(www.vknews.in) : ಇದೀಗ ಲೇಖಕಿಯರಿಂದ ಟ್ರೆಂಡ್ ಆಗಿ ಮುಖಪುಟಗಳಲ್ಲಿ ರಾರಾಜಿಸುತ್ತಿರುವ ಈ “ಅಬಾಬಿ” ಅನ್ನುವ ಅಂಕಿತ ನಾಮವನ್ನೊಳಗೊಂಡ ಐದು ಸಾಲಿನ ಕಾವ್ಯರೂಪಕವು ಎಲ್ಲರ ಮನಸೂರೆಗೊಂಡು ಮನೆ ಮಾತಾಗಿ ಬಿಟ್ಟಿದೆ.
ಒಂದು ಸುಂದರ ವಾಟ್ಸಪ್ ಬಳಗದ ಬ್ಯಾರಿ ಲೇಖಕಿಯರಿಂದ ಮೊದಲ ಬಾರಿ ಅನಾವರಣಗೊಂಡ ಸುಂದರ ಅಬಾಬಿಗಳು ಓದುಗರನ್ನು ಬಹಳವೇ ಆಕರ್ಷಿಸಿ ಅದ್ಭುತ ಅಲೆಯನ್ನು ಎಬ್ಬಿಸಿದೆ.
ಕೆಲವು ಸಾಹಿತ್ಯಾಭಿರುಚಿ ಹೊಂದಿರುವ, ಇನ್ನು ಕೆಲವು ಪ್ರತಿಭಾವಂತ ಬ್ಯಾರಿ ಲೇಖಕಿಯರನ್ನು ಮುಖಪುಟಗಳಿಂದ ಹಾಗೂ ವಾಟ್ಸಪ್ ಮುಖಾಂತರ ಗುರುತಿಸಿಕೊಂಡು ಒಂದು ‘ವಾಟ್ಸಪ್ ಬಳಗ’ವನ್ನು ಕಟ್ಟಿ ಇವರಿಗೆ ಸಾಹಿತ್ಯಾತ್ಮಕವಾಗಿ ಚಟುವಟಿಕೆಗಳನ್ನಿತ್ತು ಹುರಿದುಂಬಿಸುತ್ತಾ ಬಂದಿರುವುದಲ್ಲದೇ, ಹಲವಾರು ವಿಚಾರಗಳನ್ನು ವಿನಿಯೋಗಿಸಿ, ಅವರೊಳಗಿನ ಪ್ರತಿಭೆಗೆ ನೀರೆರೆದು ಪೋಷಿಸುತ್ತಾ ಅವಕಾಶಗಳನ್ನು ಕಲ್ಪಿಸುತ್ತಲಿರುವ ಒಬ್ಬರು ಮಾರ್ಗದರ್ಶಕಿಯು ಬಳಗದವರಿಗೆ ಬೆನ್ನೆಲುಬಾಗಿ ನಿಂತಿರುವವರು. ತಮ್ಮಯ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಬಳಗದ ವನಿತೆಯರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರೇ ಕನ್ನಡ, ಬ್ಯಾರಿ ಸಾಹಿತ್ಯಲೋಕದ ದಿಗ್ಗಜರೆನಿಸಿ ಕೊಂಡಿರುವ ಚಿರಪರಿಚಿತರಾದ ಹಫ್ಸಾ ಬಾನು ಬೆಂಗಳೂರು (ಹಾರ್ಟ್ ಬೀಟ್).
ಇವರು ಕಟ್ಟಿದ ‘ಕನ್ನಡ-ಬ್ಯಾರಿ ಲೇಖಕಿಯರ ಸಾಹಿತ್ಯ ಕೂಟ’ ಈ ಸಾಹಿತ್ಯ ವೇದಿಕೆಯ ಸದಸ್ಯರಲ್ಲಿ ಒಬ್ಬಳಾಗಿರುವ ನಾನು ನನ್ನ ಸ್ವಂತ ಅನುಭವದಿಂದ ಹೇಳಬೇಕೆಂದರೆ, ಲೇಖಕಿ ಬಳಗವೆಂದರೆ ನಮಗೆ ಸ್ವಂತ ಮನೆಗಿಂತಲೂ ಆತ್ಮೀಯವಾಯಿತು.‘ಹಫ್ಸಾ ದೀದಿ’ ಎಂದೇ ಇವರನ್ನು ಕರೆಯುವುದು ನಾವು. ಇವರ ನೇತೃತ್ವದಿಂದಾಗಿ ನಮ್ಮೊಳಗಿನ ಧೈರ್ಯವೂ ಇಮ್ಮಡಿಯಾಯಿತು. ಲೇಖಕಿಯರಿಗಾಗಿ ಸಮಯ ಮೀಸಲಿಟ್ಟು ಬಳಗದಲ್ಲಿ ತಮಾಷೆ, ನಗುವಿನಿಂದ ಕೂಡಿದ ಹಾಸ್ಯ ಚಟಾಕಿಗಳನ್ನು ಹಾರಿಸುವ ಸದಾ ಉತ್ಸಾಹದ ಚಿಲುಮೆಯೇ ನಮ್ಮ ಈ ಹಾರ್ಟ್ ಬೀಟ್ ದೀದಿ.
ಸಂಸಾರದ ಗಾಡಿಯ ಚಕ್ರದಡಿಯಲ್ಲಿ ಸಾಹಿತ್ಯ ಪ್ರತಿಭೆಗಳು ಅಪ್ಪಚ್ಚಿಯಾಗದಿರಲೆಂದು ಕಳಕಳಿ ತೋರಿದವರು ಈ ಹಫ್ಸಾ ಬಾನು. ಇವರ ನೇತೃತ್ವದ ಚಟುವಟಿಕೆಯಲ್ಲಿ ನಾವು ಕಲಿತು ಬರೆದ ಕತೆ, ಕವನ, ಲೇಖನ, ಚುಟುಕು, ಹನಿಗವನ ಹೀಗೇ ಸಾಹಿತ್ಯದ ಹಲವಾರು ರೂಪಕಗಳನ್ನು ತಾವೇ ಪ್ರಕಟಣೆಗೂ ನೀಡುತ್ತಾ ನಮ್ಮನ್ನು ಪ್ರೋತ್ಸಾಹಿಸುತ್ತಾ ಬಂದಿರುವರು. ಹೀಗೆ ತಮ್ಮೆಲ್ಲಾ ಬರಹಗಳಿಗೆ ಎಲ್ಲರ ಮೆಚ್ಚುಗೆ ಪಡೆಯುತಿದ್ದ ನಮ್ಮ ಲೇಖಕಿಯರ ತಂಡಕ್ಕೆ ಇದೀಗ ಹಫ್ಸಾ ಬಾನು ಅವರು ‘ಅಬಾಬಿ’ ರಚನೆಯ ಬಗ್ಗೆ ತಿಳಿಸಿದರು,
ಐದು ಸಾಲಿನ ಈ ಕಾವ್ಯರೂಪಕವನ್ನು ಅತ್ಯಲ್ಪ ಪದಗಳ ಮೂಲಕ ನಾಲ್ಕನೇ ಸಾಲಿನಲ್ಲಿ ಅಂಕಿತ ನಾಮವನ್ನು ಸೇರಿಸಿ ರಚಿಸಿವುದಾಗಿದೆ. ಅಬಾಬಿಯು ಅತೀ ಸುಂದರ ಸಂವಹನ ಎಂದೆಲ್ಲಾ ಬಳಗಕ್ಕೆ ವಿವರಿಸುತ್ತಾ ನಮ್ಮನ್ನೆಲ್ಲ ಪ್ರೋತ್ಸಾಹಿಸಿದರು.ಈ ಅಬಾಬಿ ಎಂಬ ಹೊಸ ಹೆಸರು ಕೇಳಿದಾಗ ನಾವೂ ಅಬಾಬಿ ಬರೆಯಲೇ ಬೇಕೆನ್ನುವ ಹುಮ್ಮಸ್ಸು ನಮ್ಮೊಳಗೆ ಅಧಿಕವಾಯಿತು. ಬಳಗದ ಲೇಖಕಿಯರೆಲ್ಲ ಚಂದವಾಗಿ ತಮ್ಮ ತಮ್ಮ ಅಂಕಿತ ನಾಮದೊಂದಿಗೆ ಅಬಾಬಿಯನ್ನು ರಚಿಸಿಯೇ ಬಿಟ್ಟೆವು. ಹಾಗೂ ತಮ್ಮ ತಮ್ಮ ಫೇಸ್ಬುಕ್ ನ ಗೋಡೆಗಳಲ್ಲಿ ಬರೆದದ್ದನ್ನು ಹರಿಯಬಿಟ್ಟಿದ್ದೇ ತಡ. ತಂಡಪೋ ತಂಡವಾಗಿ ಈ ಅಬಾಬಿಯ ಬಗ್ಗೆ ಪ್ರಶಂಸೆಯ ಸುರಿಮಳೆ ಬರತೊಡಗಿತ್ತು.
ಮೊದಲು ಕುತೂಹಲ ತೋರಿದವರೆಲ್ಲರೂ, “ಅಬಾಬಿ”ಯ ಬಗ್ಗೆ ಅರಿತುಕೊಂಡು ತಾವೂ ಅಬಾಬಿ ರಚಿಸಿ ತಮ್ಮ ತಮ್ಮ ಖಾತೆಯ ಫೇಸ್ಬುಕ್, ವಾಟ್ಸಪ್ ಇನ್ಟ್ರಾಗ್ರಾಮಿನಲ್ಲಿ ಹರಿಯ ಬಿಟ್ಟು ಸಂತೋಷ ಪಟ್ಟುಕೊಳ್ಳುತ್ತಿರುವುದು ನಮಗೆಲ್ಲಾರಿಗೂ ಬಹಳ ಹರುಷವನ್ನು ತಂದು ಕೊಟ್ಟಿದೆ.
~ ಸಾರಾಅಲಿ ಪರ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.