸಲಾಯತು. ಆ ಮೂಲಕ ನಮ್ಮ ರಕ್ಷಣೆ ಜಾಗೃತಿಯ ಪಾಠವನ್ನು ಹೇಳಲಾಯಿತು, ಒಂದನೆ ಅಲೆ ಬಂದಾಗ ಲ್ಯಾಬ್ಗಳು, ವೆಂಟಿಲೇಟರ್, ಆಕ್ಸಿಜನ್ನ ಸಮಸ್ಯೆ ಎದುರಾಯಿತು, ಕೋವಿಡ್ಗೆ ಔಷಧಿಯೂ ಇರಲಿಲ್ಲ, ಲಸಿಕೆಗೆ ಬೇರೆ ಬೇರೆ ದೇಶಗಳು ಪ್ರಯತ್ನ ಮಾಡಿದವು, ಈಡೇರಲಿಲ್ಲ. ಆದರೆ ದೇಶದಲ್ಲಿ ಲಸಿಕೆಯನ್ನು ಕಂಡುಹಿಡಿಯಲಾಯಿತು. ಜನವರಿಯಲ್ಲೇ ಲಸಿಕೆ ವಿತರಣೆ ಆರಂಭಿಸಲಾಯಿತು, ಮೊದಲ ಹಂತದಲ್ಲಿ ಕೋರೊನಾ ವಾರರ್ಸ್ಗೆ, ದಾದಿಯರಿಗೆ, ವೈದ್ಯರಿಗೆ, ಆಶಾ ಕಾರ್ಯಕರ್ತರಿಗೆ ನೀಡಲಾಯಿತು, ನಂತರ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಯಿತು ಎಂದರು.
ಮೊದಲು ವೆಂಟಿಲೇಟರ್ ಕೊರತೆ ಇತ್ತು, ಈಗ ಇಲ್ಲ, ಜಿಲ್ಲೆಯಲ್ಲಿ 16 ವೈದ್ಯಕೀಯ ಆಮ್ಲಜನಕ ಘಟಕಗಳು ಪ್ರಾರಂಭವಾಗಿವೆ, ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಒದಗಿಸುವ ಕೆಲಸ ಮಾಡಲಾಗುತ್ತಿದೆ, ವೆನ್ಲಾಕ್ ಆಸ್ಪತ್ರೆಯಲ್ಲಿ 12 ವೆಂಟಿಲೇಟರ್ಗಳಿದ್ದವು, ಇದೀಗ ಅವುಗಳ ಸಂಖ್ಯೆ 103ಕ್ಕೆ ಏರಿದೆ, ಸುಳ್ಯ, ಬಂಟ್ವಾಳ, ಉಪ್ಪಿನಂಗಡಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳು ನಿರ್ಮಾಣವಾಗಿವೆ, ಕೋವಿಡ್ನ ಮೂರನೇ ಅಲೆಗೆ ಭಯಪಡುವ ಅವಶ್ಯಕತೆ ಇಲ್ಲ ಆದರೆ ಮುಂಜಾಗ್ರತಾ ಕ್ರಮಗಳನ್ನು ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಮಾತನಾಡಿ, ಜಿಲ್ಲೆಯಲ್ಲಿ 1-18 ವರ್ಷದೊಳಗಿನ ಒಂದು ಲಕ್ಷಕ್ಕೂ ಹೆಚ್ಚಿನ ಮಕ್ಕಳಿದ್ದು, ಜಿಲ್ಲೆಯಲ್ಲಿ ಕಾಲೇಜುಗಳು ಹೆಚ್ಚಿರುವ ಕಾರಣ ಆ ಗುರಿ ಇನ್ನೂ ಹೆಚ್ಚಬಹುದು, ಕೋವ್ಯಾಕ್ಸಿನ ಲಸಿಕೆ ನೀಡಲು ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಶೇ.94ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ, 17 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ಪೈಕಿ 16 ಲಕ್ಷಕ್ಕೂ ಹೆಚ್ಚನ ಜನರಿಗೆ ಮೊದಲನೆ ಡೋಸ್ ಆಗಿದೆ. ಶೇ. 80ರಷ್ಟು ಜನರಿಗೆ ಎರಡನೇಯ ಡೋಸ್ನ ಕೋವಿಡ್ ಲಸಿಕೆ ನೀಡಲಾಗಿದೆ, ಇನ್ನು 1 ಲಕ್ಷ ಜನ ವ್ಯಾಕ್ಸಿನ್ ತೆಗೆದುಕೊಂಡಿಲ್ಲ, ಜಿಲ್ಲೆಯ ಜನರೆಲ್ಲರೂ ಕೋವಿಡ್ನ ಎರಡನೇ ಡೋಸ್ ಲಸಿಕೆ ಪಡೆದರೆ ಒಮಿಕ್ರಾನ್ ತಡೆಗಟ್ಟಲು ಸಾಧ್ಯ. ಇದೂವರೆಗೆ 9 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 7 ನಮ್ಮ ಜಿಲ್ಲೆಯಲ್ಲಿ ಇನ್ನು 2 ಬೆಂಗಳೂರಲ್ಲಿ ದಾಖಲಾಗಿದೆ. ಇದು ಶೀಘ್ರವಾಗಿ ಹರಡುವ ಸೋಂಕಾಗಿದ್ದು, ಮೊನ್ನೆ 30 ಪ್ರಕರಣ, ನಿನ್ನೆ 60 ಪ್ರಕರಣ ಕಂಡುಬಂದಿದ್ದು, ಅವು ದ್ವಿಗುಣ ಹೊಂದುತ್ತವೆ ಎಂದ ಅವರು, ಕೋಮ್ಆರ್ಬಿಟೆಡ್ಗಳು, ಬಿ.ಪಿ, ಶುಗರ್, ಕಿಡ್ನಿ, ಹೃದಯ ಸಂಬಂಧ ರೀತಿಯ ಕಾಯಿಲೆವುಳ್ಳವರು ಬಲುಬೇಗ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ನಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಂಡುಬಂದಿಲ್ಲ, ವಿದ್ಯಾರ್ಥಿಗಳು ಕೋವಿಡ್ ಲಸಿಕೆಯ ಮಹತ್ವವನ್ನು ತಿಳಿಸುವ ಮೂಲಕ ಜಿಲ್ಲೆಯನ್ನು ಕೋರೊನಾದಿಂದ ಮುಕ್ತವನ್ನಾಗಿಸಬೇಕು ಎಂದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್ ಶ್ರೀಮತಿ ಜೀನತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಆರ್ಸಿಎಚ್ಒ ಡಾ. ರಾಜೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ. ಜಯಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಸುಧಾಕರ್, ಕೋವಿಡ್ ನೋಡಲ್ ಅಧಿಕಾರಿ ಡಾ.ಕೆ. ಅಣ್ಣಯ್ಯ ಕುಲಾಲ್ ವೇದಿಕೆಯಲ್ಲಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಬಾಯಿ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕಿ ಡಾ. ಸರೋಜಿನಿ ಆಚಾರ್ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ಉಳೆಪ್ಪಾಡಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.