ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್) : ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಮಗು ವೈದ್ಯರ ನಿರ್ಲಕ್ಷ್ಯದಿಂದ ಅಸುನೀಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ೩ ತಿಂಗಳ ಗಂಡು ಮಗುವಿಗೆ ಪೆಂಟಾವಲೆಂಟ್ ಲಸಿಕೆ ನೀಡಲಾಯಿತು. ಮನೆಗೆ ತೆಗೆದುಕೊಂಡು ಹೋದ ಮೇಲೆ ಮಗುವಿಗೆ ಜ್ವರ ಕಾಣಿಸಿಕೊಂಡಿತು , ವಾಂತಿ ಶುರುವಾಯಿತು . ತಕ್ಷಣ ಆಸ್ಪತ್ರೆಗೆ ಬಂದು ಅಲ್ಲಿನ ವೈದ್ಯೆ ಡಾ.ಸೌಮ್ಯ ಅವರಿಗೆ ತೋರಿಸಲಾಯಿತು . ಅವರು ಮಗುವನ್ನು ಪರೀಕ್ಷಿಸಿ ಲಸಿಕೆ ಹಾಕಿದ ಮೇಲೆ ಇದೆಲ್ಲಾ ಸಾಮಾನ್ಯ , ಮಗುವಿಗೆ ಏನೂ ಆಗುವುದಿಲ್ಲ ಎಂದು ಹೇಳಿ ಕಳುಹಿಸಿದರು. ಆದರೆ ಸಮಸ್ಯೆ ಮುಂದುವರಿಯಿತು .
ಶುಕ್ರವಾರ ತೋರಿಸಿದಾಗ ತಾಲ್ಲೂಕು ಕೇಂದ್ರದ ಸರ್ಕಾರಿ ಆಸತ್ರೆಗೆ ತೆಗೆದುಕೊಂಡು ಹೋಗಲು ಹೇಳಿದರು. ಅಲ್ಲಿಗೆ ಹೋದಾಗ ಮಗು ಅಸುನೀಗಿರುವುದಾಗಿ ವೈದ್ಯರು ಹೇಳಿದರು ‘ ಎಂದು ಮಗುವಿನ ತಂದೆ ಸುಬ್ರಮಣಿ ಹೇಳಿದರು. ಮಗು ಸತ್ತ ಸುದ್ದಿ ತಿಳಿಯುತ್ತಿದ್ದಂತೆ ಮಗುವಿನ ಕುಟುಂಬಸ್ಥರು ಗ್ರಾಮಸ್ಥರು ಗ್ರಾಮದ ಆರೋಗ್ಯ ಕೇಂದ್ರದ ಮುಂದೆ ಜಮಾಯಿಸಿ , ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಸಿ.ರವಿಕುಮಾರ್ ಸಿಬ್ಬಂದಿಯೊಂದಿಗೆ ಬಂದು ಆಕ್ರೋಶ ಭರಿತ ಜನರನ್ನು ಸಮಾಧಾನಪಡಿಸಿದರು . ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು . ಸ್ಥಳೀಯ ಮುಖಂಡರಾದ ಗೋಪಾಲ್ , ರಘು ಜನರನ್ನು ಸಮಾಧಾನಪಡಿಸಿ ಪ್ರತಿಭಟನೆ ವಾಪಸ್ ಪಡೆಯಲು ನೆರವಾದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ . ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ‘ ಲಸಿಕೆ ನೀಡಿದ್ದರಿಂದ ಮಗುವಿನ ಸಾವು ಸಂಭವಿಸಿಲ್ಲ ಎಂದು ಹೇಳಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ . ಎಂ.ಸಿ.ವಿಜಯ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಎನ್ . ವನಿತಾ , ಮಾಜಿ ಅಧ್ಯಕ್ಷ ಮಂಜುನಾಥರೆಡ್ಡಿ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.