ಗದಗ(ವಿಶ್ವಕನ್ನಡಿಗ ನ್ಯೂಸ್):ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ 19ರ ಹರೆಯದ ಯುವಕ ಸಮೀರ್ ಶಹಾಪುರ ಜನವರಿ 17, 2022 ರಂದು ಗುಂಪೊಂದರಿಂದ ಥಳಿತಕ್ಕೊಳಗಾದ. ಬರ್ಬರ ದಾಳಿಗೊಳಗಾಗಿದ್ದ ಆತ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಸಮೀರ್ ಜನವರಿ 17ರಂದು ರಾತ್ರಿ ಸುಮಾರು 7:30ಕ್ಕೆ ತನ್ನ ಸ್ನೇಹಿತ ಶಂಶೀರ್ ಖಾನ್ ನೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರಿಬ್ಬರ ಮೇಲೆ ಖಡ್ಗ ಮತ್ತು ರಾಡ್ ನಿಂದ ಗುಂಪೊಂದು ದಾಳಿ ನಡೆಸಿತ್ತು. ಅದೃಷ್ಟವಶಾತ್, ಶಂಶೀರ್ ನ ಎದೆಯ ಬಳಿ ತಿವಿಯಲಾಗಿತ್ತಾದರೂ ಆತ ಬದುಕುಳಿದ. ನಿರಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದ ಆತ ಮಾನಸಿಕ ಆಘಾತದಿಂದ ಬಳಲುತ್ತಿದ್ದಾನೆ ಮತ್ತು ತಾನು ನರಗುಂದಕ್ಕೆ ಮರಳಿದರೆ ಏನಾಗಬಹುದು ಎಂದು ಚಿಂತಿತನಾಗಿದ್ದಾನೆ.
ಎಲ್ಲಾ ಲೆಕ್ಕಾಚಾರಗಳ ಪ್ರಕಾರ, ದುಷ್ಕರ್ಮಿಗಳ ಗುಂಪು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಮತ್ತು ಬಜರಂಗದಳದೊಂದಿಗೆ ನಿಷ್ಠೆ ಹೊಂದಿದೆ ಎಂದು ಹೇಳಲಾಗಿದೆ. ನಂತರ ಪೊಲೀಸರು ಬಜರಂಗ ದಳದ ಸದಸ್ಯ ಸಂಜು ಲಾಲ್ವಡೆ ಸಹಿತ 4 ಮಂದಿಯನ್ನು ಬಂಧಿಸಿದ್ದಾರೆ. ಸಮೀರ್ ತನ್ನ ಪೋಷಕರು, ಇಬ್ಬರು ಸಹೋದರರು ಮತ್ತು ಸಹೋದರಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸಮೀರ್ ನ ತಂದೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ತಾಯಿ ಗೃಹಿಣಿ. ಶಂಶೀರ್ ನ ತಂದೆ ಸಣ್ಣ ಮಟ್ಟದ ಬಟ್ಟೆ ವ್ಯಾಪಾರಿ ಮತ್ತು ತಾಯಿ ಗೃಹಿಣಿಯಾಗಿದ್ದಾರೆ.
ನರಗುಂದವು ಈ ಹಿಂದೆ ಕೆಲವೊಂದು ಸಣ್ಣ ಪುಟ್ಟ ಹಿಂದು-ಮುಸ್ಲಿಮ್ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಕಳೆದ 2 ವರ್ಷಗಳಲ್ಲಿ ದ್ವೇಷ ಭಾಷಣ ಮತ್ತು ಮುಸ್ಲಿಮರಿಗೆ ಕಿರುಕುಳದ ಘಟನೆಗಳು ನಿರಂತರ ಏರಿಕೆಯಾಗಿರುವುದು ಕಂಡು ಬಂದಿದ್ದು, ನವೆಂಬರ್ 2021ರ ವೇಳೆಗೆ ಇದು ತೀವ್ರಗತಿಯಲ್ಲಿತ್ತು.
ಕಳೆದ ನವೆಂಬರ್ ಕೊನೆ ವಾರದಲ್ಲಿ ಅಝೀಮ್ ಎಂಬ ಕಾಲೇಜು ವಿದ್ಯಾರ್ಥಿ ಬಜರಂಗದಳದ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ. ಆನಂತರ, ಸಮೀರ್ ಹತ್ಯೆ ಆರೋಪಿ ಸಹಿತ ಗುಂಪೊಂದು ಅಝೀಮ್ ಮನೆಗೆ ತೆರಳಿತ್ತು. ನಂತರ ಅಲ್ಲಿ ಹೊಡೆದಾಡ ನಡೆದಿದ್ದು, ಅಝೀಮ್ ವಿರುದ್ಧ ಎಫ್.ಐ.ಆರ್. ದಾಖಲಾಗಿತ್ತು.
ಇದರ ನಂತರ ಕೆಲವೇ ದಿನಗಳೊಳಗಾಗಿ, ಸಿದ್ದೇಶ್ವರಿ ಸರಕಾರಿ ಕಾಲೇಜಿನ 17ರ ಹರೆಯದ ವಿದ್ಯಾರ್ಥಿ ಝೈದ್ ನನ್ನು 100-150 ಮಂದಿಯ ತಂಡ ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಿತ್ತು. ಇದರಲ್ಲಿ ಬಹುತೇಕ ಮಂದಿ ಬಿಜೆಪಿಯ ವಿದ್ಯಾರ್ಥಿ ಅಂಗ ವಾಗಿರುವ ಎಬಿವಿಪಿಗೆ ಸೇರಿದವರಾಗಿದ್ದರು. ಗುಂಪಿನಲ್ಲಿದ್ದ ಮತ್ತೆ ಕೆಲವು ಮಂದಿ ಇನ್ನೆಲ್ಲಿಂದಲೋ ಬಂದಿದ್ದರು. ಝೈದ್ ತನ್ನ ತರಗತಿಯಲ್ಲಿದ್ದ ಏಕೈಕ ಮುಸ್ಲಿಮ್ ವಿದ್ಯಾರ್ಥಿಯಾಗಿದ್ದು, ಗುಂಪು ಆತನನ್ನು ತರಗತಿಯಿಂದ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಸರಿಸುಮಾರು ನೂರು ಮೀಟರ್ ವರೆಗೆ ಎಳೆದುಕೊಂಡು ಹೋದಾಗ ಆತ ಅವರಿಂದ ತಪ್ಪಿಸಿಕೊಂಡು ಸಹಾಯ ಯಾಚಿಸಲು ಮತ್ತು ಪ್ರಾಂಶುಪಾಲರ ಮೊಬೈಲ್ ನಿಂದ ತನ್ನ ಅಂಕಲ್ ಗೆ ಕರೆ ಮಾಡುವುದಕ್ಕಾಗಿ ಪ್ರಾಂಶುಪಾಲರ ಕಚೇರಿ ನುಗ್ಗಿದ್ದ. ಅದೇ ವೇಳೆ ಪ್ರಾಂಶುಪಾಲರ ಕಚೇರಿಗೆ ನುಸುಳಿದ ಗುಂಪು ಝೈದ್ ಗೆ ನಿರಂತರವಾಗಿ ಥಳಿಸಿತು. ಅದೇ ವೇಳೆ ಆತನ ಮುಸ್ಲಿಮ್ ಅಸ್ಮಿತೆಯನ್ನೂ ನಿಂದಿಸಿದರು. ಆತನ ಅಂಕಲ್ ಕಾಲೇಜಿಗೆ ಆಗಮಿಸಿದಾಗ ಅವರು ಕೂಡ ಗುಂಪಿನಿಂದ ಬರ್ಬರ ಥಳಿತಕ್ಕೊಳಗಾದರು. ದಾಳಿಕೋರರ ಮೇಲೆ ಯಾವುದೇ ಕ್ರಮಕೈಗೊಳ್ಳಲು ಪ್ರಾಂಶುಪಾಲರು ವಿಫಲರಾದರು. ಇದಕ್ಕೆ ವ್ಯತಿರಿಕ್ತವಾಗಿ, ಝೈದ್ ನ ಬ್ಯಾಗ್ ನೊಳಗೆ ಚೂರಿ ಇಟ್ಟ ಅವರು, ಆತ ಹಿಂಸಾ ಪ್ರವೃತ್ತಿ ಹೊಂದಿದ್ದಾನೆ ಎಂದು ಆರೋಪಿಸಿದರು. ಪ್ರಾಂಶುಪಾಲರನ್ನು ಭೇಟಿಯಾಗಲು ನಿರಂತರವಾಗಿ ಪ್ರಯತ್ನಿಸಿದರೂ ಸತ್ಯಶೋಧನಾ ತಂಡಕ್ಕೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಝೈದ್ ಈಗ ಕಾಲೇಜಿಗೆ ಮರಳಿದ್ದಾನೆ. ನಿರ್ದಯವಾಗಿ ಏಕೆ ಥಳಿಸಲಾಯಿತು ಎಂದು ಪ್ರಶ್ನಿಸಿದರೆ, “ನಾನೋರ್ವ ಮುಸ್ಲಿಮ್” ಆದ ಕಾರಣಕ್ಕೆ ಥಳಿಸಲಾಯಿತು ಎಂದು ಆತ ಉತ್ತರಿಸುತ್ತಾನೆ. ಆದಾಗ್ಯೂ, ಈ ಘಟನೆಗೆ ಸಂಭಂಧಿಸಿದಂತೆ ಯಾವುದೇ ಎಫ್.ಐ.ಅರ್. ದಾಖಲಾಗುವುದಾಗಲೀ, ಕಾಲೇಜು ಆಡಳಿತ ಅಥವಾ ಪೊಲೀಸರು ಘಟನೆಯನ್ನು ಗಂಭೀರವಾಗಿ ಖಂಡಿಸಿ ಕ್ರಮ ಕೈಗೊಳ್ಳುವುದಾಗಲೀ ನಡೆದಿಲ್ಲ.
ಡಿಸೆಂಬರ್ 1, 2021ರಂದು 100 ಮಂದಿ ಸೇರಿದ್ದ ಇನ್ನೊಂದು ಗುಂಪು ಬಹುಶಃ ಎಬಿವಿಪಿಗೆ ಸೇರಿದವರು ಅರ್ಬಾಝ್ ಎಂಬ 15ರ ಹರೆಯದ ಮುಸ್ಲಿಮ್ ಹುಡುಗನನ್ನು ಪಟ್ಟಣದ ಮಧ್ಯಭಾಗದಿಂದ ಮೌಲಾನಾ ಆಝಾದ್ ಶಾಲೆಯ ವರೆಗೆ ಬೆನ್ನಟ್ಟಿತ್ತು. ಈತ ಅಲ್ಲಿನ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಮೌಲಾನಾ ಆಝಾದ್ ಶಾಲೆಯು ಕರ್ನಾಟಕ ಸರಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಸರಕಾರಿ ಶಾಲೆಯಾಗಿದೆ. ಗುಂಪು ಅರ್ಬಾಝ್ ನನ್ನು ಶಾಲಾ ಆವರಣದೊಳಗೆ ನಿರಂತರವಾಗಿ ಥಳಿಸಿತು. ಅಲ್ಲಿನ ಅಧ್ಯಾಪಕರ ಮೇಲೆ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಅಬೂಬಕರ್ ಎಂಬಾತನ ಮೇಲೆಯೂ ದಾಳಿ ನಡೆಸಿತು. ಘಟನೆಗೆ ಸಂಬಂಧಿಸಿದಂತೆ ಒಂದು ಎಫ್.ಐ.ಆರ್ ದಾಖಲಾಗಿದ್ದು ಈ ವರೆಗೆ ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಎಬಿವಿಪಿಗೆ ಸೇರಿದವನಾಗಿದ್ದಾನೆ. ಸತ್ಯಶೋಧನಾ ತಂಡದೊಂದಿಗೆ ಮಾತನಾಡಿದ ಶಾಲಾ ಪ್ರಾಂಶುಪಾಲರು, “ಅಪರಾಧಿಗಳು ಯಾರೆಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ. ತಮ್ಮ ಶಾಲಾ ಆವರಣದಲ್ಲಿ ನಡೆಯುತ್ತಿರುವ ಈ ರೀತಿಯ ಘಟನೆಗಳಿಗೆ ಕಾರಣವೇನೆಂದು ಕಂಡುಕೊಳ್ಳಲು ಬಯಸುತ್ತೀರಾ ಎಂದು ಪ್ರಶ್ನಿಸಿದಾಗ ಅವರು, “ಇದನ್ನು ಅರಿಯಲು ನಾನು ನಾವು ಬಯಸುವುದಿಲ್ಲ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ” ಎಂದಿದ್ದಾರೆ. ತನಿಖೆ ನಡೆಸಿದಾಗ, ಅರ್ಬಾಝ್ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಅನ್ನುವುದಕ್ಕೆ ಅವರಲ್ಲಿ ಯಾವುದೇ ಆಧಾರವಿರಲಿಲ್ಲ ಎಂಬ ವಿಚಾರ ಬಹಿರಂಗವಾಯಿತು.
ಜನವರಿ 6, 2022ರ ಸುಮಾರಿಗೆ ಬಹುಶಃ ಆರೆಸ್ಸೆಸ್ ಸೇರಿದ ಮೂರು ಮಂದಿ ನರಗುಂದದ ಲೋಡಿಗಲ್ಲಿ ಪ್ರದೇಶಕ್ಕೆ ಬಂದು ಮಧ್ಯವಯಸ್ಕ ಮುಸ್ಲಿಮನಾದ ಹನೀಫ್ ಎಂಬಾತನ ಮೇಲೆ ದೌರ್ಜನ್ಯ ನಡೆಸಿದರು. ಜನವರಿ 14, 2022ರಂದು ಗುಂಪು ಲೋಡಿಗಲ್ಲಿ ಪ್ರದೇಶಕ್ಕೆ ತಮ್ಮ ಬೈಕುಗಳಲ್ಲಿ ಮರಳಿ ಬಂದು ಆಶಾಂತಿಯ ವಾತಾವರಣ ಸೃಷ್ಟಿಸಲು ಪ್ರಾರಂಭಿಸಿತು. ತಕ್ಷಣ ಬೈಕ್ ಸವಾರರು ಮತ್ತು ಕೆಲವು ಸ್ಥಳೀಯ ಮುಸ್ಲಿಮರ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅದಾದ ನಂತರ ಕೆಲವೇ ನಿಮಿಷಗಳಲ್ಲಿ, ಮುಸ್ಲಿಮರಲ್ಲಿ ಭೀತಿ ಸೃಷ್ಟಿಸುವ ಉದ್ದೇಶದೊಂದಿಗೆ ಸುಮಾರು 200 ಮಂದಿ ಇದ್ದ ಗುಂಪು ಮಾರಕಾಸ್ತ್ರಗಳೊಂದಿಗೆ ಘಟನಾ ಸ್ಥಳಕ್ಕೆ ಬಂತು. ಅಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸುಮಾರು 40 ಮಂದಿ ಇದ್ದರು. ಅಲ್ಲಿಗೆ ಬಂದ ಪೊಲೀಸರು ಮುಸ್ಲಿಮ್ ಸಮುದಾಯಕ್ಕೆ ಸೇರಿದ ನಾಲ್ಕು ಮಂದಿಯನ್ನು ಬಂಧಿಸಿದರು. ಹಿಂದು ದೇವರುಗಳನ್ನು ಅವಹೇಳನ ಮಾಡಿದ ಕಲ್ಪಿತ ಕಥೆಯ ಆಧಾರದಲ್ಲಿ, ಕೆಲವು ಮುಸ್ಲಿಮ್ ಯುವಕರ ಮೇಲೆ ಎಫ್.ಐ.ಆರ್ ದಾಖಲಿಸಿದರು. ಆದರೆ, ಈ ಘಟನೆಗೆ ಸಂಬಂಧಿಸಿ ಸಂಘಪರಿವಾರದ 200 ಮಂದಿಯ ಪೈಕಿ ಯಾರನ್ನೂ ಬಂಧಿಸಲಿಲ್ಲ. ಈ ಘಟನೆಯಲ್ಲಿ ಭಾಗಿಯಾದವರು ನಂತರ ಸಮೀರ್ ಶಾಹಪುರ್ ನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಇದಾದ ನಂತರ ಸಂಘಪರಿವಾರವು ಪೊಲೀಸ್ ಠಾಣೆಗೆ ರಾಲಿ ನಡೆಸಿತು ಮತ್ತು “ಭಾರತ ಹಿಂದುಗಳಿಗಾಗಿ, ಮುಸ್ಲಿಮರು ಭಿಕ್ಷೆ ಬೇಡಲು ಮತ್ತು ಕಾರ್ಮಿಕರಾಗಿ ಪಾಕಿಸ್ತಾನದಿಂದ ಬಂದವರು” ಎಂಬ ಘೋಷಣೆಗಳನ್ನು ಕೂಗಲಾಯಿತು. ರಾಜ್ಯ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಈ ರಾಲಿ ನಡೆಸಲಾಗಿತ್ತು. ಕೋವಿಡ್ ನಿಯಮಾವಳಿ ಉಲ್ಲಂಘನೆ ಮತ್ತು ಮುಸ್ಲಿಮರ ವಿರುದ್ಧ ಬೆಂಕಿ ಉಗುಳುವ ದ್ವೇಷ ಭಾಷಣಗಳ ಹೊರತಾಗಿಯೂ, ಈ ಘಟನೆಗೆ ಸಂಬಂಧಿಸಿ ಸಂಘಪರಿವಾರದ ಸದಸ್ಯರ ವಿರುದ್ಧ ಎಫ್.ಐ.ಅರ್. ದಾಖಲಿಸಲಾಗಿಲ್ಲ.
ಜನವರಿ 17, 2022ರಂದು ಸಂಜು ನಾಲ್ವಡೆ ಎಂಬ ಬಜರಂಗದಳದ ನಾಯಕನ ನೇತೃತ್ವದಲ್ಲಿ ಮುಸ್ಲಿಮರ ವಿರುದ್ಧ ತೀವ್ರ ರೀತಿಯ ದ್ವೇಷ ಭಾಷಣ ನಡೆಸಲಾಯಿತು. ಇದರಲ್ಲಿ ಮುಸ್ಲಿಮರನ್ನು “ಭಯೋತ್ಪಾದಕರು” ಎಂದು ಕರೆಯಲಾಯಿತು. ” ನಾವು ಅವರನ್ನು ಬಿಡುವುದಿಲ್ಲ” ಎಂದು ಹೇಳಲಾಯಿತು. ಸಂಜು ವಿರುದ್ಧ ಎಫ್.ಐ.ಆರ್. ದಾಖಲಾಗಿರುವ ಹೊರತಾಗಿಯೂ, ಆತನಿಗೆ ಬಹಿರಂಗವಾಗಿ ಭಾಷಣ ಮಾಡಲು ಹೇಗೆ ಅವಕಾಶ ನೀಡಲಾಯಿತು ಎಂಬುದು ಅಚ್ಚರಿದಾಯಕವಾಗಿದೆ. ರಾಲಿಯಲ್ಲಿದ್ದ ಇನ್ನೋರ್ವ ಭಾಷಣಕಾರ ಮುಸ್ಲಿಮರನ್ನು “ನಾಯಿ” ಎಂದು ಕರೆದ. “ಜೈ ಶ್ರೀ ರಾಮ್” ಘೋಷಣೆ ಮೊಳಗಿಸುತ್ತಾ ಸಂಘಪರಿವಾರದ ನಾಯಕರು ತಮ್ಮ ಭಾಷಣದಲ್ಲಿ “ಪೊಲೀಸರಿಗೂ ಬಜರಂಗದಳವೇ ರಕ್ಷಣೆ ನೀಡುತ್ತಿದೆ” ಎಂದು ಉಲ್ಲೇಖಿಸಿದರು.
ಸಮೀರ್ ಹತ್ಯೆ ಮತ್ತು ಸ್ವಲ್ಪದರಲ್ಲೇ ಪಾರಾದ ಶಂಶೀರ್ ಇವು ಪ್ರತ್ಯೇಕ ಘಟನೆಗಳಲ್ಲ. ಇವು ವ್ಯವಸ್ಥಿತವಾಗಿ ನಡೆಸಲಾದ ಮತ್ತು ದ್ವೇಷ ಭಾಷಣಗಳ ಮೂಲಕ ಮುಸ್ಲಿಮ್ ವಿರುದ್ಧ ಹಿಂಸಾಚಾರದ ಗುರಿಯೊಂದಿಗೆ ಸಂಘಟಿಸಲಾದ ಕೃತ್ಯಗಳ ಪರಿಣಾಮವಾಗಿದೆ. ನರಗುಂದದಲ್ಲಿ ನಡೆದ ಎಲ್ಲಾ ಪ್ರಕರಣಗಳಲ್ಲೂ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಇಬ್ಬರು ಶಾಲಾ ಹುಡುಗರ ಸಹಿತ ಮುಸ್ಲಿಮ್ ಯುವಕರೇ ಸಂತ್ರಸ್ತರಾಗಿದ್ದಾರೆ. ರಾಜ್ಯದಲ್ಲಿರುವ ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆಯು ಮೌನ ಸಮ್ಮತಿಯನ್ನು ನೀಡುತ್ತದೆ. ಮಾತ್ರವಲ್ಲ ಇದು, ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅವಹೇಳನ ಮಾಡುವ ಸಂಘಪರಿವಾರದ ಗೂಂಡಾಗಳಿಗೆ ಉತ್ತೇಜನ ನೀಡುತ್ತಿದೆ.
ಆಡಳಿತ ವ್ಯವಸ್ಥೆ ಮತ್ತು ಪೊಲೀಸರೊಂದಿಗೆ ನಮ್ಮ ಬೇಡಿಕೆಗಳು:
1. ಸಮೀರ್ ಹತ್ಯೆ ಮತ್ತು ಶಂಶೀರ್ ಮೇಲಿನ ದಾಳಿ, ಅದೇ ರೀತಿ ಹಿಂದಿನ ಘಟನೆಗಳಿಗೆ ಸಂಬಂಧಿಸಿದಂತೆ ನ್ಯಾಯಯುತವಾದ ಮತ್ತು ಮುಕ್ತ ತನಿಖೆ ನಡೆಸಬೇಕು. 2. ಹಿಂಸಾಚಾರದ ಸೂಚನೆ ನೀಡುವ ದ್ವೇಷ ಬಾಷಣಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರಗಿಸಬೇಕು. 3. ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಸರಣಿಯನ್ನು ಸುಗಮಗೊಳಿಸಿದ ಸಂಘಟನೆಗಳ ವಿರುದ್ಧ ತನಿಖೆ ಕೈಗೊಳ್ಳುವ ಮೂಲಕ ಎಲ್ಲಾ ಅಪರಾಧಿಗಳನ್ನು ಬಂಧಿಸಬೇಕು. 3. ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮತ್ತು ದ್ವೇಷಾಪರಾಧ ನಡೆಸುವ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ರಾಜಕೀಯ ಸಂರಕ್ಷಣೆ ನೀಡುವುದನ್ನು ನಿಲ್ಲಿಸಬೇಕು. 4. ಸಮೀರ್ ಮತ್ತು ಶಂಶೀರ್ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಅದೇ ರೀತಿ ನರಗುಂದದಲ್ಲಿ ತನ್ನ ವೃತ್ತಿಯನ್ನು ಪುನಾರಂಭಿಸಲು ಶಂಶೀರ್ ಗೆ ಆಡಳಿತ ವ್ಯವಸ್ಥೆ ನೆರವು ಕಲ್ಪಿಸಬೇಕು. 5. ಕಾನೂನಿನ ಪ್ರಕಾರ, ಶಂಶೀರ್ ಕುಟುಂಬಕ್ಕೆ ಸಮರ್ಪಕ ಪರಿಹಾರವನ್ನು ಖಾತರಿಪಡಿಸಬೇಕು. 6. ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಕಾರಣದಿಂದ ಶೈಕ್ಷಣಿಕ ಸಂಸ್ಥೆಗಳನ್ನು ತೊರೆಯುವುದನ್ನು ತಡೆಯಬೇಕು. 7. ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳು ಮತ್ತು ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕು. 8. ಮುಸ್ಲಿಮರಿಗೆ ಎಲ್ಲಾ ರೀತಿಯ ಭದ್ರತೆ ಕಲ್ಪಿಸಬೇಕು.
ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡದ ಸದಸ್ಯರು
ಆಕಾಶ್ ಭಟ್ಟಾಚಾರ್ಯ, ಶಿಕ್ಷಣ ತಜ್ಞ / ಹೋರಾಟಗಾರರು ಬೆಂಗಳೂರು (9916276016) ಮೊಹಮ್ಮದ್ ಇರ್ಷಾದ್ , ಸಾಮಾಜಿಕ ಹೋರಾಟಗಾರರು, ಮಂಗಳೂರು (7204148545) ರಾಜೇಂದ್ರನ್ ನಾರಾಯಣನ್, ಶಿಕ್ಷಣ ತಜ್ಞ / ಹೋರಾಟಗಾರರು ಬೆಂಗಳೂರು (9620318492) ಶಬೀರ್ ಅಹ್ಮದ್, ಸಾಮಾಜಿಕ ಹೋರಾಟಗಾರರು, ಮಂಗಳೂರು (9844189970) ಶೇಖ್ ಝಾಕೀರ್ ಹುಸೇನ್ , ಪತ್ರಕರ್ತರು ಬೆಂಗಳೂರು (8884736540) ಸಿದ್ಧಾರ್ಥ್ ಜೋಷಿ , ಸಂಶೋಧಕರು, ಬೆಂಗಳೂರು (9686279491)
ಪತ್ರಿಕಾ ಪ್ರಕಟಣೆ: ಬಹುತ್ವ ಕರ್ನಾಟಕ ಜನವರಿ 28, 2022
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.