ಅಪ್ಪಾ.. ಸ್ವಲ್ಪ ಇಲ್ಲಿ ನೋಡಪ್ಪಾ..
(ವಿಶ್ವ ಕನ್ನಡಿಗ ನ್ಯೂಸ್) : ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ, ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಲ್ಪ ಬದಲಾವಣೆ ಕಾಣುತ್ತಿದೆ. )
ಈ ದೇಶದ ಇಂದಿನ ಎಲ್ಲಾ ಪರಿಸ್ಥಿತಿಗಳ ಬಹುಮುಖ್ಯ ಪಾತ್ರದಾರಿ ಅಪ್ಪ, ಅಮ್ಮ ಪೋಷಕ ಪಾತ್ರದಾರಿ ಮಾತ್ರ.
ಇವತ್ತಿನ ಸಂದರ್ಭದಲ್ಲಿ ನಿಮಗೆ ನಮ್ಮ ಒಟ್ಟು ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದ್ದರೆ ಅದಕ್ಕೆ ಅಪ್ಪ ಕಾರಣ ಅಥವಾ ಇದರ ಬಗ್ಗೆ ಅತೃಪ್ತಿ ಅಸಹನೆ ಇದ್ದರೆ ಅದಕ್ಕೂ ಅಪ್ಪನೇ ಕಾರಣ.
ಅಪ್ಪ, ಈ ಸಂಬಂಧವನ್ನು ಅರ್ಥೈಸುವುದು ಹೇಗೆ.
ಸ್ವಂತ ಮಕ್ಕಳು ಅಪ್ಪನನ್ನು ಆಕಾಶಕ್ಕೆ ಏರಿಸುತ್ತವೆ, ನನ್ನ ಅಪ್ಪನಂತ ಅಪ್ಪ ಯಾರೂ ಇಲ್ಲ, ಆತನೇ ಪ್ರತ್ಯಕ್ಷ ದೇವರು, ನನ್ನ ಸ್ಪೂರ್ತಿ, ನನ್ನ ಮಾರ್ಗದರ್ಶಕ, ನನ್ನ ಬದುಕು ಕಲಿಸಿದವ ಮುಂತಾಗಿ ವರ್ಣಿಸುತ್ತಾರೆ. ( ಕೆಲವು ಅಪರೂಪದ ಪ್ರಕರಣಗಳಲ್ಲಿ ಅಪ್ಪ ಮತ್ತು ಮಕ್ಕಳ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯ ದ್ವೇಷ ಅಸೂಯೆ ಹೊಡೆದಾಟಗಳು ಸಹ ಇವೆ )
ಹಾಗಾದರೆ ಅಪ್ಪಂದಿರೆಲ್ಲಾ ಶ್ರೇಷ್ಠವೇ, ಅಪ್ಪ ಅತ್ಯಂತ ಒಳ್ಳೆಯ ವ್ಯಕ್ತಿಯೇ, ಅಪ್ಪ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಯೇ ? ಅಪ್ಪ ಇದು ವೈಯಕ್ತಿಕ ಸಂಬಂಧ ಮಾತ್ರವೇ ?…..
ಇಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಸಾಮಾನ್ಯವಾಗಿ ಅಪ್ಪ ತನ್ನ ಮಕ್ಕಳಿಗಾಗಿ ಎಲ್ಲವನ್ನೂ ಮಾಡುತ್ತಾನೆ. ತನ್ನ ತನು ಮನ ಧನಗಳನ್ನು ಮಕ್ಕಳಿಗೆ ಅರ್ಪಿಸುತ್ತಾನೆ. ಒಂದು ರೀತಿಯ ತ್ಯಾಗ ಜೀವಿ…
ಅಪ್ಪನ ಇನ್ನೊಂದು ಮುಖವೂ ಇದೆ.
ಬಹಳಷ್ಟು ಅಪ್ಪಂದಿರು ಕೌಟುಂಬಿಕವಾಗಿ ತುಂಬಾ ಒಳ್ಳೆಯವರೇ ಆಗಿರಬಹುದು ಆದರೆ ಈ ವ್ಯವಸ್ಥೆಯಲ್ಲಿ ಅದೇ ಅಪ್ಪ ತುಂಬಾ ಕೆಟ್ಟವನು ಆಗಿರುತ್ತಾನೆ. ತನ್ನ ಮಕ್ಕಳ ಶ್ರೇಯೋಭಿವೃದ್ದಿಗೆ ಕಾನೂನು ಬಾಹಿರ ಅನೈತಿಕ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಇಡೀ ವ್ಯವಸ್ಥೆಯ ಅಧೋಗತಿಗೆ ತಾನೂ ಕಾರಣನಾಗಿರುತ್ತಾನೆ.
ಇಲ್ಲಿ ಒಂದು ಸೂಕ್ಷ್ಮತೆ ಅಡಗಿದೆ. ನೀವು ನಿಮ್ಮ ಮಕ್ಕಳನ್ನು ಎಷ್ಟೇ ಪ್ರೀತಿಯಿಂದ, ಎಷ್ಟೇ ಶಿಸ್ತಿನಿಂದ, ಎಷ್ಟೇ ಪ್ರಾಮಾಣಿಕರಾಗಿ ಬೆಳೆಸಿದರು ಅದರ ಫಲಿತಾಂಶ ಈ ವ್ಯವಸ್ಥೆ ಎಷ್ಟು ಆ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಈ ಸಮಾಜದಲ್ಲಿ ನೀವು, ನಿಮ್ಮ ಮಕ್ಕಳು, ನಿಮ್ಮ ಕುಟುಂಬ ಮಾತ್ರ ವಾಸಿಸುತ್ತಿಲ್ಲ. ನಿಮ್ಮಂತೆಯೇ ಅನೇಕ ಕುಟುಂಬಗಳ ಒಟ್ಟು ವ್ಯವಸ್ಥೆ ಈ ಸಮಾಜ. ನೀವು ಕಲಿಸುವ ಮೌಲ್ಯಗಳು ಸಮಾಜದಲ್ಲಿ ಉಪಯೋಗಕ್ಕೆ ಬರಬೇಕಾದರೆ ಅದನ್ನು ಉಳಿಸಬೇಕಾದ ಜವಾಬ್ದಾರಿ ಸಹ ಅಪ್ಪನದೇ ಆಗಿರುತ್ತದೆ.
ಪ್ರೀತಿ ಕರುಣೆ ಸರಳತೆ ಕ್ಷಮಾಧಾನ ಪ್ರಾಮಾಣಿಕತೆ ಸತ್ಯ ಶ್ರಮ ದಕ್ಷತೆ ಎಲ್ಲವೂ ಅಡಕವಾಗಿರುವ ವ್ಯಕ್ತಿತ್ವ ತನ್ನ ನಿಜ ಸ್ವರೂಪದಲ್ಲಿ ಅರಳಲು ನಮ್ಮ ಸಾಮಾಜಿಕ ವ್ಯವಸ್ಥೆಯೂ ಅದಕ್ಕೆ ಪೂರಕವಾಗಿರಬೇಕು. ಅಪ್ಪ ಭ್ರಷ್ಟನಾಗಿ ಆ ಹಣವನ್ನು ತಂದು ತನ್ನ ಮಕ್ಕಳನ್ನು ಪ್ರೀತಿಯಿಂದ ಸಾಕಿದರೆ ಮುಂದೆ ಅದೇ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆದು ದೊಡ್ಡವರಾಗುವ ಮಕ್ಕಳಿಗೆ ಖಂಡಿತ ಭ್ರಷ್ಟ ವ್ಯವಸ್ಥೆಯ ವಿವಿಧ ಮುಖಗಳು ಪರಿಚಯವಾಗುತ್ತದೆ. ಆಗ ಆ ಮಕ್ಕಳು ತುಂಬಾ ನಿರಾಶರಾಗಿ ಜಿಗುಪ್ಸೆ ಹೊಂದಬಹುದು ಅಥವಾ ವ್ಯವಸ್ಥೆಯ ಭಾಗವಾಗಿ ತಾವು ಭ್ರಷ್ಟರಾಗಬಹುದು.
ಇವತ್ತಿನ ಸಾಮಾಜಿಕ ಮೌಲ್ಯಗಳು ಹೇಗಿವೆ ಎಂದರೆ ಪ್ರೀತಿ ತನ್ನ ಮೂಲ ಸ್ವರೂಪದಲ್ಲಿ ಉಪಯೋಗವೇ ಬರುವುದಿಲ್ಲ. ಪ್ರೀತಿಯ ತರಹ ಇರಬೇಕು, ನಿಜವಾದ ಪ್ರೀತಿ ಮಾಡಬಾರದು. ಮಾಡಿದರೆ ಹುಚ್ಚರಾಗುವಿರಿ. ಅದೇರೀತಿ ಸ್ನೇಹದ ತರಾ ಇರಬೇಕು, ಒಳ್ಳೆಯವರ ತರಹ ಇರಬೇಕು, ಪ್ರಾಮಾಣಿಕರ ತರಾ ಇರಬೇಕು, ಸತ್ಯದ ತರಹ ಇರಬೇಕು. ನಿಜವಾಗಿಯೂ ಅದನ್ನು ಹೇಳಬಾರದು. ಆಗ ಅದು ಹೆಚ್ಚು ಮೌಲ್ಯ ಪಡೆಯುತ್ತದೆ. ಅಂದರೆ ಬ್ಯಾಲೆನ್ಸ್ ಅಥವಾ ಮ್ಯಾನೇಜ್ ಎಂಬ ಸ್ಥಿತಿಗೆ ಬಂದು ತಲುಪಿದೆ. ನಿಜವಾದ ಮಾನವೀಯ ಮೌಲ್ಯಗಳ ಜಾಗದಲ್ಲಿ ಕೃತಕತೆ ಬಂದು ಕುಳಿತಿದೆ.
ಈ ಸನ್ನಿವೇಶದಲ್ಲಿ ಅಪ್ಪ ಮಕ್ಕಳಿಗೆ ಹೇಳಿ ಕೊಡುವ ಪಾಠವಾದರೂ ಏನು. ಅಪ್ಪ ಹೇಳಿಕೊಡುವುದಕ್ಕಿಂತ ತಾನು ಏನು ಅನುಸರಿಸುತ್ತಾನೆ, ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಮುಖ್ಯ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಮಕ್ಕಳು ದೊಡ್ಡವರು ಹೇಳುವುದಂತೆ ಮಾಡುವುದಿಲ್ಲ ಅವರು ಮಾಡಿದಂತೆ ಮಾಡುತ್ತಾರೆ.
ಆದ್ದರಿಂದ ಅಪ್ಪ ಎಂಬುದು ಕೇವಲ ವೈಯಕ್ತಿಕ ಸಂಬಂಧ ಮತ್ತು ಜವಾಬ್ದಾರಿ ಮಾತ್ರವಲ್ಲ ಸಾಮಾಜಿಕ ಸಂಬಂಧ ಮತ್ತು ಜವಾಬ್ದಾರಿಯೂ ಇದೆ. ಅದರ ನಿರ್ವಹಣೆಯಲ್ಲಿ ಆತ ವಿಫಲನಾಗಿರುವುದೇ ಇಂದಿನ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ.
ಪರಿಸರದಿಂದ ಪಾರಮಾರ್ಥಿಕದವರೆಗೆ ಅಪ್ಪನ ವ್ಯಕ್ತಿತ್ವದ ಪ್ರತಿಬಿಂಬಿವೇ ಈ ಸಮಾಜ. ಅಪ್ಪ ನೀನು ನಮ್ಮ ಕುಟುಂಬದ ಅಪ್ಪ ಮಾತ್ರವಲ್ಲ ಈ ದೇಶ ಈ ಸಮಾಜಕ್ಕೂ ಅಪ್ಪನೇ. ಅದನ್ನು ನೀನು ಅರಿತುಕೊಂಡು ಜೀವಿಸುವುದೇ ನಿನ್ನ ಮಕ್ಕಳಿಗೆ ನೀನು ಕೊಡುವ ಬಹುದೊಡ್ಡ ಕೊಡುಗೆ..
ಆ ದಿನಗಳು ಬೇಗ ಬರಲಿ ಎಂದು ಆಶಿಸುತ್ತಾ..
— ವಿವೇಕಾನಂದ. ಹೆಚ್.ಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.