ಬಡ ಕುಟುಂಬದ ಮದುವೆಗೆ ಊರಿನಲ್ಲಿ ಸಾಕಷ್ಟು ನಿಯಮ, ಅದೇ ಊರಿನಲ್ಲಿ ಅದೇ ನಿಯಮ ಶ್ರೀಮಂತನಿಗೆ ಯಾಕಿಲ್ಲ?
ಶ್ರೀಮಂತರ ಆಡಂಬರದ ಮುಂದೆ ಯಾರೂ ಧ್ವನಿ ಎತ್ತಲು ಬರುವುದಿಲ್ಲ ಯಾಕೆ ?
(www.vknews.com) ; ವಿಶಾಲವಾದ ಜಗತ್ತಲ್ಲಿ ಬದುಕಲು ಏನೂ ಇಲ್ಲ ಎಂದಾಕ್ಷಣ ಅವರು ಬಡವರಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುವವರೆಲ್ಲಾ ಶ್ರೀಮಂತರಲ್ಲ. ಜಗತ್ತಿನಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ಕಾರಣದಿಂದ ಬಡವರೇ. ‘ಸಂಪತ್ತು’ ಇದನ್ನು ಹೆಚ್ಚಾಗಿ ಎಲ್ಲರೂ ಬಯಸುತ್ತಾರೆ. ಇದನ್ನು ಬಯಸದೇ ಇರುವವರು ಯಾರು? ಆದರೆ, ಕೆಲವರು ಮಾತ್ರ ಇದನ್ನು ಪಡೆಯಲು ಏನು ಮಾಡಬೇಕೆಂಬುದನ್ನು ಅರಿತಿರುವವರಾಗಿರುತ್ತಾರೆ. ಶ್ರೀಮಂತರಾಗಲು ಹಣವನ್ನು ಸಮೃದ್ದಿಗೊಳಿಸುವ ಕೆಲವು ವೃತ್ತಿಪರ ಹಾದಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಗಳಿಸಿದ ಹಣವನ್ನು ಸರಿಯಾಗಿ ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಮತ್ತು ಉಳಿಸುವುದನ್ನು ಅರಿತಿರಬೇಕು ಮತ್ತು ನಿಮ್ಮ ಜೀವನದ ಖರ್ಚುವೆಚ್ಚಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಕೆಲವೊಂದು ದೃಶ್ಯಗಳನ್ನು ನಾವು ನೋಡಿರಬಹುದು. ಶ್ರೀಮಂತ ಬಡವನಿಗೆ ತುಂಬಾ ವ್ಯತ್ಯಾಸಗಳನ್ನು ಮಾಡುವವರಿದ್ದಾರೆ.
ನಾವು ಒಂದು ವಿಚಾರವನ್ನು ಕಡ್ಡಾಯವಾಗಿ ತಿಳಿದಿರಬೇಕು. ಎಲ್ಲರೂ ತಾಯಿ ಗರ್ಭದಿಂದಲ್ಲೆ ಬೆಳೆದು ಈ ಪ್ರಪಂಚವನ್ನು ಕಂಡವರು. ಬರುವಾಗ ಯಾರು ಕೂಡ ಶ್ರೀಮಂತನಾಗಿ ಅಥವಾ ಬಡವನಾಗಿ ಬಂದಿಲ್ಲ. ಶ್ರೀಮಂತ ಅಥವಾ ಬಡ ಕುಟುಂಬದ ಮಗುವಾಗಿದ್ದರು ಬರುವಾಗ ದೇಹದಲ್ಲಿ ಒಂದೇ ಒಂದು ಬಟ್ಟೆ, ಆಭರಣವನನು ಧರಿಸಿ ಬಂದಿಲ್ಲ. ಬರುವಾಗಲು ಏನು ತಂದಿಲ್ಲ, ಹೋಗುವಾಗ ಕೂಡ ಏನು ಕೊಂಡೊಗುವುದಿಲ್ಲ. ಶ್ರೀಮಂತ ಎಂದ ತಕ್ಷಣ ಏನೇನೊ ಅಂದುಕೊಂಡು ಅವರೇ ದೇವರೆಂದು ಪೂಜಿಸುವವರು ಕೂಡ ಇದ್ದಾರೆ. ಅವರಲ್ಲಿ ಆಸ್ತಿ ಅಂತಸ್ತು ಇರಬಹುದು ಅದಕ್ಕಿಂತ ವಿಶಿಷ್ಟವಾಗಿರುವುದು ಏನು ಇರಲ್ಲ. ಬಡವಾನಾದರು ಶ್ರೀಮಂತರಾದರೂ ಇಬ್ಬರಲ್ಲಿಯೂ ಎಲ್ಲವೂ ಒಂದೇ ಇರುವುದು. ಅವನಲ್ಲಿ ಆಸ್ತಿ ಇದೆ ಇವನಲ್ಲಿ ಬಡತನ ಇದೆ ಅಷ್ಟೇ ವ್ಯತ್ಯಾಸ ಅದು ಬಿಟ್ಟು ಬೇರೆನಿಲ್ಲ. ಆ ಸಂಪತ್ತು ಕೊಟ್ಟವನು, ಇವನಿಗೆ ಬಡತನ ಕೊಟ್ಟವನು ಕೂಡ ಇವರನ್ನು ಸೃಷ್ಟಿಸಿದ ಸೃಷ್ಟಿಕರ್ತನೆಂದು ನಾವು ಮರೆಯಬಾರದು.
ಆ ಸಂಪತ್ತು ಈ ಬಡತನ ಯಾವಾಗ ಹೇಗೆ ಬೇಕಾದರೂ ಬದಲಾಗಬಹುದು. ಕೊಟ್ಟವನಿಗೆ ಹಿಂದೆ ಪಡೆಯುವ ಶಕ್ತಿ ಕೂಡ ಇದೆ ಎಂಬುದು ಮರೆಯಬಾರದು. ತುಂಬಾ ಜನರನ್ನು ನಾವು ಕಾಣಬಹುದು ಅವನ ಬಳಿ ಕೆಲವೊಂದು ಶ್ರೀಮಂತಿಕೆ ಇದ್ದರೆ ಸಾಕು ಎಷ್ಟೊಂದು ಗೌರವ, ಎಷ್ಟೊಂದು ಕಾಳಜಿ ಎಲ್ಲಿ ತನಕ ಎಂದರೆ ಅವನು ಕಾಲು ತೊಳೆದ ನೀರು ಕುಡಿಯುವಷ್ಟು ಅವನ ಭಕ್ತರಾಗಿರುತ್ತಾರೆ. ಪ್ರತಿಯೊಂದು ವಿಚಾರದಲ್ಲೂ, ಪ್ರತಿಯೊಂದು ಕಡೆಯೂ ಶ್ರೀಮಂತ ಮತ್ತು ಬಡವನಿಗೆ ತುಂಬಾ ವ್ಯತ್ಯಾಸಗಳನ್ನು ಮಾಡುತ್ತಾರೆ. ದುಡ್ಡು ಇದ್ದವನಿಗೆ ಒಂದು ಮರ್ಯಾದೆ ಇಲ್ಲದವನನ್ನು ಕೀಳಾಗಿ ನೋಡುವವರು. ಬೇರೆ ಕಡೆ ಬಿಡಿ ಸ್ವಂತ ಮನೆಯಲ್ಲಿ, ಕುಟುಂಬದಲ್ಲಿ ಬೇರೆ ಬೇರೆ ದೃಷ್ಟಿಯಲ್ಲಿ ನೋಡುವವರು ತುಂಬಾ ಜನ ಇರುತ್ತಾರೆ. ಸಮಾರಂಭದಲ್ಲಿ ದುಡ್ಡು ಇದ್ದವನಿಗೆ ಪ್ರತ್ಯೇಕ ಬೆಲೆ ಇಲ್ಲದವನು ಗೇಟ್ ಹೊರಗಡೆ ಇರುವುದನ್ನು ನೀವು ಕಂಡಿರಬಹುದು. ಅವನು ಕುಳಿತುಕೊಳ್ಳುವ ಆಸನ, ಬಡವ ಕುಳಿತುಕೊಳ್ಳುವ ಆಸನದ ವ್ಯತ್ಯಾಸ ಕಾಣುವಾಗಲೆ ನಾವು ಅರ್ಥೈಸಬೇಕು ಇಲ್ಲಿ ಎಷ್ಟೊಂದು ಮರ್ಯಾದೆ ಇದೆಯೆಂದು.
ಇನ್ನೊಂದು ಗಂಭೀರವಾದ ವಿಚಾರ ಏನೆಂದರೆ, ಯಾವುದಾದರೂ ನ್ಯಾಯ, ತೀರ್ಮಾನ, ನಿಯಮಗಳನ್ನು ಮಾಡುವುದು. ಇದು ನಿಯಮಗಳು ಎಲ್ಲರಿಗೂ ಅನ್ವಯವಾಗಿರುತ್ತದೆ ಆದರೆ ಪಾಲಿಸುವುದು ಬಡ ಜೀವಿ ಮಾತ್ರ. ಶ್ರೀಮಂತ ಆ ನಿಯಮಗಳನ್ನು ಉಲ್ಲಂಘಿಸಿದರು ಕೇಳುವವರು, ಹೇಳುವವರು ಯಾರು ಇಲ್ಲ. ಅವರ ಆಡಂಬರದ ಮುಂದೆ ಯಾರು ಕೂಡ ಧ್ವನಿ ಎತ್ತಲು ಮುಂದೆ ಬರುವುದಿಲ್ಲ. ಇರಲಿ ಬಿಡಿ ನಮಗ್ಯಾಕೆ ಎಂದು ಬಿಟ್ಟು ಬಿಡುತ್ತಾರೆ. ಅವರಲ್ಲಿ ಬೇಕಾದಷ್ಟು ದುಡ್ಡು ಇದೆ ಅವರ ವಿಷಯಕ್ಕೆ ನಾವು ಹೋಗುವಷ್ಟು ದೊಡ್ಡವರಲ್ಲವೆಂದು ಅಥವಾ ನಾವು ಬದುಕುವುದೆ ಅಂತಹ ವಿಐಪಿಗಳ ದುಡ್ಡಿನಲ್ಲಿಯೆಂದು ಬಿಟ್ಟು ಬಿಡುವವರೆ ಹೆಚ್ಚು. ಇಂತಹ ಭಯದಿಂದಲೇ ಕೆಲವು ಶ್ರೀಮಂತರು ಹಾರಾಡುತ್ತಿರುವುದು ಅಷ್ಟೇ. ಅದೇ ಒಬ್ಬ ಬಡಪಾಯಿ ಬಡವನೊಬ್ಬ ನಿಯಮ ಮೀರಿದರೆ ಸಾಕು ಅವನನ್ನು ಊರಿನಿಂದ ಗಡಿಪಾರು ಮಾಡುವಷ್ಟು ಹಿಂಸಿಸುತ್ತಾರೆ. ಇನ್ನು ಬಡ ಕುಟುಂಬದ ಮನೆಯಲ್ಲಿ ಮದುವೆ ನಡೆಯಬೇಕಾದರೆ ಆ ಊರಿನಲ್ಲಿ ಸಾಕಷ್ಟು ನಿಯಮ, ನಿಯಂತ್ರಣಗಳಿರುತ್ತಾರೆ, ಅದೇ ನಿಯಮಕ್ಕೊಳಪಟ್ಟ ಶ್ರೀಮಂತನ ಆಡಂಬರ ಮದುವೆಗೆ ಯಾವ ನಿಯಮಗಳನ್ನು ಪ್ರಕಟಿಸಲು ಮುಂದೆ ಬರಲ್ಲ ಯಾಕೆ.? ಇಷ್ಟು ಮಾತ್ರವಾಗಿದ್ದರೆ ಸಣ್ಣ ವಿಷಯವೆಂದು ಮರೆಯಬಹುದು ಆದರೆ ಬಡವನ ವಿಷಯದಲ್ಲಿ ಧ್ವನಿ ಎತ್ತಿದವರು, ಅದನ್ನು ಖಂಡಿಸುವವರು ಶ್ರೀಮಂತನ ಆಡಂಬದಲ್ಲಿ ಹೊಟ್ಟೆ ತುಂಬಿಸಿ ಬರುವುದು ಯಾವ ನ್ಯಾಯ.? ಕೇವಲ ಅವನಲ್ಲಿರುವ ದುಡ್ಡಿನ ಭಯಕ್ಕೆ ಅಥವಾ ಅವನ ದುಡ್ಡಿನ ಆಸೆಗೆ ಮೌನವಾಗಿರುವುದು ತುಂಬಾ ನಾಚಿಕೆಯ ಸಂಗಾತಿ.
ಬಡವ ಬಡವನೆಂದು ತುಂಬಾ ಕೀಳಾಗಿ ಯಾರನ್ನು ನೋಡಬೇಡಿ. ಆ ಬಡಜೀವಿಗಳನ್ನು ಹೆದರಿಸಿ, ಬೆದರಿಸಿ ನಡೆಯಬೇಡಿ. ಒಂದು ರೂಪಾಯಿ ಕೊಟ್ಟಾದರು ಒಂದು ಜೀವವನ್ನು ಉಳಿಸುವವನೆ ನಿಜವಾದ ಶ್ರೀಮಂತ. ನನ್ನಲ್ಲಿ ಬೇಕಾದಷ್ಟಿದೆ ನಿನ್ನಲ್ಲಿ ಇಲ್ಲವಾಗಿರಬಹುದು ಅಷ್ಟೇ. ಇದನ್ನೆಲ್ಲ ನಮ್ಮ ಸೃಷ್ಟಿಕರ್ತ ನಮಗೆ ಕೊಟ್ಟು ಪರೀಕ್ಷಿಸುತ್ತಿದ್ದಾನೆ ಅಷ್ಟೆ. ಅದನ್ನು ಹಿಂದೆ ಪಡೆದರೆ ಎಲ್ಲರೂ ಕೂಡ ಬಡವರೆ.
ಇಲ್ಲಿ ಜೀವಿಸುವವರೆಲ್ಲ ವಲಸೆಗಾರರೆ ಯಾರು ಕೂಡ ಮೇಲಲ್ಲ ಕೀಳಾಲ್ಲ ಎಲ್ಲರೂ ಕೂಡ ಒಂದೆ. ಎಲ್ಲರೂ ಒಂದಾಗಿ ಜೀವಿಸಿ, ಎಲ್ಲರಿಗೂ ಒಂದೇ ನ್ಯಾಯ, ನೀತಿ, ನಿಯಮಗಳನ್ನು ನೀಡಿ ಎಲ್ಲರನ್ನು ಒಂದಾಗಿ ಕಾಣುವವನು ನಿಜವಾದ ಮನುಷ್ಯ. ಕೇವಲ ಹಣದ ಆಸೆಯಲ್ಲಿ ಬಡವ ಶ್ರೀಮಂತನನ್ನು ಬೇರೆ ಬೇರೆಯಾಗಿ ಕಾಣುವವನು ಜೀವಿಸಿಯು ಫಲವಿಲ್ಲ. ಶ್ರೀಮಂತಿಕೆ ಇರಲಿ ಇರದೆ ಇರಲಿ ಎಲ್ಲರೂ ಒಂದೇ ಎಲ್ಲರಿಗೂ ಒಂದೇ ನ್ಯಾಯ ನಿಯಮಗಳನ್ನು ಪ್ರಕಟಿಸಿ. ಅದು ಬಿಟ್ಟು ಯಾವುದು ತಿಳಿಯದ, ಏನು ಅರಿಯದ ಬಡವನ ಮೇಲೆ ಬಿದ್ದು ಅವನ ನೆಮ್ಮದಿ ಕಳೆದುಕೊಳ್ಳಬೇಡಿ. ಅವನಿಗೆ ಆಸೆ ಇದೆ ಅವನ ಮಕ್ಕಳಿಗೂ ಸಾಕಷ್ಟು ಆಸೆ ಇರುತ್ತವೆ ಅವನಿಗೆ ಆಡಂಬರ ಮಾಡಲು ಗೊತ್ತಿಲ್ಲವೆಂದಲ್ಲ ಮನಸ್ಸು ಮಾಡಿದರೆ ಸಾಲ ಮಾಡಿಯಾದರು ಮಾಡಬಹುದು ಆದರೆ ನಿಯಮಗಳನ್ನು ಉಲ್ಲಂಘಿಸುವಷ್ಟು ಅವನು ದಡ್ಡನಾಗಿರಲ್ಲ. ಭಯದಿಂದ ಅಧಿಕಾರ ನಡೆಸುವವರು ರಾಜಿನಾಮೆಕೊಟ್ಟು ಶ್ರೀಮಂತನ ಪಿಎ ಆಗಿ ಇರುವುದೆ ಸೂಕ್ತ ಅನಿಸುತ್ತವೆ.
– ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.