ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪರಿಷತ್ ವಿಪಕ್ಷ ನಾಯಕರಾಗಿ ಬಿಕೆ ಹರಿಪ್ರಸಾದ್ರವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ಸಿ ಸಿಎಂ ಇಬ್ರಾಹಿಂ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟೆವು, ಸಿದ್ದರಾಮಯ್ಯಗಾಗಿ ದೇವೇಗೌಡರನ್ನು, ಜೆಡಿಎಸ್ ಪಕ್ಷವನ್ನು ಬಿಟ್ಟಿದ್ದೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಿದ್ರು. ಇದು ತಿಳಿದು ಬಾದಾಮಿಯಲ್ಲಿ ನಾಮಪತ್ರ ಹಾಕಿಸಿದ್ದೆ. ಅಲ್ಲಿನ ಎಲ್ಲ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿದ್ದೆ. ಬಾದಾಮಿಯಲ್ಲಿ ಅವರು ಗೆದ್ದು ಶಾಸಕರು ಕೂಡ ಆದರು. ಅವರಿಗೆ ನಾನು ಹೊಸ ರಾಜಕೀಯ ಜೀವನ ಕೊಟ್ಟೆ. ಆದರೆ ಅವರು ನಮಗೆ ಇಂದು ಹೊಸ ಗಿಫ್ಟ್ ಕೊಟ್ಟಿದ್ದಾರೆ, ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ ಎಂದು ಹೇಳಿದ್ದಾರೆ.
ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ ಸಿಎಂ ಇಬ್ರಾಹಿಂ, ದೇವೇಗೌಡರನ್ನು ಕೇಳಿ ಮುಂದೆ ತೀರ್ಮಾನ ಮಾಡುತ್ತೇನೆ. ಎಐಸಿಸಿ ನನಗೆ ಸಂಕ್ರಾಂತಿಗೆ ಶುಭಾಶಯವನ್ನು ನೀಡಿದೆ. ಎಐಸಿಸಿ ಗಿಫ್ಟ್ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಹಲವರು ಹೋಗುವ ವಾತಾವರಣ ಇತ್ತು. ಆದರೆ ಈಗ ಪರಿಸ್ಥಿತಿ ತಿರುಗಿಬಿದ್ದಿದೆ. ಕಾಂಗ್ರೆಸ್ ಮತದಾರರು ಕೇವಲ ಸಾಬರು. ಸಾಬರು ಹೋದ ಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನು ಎಂದು ಮುಂದಿನ ಚುನಾವಣೆಯಲ್ಲಿ ತಿಳಿಯುತ್ತೆ ಎಂದು ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.