ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರನ್ನು ಅಂಜುಮಾನ್ ವತಿಯಿಂದ ಸನ್ಮಾನಿಸಿ , ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ಒದಗಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸುದರ್ಶನ್ ಮಾತನಾಡಿ , ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ , ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲೂ ಯಾರಿಗೂ ಅನ್ಯಾಯವಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಅಲ್ಪಸಂಖ್ಯಾತರು ಸದಾ ಕಾಂಗ್ರೆಸ್ ಪಕ್ಷದ ಜತೆಯಲ್ಲೇ ಇದ್ದು , ಅವರ ಹಿತ ರಕ್ಷಣೆ ಮಾಡುವ ಶಕ್ತಿ ಕಾಂಗ್ರೆಸ್ಗೆ ಮಾತ್ರವಿದೆ ಎಂದ ಅವರು , ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಜತೆಯಲ್ಲಿ ಕರೆದೊಯ್ಯುವ ಮೂಲಕ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.
ಪಕ್ಷದ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲು ಮನವಿ ಮಾಡಿದ ಅವರು , ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದರು. ವಿಧಾನಸಭೆ , ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು.
ಜಿಲ್ಲೆಯ ಎಲ್ಲಾ ೬ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಾವುಟ ಹಾರಿಸಲು ಅಲ್ಪಸಂಖ್ಯಾತ ಸಮುದಾಯ ಪಕ್ಷದ ಜತೆ ಗಟ್ಟಿಯಾಗಿ ನಿಲ್ಲಬೇಕು ಎಂದರು.
ಮನವಿ ಸಲ್ಲಿಸಿದ ಅಂಜುಮಾನ್ ಅಧ್ಯಕ್ಷ ಜಮೀರ್ ಅಹಮದ್ , ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನು ನಂಬಿ ಸದಾ ಜತೆಯಲ್ಲೇ ಇದ್ದೇವೆ. ನಮಗೆ ಸಂಘಟನೆಯಲ್ಲಿ ಸೂಕ್ತ ಸ್ಥಾನಮಾನ ಒದಗಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಅಂಜುಮಾನ್ ಸದಸ್ಯರಾದ ಮಹಮದ್ ಹನೀಫ್ , ಸಾಧಿಕ್ , ನಾಜರ್ಅಲಿ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.