(ವಿಶ್ವ ಕನ್ನಡಿಗ ನ್ಯೂಸ್) : ಸುಮಾರು ಮೂವತ್ತು ವರ್ಷಗಳ ಹಿಂದಿನ ನೆನಪು. ಉಪ್ಪಿನಂಗಡಿ ಮಸೀದಿಯಲ್ಲಿ ಇಮಾಂ ಜಮಾತ್ ನಲ್ಲಿ ಬಾಗಿಯಾಗಲು ಮೂರು ಹಾಜಿಗಳು ಪುತ್ತೂರಿನಿಂದ ಬಂದಿದ್ದರು. ಶಾಪಿ ಹಾಜಿ, ಮಮ್ಮುಞಿ ಹಾಜಿ, ಎಲ್ ಟಿ ಹಸೈನಾರ್ ಹಾಜಿಯಾಗಿದ್ದರು ಆ ಮೂವರು. ಶಾಪಿ ಹಾಜಿಯವರನ್ನು ನೋಡಿ ಪರಿಚಯವಿತ್ತು. ಇತರ ಇಬ್ಬರ ಪರಿಚಯ ಆದದ್ದು ಅದೇ ಮೊದಲು.
ಆ ನಂತರ ಈ ಮೂರೂ ಹಾಜಿಗಳೊಂದಿಗೂ ನನಗೆ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು. ಪುತ್ತೂರಿನ ಮಸೀದಿಗಳಿಗೆ ಖತೀಬ್ ಮುಕ್ರಿ ಬೇಕಿದ್ದರೆ ಶಾಪಿ ಹಾಜಿಯವರಂತೂ ನನಗೇ ಟೆಲಿಪೋನ್ ಮಾಡುತ್ತಿದ್ದರು. ಅದೇನೇ ಇರಲಿ. ಇಲ್ಲಿ ನಾನು ಹೇಳ ಹೊರಟಿರುವುದು ಅವರು ಅಂದು ಉಪ್ಪಿನಂಡಿಗೆ ಬಂದಿದ್ದು ಯಾತಕ್ಕಾಗಿ ಎಂಬ ವಿಚಾರದ ಬಗ್ಗೆ.
ಮಮ್ಮುಞಿ ಹಾಜಿಯವರ ಜೀಪಿನ ತುಂಬಾ ಡಬ್ಬ ಗಳನ್ನು ತುಂಬಿಸಿ ಅವರು ಬಂದಿದ್ದರು. ಸಾಲ್ಮರದಲ್ಲಿ ಕಾರ್ಯಚರಿಸುತ್ತಿರುವ ಯತೀಂ ಖಾನಾದ ಸಹಾಯಾರ್ಥ ಇರುವ ಡಬ್ಬ ಆಗಿತ್ತದು. ಪ್ರತೀ ಅಂಗಡಿಗಳಿಗೆ ಹೋಗಿ ಈ ಮಹಾನುಭಾವರು ಡಬ್ಬಗಳನ್ನು ಇಟ್ಟು ಕೊಳ್ಳವಂತೆ ಮನವಿ ಮಾಡಿದ್ದರು. ಅಂದು ನನ್ನ ಯುವತ್ವದ ಪ್ರಾಯ. ಸಾಮಾಜಿಕ ಕಳಕಳಿಯ ಆವೇಶದ ಮಾತಾಡುವ ಆ ಟೈಮಲ್ಲಿ ಈ ಹಿರಿಯರ ಉತ್ಸಾಹ ನೋಡಿ ನಾನೂ ಪ್ರೇರಣೆ ಪಡಕೊಂಡಿದ್ದೆ. ನಿಜವಾಗಿಯೂ ಎರಡು ಹಾಜಿಗಳನ್ನು ಕರಕೊಂಡು ಬಂದಿದ್ದು ಹಸೈನಾರ್ ಹಾಜಿಯಾಗಿದ್ದರು ಎಂದು ಹಲವು ವರ್ಷಗಳ ನಂತರದ ನಾವಿಬ್ಬರ ಮಾತುಕತೆಯಲ್ಲಿ ಹಸೈನಾರ್ ಹಾಜಿ ಹೇಳುತ್ತಿದ್ದರು.
ಹಲವಾರು ನಿರೀಕ್ಷೆಗಳನ್ನು ಬಿತ್ತಿ ಸೇವಾ ಮನೋಭಾವ ಇರುವವರನ್ನು ಪ್ರೋತ್ಸಾಹಿಸುವ ಉತ್ತಮ ಗುಣ ಹಾಜಿಯವರಿಗೆ ರಕ್ತಗತವಾಗಿತ್ತು ಮತ್ತು ಅದನ್ನು ಕೊನೆಯವರೇಗೆ ಕಾಯ್ದು ಕೊಂಡಿದ್ದರು. ಹಲವು ಶಿಕ್ಷಣ ಸಂಸ್ಥೆಗಳ, ಸೇವಾ ಸಂಘಟನೆಗಳ ಪೋಷಕರಾಗಿ ಸದಾ ಸಕ್ರಿಯರಾಗಿದ್ದ ಹಾಜಿಯವರು ಪುತ್ತೂರಲ್ಲಿ ಸದ್ದಿಲ್ಲದೇ ತಿಂಗಳೊಂದಕ್ಕೆ ಲಕ್ಷಕ್ಕೂ ಮಿಕ್ಕಿದ ಹಣ ನೀಡಿ ಜನಸೇವೆ ಮಾಡುತ್ತಿರುವ ಮೆಡಿಕಲ್ ಸರ್ವೀಸ್ ನ ಪ್ರಧಾನ ಪೋಷಕರಾಗಿದ್ದರು. ಪುತ್ತೂರಿನ ಕೆಲ ದೀನೀ ಸಂಸ್ಥೆಗಳು ಇವರು ನಿರೀಕ್ಷಿಸಿದಂತೆ ಬೆಳೆಯುತ್ತಿಲ್ಲ ಎಂಬುದರ ಕೊರಗು ಅವರನ್ನು ಸದಾ ಕಾಡುತ್ತಿತ್ತು.
ಪುತ್ತೂರಿನಲ್ಲಿ ಒಂದು ಸಮುದಾಯ ಆಸ್ಪತ್ರೆ ಅವರ ಕನಸಾಗಿತ್ತು. ಅದಕ್ಕಾಗಿ ಇಪ್ಪತ್ತೈದು ವರ್ಷಗಳ ಹಿಂದೆಯೇ ಜನಾಬ್ ಮರ್ಹೂಂ ಮೊಯಿದಿನ್ ಹಾಜಿ ತುಂಬೆಯವರೊಂದಿಗೆ ಪುತ್ತೂರಿನ ಹಲವು ಹಾಜಿಗಳ ಜೊತೆ ಸೇರಿ ಪ್ರಯತ್ನಿಸಿದ್ದರು. ಅದಕ್ಕಾಗಿ ಪರ್ಲಡ್ಕ ದಲ್ಲಿ ಹಾಜಿಗಳೆಲ್ಲಾ ಸೇರಿ ಜಾಗ ಕೂಡಾ ಕಾಯ್ದಿರಿಸಿದ್ದರು. ಆ ನಂತರ ಜಾಗಕ್ಕೆ ಸಂಭಂದಪಟ್ಟ ಕಾನೂನು ತೊಡಕಿನಿಂದಾಗಿ ಆಸ್ಪತ್ರೆ ತುಂಬೆಗೆ ಶಿಪ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅದೇನೇ ಇರಲಿ. ಹಸೈನಾರ್ ಹಾಜಿಯವರು ಪಟ್ಟ ಶ್ರಮ, ಇಟ್ಟು ಕೊಂಡ ನಿರೀಕ್ಷೆ, ನೀಡುತ್ತಿದ್ದ ಪ್ರೋತ್ಸಾಹ ಎಲ್ಲವೂ ನಮಗೆ ಮಾದರಿಯಾಗಿದೆ. ಅವರ ಹಠಾತ್ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹು ಅವರ ಕಬರನ್ನು ಸ್ವರ್ಗೀಯ ತಾಣವನ್ನಾಗಿಸಲಿ. ಆಮೀನ್.
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.