(www.vknews.in) : ಜನಪರ ಸಿನಿಮಾ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ರನ್ನು ಪೊಲೀಸರು ಯಾವುದೇ ಮಾಹಿತಿ ನೀಡದೆ, ನೋಟಿಸ್ ನೀಡದೇ ಅಪಹರಿಸಿದ್ದಾರೆ ಎಂದು ಚೇತನ್ ಪತ್ನಿ ಮೇಘ ಆರೋಪಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರು ಫೇಸ್ಬುಕ್ ಲೈವ್ನಲ್ಲಿ ಆತಂಕ ವ್ಯಕ್ತಪಡಿಸಿರುವ ಮೇಘ, ‘ಇಂದು ಮಧ್ಯಾಹ್ನ 3 ಗಂಟೆಯಿಂದ ನನ್ನ ಪತಿ ಚೇತನ್ ಕಾಣುತ್ತಿಲ್ಲ, ನಮ್ಮ ಮನೆಯಲ್ಲಿ ಕೆಲಸ ಮಾಡುವವರು ಪೊಲೀಸರು ಕರೆದುಕೊಂಡು ಹೋದರು ಎಂದು ಹೇಳುತ್ತಿದ್ದಾರೆ. ಆದರೆ ಈ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇತನ್ರವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ ಮ್ಯಾನ್ ಫೋನ್ ಕೂಡ ಸಿಗುತ್ತಿಲ್ಲ. ಇದು ಪೊಲೀಸರು ಮಾಡಿರುವ ಅಪಹರಣವಾಗಿದೆ. ಈ ದೇಶದ ಯಾವುದೇ ಪ್ರಜೆಯನ್ನು ವಿಚಾರಣೆಗಾಗಿ ಕರೆದೊಯ್ಯಬೇಕಾದರೆ ಅವರ ಕುಟುಂಬ ಸದಸ್ಯರಿಗೆ ತಿಳಿಸಬೇಕು, ಮೊದಲೇ ನೋಟಿಸ್ ನೀಡಬೇಕು, ಅವರಿಗೆ ನ್ಯಾಯಾಂಗ ಸಹಾಯ ಪಡೆಯುವ ಹಕ್ಕು ಇದೆ. ಇದನ್ನು ಉಲ್ಲಂಘಿಸಿರುವ ಪೊಲೀಸರು ಉದ್ದೇಶಪೂರ್ವಕವಾಗಿ ಚೇತನ್ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮೇಘ ಆರೋಪಿಸಿದ್ದಾರೆ.
ಪೊಲೀಸರು ಮಾಡಿದ ದೊಡ್ಡ ಅನ್ಯಾಯ ಇದಾಗಿದೆ. ಚೇತನ್ರವರ ಫೋನ್ಅನ್ನು ಕಿತ್ತುಕೊಳ್ಳಲಾಗಿದೆ. ಈಗ ಚೇತನ್ ಎಲ್ಲಿದ್ದಾರೆ ಎಂದು ನಮಗೆ ಗೊತ್ತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾಗಿ ನ್ಯಾಯ ಕೇಳಲು ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯೆದುರು ಬಂದಿದ್ದೇನೆ. ಸಾಮಾಜಿಕ ಕಾರ್ಯಕರ್ತರು ತಕ್ಷಣವೇ ಬಂದು ನ್ಯಾಯದ ಪರ ನಿಲ್ಲಬೇಕೆಂದು ಮನವಿ ಮಾಡಿದ್ದಾರೆ.
ಚೇತನ್ ಬಂಧನ ಏಕೆ?
ಹಿಜಾಬ್ ಕುರಿತು ದಾಖಲಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನಡೆಸುತ್ತಿರುವ ಕುರಿತಾಗಿ ಎರಡು ವರ್ಷದ ಹಿಂದೆ ನಟ ಚೇತನ್ರವರು ಮಾಡಿದ್ದಾರೆ ಎನ್ನಲಾದ ಟ್ವೀಟ್ ವಿರುದ್ಧ ದೂರು ದಾಖಲಾದ್ದರಿಂದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಚೇತನ್ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಈ ವಾರ ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರದ ಆರೋಪಿ ರಾಕೇಶ್ ಬಿ ಅವರಿಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ – ‘ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ ನಾಚಿಕೆಗೇಡಿನ ಸಂಗತಿ; ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಯಿಸುವ ರೀತಿಯಲ್ಲ ಅದು’ ಎಂಬ ಹೇಳಿಕೆಯನ್ನು ನೀಡಿದ್ದರು. 21ನೆಯ ಶತಮಾನದಲ್ಲೂ ಕೂಡ ನ್ಯಾಯಾಂಗದ ದೀಕ್ಷಿತ್ ಅವರ ಈ ಸ್ತ್ರೀ ದ್ವೇಷ, ಇದರಲ್ಲಿ ನಾಚಿಕೆಗೇಡಿನ ಸಂಗತಿ’
ಈ ಟ್ವೀಟ್ ಅನ್ನು ನಾನು ಎರಡು ವರ್ಷಗಳ ಹಿಂದೆ ಕರ್ನಾಟಕ ಹೈ ಕೋರ್ಟ್ನ ತೀರ್ಪಿನ ಬಗ್ಗೆ ಬರೆದಿದ್ದೆ. ಜಸ್ಟೀಸ್ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣದ ಕುರಿತು ಈ ತರಹದ ಅಸಹ್ಯಕರ ಹೇಳಿಕೆಯನ್ನು ನೀಡಿದ್ದರು. ಈಗ ಅದೇ ನ್ಯಾಯಾಧೀಶರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಈ ಕುರಿತು ಬೇಕಾದ ಸ್ಪಷ್ಟತೆಯಿದೆಯೇ?” ಎಂದು ಚೇತನ್ ಫೇಸ್ಬುಕ್ನಲ್ಲಿ ಬರೆದಿದ್ದರು. ಅದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಚೇತನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಬೆಂಬಲಿಗರು, ಸಾಮಾಜಿಕ ಕಾರ್ಯಕರ್ತರು ಶೇಷಾದ್ರಿಪುರಂ ಪೊಲೀಸ್ ಠಾಣೆ ಎದರು ಜಮಾಯಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.
ವಿಡಿಯೋ ನೋಡಿ
https://youtu.be/PcMqxnI_wJo
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.