(www.vknews.in) : ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2020ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ, ಕವಿ, ಅಧ್ಯಾಪಕ ಸಂತೆಬೆನ್ನೂರು ಫೈಜ್ನಟ್ರಾಜ್ ರವರ ‘ಕೇಳದೆ ನಿಮಗೀಗ’ (ಕವನ ಸಂಕಲನ) ಕೃತಿ ಆಯ್ಕೆಯಾಗಿದೆ.
‘ಎದೆಯೊಳಗಿನ ತಲ್ಲಣ’ ಮತ್ತು’ಬುದ್ಧನಾಗ ಹೊರಟು’(ಕವನ ಸಂಕಲನಗಳು), ‘ಮಂತ್ರದಂಡ’ (ಮಕ್ಕಳ ಕವನ ಸಂಕಲನ), ‘ಸ್ನೇಹದ ಕಡಲಲ್ಲಿ’ (ಮಕ್ಕಳ ಕಥಾ ಸಂಕಲನ), ‘ಹಬ್ಬಿದಾ ಮಲೆ ಮಧ್ಯದೊಳಗೆ’ (ಕಥಾ ಸಂಕಲನ) ಮತ್ತು ‘ಲೋಕದ ಡೊಂಕು’ (ಆಧುನಿಕ ವಚನಗಳು) ಇವು ಫೈಜ್ನಟ್ರಾಜ್ ರವರ ಇತರ ಪ್ರಕಟಿತ ಕೃತಿಗಳು.
ಸೈಯದ್ ಫೈಜುಲ್ಲಾ ಮೂಲ ಹೆಸರಾದರೂ ಸಾಹಿತ್ಯಿಕ ಸ್ಪೂರ್ತಿ ನೀಡಿದ ಗೆಳೆಯ ನಟರಾಜ್ ರವರ ಹೆಸರನ್ನು ಸೇರಿಸಿಕೊಂಡು ಸಂತೆಬೆನ್ನೂರು ಫೈಜ್ನಟ್ರಾಜ್ ಕಾವ್ಯನಾಮದೊಂದಿಗೆ ಬರೆಯುತ್ತಿರುವ ಇವರು ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ತಮ್ಮ ಶಾಲೆಯಲ್ಲಿ ‘ಅಂಗಳದ ಹೂವುಗಳು’ ಕೈ ಬರಹದ ಗೋಡೆ ಮಾಸ ಪತ್ರಿಕೆ ಹಾಗೂ ಮಕ್ಕಳ ‘ಕನ್ನಡ ಭಾಷಾ ಬಳಗ’ ಹುಟ್ಟು ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಕನ್ನಡದ ಕೆಲಸಗಳಿಗೆ ಹಚ್ಚುತ್ತಿದ್ದಾರೆ.
‘ಸಂಚಯ ಕಾವ್ಯ ಪುರಸ್ಕಾರ’, ‘ಹಾಮಾನಾ ಕಥಾ ಪುರಸ್ಕಾರ’, ‘ಸ್ನೇಹಶ್ರೀ ಪ್ರಶಸ್ತಿ’, ಹಾಗೂ ಇತ್ತೀಚೆಗೆ ಬಂದಿರುವ ‘ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ’ ಇವು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಫೈಜ್ನಟ್ರಾಜ್ ರಿಗೆ ಸಂದಿರುವ ಗೌರವ ಪುರಸ್ಕಾರಗಳು. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಪಠ್ಯದಲ್ಲಿ ಇವರ ಕಥೆಯೊಂದು ಪಠ್ಯವಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ.
ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಜುಲೈ 24ರಂದು ದಾವಣಗೆರೆಯಲ್ಲಿ ನಡೆಯಲಿರುವ ‘ಈದ್ ಕಿ ಖುಷಿ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ 37 ಕೃತಿಗಳು ಬಂದಿದ್ದು, ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ, ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಮತ್ತು ಸಾಹಿತಿ, ಕವಿ ಡಾ. ಅಮೀರುದ್ದೀನ್ ಖಾಝಿ, ಬಿಜಾಪುರ ತೀರ್ಪುಗಾರರಾಗಿ ಸಹಕರಿಸಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.